ಸುನಾದದಲ್ಲಿ ಒಎಸ್‌ಟಿ ಗಾನವೈಭವ
Team Udayavani, Mar 17, 2017, 3:50 AM IST
ಸಹಸ್ರ ಜನರಲ್ಲಿ ಒಬ್ಬ ಕಲಾಕಾರನಾಗುತ್ತಾನೆ. ಸಹಸ್ರ ಕಲಾವಿದರಲ್ಲಿ ಒಬ್ಬ ಮೌಲ್ಯಪೂರ್ಣ ಕಲಾಕಾರನಾಗುತ್ತಾನೆ. ಇಂತಹ ಮೌಲ್ಯವಂತ ಕಲಾವಿದನ ಸೃಷ್ಟಿಯಲ್ಲಿ ಹಾಗೂ ಅವನ ಸಂಗೀತವನ್ನು ಬೆಳೆಸಿ ಪೋಷಿಸುವ ನಿಟ್ಟಿನಲ್ಲಿ ಸುನಾದ ಸಂಗೀತ ಕಲಾ ಶಾಲೆಯು ಅವಿರತ ಶ್ರಮಿಸುತ್ತಿದೆ. ಸುನಾದದ ಸಂಚಾಲಕರಾದ ವಿ| ಕಾಂಚನ ಎ. ಈಶ್ವರ ಭಟ್, ಬೆಳೆಯುತ್ತಿರುವ ಯುವ ಪ್ರತಿಭೆಗಳಿಗೆ ವೇದಿಕೆಯ ಅಗತ್ಯ ಮನಗಂಡು ತಮ್ಮ ನೇತೃತ್ವದಲ್ಲಿ ಅದನ್ನು ಸೃಷ್ಟಿಸಿದುದು ಇಂದು ಸುನಾದ ಸಂಗೀತೋತ್ಸವಕ್ಕೆ ಭದ್ರ ಬುನಾದಿಯಾಗಿದೆ. ಸುನಾದದ ಸುಳ್ಯ ಶಾಖೆಯ ಸಂಗೀತೋತ್ಸವವು ಈಚೆಗೆ ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ವಠಾರದಲ್ಲಿ ನಡೆಯಿತು.
ಆ ದಿನದ ಪ್ರಧಾನ ಕಛೇರಿಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಮೇರು ಕಲಾವಿದರಾದ ವಿ| ಒ. ಎಸ್. ತ್ಯಾಗರಾಜನ್ ನಡೆಸಿಕೊಟ್ಟರು. ವಯಲಿನ್‌ನಲ್ಲಿ ವಿ| ವಿಠಲ ರಾಮಮೂರ್ತಿ, ಮೃದಂಗದಲ್ಲಿ ವಿ| ಕಾಂಚನ ಎ. ಈಶ್ವರ ಭಟ್, ಘಟಂನಲ್ಲಿ ವಿ| ಶ್ರೀಶೈಲ ಬೆಂಗಳೂರು, ಮೋರ್ಸಿಂಗ್‌ನಲ್ಲಿ ವಿ| ಪಯ್ಯನ್ನೂರ್ ಗೋವಿಂದ ಪ್ರಸಾದ್ ಕೂಡಿದ್ದ ಘನ ಕಛೇರಿಯಾಗಿತ್ತು ಇದು.
ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳಲ್ಲಿ ಒಂದಾದ ಆರಭಿ ರಾಗದ ಸಾಧಿಂಚನೆ ಕೃತಿಯಿಂದ ಕಛೇರಿಯನ್ನು ಆರಂಭಿಸಿದ ಕಲಾವಿದರು, ಪಂತುವರಾಳಿ ರಾಗದ ಚುಟುಕಾದ ಆಲಾಪನೆಯೊಂದಿಗೆ ರೂಪಕ ತಾಳದ ನಿನ್ನೇ ನೆರನಮ್ಮಿ ನಾನು ರಾಮ ಎಂಬ ಕೃತಿಯನ್ನು ನೆರವಲ್ ಹಾಗೂ ಚುರುಕಾದ ಸ್ವರ ಪ್ರಸ್ತಾರದೊಂದಿಗೆ ಪ್ರಸ್ತುತಪಡಿಸಿದರು. ಅನಂತರ ಹಂಸನಾದದ ಪ್ರಸಿದ್ಧ ಕೃತಿ ಬಂಟುರೀತಿಯು ದ್ರುತ ಕಾಲ ಪ್ರಮಾಣದಲ್ಲಿ ನೆರವಲನ್ನೊಳಗೊಂಡು ಮನೋಜ್ಞವಾಗಿ ಮೂಡಿಬಂತು. ಕಲ್ಯಾಣಿಯ ಸುಂದರವಾದ ಆಲಾಪನೆಯೊಂದಿಗೆ ಭಕ್ತಿ ಪ್ರಧಾನವಾಗಿ ನಂಬಿ ಕೆಟ್ಟವರಿಲ್ಲವೋ ಕೃತಿಯನ್ನು ನಿರೂಪಿಸಿದ ಪರಿ ಘನತೆಯಿಂದ ಕೂಡಿತ್ತು. ತದನಂತರ ಸಾಲಗ ಭೈರವಿಯ ಪದವಿನೀ ಸದ್ಭಕ್ತಿ, ಬಿಲಹರಿ ರಾಗದ ಖಂಡಛಾಪುವಿನ ಪರಿದಾನ ಮಿಚ್ಚಿತೇ ಸುಂದರವಾದ ಸ್ವರ ಪ್ರಸ್ತಾರದ ಜೋಡಣೆಯಿಂದ ಕೇಳುಗರನ್ನೂ ಚುರುಕಾಗಿಸಿ ದವು. ಮೈಸೂರು ವಾಸುದೇವಾಚಾರ್ಯರ ಹಿಂದೋಳ ರಾಗದ ಪ್ರಸಿದ್ಧ ರಚನೆಯಾದ ಮಾಮವತು ಶ್ರೀ ಕೃತಿಯು ಸರ್ವಲಘು ಸ್ವರ ಪ್ರಸ್ತಾರದ ಪೋಷಣೆಯೊಂದಿಗೆ ಮನಸ್ಸಿಗೆ ಹಿತ ನೀಡಿತು.
ಕಲಾವಿದರು ಕಛೇರಿಯ ಪ್ರಧಾನ ಕೃತಿಯಾಗಿ ಕಾಂಭೋಜಿಯ ವಿಳಂಬ ಕಾಲದ ಓ ರಂಗಶಾಯಿಯನ್ನು ವಿದ್ವತ್‌ಪೂರ್ಣವಾಗಿ ಪ್ರಸ್ತುತ ಪಡಿಸಿದರು. ರಾಗದ ಆಲಾಪನೆಯು ಬಹಳ ಗಾಂಭೀರ್ಯದಿಂದ ಕೂಡಿದ್ದು, ಕಾಂಭೋಜಿಯ ಒಳ-ಹೊರಹುಗಳನ್ನು ಸ್ಪಷ್ಟವಾಗಿ ಅಭಿವ್ಯಕ್ತಿಗೊಳಿಸಿದುದು ಕಲಾವಿದರ ಅನುಭವ ಹಾಗೂ ಕಲಾಪ್ರೌಢಿಮೆಗೆ ಹಿಡಿದ ಕೈಗನ್ನಡಿ. ಭೂಲೋಕ ವೈಕುಂಠ ಎಂಬಲ್ಲಿನ ನೆರವಲ್ ಹಾಗೂ ಸ್ವರಗಳು ಲೀಲಾಜಾಲವಾಗಿ ಹೊರಹೊಮ್ಮಿದವು. ವಯಲಿನ್‌ನಲ್ಲಿ ಅಷ್ಟೇ ಸಮರ್ಥವಾಗಿ ನಿರ್ವಹಿಸಿದ ವಿ| ವಿಠಲ ರಾಮಮೂರ್ತಿಯವರು ಬಹಳ ಉತ್ತಮವಾದ ಸಾಥಿಯಾಗಿ ಹೊರ ಹೊಮ್ಮಿದರು.
ಸುಂದರವಾದ ಲಯ ವಿನ್ಯಾಸದೊಂದಿಗೆ ತಮ್ಮ ನಾದಮಯ ನುಡಿಸಾಣಿಕೆಯಿಂದ ಕಛೇರಿಯನ್ನು ಉತ್ಕೃಷ್ಟತೆಗೆ ಕೊಂಡೊಯ್ದ ಕೀರ್ತಿಯು ಮೂರೂ ಲಯ ಕಲಾವಿದರುಗಳಿಗೆ ಸಲ್ಲುತ್ತದೆ. ಕಛೇರಿಗೆ ಪೂರಕವಾಗಿ ಮೃದಂಗದಲ್ಲಿ ವಿ| ಕಾಂಚನ ಎ ಈಶ್ವರ ಭಟ್, ಘಟಂನಲ್ಲಿ ವಿ| ಶ್ರೀಶೈಲ ಹಾಗೂ ಮೋರ್ಸಿಂಗ್‌ನಲ್ಲಿ ವಿ| ಪಯ್ಯನ್ನೂರ್ ಗೋವಿಂದ ಪ್ರಸಾದ್ ಅವರ ತನಿ ಆವರ್ತನವು ಕೇಳುಗರ ಮನಸ್ಸಿನಲ್ಲಿ ಹೊಸ ಸಂಚಲನವನ್ನುಂಟುಮಾಡಿತು. ಅನಂತರ ಹಂಸಾನಂದಿಯ ತಿರುಪತಿ ವೆಂಕಟರಮಣ, ಎಂ. ಡಿ. ರಾಮನಾಥನ್ ರಚನೆ, ಭಾಗೇಶ್ರೀ ರಾಗದ ಸಾಗರ ಶಯನ ಭಾವಪೂರ್ಣವಾಗಿ ನಿರೂಪಿತವಾಯಿತು. ಸದಾ ಎನ್ನ ಹೃದಯದಲ್ಲಿ ದೇವರ ನಾಮವು ಕೇಳುಗರಲ್ಲಿ ಶರಣಾಗತ ಭಾವವನ್ನು ಮೂಡಿಸಿತು.
ಇದಕ್ಕೆ ಮುನ್ನ ವಿ| ಕಾಂಚನ ಎ. ಈಶ್ವರ ಭಟ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಗುರು ವಂದನೆಯ ಬಳಿಕ ಸುನಾದದ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು. ಶಂಕರನಾರಾಯಣ ದೇವ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕ ಶಾಸ್ತ್ರೀಯ ಸಂಗೀತದ ಕಂಪನ್ನು ಇಂತಹ ಕಾರ್ಯಕ್ರಮಗಳ ಮೂಲಕ ಸುತ್ತಮುತ್ತಲಿನ ಊರುಗಳಿಗೆ ಪಸರಿಸುವುದರ ಜತೆಗೆ ಉತ್ತಮ ಕೇಳುಗರನ್ನು ಒಗ್ಗೂಡಿಸಿ, ಹಲವಾರು ವರ್ಷಗಳಿಂದ ಕಲಾಸೇವೆಯನ್ನು ನಿರಂತರವಾಗಿ ಮಾಡುತ್ತಾ ಬರುತ್ತಿರುವ ಸುನಾದ ಮತ್ತು ಅದರ ರೂವಾರಿ ವಿ| ಕಾಂಚನ ಎ ಈಶ್ವರ ಭಟ್ ಅವರು ಅಭಿನಂದನಾರ್ಹರು.
ಶಿಲ್ಪಾ ಸಿ. ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.