ಚೀನಾ ಮಿಲಿಟರಿ ಬಜೆಟ್ ಮೊತ್ತ ಭಾರತಕ್ಕಿಂತ 3 ಪಟ್ಟು ಹೆಚ್ಚು!
Team Udayavani, Mar 6, 2017, 7:27 PM IST
ಬೀಜಿಂಗ್: ಪ್ರತಿವರ್ಷದಂತೆ ಚೀನಾ ಸರ್ಕಾರ ಪ್ರಸಕ್ತ ಸಾಲಿನ ರಕ್ಷಣಾ ಬಜೆಟ್ ಮೊತ್ತವನ್ನು ಶೇ.7ರಷ್ಟು ಏರಿಕೆ ಮಾಡಿದ್ದು, ಇದು ಭಾರತದ ಬಜೆಟ್ ಗಿಂತ ಮೂರು ಪಟ್ಟು ಹೆಚ್ಚಿನ ಮೊತ್ತದ್ದಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ದಕ್ಷಿಣ ಚೀನಾ ಸಮುದ್ರದ ವಿವಾದದಲ್ಲಿ ಅಮೆರಿಕ ಮಧ್ಯಪ್ರವೇಶಿಸುತ್ತಿದ್ದು, ಇದಕ್ಕೆ ತಿರುಗೇಟು ನೀಡುವ ನಿಟ್ಟಿನಲ್ಲಿ ಚೀನಾ ತನ್ನ ರಕ್ಷಣಾ ಬಜೆಟ್ ಅನ್ನು 152 ಬಿಲಿಯನ್ ಡಾಲರ್ ಗೆ ಹೆಚ್ಚಿಸಿದೆ. ಇದು ಭಾರತದ ರಕ್ಷಣಾ ಬಜೆಟ್ ಗಿಂತ ಮೂರು ಪಟ್ಟು ಹೆಚ್ಚಿನ ಮೊತ್ತದ್ದಾಗಿದೆ.
2016ರ ಚೀನಾ ಬಜೆಟ್ ಮೊತ್ತಕ್ಕಿಂತ 2017ರ ರಕ್ಷಣಾ ಬಜೆಟ್ ಮೊತ್ತವನ್ನು ಶೇ.7ರಷ್ಟು ಹೆಚ್ಚಿಸಿದೆ ಎಂದು ಚೀನಾದ ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿರುವುದಾಗಿ ಕ್ಸಿನ್ ಹುವಾ ವರದಿ ಮಾಡಿದೆ.
ಚೀನಾದ ಪ್ರಸಕ್ತ ಸಾಲಿನ ರಕ್ಷಣಾ ಬಜೆಟ್ ಮೊತ್ತ 1.04 ಟ್ರಿಲಿಯನ್ ಯುವಾನ್(ಸುಮಾರು 152 ಬಿಲಿಯನ್ ಡಾಲರ್ ಗಳಷ್ಟು). ಚೀನಾ ರಕ್ಷಣಾ ಬಜೆಟ್ ಮೊತ್ತ ಟ್ರಿಲಿಯನ್ ಯುವಾನ್ ದಾಟಿರುವುದು ಇದೇ ಮೊದಲ ಬಾರಿಯಾಗಿದೆ.
ಕಳೆದ ವರ್ಷ ಚೀನಾ ರಕ್ಷಣಾ ಬಜೆಟ್ ಮೊತ್ತ 954.35 ಬಿಲಿಯನ್ ಯುವಾನ್ ನಷ್ಟಿತ್ತು. ಅಂದರೆ 2015ರ ಬಜೆಟ್ ಗಿಂತ ಶೇ.7.6ರಷ್ಟು ಹೆಚ್ಚಿಸಿತ್ತು.