ಕಾಡು ನಿವಾಸಿಗಳಿಂದ ಪಶ್ಚಿಮಘಟ್ಟದ ಕಾಡುಗಳಿಗೆ ಬೆಂಕಿ !
Team Udayavani, Mar 11, 2017, 12:14 PM IST
ಬೆಳ್ತಂಗಡಿ: ಕಸ್ತೂರಿ ರಂಗನ್ ವರದಿ ಜನಸಾಮಾನ್ಯರಲ್ಲಿ ಒಂದು ರೀತಿಯ ಆತಂಕ ಮೂಡಿಸಿದ್ದರೆ, ಎಸ್ಟೇಟ್ ಮಾಲಕರಲ್ಲಿ ಇನ್ನೊಂದು ರೀತಿಯ ಭಯ ಮೂಡಿಸಿದೆ. ಇದರ ಜತೆಗೆ ಕಾಡಿನಂಚಿನಲ್ಲಿ, ಕಾಡಿನಲ್ಲಿಯೇ ವಾಸವಾಗಿರುವ ಅದೆಷ್ಟೋ ಅಮಾಯಕರ ಭೀತಿ ಬೇರೆಯೇ ಇದೆ. ಅದಕ್ಕಾಗಿ ಅವರು ಕಂಡುಕೊಂಡ ದಾರಿಯೇ ಕಾಡಿಗೆ ಬೆಂಕಿ ಹಚ್ಚಿ ಕಾಡು ನಾಶ ಮಾಡುವುದು. ಕಳೆದ ಕೆಲವು ದಿನಗಳಿಂದ ಸಂಭವಿಸುತ್ತಿರುವ ಕಾಡಿನ ಬೆಂಕಿಗೆ ಕಾರಣ ಕಾಡಿನೊಳಗಿನ ಮಂದಿಯೂ ಬೆಂಕಿ ಹಚ್ಚುತ್ತಿರುವುದು ಎನ್ನುವುದು ಭಯಾನಕ ಸತ್ಯ ಈಗ ಬೆಳಕಿಗೆ ಬರುತ್ತಿದೆ.
ಕಸ್ತೂರಿ ರಂಗನ್ ವರದಿ ಜಾರಿಯಾದರೆ ನಮ್ಮ ಬದುಕು ಅತಂತ್ರವಾಗಲಿದೆ ಎನ್ನುವುದು ಪಶ್ಚಿಮಘಟ್ಟದ ಕಾಡುಗಳ ನಡುವೆ ಬದುಕು ಸವೆಸುತ್ತಿರುವ ಆದಿವಾಸಿಗಳ ಅಳಲು. ಏಕೆಂದರೆ ಎಸ್ಟೇಟ್ ಮಾಫಿಯಾಗಳು ಪಶ್ಚಿಮ ಘಟ್ಟದ ಸಹಸ್ರಾರು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿ ಕಾಡು ಭಸ್ಮ ಮಾಡುವ ಕಾರ್ಯಾಚರಣೆಗೆ ಇಳಿದಿವೆ. ಕಸ್ತೂರಿ ರಂಗನ್ ವರದಿಯ ದುರ್ಲಾಭ ಪಡೆಯುವ ಹುನ್ನಾರ ಈ ವನ ದಹನದ ಹಿನ್ನೆಲೆಯಲ್ಲಿದೆ ಎನ್ನಲಾಗಿದೆ. ಏಕೆಂದರೆ ಕಸ್ತೂರಿಯ ವ್ಯಾಪ್ತಿ ಎಲ್ಲೆಲ್ಲಿ ಬರಲಿದೆಯೋ ಅಲ್ಲೆಲ್ಲ ಕಾಡ್ಗಿಚ್ಚು ಹೆಚ್ಚೇ ಇದೆ. ಬಡವರಿಗೂ ಇಂತಹ ದುಷ್ಕೃತ್ಯಕ್ಕೆ ಪ್ರೇರಣೆ ನೀಡಿ ಅವರಿಂದಲೂ ಬೆಂಕಿ ಹಚ್ಚಿಸುವ ಕಾರ್ಯವ್ಯವಸ್ಥಿತವಾಗಿ ನಡೆಯುತ್ತಿದೆ. ಇಂತಹ ಬೆಂಕಿ ಹಚ್ಚುವ ದುರುಳರಿಗೆ ಅದೇನು ಶಿಕ್ಷೆ ಪ್ರಕಟ ವಾಗಲಿದೆ.
ಘಾಟಿಯಲ್ಲಿ ಬೆಂಕಿ
ದ.ಕ. ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಶಾಲವಾಗಿ ಹಬ್ಬಿರುವ ಚಾರ್ಮಾಡಿ ಘಾಟಿಯ ಕಡಿದಾದ ಪ್ರದೇಶಗಳಲ್ಲಿ ಬೆಂಕಿ ವ್ಯಾಪಿಸಿದೆ. ಕೆಲವು ದಿನಗಳ ಹಿಂದೆಯೇ ಬೆಂಕಿ ಬಿದ್ದಿರುವ/ ಹಾಕಿರುವ ಸಾಧ್ಯತೆಯಿದ್ದು, ಈಚೆಗೆ ಬೀಸುತ್ತಿರುವ ಶೀತ ಗಾಳಿಯಿಂದ ಬೆಂಕಿಯ ವ್ಯಾಪ್ತಿ ವಿಶಾಲವಾಗುತ್ತಿದೆ. ಇದೇ ಕಾರಣದಿಂದ ಬೆಂಕಿ ನಿಯಂತ್ರಣಕ್ಕೂ ಬಂದಿಲ್ಲ. ಇಲಾಖೆಯೂ ಅಂತಹ ದೊಡ್ಡ ಮಟ್ಟದ ಪ್ರಯತ್ನ ಮಾಡಲಿಲ್ಲ. ಚಾರ್ಮಾಡಿ ಘಾಟಿಯ ಬಾರಿಮಲೆ, ರಾಮನಬೆಟ್ಟ, ಸೊಪ್ಪಿನಗುಡ್ಡ, ಹೊಸಮನೆಗುಡ್ಡ, ಕಡ್ತಕಲ್ ಘಾಟಿಯ ಕೃಷ್ಣಗಿರಿ, ಎಳ ನೀರು ಘಾಟಿಯ ಹಿರಿಮರಿಗುಪ್ಪೆ, ಬೈರಾಪುರ ಘಾಟಿಯ ದೀಪದಕಲ್ಲು, ಉಳಿಯಮಲೆ, ಮೇರುತಿಗಿರಿ, ಅಬ್ಬಿನೆಟ್ಟಿ, ವೆಂಕಟಗಿರಿ, ಮುಗಿಲಗಿರಿ, ಅಮೆದಿಕ್ಕೆಲ್ ಮೊದಲಾದ ಕಡೆಗಳಲ್ಲಿ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ. ದೊಡ್ಡ ಬೆಂಕಿಯ ಎದುರು ಇಲಾಖೆಯ ಸಣ್ಣ ಪ್ರಯತ್ನ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂದಂತಾಗಿದೆ. ಈ ಪ್ರದೇಶಗಳಿಗೆ ವಾಹನಗಳಲ್ಲಿ ಹೋಗಲು ಸಾಧ್ಯವಿಲ್ಲ. ಇಲಾಖೆಯೂ ಚುರುಕಿನ ಕಾರ್ಯಾಚರಣೆ ಕೈಗೊಂಡಿಲ್ಲ. ಇದರ ಪರಿಣಾಮ ಊಹಿಸಲೂ ಅಸಾಧ್ಯ.
ಆನೆಗಳಿಲ್ಲ
ಚಾರ್ಮಾಡಿಯ ಅತೀ ಹೆಚ್ಚು ಆನೆಗಳಿರುವ ಪ್ರದೇಶಗಳಾದ ಚಾರ್ಮಾಡಿ, ಅಂಬಟೆಮಲೆ, ಬಾಂಜಾರುಮಲೆ, ಇಳಿಮಲೆ, ಬಾರಿಮಲೆ, ದೇವಗರಿ ಅಳಿಯೂರು ಕಣಿವೆ ಪ್ರದೇಶಗಳ 50 ಎಕರೆ ಇಂದು ಕಾಫಿ ಎಸ್ಟೇಟ್‌ನವರು ಇಡೀ ಅರಣ್ಯ ಕಡಿದು ಕಾಫಿ ಗಿಡ ನೆಟ್ಟಿದ್ದಾರೆ. ಕೇಂದ್ರದ ರಕ್ಷಿತಾರಣ್ಯದ ನಿಯಮಗಳು ಇಲ್ಲಿ ಗಾಳಿಗೆ ತೂರಿದಂತಾಗಿದ್ದು, ಎಸ್ಟೇಟ್ ಕುಳಗಳ ದಾಸರಾಗಿ ಇಲಾಖಾಧಿಕಾರಿಗಳು ವರ್ತಿಸುವಂತಿದೆ. ಅಲ್ಲಿ ಆನೆಗಳ ಆವಾಸಸ್ಥಾನ ಹಾನಿಗೀಡಾಗಿದೆ. ಕಾಡಿನೊಳಗೆ ಹೋಗಲು ಎಸ್ಟೇಟ್ ಮಾಲಕರ ಅನುಮತಿ ಕೇಳಬೇಕಾದ ದಯನೀಯ ಸ್ಥಿತಿ ಇಲಾಖೆಗಿದೆ. ಕೆಲವೆಡೆ ಕಾಡು ಕೋಣಗಳು ಕುಡಿಯುವ ನೀರಿಗಾಗಿ ಮೈಲು ಗಟ್ಟಲೆ ಪಯಣಿಸುವ ದುರ್ಗತಿ ಬಂದಿದೆ.
ಲೂಟಿಯೇ ಉದ್ದೇಶ
ಅರಣ್ಯ ನಾಶ ಹಾಗೂ ಲೂಟಿಯೇ ಉದ್ದೇಶವಾಗಿಟ್ಟ ಅಧಿಕಾರಿಗಳು, ಸಚಿವರಿಂದ ಕಾಡು ಉಳಿಸುವ ಪ್ರಕ್ರಿಯೆ ನಿರೀಕ್ಷೆ ಅಸಾಧ್ಯ. ಕಾಡು
ಗಳ್ಳರು ಹಾಗೂ ಸುತ್ತಮುತ್ತಲಿನ ಎಸ್ಟೇಟ್ ಕುಳಗಳೇ ಈ ಬೆಂಕಿ ಹಾಕುತ್ತಿದ್ದಾರೆ ಎನ್ನಲಾಗಿದೆ. ಅಲ್ಲಲ್ಲಿ ಹೊತ್ತಿ ಉರಿಯುತ್ತಿದೆ, ವನ್ಯಜೀವಿಗಳು ಜೀವಭಯದಿಂದ ಆತಂಕಕ್ಕೊಳಗಾಗಿವೆ ! ಚಿಕ್ಕಚಿಕ್ಕ ಕೀಟಗಳು, ಹಾರಲಾಗದ ಹಕ್ಕಿಯ ಮರಿಗಳು, ಮೊಟ್ಟೆಗಳು, ಹಾವುಗಳು, ನವಿಲುಗಳು ಸುಟ್ಟು ಭಸ್ಮವಾಗುತ್ತಿವೆ, ಮಳೆಗೆ ಮೂಲಾಧಾರವಾಗಿರುವ ಹುಲ್ಲುಗಾವಲು, ಶೋಲಾರಣ್ಯ ಹೊತ್ತಿ ಬೂದಿಯಾಗುತ್ತಿವೆ. ಜುಗಲ್ಬಂದಿ ತರಹ ಅಲ್ಲಲ್ಲಿ ಬೆಂಕಿಯ ಕೆನ್ನಾಲಿಗೆ ಪಶ್ಚಿಮ ಘಟ್ಟದ ಗಿರಿ ಕಾನನವನ್ನು ಆವರಿಸುತ್ತಿದೆ.
ಹೆಲಿಕಾಪ್ಟರ್ ಇಲ್ಲ
ಬೇರೆ ದೇಶಗಳಲ್ಲಿ ಕಾಡಿನ ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಕೆ ಮಾಡುತ್ತಾರೆ. ರಾಸಾಯನಿಕ ಮೂಲಕ ಅಗ್ನಿಶಮನ ನಡೆಸುತ್ತಾರೆ. ಆದರೆ ಕೋಟ್ಯಂತರ ರೂ. ಸಾರ್ವಜನಿಕರ ತೆರಿಗೆ ಹಣವನ್ನು ಅರಣ್ಯ ಉಳಿಸುವ ನೆಪದಲ್ಲಿ ಲೂಟಿ ಮಾಡುವ ಅರಣ್ಯ ಇಲಾಖೆ ಏನು ಮಾಡುತ್ತಿದೆ. ನಮ್ಮಲ್ಲಿ ಮಂತ್ರಿಗಳಿಗೆ ತಿರುಗಾಡಲು ಹೆಲಿಕಾಪ್ಟರ್ ಇದೆ, ಅರಣ್ಯ ಉಳಿಸಲು, ಆಪತ್ತು ನಿಭಾಯಿಸಲು ಅಂತಹ ಸಾಧನಗಳಿಲ್ಲ ಎನ್ನುತ್ತಾರೆ ಚಾರಣಿಗ ಶಶಿಧರ ಶೆಟ್ಟಿ.
ಬೇಕೆಂದೇ ಹಾಕಿದ ಬೆಂಕಿ
ಕಸ್ತೂರಿ ರಂಗನ್ ವರದಿಯ ದುರ್ಲಾಭ ಪಡೆಯಲು ಎಸ್ಟೇಟ್ ಕುಳಗಳು ಪ್ರಯತ್ನಿಸುತ್ತಿರುವಂತಿವೆ. ಬೆಂಕಿ ಹಾಕಿ ಮರಗಳ ನಾಶವಾದರೆ ಮರಗಳಿಲ್ಲ ಎಂದು ಅದನ್ನು ಡೀಮ್ಡ್ ಅರಣ್ಯ ಎಂದು ಉಲ್ಲೇಖೀಸುತ್ತಾರೆ. ಅದನ್ನು ಎಸ್ಟೇಟ್ ಹಾಗೂ ಖಾಸಗಿಯವರಿಗೆ ಒತ್ತುವರಿ ಮಾಡಿಕೊಳ್ಳಬಹುದು ಎಂಬ ದುಷ್ಟ ಯೋಚನೆ.
ಶಶಿಧರ ಶೆಟ್ಟಿ, ಮಂಗಳೂರು
ಬೆಂಕಿ ಭಾಗ್ಯ
ಅರಣ್ಯ ಇಲಾಖೆಯಲ್ಲಿ ಬೇಕಾದಷ್ಟು ಕಂದಾಯ ಬರುತ್ತಿದ್ದರೂ ಮೂಲ ಸೌಕರ್ಯ ಒದಗಿಸಲು ಸರಕಾರಕ್ಕೆ ಆಗುತ್ತಿಲ್ಲ. ಅಂದರೆ ಇದ್ಯಾವ ಬರಪೀಡಿತ ಸರಕಾರ ! ಗೊರಕೆ ಹೊಡೆಯುತ್ತಿರುವ ಅರಣ್ಯ ಸಚಿವರಿಗೆ ಇಷ್ಟೆಲ್ಲ ಆದರೂ ಎಚ್ಚರಿಕೆ ಆಗುವುದಿಲ್ಲ, ಅಂದ್ರೆ ಎಷ್ಟು ಅರಣ್ಯ ಸಂರಕ್ಷಣೆ ಆದೀತು ? ಬಹುಶಃ ರಾಜ್ಯ ಸರಕಾರದ ಶಾದಿ ಭಾಗ್ಯ, ಗೋಧಿ ಭಾಗ್ಯ, ವಿಸ್ಕೀ ಭಾಗ್ಯ ಎಂಬಂತೆ ಇದು ಬೆಂಕಿ ಭಾಗ್ಯ ಯೋಜನೆಯಾ?
ದಿನೇಶ್ ಹೊಳ್ಳ, ಪರಿಸರ ಹೋರಾಟಗಾರ
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.