ವಿಜ್ಞಾನಿ ಹಾಕಿಂಗ್ ಹೇಳಿದ ಅಗೋಚರ ಶಕ್ತಿಯೂ ಅಧ್ಯಾತ್ಮದ ಆತ್ಮವೂ ಒಂದೇ!
Team Udayavani, Mar 14, 2017, 5:57 PM IST
ಭಾರತೀಯ ಧರ್ಮ ಮತ್ತು ಪ್ರಾಚೀನ ಜೀವನ ಪದ್ಧತಿ ಹಾಗೂ ಆಧ್ಯಾತ್ಮಗಳನ್ನು ಬೇರೆಬೇರೆಯಾಗಿ ನೋಡಲು ಬರುವುದಿಲ್ಲ. ನಮ್ಮವರು ಅಧ್ಯಯನ ಮಾಡುತ್ತ ಬಂದ ನ್ಯಾಯ, ಮೀಮಾಂಸ, ವೇದಾಂತ ಮುಂತಾದ ಶಾಸ್ತ್ರಗಳಲ್ಲಿ ಬಹಳ ವೈಜ್ಞಾನಿಕವಾಗಿಯೇ ಬದುಕನ್ನು ವಿಶ್ಲೇಷಿಸಲಾಗಿದೆ.
“”ನಮ್ಮ ಕಣ್ಣಿಗೆ ಕಾಣಿಸದ ಅಗೋಚರ ಶಕ್ತಿಯೊಂದು ಈ ವಿಶ್ವದಲ್ಲಿದೆ. ಅದು ಏನೆಂದು ನನಗೂ ಗೊತ್ತಿಲ್ಲ. ವಿಜ್ಞಾನಕ್ಕೂ ಈ ಕಾಣದ ಶಕ್ತಿಯನ್ನು ಹುಡುಕಲು ಸಾಧ್ಯವಾಗಿಲ್ಲ.”
ಹಾಗಂತ ಜಗತøಸಿದ್ಧ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಹೇಳಿದ್ದನ್ನು ಕೇಳಿದಾಗ ನನಗೊಂದು ಕ್ಷಣ ರೋಮಾಂಚನವಾಗಿತ್ತು. ಅಗೋಚರ ಶಕ್ತಿಗಳ ಬಗ್ಗೆ ನಾವೇನಾದರೂ ಹೇಳಿದರೆ ಖಂಡತುಂಡವಾಗಿ ಇದೆಲ್ಲ ಬೊಗಳೆ ಎಂದು ವಾದಿಸುವ ನಮ್ಮ ಸುತ್ತಮುತ್ತಲೇ ಇರುವ ವಿಜ್ಞಾನಿಗಳಿಗೂ ಭೌತವಿಜ್ಞಾನದಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ ಸ್ಟೀಫನ್ ಹಾಕಿಂಗ್‌ಗೂ ಎಂಥ ವ್ಯಾತ್ಯಾಸ! ಜಗತ್ತಿನ ಪ್ರತಿ ಸಂಗತಿಯನ್ನೂ ಬೇರೆಲ್ಲರಿಗಿಂತ ಹೆಚ್ಚು ದಕ್ಷವಾಗಿ, ತರ್ಕಬದ್ಧವಾಗಿ ನೋಡುವ ಸಾಮರ್ಥ್ಯವುಳ್ಳ ಇವರೇ ಅಗೋಚರ ಶಕ್ತಿಯ ಬಗ್ಗೆ ಇಷ್ಟು ಕುತೂಹಲ ಹೊಂದಿದ್ದಾರೆಂದರೆ, ಇಡೀ ಜಗತ್ತಿಗೆ ಆಧ್ಯಾತ್ಮವನ್ನು ನೀಡಿದ ನಾವು- ಭಾರತೀಯರು ಈ ಬಗ್ಗೆ ಇನ್ನಷ್ಟು ವೈಜ್ಞಾನಿಕವಾಗಿ ನೋಡುವ ಅಗತ್ಯವಿದೆ ಎನ್ನಿಸಿತು.
ಹಾಕಿಂಗ್ ಈಗ ಹೇಳುತ್ತಿರುವುದನ್ನೇ ಇನ್ನೊಬ್ಬ ಮಹಾನ್ ಭೌತವಿಜ್ಞಾನಿ ಆಲ್ಬರ್ಟ್ ಐನ್‌ಸ್ಟಿàನ್ ಬಹಳ ಹಿಂದೆಯೇ ಹೇಳಿದ್ದರು. ಶಕ್ತಿಯ ಬಗ್ಗೆ ಅವರು ನೀಡಿದ ಸಿದ್ಧಾಂತದಲ್ಲಿ ನನ್ನ ಪ್ರಕಾರ ಆಧ್ಯಾತ್ಮವೇ ಹೆಚ್ಚಿದೆ. ಏಕೆ ಗೊತ್ತೇ? ಈ ವಿಶ್ವದಲ್ಲಿ ಯಾವ ಶಕ್ತಿಯನ್ನೂ ಸೃಷ್ಟಿಸಲೂ ಸಾಧ್ಯವಿಲ್ಲ, ನಾಶಪಡಿಸಲೂ ಸಾಧ್ಯವಿಲ್ಲ. ಇಲ್ಲಿ ನಷ್ಟವಾದ ಶಕ್ತಿ ಇನ್ನೆಲ್ಲೋ ಸಂಚಯವಾಗುತ್ತದೆ ಎಂಬರ್ಥದ ಅವರ ಸಿದ್ಧಾಂತದಲ್ಲಿ ಬರುವ ಶಕ್ತಿಯ ವ್ಯಾಖ್ಯೆಗೂ ಆಧ್ಯಾತ್ಮದಲ್ಲಿ ಹೇಳಲಾಗುವ ಆತ್ಮ ಎಂಬ ಸಂಗತಿಯ ವ್ಯಾಖ್ಯೆಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.
ಅಗೋಚರ ಶಕ್ತಿ ಮತ್ತು ಆತ್ಮ
ಭಾರತೀಯ ಆಧ್ಯಾತ್ಮಿಕ ಪ್ರವರ್ತಕರ ಪ್ರಕಾರ ಆತ್ಮ ಎಂದರೆ ಒಂದು ಅವಿನಾಶಿ ತಣ್ತೀ. ಇದು ಹುಟ್ಟುವುದೂ ಇಲ್ಲ, ಇದಕ್ಕೆ ವಿನಾಶವೂ ಇಲ್ಲ. ಅದು ಏಕಕಾಲದಲ್ಲಿ ಎಲ್ಲ ಕಡೆಯೂ ಇರುತ್ತದೆ, ಆದರೆ ಕಣ್ಣಿಗೆ ಕಾಣುವುದಿಲ್ಲ. ಎಲ್ಲರ ಒಳಗೂ ಕೆಲಸ ಮಾಡುತ್ತಿರುವ ನಿಗೂಢ ಶಕ್ತಿಯಿದು. ಇಂತಹ ಆತ್ಮವನ್ನು ಅಧಿಕರಣವಾಗಿಟ್ಟುಕೊಂಡು ಜಗದ್ವ್ಯಾ ಪಾರವನ್ನು ನೋಡುವ ಪದ್ಧತಿಯೇ ಆಧ್ಯಾತ್ಮ.
ಅಂದರೆ, ಹಾಕಿಂಗ್ ಹೇಳುವ ಅಗೋಚರ ಶಕ್ತಿಯೂ ಭಾರತೀಯ ಋಷಿಮುನಿಗಳು ಹೇಳಿದ ಆತ್ಮ ಎಂಬ ಅಗೋಚರ ಶಕ್ತಿಯೂ ಒಂದೇ. ತರ್ಕಕ್ಕೆ ನಿಲುಕದ ಯಾವುದನ್ನು ವಿಜ್ಞಾನ ನಂಬುವುದಿಲ್ಲ ಎಂಬ ತರ್ಕರಹಿತವಾಗಿ ಒಂದು ಸಿದ್ಧಾಂತಕ್ಕೆ ಬದ್ಧರಾಗಿ ಎಲ್ಲ ವಿಜ್ಞಾನಿಗಳೂ ಆಧ್ಯಾತ್ಮವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಾರಷ್ಟೆ.
ಭಾರತೀಯ ಧರ್ಮ ಮತ್ತು ಪ್ರಾಚೀನ ಜೀವನ ಪದ್ಧತಿ ಹಾಗೂ ಆಧ್ಯಾತ್ಮಗಳನ್ನು ಬೇರೆಬೇರೆಯಾಗಿ ನೋಡಲು ಬರುವುದಿಲ್ಲ. ನಮ್ಮವರು ಅಧ್ಯಯನ ಮಾಡುತ್ತ ಬಂದ ನ್ಯಾಯ, ಮೀಮಾಂಸ, ವೇದಾಂತ ಮುಂತಾದ ಶಾಸ್ತ್ರಗಳಲ್ಲಿ ಬಹಳ ವೈಜ್ಞಾನಿಕವಾಗಿಯೇ ಬದುಕನ್ನು ವಿಶ್ಲೇಷಿಸಲಾಗಿದೆ. ಆದರೆ ಅವು ಕೊಡುವ ದೃಷ್ಟಾಂತಗಳು ಹಳೆಯವು ಎನ್ನುವ ಕಾರಣಕ್ಕಾಗಿ ನಮಗೆ ಅವು ಆಧುನಿಕ ವಿಜ್ಞಾನದಷ್ಟು ಆಕರ್ಷಕವಾಗಿ ತೋರುವುದಿಲ್ಲ.
ಆಧ್ಯಾತ್ಮವೂ ವಿಜ್ಞಾನ, ಏಕೆಂದರೆ…
ಉದಾಹರಣೆಗೆ, ತರ್ಕಶಾಸ್ತ್ರ ಎಂದು ಕರೆಸಿಕೊಳ್ಳುವ ನ್ಯಾಯಶಾಸ್ತ್ರದಲ್ಲಿ ಪ್ರಪಂಚವನ್ನು ವಿಭಜಿಸಿ ನೋಡುವ ರೀತಿಗೂ ವಿಜ್ಞಾನಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಮಾನದಂಡಗಳು ಮಾತ್ರ ಬೇರೆ ಇರಬಹುದು ಅಷ್ಟೇ. ನಮ್ಮ ಪ್ರಾಚೀನರಿಗೆ ಅಣು ವಿಭಜನೆಯಿಂದ ಹಿಡಿದು, ಮಾನಸಿಕ ಚಿಕಿತ್ಸೆಯವರೆಗೆ ಎಲ್ಲವೂ ಗೊತ್ತಿತ್ತು. ಹೀಗೆ ಹೇಳಿದರೆ ಕೆಲವು ವಿಜ್ಞಾನಿಗಳೂ ಆಧುನಿಕ ವಿಚಾರವಾದಿ, ಬುದ್ಧಿಜೀವಿಗಳೂ ನಗುತ್ತಾರೆ, ಅವರ ಪ್ರಕಾರ ಇದೊಂದು ಕ್ಲೀಷೆ! ಇದು ಅವರು ಯೋಚಿಸುವ ಪದ್ಧತಿ ವೈಜ್ಞಾನಿಕವಾಗಿ ಇದ್ದಾಗಲಷ್ಟೇ ಸಾಧ್ಯ. ತರ್ಕಶಾಸ್ತ್ರವು ಈ ಜಗತ್ತಿನಲ್ಲಿ ಇರುವುದು ಏಳೇ ಏಳು ಮೂಲ ಪದಾರ್ಥಗಳು ಎನ್ನುತ್ತದೆ. ಅವು- ದ್ರವ್ಯ, ಗುಣ, ಕರ್ಮ, ಸಾಮಾನ್ಯ, ವಿಶೇಷ, ಸಮವಾಯ, ಅಭಾವ. ನೀವು ನಿಮಗೆ ಗೊತ್ತಿರುವ ಯಾವುದೇ ವಸ್ತು ಅಥವಾ ಸಂಗತಿಯನ್ನು ತೆಗೆದುಕೊಳ್ಳಿ. ಅದು ಈ ಏಳು ಪದಾರ್ಥಗಳಲ್ಲಿ ಯಾವುದಾದರೊಂದು ವರ್ಗಕ್ಕೆ ಸೇರುತ್ತದೆ. ಇದನ್ನೇ ವಿಭಜಿಸುತ್ತ ಹೋದರೆ, ಮೊದಲು ಸಿಗುವುದು ದ್ರವ್ಯ. ಜಗತ್ತಿನಲ್ಲಿ ಒಂಬತ್ತು ವಿಧದ ದ್ರವ್ಯಗಳಿವೆ. ಪೃಥ್ವಿ, ನೀರು, ಬೆಳಕು, ವಾಯು, ಆಕಾಶ, ಕಾಲ, ದಿಕ್ಕು, ಆತ್ಮ ಮತ್ತು ಮನಸ್ಸು. ಹೀಗೆಯೇ ಗುಣಗಳು ಇಪ್ಪತ್ತನಾಲ್ಕು ಇವೆ. ಈ ರೀತಿ ತಮ್ಮ ಪೂರ್ವಜ ತಾರ್ಕಿಕರು ಪ್ರಪಂಚವನ್ನು ವಿಭಜಿಸುತ್ತ ಅತ್ಯಂತ ಮೂಲಭೂತ ವಸ್ತುವಿನವರೆಗೆ ಹೋಗುತ್ತಾರೆ.
ಆಧ್ಯಾತ್ಮವು ತರ್ಕಶಾಸ್ತ್ರವೂ ಸೇರಿದಂತೆ, ಎಲ್ಲ ಭಾರತೀಯ ಶಾಸ್ತ್ರಗಳನ್ನು ಒಳಗೊಂಡು ರೂಪುಗೊಂಡ ಅಧ್ಯಯನ ಪದ್ಧತಿ. ಹಾಗಿರುವಾಗ ಇದು ವೈಜ್ಞಾನಿಕವಾಗಿಲ್ಲ ಎಂದು ಹೇಳಿದರೆ ನಂಬುವುದು ಹೇಗೆ?
ಆದ್ದರಿಂದ ನಮ್ಮವರು ಸಾವಿರಾರು ವರ್ಷಗಳ ಹಿಂದೆ ಹೇಳಿರುವ ಅಧ್ಯಾತ್ಮದ ಬಗ್ಗೆ ಪಾಶ್ಚಾತ್ಯರು ಈಗ ತಲೆಕೆಡಿಸಿಕೊಳ್ಳಲು ಆರಂಭಿಸಿದ್ದಾರೆ. ಆದರೆ ನಾವು ಮಾತ್ರ ಇದೆಲ್ಲ ಪೊಳ್ಳು ಎಂದು ಮೇಲಿಂದ ಮೇಲಕ್ಕೆ ತಿರಸ್ಕರಿಸಿಬಿಡುತ್ತೇವೆ. ನಮ್ಮ ವೈಜ್ಞಾನಿಕ ಬುದ್ಧಿಗೆ ಇವೆಲ್ಲ ಅರ್ಥವಾಗುತ್ತಿಲ್ಲ ಎಂಬುದೇ ಇದಕ್ಕೆ ಕಾರಣ ಮತ್ತು ಇದೊಂದೇ ಎಡವಟ್ಟು ಕಾರಣ!
ವಿಜ್ಞಾನ ಮತ್ತು ಆಧ್ಯಾತ್ಮದ ಹುಡುಕಾಟ ಒಂದೇ
ಬೇರೆ ಧರ್ಮಗಳ ವಿಚಾರ ಒಂದೆಡೆಯಿರಲಿ; ಹಿಂದೂ ಧರ್ಮ ಮತ್ತು ಅದರಿಂದ ಹುಟ್ಟಿದ ಆಧ್ಯಾತ್ಮದ ಮಾರ್ಗವಂತೂ ಸಂಪೂರ್ಣ ವೈಜ್ಞಾನಿಕವಾಗಿಯೇ ಇದೆ. ನಮ್ಮ ಭ್ರಮೆಗಳಿಂದ ಹಾಗೂ ಮೂಢನಂಬಿಕೆಗಳಿಂದ ನಾವದನ್ನು ಕೆಡಿಸಿದ್ದೇವೆ. ಕುರಿ ಬಲಿ ಕೊಟ್ಟರೆ ದೇವರಿಗೆ ಮೆಚ್ಚುಗೆಯಾಗುತ್ತದೆ ಎಂದು ಯಾವ ಶಾಸ್ತ್ರವೂ ಹೇಳುವುದಿಲ್ಲ. ಅದು ಮೂಢನಂಬಿಕೆಯಿಂದ ರೂಪುಗೊಂಡಿರುವ ಸಂಪ್ರದಾಯ. ಮೂಲತಃ ವಿಜ್ಞಾನವೂ ಆಧ್ಯಾತ್ಮವೂ ಅತ್ಯುನ್ನತ ಮಟ್ಟದ ಜ್ಞಾನದ ಆಕರ. ವಿಜ್ಞಾನ ಶಬ್ದದ ಅರ್ಥ ವಿಶೇಷ ಜ್ಞಾನ. ಅಂದರೆ ಒಂದು ವಸ್ತು ಅಥವಾ ಸಂಗತಿಯ ಬಗ್ಗೆ ಆಮೂಲಾಗ್ರವಾಗಿ ಚಿಂತಿಸಿ ಮತ್ತು ಕಾರ್ಯಕಾರಣ ಸಂಬಂಧವನ್ನು ಒರೆಗೆ ಹಚ್ಚಿ ತಿಳಿದುಕೊಳ್ಳುವುದು. ಆಧ್ಯಾತ್ಮ ಚಿಂತಕರು ಕೂಡ ಮಾಡುವ ಕೆಲಸವೂ ಇದೇ. ಮನುಷ್ಯನ ಮತ್ತು ಜಗತ್ತಿನ ಮೂಲವನ್ನು ಅವರು ವೈಜ್ಞಾನಿಕವಾಗಿ ಹುಡುಕುವ ಕೆಲಸ ಮಾಡುತ್ತಿದ್ದಾರೆ.
ಶೂನ್ಯತತ್ವಕ್ಕೆ ಮತ್ತೆ ಬಂದ ತೂಕ
ಸ್ಟೀಫನ್ ಹಾಕಿಂಗ್ ಹೇಳುತ್ತಾರೆ, ಜಗತ್ತು ಶೂನ್ಯದಿಂದ ತನ್ನನ್ನು ತಾನೇ ಸೃಷ್ಟಿಸಿಕೊಳ್ಳಬಹುದು. ಇದಕ್ಕೆ ದೇವರ ಆವಶ್ಯಕತೆಯಿಲ್ಲ. ಇದಂತೂ ನಮ್ಮ ಆಧ್ಯಾತ್ಮದಿಂದ ಯಥಾವತ್ತು ಎತ್ತಿದ ಆಲೋಚನೆಯಂತಿದೆ ಎಂದೇ ನನ್ನ ಭಾವನೆ! ನಾವು ಬಹಳ ಹಿಂದಿನಿಂದಲೂ ಶೂನ್ಯತತ್ವವನ್ನು ಪ್ರತಿಪಾದಿಸುತ್ತ ಬಂದಿದ್ದೇವೆ. ಶೂನ್ಯ ಅಂದರೆ ಏನೂ ಇಲ್ಲದ ಸ್ಥಿತಿಯೂ ಹೌದು, ಎಲ್ಲವನ್ನೂ ಒಳಗೊಂಡ ಪರಿಪೂರ್ಣ ಸ್ಥಿತಿಯೂ ಹೌದು. ಆತ್ಮ ಕೂಡ ಒಂದು ಶೂನ್ಯ ಎಂದೇ ಹೇಳಲಾಗುತ್ತದೆ. ಅದರಲ್ಲಿ ಎಲ್ಲವೂ ಇದೆ. ದೇವರ ಕಲ್ಪನೆ ನಮ್ಮಲ್ಲಿದೆಯಾದರೂ ಆಧ್ಯಾತ್ಮವಾದಿಗಳೆಲ್ಲ ದೇವರನ್ನು ನಂಬುತ್ತಾರೆ ಎಂದುಕೊಳ್ಳಬೇಡಿ. ಆಧ್ಯಾತ್ಮವನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದವರಿಗಾಗಿ ದೇವರ ಸೃಷ್ಟಿಯಾಯಿತು.
ಕಾಣದ ಶಕ್ತಿಯನ್ನು ಮನಸ್ಸಿನಲ್ಲಿ ಕೇಂದ್ರೀಕರಿಸಿಕೊಂಡು ಪೂಜಿಸುವುದು ಹೇಗೆ? ಅದಕ್ಕಾಗಿ ದೇವರು ಎಂಬ ಪರಿಕಲ್ಪನೆ ಹುಟ್ಟಿತು. ಅದೇ ಮುಂದುವರಿದು ಮೂರ್ತಿ, ಲಿಂಗ ಇತ್ಯಾದಿಗಳೆಲ್ಲ ಬಂದವು.
ಅಗೋಚರ ಶಕ್ತಿಯ ಬಗ್ಗೆ ಹಾಕಿಂಗ್ ಮಾತನಾಡಲು ಆರಂಭಿಸಿದ ತತ್‌ಕ್ಷಣ ಪಾಶ್ಚಾತ್ಯ ವಿಜ್ಞಾನಿಗಳು ಅಸ್ತಿತ್ವವಾದವನ್ನು ಹೊಸತಾಗಿ ಕೆಣಕಲು ಶುರುಮಾಡಿದ್ದಾರೆ. ನಾವೇಕೆ ಇಲ್ಲಿದ್ದೇವೆ? -ಇದು ಅವರ ಮೂಲ ಪ್ರಶ್ನೆ. ಸಾವಿರಾರು ವರ್ಷದಿಂದ ಭಾರತೀಯ ಆಧ್ಯಾತ್ಮವಾದಿಗಳು ಕೇಳುತ್ತ ಬಂದಿರುವ ಪ್ರಶ್ನೆಯೂ ಇದೇ. ಬದುಕಿನ ಅರ್ಥವೇನು? ಇಲ್ಲಿ ನಮ್ಮ ಪಾತ್ರವೇನು?
ಪಶ್ಚಿಮದಿಂದ ಬಂದಿದ್ದು ಮಾತ್ರ ತೀರ್ಥ, ಪಾಶ್ಚಾತ್ಯರಿಂದ ಬಂದಿದ್ದೇ ನಿಜವಾದ ಜ್ಞಾನ ಎಂಬ ಭ್ರಮೆ ಇವತ್ತಿಗೂ ನಮ್ಮವರಲ್ಲಿರುವುದರಿಂದ ಈಗ ಮತ್ತೂಮ್ಮೆ ಭಾರತೀಯ ಆಧ್ಯಾತ್ಮವನ್ನೂ ಅದರ ಆಧುನಿಕ ಸ್ಪರ್ಶವನ್ನೂ ಬಗೆದು ನೋಡುವ ಕಾಲ ಬಂದಿದೆ.
– ರೂಪಾ ಅಯ್ಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.