ಎರಡನೇ ಸಲದಿಂದ ಮೊದಲ ಸಲ ಬ್ರೇಕ್ ಸಿಕ್ಕಿದೆ!
Team Udayavani, Mar 15, 2017, 3:50 AM IST
ಎರಡನೆ ಸಲ ಚಿತ್ರದ ನಾಯಕಿ ಸಂಗೀತಾ ಭಟ್. ಈಕೆ ಸದ್ಯದ ಸಂದರ್ಭದಲ್ಲಿ ನಟನೆ ಮತ್ತು ಬೋಲ್ಡ್‌ನೆಸ್‌ನಿಂದ ಗಾಂಧಿನಗರದಲ್ಲಿ ಸುದ್ದಿ ಮಾಡುತ್ತಿರುವ ನಟಿ. ಇದಕ್ಕೂ ಮೊದಲು ಪ್ರೀತಿ ಗೀತಿ ಇತ್ಯಾದಿ ಚಿತ್ರದಲ್ಲಿ ನಾಯಕಿಯಾಗಿದ್ದರು. ಅವರ ಕಿಸ್ಮತ್, ದಯವಿಟ್ಟು ಗಮನಿಸಿ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.
ನಿಮ್ಮ ಹುಟ್ಟೂರು ಯಾವುದು?
ಅಪ್ಪ ಮಂಗಳೂರಿನ ಕಡೆಯವರು. ಸೆಟಲ್ ಆಗಿದ್ದು ಬೆಂಗಳೂರಿನಲ್ಲಿ. ನಾನು ಹುಟ್ಟಿ ಬೆಳೆದಿದ್ದು ಓದಿದ್ದೆಲ್ಲಾ ಬೆಂಗಳೂರಿನಲ್ಲೇ.
ಸಿನಿಮಾ ಪಯಣ ಆರಂಭವಾಗಿದ್ದು ಹೇಗೆ?
ನನಗೆ ಚಿಕ್ಕವಳಿದ್ದಾಗಿನಿಂದಲೂ ಕಲೆಯಲ್ಲಿ ವಿಶೇಷ ಆಸಕ್ತಿ. ಸಂಗೀತ, ನೃತ್ಯವನ್ನು ಶಾಸ್ತ್ರೀಯವಾಗಿ ಕಲಿತಿದ್ದೇನೆ. ಶಾಲಾ ದಿನಗಳಲ್ಲೇ ಮಾಡೆಲಿಂಗ್ ಕೂಡ ಶುರು ಮಾಡಿದ್ದೆ. ನಾನು 10ನೇ ತರಗತಿ ಮುಗಿಸಿದಾಗ ಆರ್ಟ್ ಸಿನಿಮಾವೊಂದರಿಂದ ಆಫರ್ ಬಂತು. ಅಲ್ಲಿಂದ ನನ್ನ ಸಿನಿಮಾ ಪಯಣ ಆರಂಭ. ಮಧ್ಯೆ ಧಾರಾವಾಹಿಯಲ್ಲೂ ಅಭಿನಯಿಸಿದ್ದೇನೆ.
ನಟನೆ ಆರಂಭಿಸಲು ಪೋಷಕರ ಪ್ರೋತ್ಸಾಹ ಇತ್ತಾ. ನಿನಗಿನ್ನೂ ಚಿಕ್ಕ ವಯಸ್ಸು ಬೇಡ ಅಂತೇನಾದ್ರೂ ಹೇಳಿದರಾ?
ನನ್ನ ಅಪ್ಪ ಹೋಮಿಯೋಪಥಿ ವೈದ್ಯರು. ಅವರಿಗೆ ಇದೆಲ್ಲ ಇಷ್ಟ ಇರಲಿಲ್ಲ. ಆದರೆ ಅಮ್ಮ ಮೂರುವರೆ ವಜ್ರಗಳು ಎಂಬ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದರು. ಆಗ ಅವರಿಗೆ ಪ್ರೋತ್ಸಾಹ ಸಿಗದೆ ನಟನೆಯಲ್ಲಿ ಮುಂದುವರೆಯಲಾಗಿರಲಿಲ್ಲ. ಆದ್ದರಿಂದ ನಾನು ಅಭಿನಯವನ್ನು ವೃತ್ತಿಯಾಗಿ ತೆಗೆದುಕೊಂಡಾಗ ಅವರು ನನ್ನನ್ನು ಪ್ರೋತ್ಸಾಹಿಸಿದರು.
“ಎರಡನೇ ಸಲ’ ಚಿತ್ರದ ಟ್ರೇಲರ್ ಲಾಂಚ್ ಆಗುತ್ತಿದ್ದಂತೆ ಸಂಗೀತಾ ಸ್ಟಾರ್ ಆಗಿಬಿಟ್ಟರಲ್ಲ…?
ಹೌದು. ಹಾಗೆ ನೋಡಿದರೆ ನಾನು ಚಿತ್ರರಂಗಕ್ಕೆ ಹೊಸಬಳಲ್ಲ. “ಎರಡನೇ ಸಲ’ ಚಿತ್ರಕ್ಕೂ ಮೊದಲು ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದೇನೆ. ಆದರೆ ಯಶಸ್ಸು ಸಿಗುವುದು ಸ್ವಲ್ಪ ತಡವಾಯಿತು. ಕಳೆದ ವರ್ಷ ಬಿಡುಗಡೆಯಾದ ಪ್ರೀತಿ ಗೀತಿ ಇತ್ಯಾದಿ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರಕಿತು. ಆದರೆ ಚಿತ್ರ ಜನಕ್ಕೆ ತಲುಪಲಿಲ್ಲ. ವಿಜಯ ರಾಘವೇಂದ್ರ ಜೊತೆ ನಟಿಸಿರುವ “ಕಿಸ್ಮತ್’, ವಸಿಷ್ಠ ಸಿಂಹ ಎದುರು ನಟಿಸಿರುವ “ದಯವಿಟ್ಟು ಗಮನಿಸಿ’ ಚಿತ್ರಗಳ ಬಿಡುಗಡೆ ತಡವಾಗುತ್ತಿದೆ. ತುಂಬಾ ಜನರು “ಎರಡನೇ ಸಲ’ವೇ ನನ್ನ ಮೊದಲ ಚಿತ್ರ ಎಂದು ತಿಳಿದಿದ್ದಾರೆ.
ಒಬ್ಬ ನಟಿಗೆ ಒಂದು ದೊಡ್ಡ ಬ್ರೇಕ್ ಬೇಕು. “ಎರಡನೇ ಸಲ’ದಿಂದ ಅದು ಸಿಕ್ಕಿದೆ.
“ಎರಡನೇ ಸಲ’ದಲ್ಲಿ ನಿಮ್ಮದು ತುಂಬಾ ಬೋಲ್ಡ್ ಪಾತ್ರ. ತೆರೆ ಮೇಲೆ ಅಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಮಾನಸಿಕವಾಗಿ ಹೇಗೆ ಸಿದ್ಧರಾಗಿದ್ದಿರಿ?
ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇನೆ ಎಂಬುದು ನಿಜ. ಅದರೆ ಅದು ಮಧ್ಯಮ ವರ್ಗದ ಹುಡುಗಿ ಪಾತ್ರ. ಮಧ್ಯಮ ವರ್ಗದ ಹುಡುಗಿಯ ಹಾಗೆ ಕಾಣಲು ಮೇಕಪ್ ಇಲ್ಲದೆಯೂ ನಟಿಸಿದ್ದೇನೆ. ಅದೇ ರೀತಿ ಪಾತ್ರ ಬೋಲ್ಡ್‌ನೆಸ್ಸನ್ನೂ ಬೇಡಿತ್ತು. ಅದಕ್ಕೂ ನ್ಯಾಯ ಒದಗಿಸಿದ್ದೇನೆ.
ಮೇಕಪ್ ಇಲ್ಲದೇ ನಟಿಸಲು ಬೇಸರವಾಗಲಿಲ್ಲವೇ?
ಖಂಡಿತಾ ಆಗಿದೆ. ನಾವು ಹುಡುಗಿಯರು ಮನೆ ಪಕ್ಕದಲ್ಲಿರುವ ಅಂಗಡಿಗೆ ಹೋಗಬೇಕಾದರೂ ಫೇರ್ ಆ್ಯಂಡ್ ಲವ್ಲಿ ಹಚ್ಚಿಕೊಂಡು ಹೋಗುತ್ತೇವೆ. ಇನ್ನು ಕ್ಯಾಮರಾ ಮುಂದೆ ಬರುವಾಗ ಮೇಕಪ್ ಇಲ್ಲ ಎಂದರೆ ಬೇಸರವಾಗುವುದಿಲ್ಲವೇ? ಆದರೆ ಸಿನಿಮಾದಲ್ಲಿ ಮುಗ್ದೆ ರೀತಿ ಕಾಣುತ್ತೇನೆ. ಇದಕ್ಕೆ ಮೇಕಪ್ ಇಲ್ಲದೇ ಇದ್ದದ್ದೇ ಕಾರಣ.
ಮೊದಲ ಟ್ರೇಲರ್ ಬಿಡುಗಡೆಯಾದಾಗ ಜನರ ರಿಯಾಕ್ಷನ್ ಹೇಗಿತ್ತು?
ಇದೆಲ್ಲಾ ಬೇಕಿತ್ತಾ ನಿನಗೆ ಎಂದು ತುಂಬಾ ಜನ ಕೇಳಿದರು. ನಾನೊಂದು ಕೆಟ್ಟ ಚಿತ್ರದಲ್ಲಿ ನಟಿಸಿದ್ದೇನೆ ಎಂದು ಅವರು ತಿಳಿದಿದ್ದರು. ಚಿತ್ರ ಬಿಡುಗಡೆಯಾದ ಮೇಲೆ ಅವರಿಗೇ ತಿಳಿಯುತ್ತದೆ ಎಂದು ನಾನು ಪ್ರತಿಕ್ರಿಯಿಸುವ ಗೋಜಿಗೇ ಹೋಗಿರಲಿಲ್ಲ. ಮೊದಲ ಟ್ರೀಲರ್ ತುಂಬಾ ತುಂಟತನದಿಂದ ಕೂಡಿತ್ತು. ಗುರುಪ್ರಸಾದ್ ಸರ್ ಅದನ್ನು ಟೆಕ್ನಿಕಲ್ ಜೋಕ್ಸ್ ಎಂದು ಕರೆಯುತ್ತಾರೆ.
ಇದುವರೆಗಿನ ನಟನಾ ಜೀವನದಲ್ಲಿ ಚಾಲೆಂಜಿಂಗ್ ಎನಿಸಿರುವ ಘಟನೆ ಯಾವುದು?
“ಎರಡನೇ ಸಲ’ದಲ್ಲಿ ಹಿರಿಯ ನಟಿ ಲಕ್ಷ್ಮಿಅಮ್ಮನ ಜೊತೆ ನಟಿಸಿದ್ದು ಚಾಲೆಂಜಿಂಗ್ ಆಗಿತ್ತು. ಚಿಕ್ಕಂದಿನಿಂದಲೂ ನಾನವರ ಅಭಿಮಾನಿ. ಅವರ ಭಾವಾಭಿನಯವನ್ನು ತಲ್ಲೀನಳಾಗಿ ನೋಡುತ್ತಿದ್ದೆ. ಅವರ ಜೊತೆ ನಟಿಸುವಾಗ ಅವರ ಮುಂದೆ ನನ್ನ ಅಭಿನಯ ಡಲ್ ಆದರೆ ಎಂಬ ಭಯ ತುಂಬಾ ಕಾಡುತ್ತಿತ್ತು.
ಬಟ್ಟೆ, ಮೇಕಪ್ ವಿಚಾರವಾಗಿ ಹರೆಯದಲ್ಲಿ ಸಿನಿಮಾ ನಟಿಯರ ಪ್ರಭಾವಕ್ಕೊಳಗಾಗುತ್ತಿದ್ದದ್ದು ಇದೆಯೇ?
ಹೌದು, ಐಶ್ವರ್ಯಾ ರೈರನ್ನು ನಾನು ಅನುಕರಿಸಲು ಪ್ರಯತ್ನಿಸುತ್ತಿದ್ದೆ. ದೇವದಾಸ್ ಚಿತ್ರದ ಡೋಲಾರೆ ಹಾಡು ನೋಡಿದಾಗ ಐಶ್ವರ್ಯಾ ರೈ ಹಾಕಿದ್ದ ಡ್ರೆಸ್ ರೀತಿಯ ಡ್ರೆಸ್ ಹಾಕಿ ಅದೇ ರೀತಿ ನೃತ್ಯ ಮಾಡಲು ಪ್ರಯತ್ನಿಸುತ್ತಿದ್ದೆ. “ಹಮ್ ದಿಲ್ ದೇ ಚುಕೆ ಸನಮ್’ ಚಿತ್ರದಲ್ಲಿ ಐಶ್ವರ್ಯಾ ಧರಿಸಿರುವಂಥ ಘಾಗ್ರಾ ಚೋಲಿಗಳನ್ನು ಧರಿಸಲು ತುಂಬಾ ಇಷ್ಟಪಡುತ್ತಿದ್ದೆ.
ಕಾಲೇಜಿನಲ್ಲಿ ಎಷ್ಟು ಹುಡುಗರ ಹೃದಯ ಕದ್ದಿದ್ದಿರಿ?
ಕಾಲೇಜಿನಲ್ಲಿ ನಾನು ತುಂಬಾ ಸೈಲೆಂಟ್ ಹುಡುಗಿ. ನಾನು ಕ್ಲಾಸಿನೊಳಗೆ ಇದ್ದೀನೊ ಇಲ್ಲವೋ ಎಂದೇ ಎಷ್ಟೋ ಜನಕ್ಕೆ ಗೊತ್ತಾಗುತ್ತಿರಲಿಲ್ಲ. ಒಂದಿಬ್ಬರಿಗೆ ನನ್ನ ಮೇಲೆ ಕ್ರಷ್ ಇತ್ತು ಅಂತ ಸ್ನೇಹಿತರಿಂದ ತಿಳಿದಿತ್ತು. ಅಷ್ಟೇ ಲವ್, ಪ್ರಪೋಸ್ ಅಂತ ಏನು ನಡೀಲಿಲ್ಲ. ಆದರೆ ಈಗ ತುಂಬಾ ಪ್ರಪೋಸಸ್ ಬರ್ತಾ ಇವೆ.
ಹಾಗಾದರೆ ಪ್ರೀತಿಯಲ್ಲಿರುವ ಹುಡುಗಿಯರಿಗೆ ಏನಾದರೂ ಕಿವಿಮಾತು ಹೇಳಿ.
ಎಲ್ಲಾ ಸಂಬಂಧಗಳೂ ಹುಡುಗಿಯರ ವರ್ತನೆ, ತಾಳ್ಮೆ ಮೇಲೆ ನಿಂತಿರುತ್ತದೆ. ಪ್ರೇಮಿಯ ಪ್ರೀತಿ ಕೂಡ ತಂದೆ ತಾಯಿಯ ಪ್ರೀತಿ ಇದ್ದ ಹಾಗೆಯೇ, ಅವರ ಹತ್ತಿರ ಏನನ್ನೂ ಮುಚ್ಚಿಡಬಾರದು. ಅವರೇ ಮೊದಲು ಸಾರಿ ಕೇಳಲಿ ಎಂದು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ. ತಪ್ಪಿದ್ದರೆ ಕೂಡಲೇ ಕ್ಷಮೆ ಕೇಳಿ.
ನಿಮಗೆ ಇದುವರೆಗೂ ಸಿಕ್ಕಿರುವ ಉಡುಗೊರೆಗಳಲ್ಲಿ ಬೆಸ್ಟ್ ಉಡುಗೊರೆ?
ನಾನು, ನನ್ನ ಹುಡುಗ ಸುತ್ತಾಡಲು ಹೋಗಿದ್ದೆವು. ಆಗ ನಾನೊಂದು ಕಾರನ್ನು ನೋಡಿ ತುಂಬಾ ಇಷ್ಟಪಟ್ಟೆ. ಮರುದಿನವೇ ನನ್ನ ಹುಡುಗ ಅದೇ ಕಂಪನಿಯ ಹೊಸ ಕಾರನ್ನು ಕೊಂಡುಕೊಂಡ. ಅದು ಈವರೆಗಿನ ಬೆಸ್ಟ್ ಸರ್‌ಪ್ರೈಸ್. ನಾನು ಏನನ್ನು ಇಷ್ಟಪಡ್ತೀನಿ ಅಂತ ಆತ ಬೇಗ ತಿಳಿದುಕೊಳ್ಳುತ್ತಾನೆ. ಅದಕ್ಕಿಂತ ಬೇರೆ ಉಡುಗೊರೆ ಇದೆಯಾ?
ಬಿಡುವಿನ ಸಮಯದಲ್ಲಿ ಏನು ಮಾಡ್ತೀರಿ.
ನಾನು ತಿಂಡಿ ಪೋತಿ, ಒಳ್ಳೆ ಫುಡ್, ಚಾಟ್ಸ್ ಎಲ್ಲಿ ಸಿಗುತ್ತದೆ ಎಂದು ಹುಡುಕಿಕೊಂಡು ಹೋಗ್ತಾ ಇರಿ¤àನಿ. ಅಮ್ಮ ಕೂಡ ನನಗೆ ಸಾಥ್ ಕೊಡ್ತಾರೆ. ಅಡುಗೆ ಮಾಡುವುದು ಮತ್ತು ಝುಂಬಾ ಡಾನ್ಸ್ ಮಾಡ್ತಾ ಕಾಲ ಕಳೀತೀನಿ.
ನಿಮ್ಮ ಪ್ರಕಾರ ಬೆಂಗಳೂರಿನ 3 ಬೆಸ್ಟ್ ಚಾಟ್ ಸೆಂಟರ್?
ರಾಜ್‌ಕುಮಾರ್ ರೋಡ್‌ನಲ್ಲಿರುವ ವೆಂಕಟೇಶ್ವರ ಚಾಟ್ ಸೆಂಟರ್, ಜಯನಗರದ ಹರೀಸ್ ಸೂಪರ್ ಸ್ಯಾಂಡ್ವಿಚ್, ಸಂಜಯ ನಗರ ಚಾಟ್ ಸ್ಟ್ರೀಟ್.
ಬೆಸ್ಟ್ ರೆಸ್ಟೊರಂಟ್
ಓರಿಯಂಟಲ್
ಹೋಟೆಲ್‌ಗೆ ಹೋದಾಗ ಹೆಚ್ಚಾಗಿ ಏನು ತಿಂತೀರ?
ನಮ್ಮ ಮನೆಯಲ್ಲಿ ನಾವು ಶುದ್ಧ ಸಸ್ಯಾಹಾರಿಗಳು. ನಾನು ನಟನಾ ವೃತ್ತಿ ಆರಂಭಿಸಿದಾಗ ತುಂಬಾ ನಿಶ್ಯಕ್ತಿಯಿಂದ ಬಳಲುತ್ತಿದ್ದೆ. ಒಮ್ಮೆ ಡಾಕ್ಟರ್ ನೀವೇಕೆ ಮಾಂಸಾಹಾರ ಸೇವಿಸಬಾರದು ಎಂದು ಹೇಳಿದರು. ಆಗಿನಿಂದ ನಾನ್‌ವೆಜ್ ತಿನ್ನಲು ಆರಂಭಿಸಿದೆ. ಈಗ ನಾನ್‌ವೆಜ್ ಫುಡ್ ನನ್ನ ಫೇವರೆಟ್. ಹೋಟೆಲ್‌ಗಳಿಗೆ ಹೋದಾಗ ಹೆಚ್ಚಾಗಿ ನಾನ್‌ವೆಜ್ ತಿಂತೀನಿ. ವೆಜ್ ಆಹಾರ ಸೇವಿಸುವುದು ಬಹಳ ಕಡಿಮೆಯಾಗಿದೆ. ಎಷ್ಟೋ ಬಗೆಯ ಸಸ್ಯಾಹಾರಿ ಆಹಾರಗಳು ಮರೆತೇ ಹೋಗಿವೆ.
ಮನೆಯಲ್ಲಿ ಯಾವೆಲ್ಲಾ ಅಡುಗೆ ಮಾಡ್ತೀರಿ?
ನನ್ನ ಅಜ್ಜಿ ನುಚ್ಚಿನುಂಡೆ ಮಾಡ್ತಿದ್ರು. ಎಲ್ಲಾ ಹಬ್ಬಗಳಲ್ಲೂ ನಾನು ಅದನ್ನು ತಯಾರಿಸುತ್ತೇನೆ. ಯು ಟ್ಯೂಬ್ ನೋಡಿಕೊಂಡು ನಾನ್‌ವೆಜ್ ಅಡುಗೆ ತಯಾರಿಸ್ತೀನಿ.
ನಿಮ್ಮ ಡಯಟ್ ಬಗ್ಗೆ ಹೇಳ್ತೀರಾ?
ಚರ್ಮದ ಆರೋಗ್ಯಕ್ಕೆ ಆರೆಂಜ್ ಜ್ಯೂಸ್ ತುಂಬಾ ಒಳ್ಳೆಯದು. ಕಿತ್ತಳೆ ಸಿಗದ ಸಮಯದಲ್ಲಿ ವಿಟಮಿನ್ ಸಿ ಜ್ಯೂಸ್ ಕುಡಿಯುತ್ತೇನೆ. ಶೂಟಿಂಗ್ ಸಮಯದಲ್ಲಿ ಡಯಟ್ ಸರಿಯಾಗಿ ಪಾಲಿಸಲು ಆಗುವುದಿಲ್ಲ. ಅಗ ಓಟ್ಸ್, ಮೊಸರನ್ನವನ್ನು ಹೆಚ್ಚಾಗಿ ಸೇವಿಸುತ್ತೀನಿ.
ನೀವು ತುಂಬಾ ಬ್ಯೂಟಿ ಕಾನ್ಶಿಯಸ್ ಅಂತೆ ?
ಹೌದು. ಚಿಕ್ಕ ಹುಡುಗಿಯಿದ್ದಾಗಿನಿಂದ ಚರ್ಮದ ಆರೈಕೆ ಬಗ್ಗೆ ಕಾಳಜಿ ವಹಿಸುತ್ತೇನೆ. ನಮ್ಮ ಆಹಾರಕ್ಕೂ ತ್ವಚೆಗೂ ನೇರ ಸಂಬಂಧ ಇದೆ. ನಾವು ಎಷ್ಟು ಒಳ್ಳೆಯ ಆಹಾರ ತಿನ್ನುತ್ತೀವೊ ನಮ್ಮ ತ್ವಚೆ ಅಷ್ಟು ಚನ್ನಾಗಿ ಇರುತ್ತದೆ. ಮುಖ್ಯವಾಗಿ ಆತಂಕ, ಒತ್ತಡದಿಂದ ದೂರ ಇರಬೇಕು. ಜೀವನದಲ್ಲಿ ಏನೆಲ್ಲಾ ಆಗುತ್ತದೊ ಆಗಲಿ, ಒಳ್ಳೆ ಸಮಯ ಬರುತ್ತದೆ ಎಂದು ನಗುನಗುತಾ ಇರಬೇಕು ಅನ್ನೋದು ನನ್ನ ಪಾಲಿಸಿ.
ಮೇಕಪ್ ಹಾಕಿಕೊಂಡಿರುವುದಕ್ಕೆ ಇಷ್ಟಾನ?
ಇಲ್ಲಪ್ಪ. ಮೇಕಪ್ ಇದ್ದರೆ ಮುಖದ ಮೇಲೆ ಏನೊ ಭಾರ ಹೊತ್ತಂತೆ ಭಾಸವಾಗುತ್ತದೆ. ಎಷ್ಟು ಬೇಗ ಮೇಕಪ್ ತೆಗೆಯುತ್ತೇನೊ ಅಂತ ಕಾಯ್ತಾ ಇರ್ತಿನಿ.
ನೀವು ಹೆಚ್ಚು ತೊಡುವ ಡ್ರೆಸ್ ಯಾವುದು?
ಜೀನ್ಸ್ ಮತ್ತು ಟೀ ಶರ್ಟ್. ಇದಕ್ಕಿಂತ ಆರಾಮವಾದ ಡ್ರೆಸ್ ಇನ್ನೊಂದಿಲ್ಲ. ಹುಡುಗಿ ಥರಾ ಡ್ರೆಸ್ ಹಾಕಿಕೊಂಡು ಬಾ ಅಂತ ನನ್ನ ಬಾಯ್‌ಫ್ರೆಂಡ್ ಯಾವಾಗಲೂ ಹೇಳ್ತಿರ್ತಾನೆ.
ಅಪ್ಪನ ಜೊತೆ ಕಳೆದ ಯಾವ ಕ್ಷಣ ನೆನಪಿಸಿಕೊಳ್ಳಲು ಇಷ್ಟ ಪಡುತ್ತೀರಿ?
ನಾನು ತುಂಬಾ ಚಿಕ್ಕವಳಿದ್ದೆ. ಸ್ನಾನ ಮಾಡಲು ಸ್ನಾನದ ಕೋಣೆಗೆ ಹೋದಾಗ ಅಲ್ಲೊಂದು ಜಿರಳೆ ನೋಡಿ ಕಿರುಚಿಕೊಂಡು ಹೊರಗಡೆ ಓಡಿ ಬಂದೆ. ಬಟ್ಟೆ ಹಾಕದೆ ಹೊರಗೆ ಬಂದಿದ್ದಕ್ಕೆ ಅಪ್ಪ ನನಗೆ ಸರಿಯಾಗಿ ಪೂಜೆ ಮಾಡಿದರು. ನನ್ನ ಅಪ್ಪ ತುಂಬಾ ಸ್ಟ್ರಿಕ್ಟ್ ಇದ್ದರು.
ಶೂಟಿಂಗ್ ವೇಳೆ ನಡೆದ ಯಾವ ತಮಾಷೆ ಘಟನೆ ನೆನೆಸಿಕೊಳ್ಳಲು ಇಷ್ಟ ಪಡುತ್ತೀರ?
“ಪ್ರೀತಿ ಗೀತಿ ಇತ್ಯಾದಿ’ ಚಿತ್ರದ ಶೂಟಿಂಗ್ ವೇಳೆ ನನಗೆ ಪ್ರೊಡಕ್ಷನ್ ಸಿಬ್ಬಂದಿ ಜಿರಳೆ ಹಾರ ತಂದು ಕೊಟ್ಟಿದ್ದರು. ರಾತ್ರಿಯೆಲ್ಲಾ ಭಯದಲ್ಲಿ ನಿದ್ದೆ ಮಾಡಿರಲಿಲ್ಲ. ನನಗೆ ಜಿರಳೆ ಎಂದರೆ ಭಯ ಎಂದು ಅವರಿಗೆ ತಿಳಿದಿತ್ತು. ಅದಕ್ಕಾಗಿ ನನ್ನನ್ನು ಹಾಗೆ ಬಕ್ರಾ ಮಾಡಿದ್ದರು.
ಸಂಗೀತಾ ಬದುಕಿನಲ್ಲಿ ಪ್ರೀತಿ ಗೀತಿ ಇತ್ಯಾದಿ..
ನನ್ನ ವೈಯಕ್ತಿಕ ಜೀವನದಲ್ಲಿ ಪ್ರೀತಿ ಹೊಳೆಯೇ ಹರಿಯುತ್ತಿದೆ. ನನ್ನ ಹುಡುಗನ ಹೆಸರು ದರ್ಶನ್ ಅಂತ. ಬೆಂಗಳೂರಿನವ, ಜರ್ಮನ್ ರಂಗಭೂಮಿಯಲ್ಲಿ ನಿರತನಾಗಿದ್ದಾನೆ. ಪ್ರೀತಿ ಗೀತಿ ಇತ್ಯಾದಿಯಲ್ಲಿ ಅವರು ನನ್ನ ಸಹನಟರಾಗಿದ್ದರು. ಅಲ್ಲಿಂದಲೇ ನಮ್ಮಿಬ್ಬರ ಲವ್ ಶುರುವಾಯಿತು.
ನಿಮ್ಮ ಜೀವನದಲ್ಲಿ ಎಂದೂ ಮರೆಯಲಾರದ ಘಟನೆ.
ನನ್ನ ಅಪ್ಪ ತೀರಿ ಹೋಗಿದ್ದು. ಆಗಿನ್ನು ನಾನು 10ನೇ ತರಗತಿಯಲ್ಲಿದ್ದೆ. ತುಂಬಾ ಶಾಕ್ ಆಗಿತ್ತು. ಈಗ ಇರುವ ಪ್ರಬುದ್ಧತೆ ಆಗಿದ್ದಿದ್ದರೆ ಅಪ್ಪನ ಆರೋಗ್ಯದ ಮೆಲೆ ನಾನು ನಿಗಾ ವಹಿಸುತ್ತಿದ್ದೆ ಎಂದು ಯಾವಾಗಲೂ ಸಂಕಟ ಪಡುತ್ತೇನೆ.
ನಿಮಗೇ ವಿಚಿತ್ರ ಎನಿಸುವ ನಿಮ್ಮದೊಂದು ಅಭ್ಯಾಸ ಯಾವುದು?
ತುಂಬಾ ಹುಷಾರಿಲ್ಲದಿದ್ದಾಗ ಡೈರಿ ಮಿಲ್ಕ್ ತಿಂದೇ ತಿನ್ನುತ್ತೇನೆ. ಚಾಟ್ಸ್, ಐಸ್‌ಕ್ರೀಂ ಒಮ್ಮೆಯಾದರೂ ತಿನ್ನುತ್ತೀನಿ.
ಚೇತನ ಜೆ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.