ಮಂಗಳೂರು ಕೇಂದ್ರ ಕಾರಾಗೃಹ ವಿಚಾರಣಾಧೀನ ಕೈದಿ ಪರಾರಿ
Team Udayavani, Mar 11, 2017, 11:06 AM IST
ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಬೆಳ್ತಂಗಡಿ ತಾಲೂಕು ಪಡಂಗಡಿಯ ಗರ್ಡಾಡಿ ಗ್ರಾಮದ ಬೋಳ್ಕಲ್ಲುಗುಡ್ಡ ಮನೆಯ ಜಿನ್ನಪ್ಪ ಪರವ (43) ಶುಕ್ರವಾರ ಮುಂಜಾನೆ 3.30ರ ವೇಳೆಗೆ ಜೈಲಿನ ಕಾವಲುಗಾರರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.
ಜೈಲಿನಿಂದ ಪರಾರಿಯಾಗುವಾಗ ಆತ ನಸು ಕಂದು ಬಣ್ಣದ ಲುಂಗಿ ಮತ್ತು ನೀಲಿ ಬಿಳಿ ಚೌಕುಳಿ ಬೈರಾಸು ಮಾತ್ರ ಧರಿಸಿದ್ದನು. ಮೈಮೇಲೆ ಶರ್ಟ್ ಇರಲಿಲ್ಲ. ಜಿನ್ನಪ್ಪ ಪರವ 2015ರ ಆ. 19ರಂದು ಯುವತಿ ಯೋರ್ವಳನ್ನು ಕೆಲಸ ಕೊಡಿಸುವ ನೆಪದಲ್ಲಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದಡಿ ಉಪ್ಪಿನಂಗಡಿ ಪೊಲೀಸರಿಂದ ಬಂಧಿತನಾಗಿದ್ದನು. ಹಾಗೆ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಆತನಿಗೆ ಇದುವರೆಗೂ ಜಾಮೀನು ಸಿಕ್ಕಿರಲಿಲ್ಲ. ಪ್ರಸ್ತುತ ಈ ಪ್ರಕರಣ ಧರ್ಮಸ್ಥಳ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದೆ.
ಜೈಲು ಬಾಣಸಿಗ
ವಿಚಾರಣಾಧೀನ ಕೈದಿಯಾಗಿರುವ ಜಿನ್ನಪ್ಪ ಜೈಲಿನಲ್ಲಿ ಬಾಣಸಿಗನಾಗಿದ್ದು, ಬೆಳಗ್ಗಿನ ಉಪಾಹಾರ ತಯಾರಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದ 14 ಮಂದಿಯಲ್ಲಿ ಈತನೂ ಒಬ್ಬನಾಗಿದ್ದ. ಎಲ್ಲಾ 14 ಮಂದಿ ಪ್ರತಿ ದಿನ ಬೆಳಗ್ಗೆ 3.30 ಕ್ಕೆ ಎದ್ದು ಉಪಾಹಾರ ತಯಾರಿಸುವ ಕಾಯಕದಲ್ಲಿ ತೊಡಗುತ್ತಿದ್ದು, ಜಿನ್ನಪ್ಪ ಗ್ಯಾಸ್ ಸಿಲಿಂಡರ್ನ್ನು ಆನ್ ಆಫ್ ಮಾಡಿ ಗ್ಯಾಸ್ ಸಂಪರ್ಕ ಕಲ್ಪಿಸುವುದು ಮತ್ತು ಸ್ಟವ್ ಉರಿಸುವ ಕರ್ತವ್ಯ ನಿಭಾಯಿಸುತ್ತಿದ್ದನು.
ಗ್ಯಾಸ್ ಸಿಲಿಂಡರ್ ಕೈದಿಗಳ ಸೆಲ್ನ ಹೊರ ಭಾಗದಲ್ಲಿ ಜೈಲು ಅಧೀಕ್ಷಕರ ಕೊಠಡಿಯ ಬಳಿ ಇದೆ. ಪ್ರತಿ ದಿನ ಮುಂಜಾನೆ 3.30 ಕ್ಕೆ ಅಡುಗೆ ಕೋಣೆಯಿಂದ ಹೊರಗೆ ಬಂದು ಸಿಲಿಂಡರ್ ಆನ್ ಮಾಡಿ ಹೋಗುವ ಕೆಲಸವನ್ನು ಜಿನ್ನಪ್ಪ ನಿರ್ವಹಿಸುತ್ತಿದ್ದನು.
ಅದರಂತೆ ಶುಕ್ರವಾರ ಮುಂಜಾನೆ 3.39 ಕ್ಕೆ ಗ್ಯಾಸ್ ಆನ್ ಮಾಡಿದ ಈತ ವಾಪಸ್ ಅಡುಗೆ ಕೋಣೆಗೆ ಹೋಗಿಲ್ಲ. ಬದಲಾಗಿ ಜೈಲಿನ ಗೇಟ್ ಮೂಲಕ ಹೊರಗೆ ಹೋಗಿ ಕಂಪೌಂಡ್ ಗೋಡೆ ಹತ್ತಿ ಹೊರಗೆ ಹಾರಿ ತಪ್ಪಿಸಿಕೊಂಡಿದ್ದಾನೆ. ಕೆಲವು ಹೊತ್ತು ಕಳೆದರೂ ಜಿನ್ನಪ್ಪ ವಾಪಸ್ ಬಾರದೆ ಇದ್ದಾಗ ಸಂಶಯಗೊಂಡು ಅಧೀಕ್ಷರ ಕಚೇರಿ ಕೊಠಡಿ ಬಳಿ ಹೋದಾಗ ಆತ ಅಲ್ಲಿರಲಿಲ್ಲ. ಬಳಿಕ ಜೈಲಿನ ಕಂಪೌಂಡ್ ಒಳಗೆ ಪೂರ್ತಿ ಹುಡುಕಾಡಿದರೂ ಆತ ಪತ್ತೆಯಾಗಿಲ್ಲ.
ಸಿಸಿ ಕೆಮರಾದಲ್ಲಿ ದಾಖಲು
ಜಿನ್ನಪ್ಪ ಪರವ ಗ್ಯಾಸ್ ಆನ್ ಮಾಡಿದ ಬಳಿಕ ಜೈಲಿನ ಮುಖ್ಯ ದ್ವಾರದ ಮೂಲಕ ಹೊರಗೆ ಹೋಗಿದ್ದಾನೆ. ಬಳಿಕ ಹಳೆ ಜೈಲಿನ ಮುಖ್ಯ ಆವರಣ ಗೋಡೆಯನ್ನು ಏರಿದ ಆತ ಗೋಡೆಯ ಮೇಲ್ಭಾಗದಿಂದಲೇ ಉತ್ತರ ದಿಕ್ಕಿನ ಕಡೆಗೆ ಹೋಗಿ ಜೈಲಿನ ಹಿಂಭಾಗದ ಕೆನರಾ ಕಾಲೇಜಿನ ಆವರಣ ಗೋಡೆಯ ಬಳಿಗೆ ತೆರಳಿ ಅಲ್ಲಿಂದ ಕೆಳಗೆ ಹಾರಿ ಪರಾರಿಯಾಗಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ. 3.58ಕ್ಕೆ ಆತ ಎಸ್ಕೇಪ್ ಆಗಿರುವುದನ್ನು ಸಿಸಿ ಕೆಮರಾ ತಿಳಿಸುತ್ತದೆ.
ಭದ್ರತಾ ಲೋಪಗಳು
ಜಿನ್ನಪ್ಪನಿಗೆ ಜೈಲಿನಿಂದ ಎಸ್ಕೇಪ್ ಆಗಲು ನೆರವಾದ ಕೆಲವೊಂದು ಸಂಗತಿಗಳು ಜಿಲ್ಲಾ ಕಾರಾಗೃಹದ ಭದ್ರತಾ ಲೋಪವನ್ನು ಎತ್ತಿ ತೋರಿಸುತ್ತವೆ. ಗ್ಯಾಸ್ ಸಂಪರ್ಕ ಇರುವ ಅಧೀಕ್ಷರ ಕೊಠಡಿ ಬಳಿಯಿಂದ ಹೊರಗೆ ಬರುವಾಗ ಅಲ್ಲಿನ ಗೇಟ್ನಲ್ಲಿ ಇರುವ ಕಾವಲು ಸಿಬಂದಿ ಇರುತ್ತಾರಾದರೂ ಅವರ ನಿರ್ಲಕ್ಷ ಪ್ರಮುಖವಾಗಿ ಕೈದಿಗೆ ಪರಾರಿಯಾಗಲು ಸಹಕಾರಿಯಾಗಿದೆ. ಜಿನ್ನಪ್ಪ ಯಾವತ್ತೂ ಗ್ಯಾಸ್ ಸಂಪರ್ಕ ಕಲ್ಪಿಸಲು ಬರುತ್ತಿದ್ದ ಕಾರಣ ಆತನ ಬಗ್ಗೆ ಹೆಚ್ಚು ನಿಗಾವನ್ನು ಕಾವಲು ಸಿಬಂದಿ ವಹಿಸಿಲ್ಲ ಎನ್ನಲಾಗಿದೆ. ಎರಡನೇಯದಾಗಿ ಹೊಸ ಜೈಲು ಕಟ್ಟಡದಿಂದ ಹೊರಗೆ ಬಂದ ಜಿನ್ನಪ್ಪನಿಗೆ ಹಳೆ ಜೈಲು ಕಟ್ಟಡದ ಬಳಿಗೆ ಹೋಗಿ ಆವರಣ ಗೋಡೆ ಹತ್ತಲು ಜೈಲು ಕಟ್ಟಡದ ಛಾವಣಿ ಹೆಚ್ಚು ಎತ್ತರದಲ್ಲಿ ಇಲ್ಲದೆ ತಗ್ಗಿನಲ್ಲಿ ಇರುವುದು ಸಹಾಯ ಮಾಡಿದೆ.
ಬಳಿಕ ಹಳೆ ಜೈಲಿನ ಆವರಣಗೋಡೆಯಲ್ಲಿ ವಿದ್ಯುತ್ ತಂತಿ ಬೇಲಿ ಇದ್ದರೂ ಅದರ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿರುವುದು ಗೊಡೆಯ ಮೇಲಿಂದಲೇ ಮುಂದಕ್ಕೆ ಸಾಗಲು ವರದಾನವಾಗಿ ಪರಿಣಮಿಸಿದ್ದು, ಇದು ಮೂರನೇ ಲೋಪವಾಗಿದೆ.
ಜೈಲಿನಲ್ಲಿ ಕಾವಲು ಕಾಯಲು ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬಂದಿಯ ಜತೆಗೆ ಗೃಹ ರಕ್ಷಕರನ್ನೂ ನೇಮಕ ಮಾಡಲಾಗಿದೆ. ಶುಕ್ರವಾರ ರಾತ್ರಿ ಗೃಹ ರಕ್ಷಕರೊಬ್ಬರು ಕಾವಲುಗಾರರಾಗಿ ನಿಯೋಜನೆ ಗೊಂಡಿ ದ್ದರು ಎನ್ನಲಾಗಿದೆ.
ಜೈಲು ಅಧೀಕ್ಷಕರಾದ ಕೃಷ್ಣ ಮೂರ್ತಿ ಅವರು ಬರ್ಕೆ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ಮುಂಜಾನೆ 3.39 ರಿಂದ 4.15 ರ ಮಧ್ಯೆ ಜಿನ್ನಪ್ಪ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಜೈಲಿನ ಮತ್ತು ಕಾವಲು ಸಿಬಂದಿ ನಿರ್ಲಕ್ಷ ಇದಕ್ಕೆ ಕಾರಣ ಎಂದವರು ದೂರಿನಲ್ಲಿ ವಿವರಿಸಿದ್ದಾರೆ. ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಪ್ಪಿಸಿಕೊಂಡಿರುವ ಜಿನ್ನಪ್ಪನ ಪತ್ತೆ ಬಗ್ಗೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.
ಸಂಜೆ ವೇಳೆ ಜನ ಜಾತ್ರೆ
ಜೈಲು ಆವರಣದಲ್ಲಿ ಪ್ರತಿ ದಿನ ಸಂಜೆ ಹೊತ್ತು ಜನ ಜಾತ್ರೆ ಇರುತ್ತದೆ. ಕೈದಿಗಳ ಭೇಟಿಯ ನೆಪದಲ್ಲಿ ಮತ್ತು ಅವರಿಗೆ ಹೊರಗಿನ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಅಧಿಕ ಸಂಖ್ಯೆಯಲ್ಲಿ ಜನ ಬರುತ್ತಾರೆ. ಇದರಿಂದಾಗಿ ಸಂಜೆ ಹೊತ್ತು ಜೈಲು ರಸ್ತೆಯಲ್ಲಿ ವಾಹನ ಸಂಚಾರ ಕಷ್ಟ ಸಾಧ್ಯವಾಗುತ್ತದೆ. ಇತ್ತೀಚೆಗೆ ಈ ಪರಿಸರದಲ್ಲಿ ಜೈಲಿನ ಮುಖ್ಯ ದ್ವಾರದ ಬಳಿ ದೊಡ್ಡ ಗಾತ್ರದ ಸಿಸಿ ಕೆಮರಾವನ್ನು ಅಳವಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.