ಪ್ರಬಂಧ: ಬಿಟ್ಟರೂ ಬಿಡದ ಅಂಟು
Team Udayavani, Mar 19, 2017, 3:50 AM IST
ಗುಜ್ಜೆ (ಹಲಸಿನಕಾಯಿ)ಪಲ್ಯ ಆಯ್ತಾ?’, “ಹಪ್ಪಳಕ್ಕಾಗುವಷ್ಟು ಬೆಳೀಲಿಲ್ಲ ಅಲ್ವಾ?’, “ಈ ಸಲ ಚಳಿ ಜೋರಿದ್ರೂ ಗುಜ್ಜೆ ಬಿಟ್ಟದ್ದು ತಡ ಅಲ್ವಾ?’ ಎಂಬುದು ನಮ್ಮಂಥ ಹಳ್ಳಿಯವರ ಡೈಲಾಗುಗಳಾದರೆ ಪೇಟೆಯಲ್ಲಿ ವಾಸಿಸುವ ನನ್ನ ಗೆಳತಿ, “ಒಂದು ಗುಜ್ಜೆಗೆ ಎಷ್ಟು ಕ್ರಯ ಗೊತ್ತುಂಟಾ? ದೇವಾ ! ಅಷ್ಟು ಕೊಟ್ಟು ತಿಂದರೆ ಜೀರ್ಣ ಆಗಲಿಕ್ಕುಂಟಾ? ಇತ್ಲಾಗಿ ಅಣ್ಣ ಬರ್ಲಿಕ್ಕಿದ್ರೆ ಒಂದು ಗುಜ್ಜೆ ಕಳು ಮಾರಾಯ್ತಿ. ಅಲ್ಲಿ ಸುಮ್ಮನೆ ಕೊಳೆತು ಹೋಗುವುದಲ್ವಾ ಹಣ್ಣಾದಾಗ. ಅಷ್ಟೆ ಹಣ್ಣು ತಿನ್ನಲಿಕ್ಕುಂಟಾ?’ ಎಂಬುದು ಅವಳ ಆವಾಜ್. ಕತ್ತರಿಸಿದರೆ ಕೈ ಮೈಗೆ ಅಂಟಿಕೊಳ್ಳುವ ಈ ಅಂಟಿನ ನಂಟನ್ನು ಪ್ರೀತಿಸುವ ಕಾಮಾಕ್ಷಿಯರೇ ನಾವೆಲ್ಲ !
ನವೆಂಬರ್ ಬಂದಾಗಲೇ ಕುತ್ತಿಗೆ ಎತ್ತರಿಸಿ ಹಲಸಿನ ಮರವನ್ನು ನೋಡುವುದು ನಮ್ಮ ಮುಖ್ಯ ಉದ್ಯೋಗವಾಗಿಬಿಡುತ್ತದೆ. ಹಾಗೆಂದು, ಮರದ ತುದಿಯಲ್ಲೋನೂ ಹಣ್ಣು ಇರಬೇಕೆಂದಿಲ್ಲ. ನೆಲದಿಂದ ಮೇಲೆಕ್ಕೆದ್ದ ಕಾಂಡದ ಯಾವ ಭಾಗದಲ್ಲೂ ಹಣ್ಣನ್ನು ಹೊತ್ತಿರುವುದು ಈ ಮರದ ಕ್ರಮ. ತೋಟದವರೆಗೆ ಹೋಗಲು ಕಷ್ಟವಾಗುವ ಹಿರಿಯರು ತೋಟದಿಂದ ಹಿಂತಿರುಗುವ ಪ್ರತಿಯೊಬ್ಬರ ಬಳಿ ಕೇಳುವ ಪ್ರಶ್ನೆ ಒಂದೇ. ಕಳ್ಳಿಗೆ ಬಿಟ್ಟಿದೆಯಾ?
ಹಲಸೆಂದರೆ ಇಷ್ಟ ಪಡದವರು ಯಾರು? ಆ ಮುಳ್ಳಿನ ಹಿಂದೆ ಇರುವ ಫಲವನ್ನು ಪಡೆಯಲು ಎಣ್ಣೆ ಮೆತ್ತಿದ ಕೈಗಳೊಂದಿಗೆ ಮೆಟ್ಟುಗತ್ತಿಯಲ್ಲಿ ಕುಳಿತು ಮಾಡಿದ ಪರಿಶ್ರಮವನ್ನು ಅರೆಕ್ಷಣದಲ್ಲಿ ಮರೆಸುವಂತಹ ಸುವಾಸನೆ, ರುಚಿ ಅದರದ್ದು.
ಈ ಹಲಸಿನಲ್ಲೂ ಎರಡು ಬಗೆ. ಬಕ್ಕೆ ಮತ್ತು ತುಳುವ. ಬಕ್ಕೆ ಹಲಸಿನಹಣ್ಣು ಗಟ್ಟಿಯಾದ ಸಿಪ್ಪೆಯನ್ನೂ, ತೊಳೆಗಳನ್ನು ಹೊಂದಿದ್ದು ಸರ್ವ ಮಾನ್ಯವಾಗಿದ್ದರೆ ಈ ತುಳುವ ಹಣ್ಣು ದೊಡ್ಡವರ ಕಣ್ಣಿಗೆ ನಗಣ್ಯವಾದ ಮೆತ್ತ ಮೆತ್ತಗೆ ಹಣ್ಣು, ನರಸಿಂಹನು ಹಿರಣ್ಯಕಶ್ಯಪುವಿನ ಹೊಟ್ಟೆಯನ್ನು ನಖಗಳಿಂದಲೇ ಬಗೆದಂತೆ ಇದನ್ನು ಬರಿಗೈಯಿಂದಲೇ ಬಿಡಿಸಬಹುದು. ಈ ಹಲಸಿನಹಣ್ಣಿನ ಪರಿಚಯ ನನಗಾಗಿದ್ದು ಒಂದು ವಿಶೇಷ ಸಂದರ್ಭದಲ್ಲಿ.
ಆಗಿನ್ನೂ ಅಡುಗೆ ಅನಿಲ ಎಂಬುದು ಕೆಲವೇ ಮಂದಿಯ ಮನೆಯಲ್ಲಿ ಕಾಣುತ್ತಿದ್ದ ದಿನಗಳು. ಗ್ಯಾಸ್ ಕನೆಕ್ಷನ್ ಹೊಂದಿದ್ದವರೂ ಕೂಡಾ ಸೌದೆಯ ಒಲೆಯನ್ನೇ ಅಡುಗೆಗಾಗಿ ಬಳಕೆ ಮಾಡುತ್ತಾ, ಅವಸರದ ಅತಿಥಿಗಳಿಗೆ ಕಾಫಿ ಮಾಡಲು ಮಾತ್ರ ಅದನ್ನು ಬಳಸುತ್ತಿದ್ದರು. ಹಾಗಾಗಿ ಸೌದೆ ಎಂಬುದು ಅತ್ಯಂತ ಆವಶ್ಯಕವಾಗಿತ್ತು. ನಾವು ವಾಸಿಸುತ್ತಿದ್ದ ವಠಾರದಲ್ಲಿ ಮಲಯಾಳಿ ಕುಟುಂಬವೊಂದಿತ್ತು. ಪ್ರತಿದಿನ ಹತ್ತಿರದ ಭೂತನಕಾಡು ಎಂಬ ಕಾಡಿಗೆ ಹೋಗಿ ಅಲ್ಲಿಂದ ಸೌದೆ ಕಡಿದು ಮನೆಗೆ ತಲೆಹೊರೆಯಲ್ಲೇ ತಂದಿಳಿಸಿ ಅಟ್ಟಿ ಏರಿಸುತ್ತಿದ್ದರು. ಶನಿವಾರ ಮತ್ತು ಆದಿತ್ಯವಾರ ನಮಗೂ ಅವರ ಜೊತೆ ಹೋಗಲು ಅನುಮತಿಯಿತ್ತು. ವಠಾರದ ನಡೆಯಲು ಬರುವ ಎಲ್ಲಾ ಮಕ್ಕಳು ಕಿಂದರಿಜೋಗಿಯ ಹಿಂದಿನ ಇಲಿಗಳಂತೆ ಸಾಲು ಸಾಲಾಗಿ ಹೆಜ್ಜೆ ಹಾಕುತ್ತಿದ್ದೆವು. ಇದಕ್ಕೆ ಮುಖ್ಯ ಕಾರಣ ಮನೆಗೆ ತರಲಿರುವ ನಾಲ್ಕು ತುಂಡು ಸೌದೆಯಂತೂ ಅಲ್ಲವೇ ಅಲ್ಲ. ಕಾಡಿನಲ್ಲಿ ಸಿಕ್ಕುವ ಬಗೆ ಬಗೆಯ ಹಣ್ಣುಗಳೇ ನಮ್ಮ ಗುರಿ. ಅದೂ ಕೊಡಗಿನ ದಟ್ಟ ಕಾಡಿನ ಹಣ್ಣುಗಳ ಖದರ್ರೆ ಬೇರೆ. ಇಡಿಂಜಿ, ರೆಂಜೆ, ಅಮೆ, ಕರ್ಮಂಜೆ, ಕೂಮೆ, ನೇರಳೆ, ಪಾಲೆ, ಬೀರಂಗಾಲ, ಮಡಿಕೆ ಹಣ್ಣು… ಹೀಗೆ ಹೆಸರಿನ ಪಟ್ಟಿ ಇನ್ನೂ ಉದ್ದಕ್ಕೆ ಬೆಳೆಯುತ್ತಿತ್ತು.
ಆ ದಿನ ನಾವು ಹೋದ ಜಾಗ ತೀರಾ ಹೊಸದು. ಕಟ್ಟಿಗೆ ಕಡಿಯುವ ಕಾಯಕದಲ್ಲಿ ದೊಡ್ಡವರು ಮಗ್ನರಾಗಿದ್ದರೆ ನಮ್ಮ ಕಣ್ಣುಗಳು ಹಣ್ಣುಗಳ ಮರಗಳನ್ನು ಹುಡುಕುತ್ತಾ ಅವರಿಂದ ದೂರವಾಗುತ್ತಿತ್ತು. ಇದ್ದಕ್ಕಿದ್ದಂತೆ ನಿಂತ ಮಕ್ಕಳ ಗುಂಪಿನ ನಾಯಕ ನಂದ ಅಲ್ಲಿಂದಲೇ ಮೂಗರಳಿಸಿ ಪರಿಮಳವನ್ನು ಆಘ್ರಾಣಿಸಿದ. ನಮಗೂ ಅದು ಪರಿಚಿತ ಪರಿಮಳವೇ ಆಗಿದ್ದರೂ ಕಾಡಿನಲ್ಲಿ ಅದರ ಮರವಿರುವುದುಂಟೇ ಎಂಬುದು ನಮ್ಮ ಅಚ್ಚರಿ. ನಾಲ್ಕು ಹೆಜ್ಜೆ ಮುಂದಿಟ್ಟು ಒಂದಿಷ್ಟು ಬಳ್ಳಿಗಳನ್ನು ಕೋಲಿನಲ್ಲಿ ಸರಿಸಿ ನುಗ್ಗಲು ದಾರಿ ಮಾಡಿಕೊಂಡು ನಡೆದದ್ದೇ ಕಂಡಿತ್ತು ಮರ. ಕಾಂಡದಲೆಲ್ಲ ನೇತುಕೊಂಡಿದ್ದ ತೆಂಗಿನಕಾಯಿಯಷ್ಟೇ ಗಾತ್ರದ ಹಲಸಿನಕಾಯಿಗಳು. ಹತ್ತಿರ ಹೋಗಿ ನೋಡಿದರೆ ಒಂದಷ್ಟು ಕಾಡುಪ್ರಾಣಿಗಳ ಆಹಾರವಾಗಿ ಅರ್ಧಂಬರ್ಧವಾಗಿತ್ತು. ಅವುಗಳಿಂದಲೇ ಪರಿಮಳ ಸೂಸುತ್ತಿದ್ದುದು!
ಕೈಯಿಂದ ಮುಟ್ಟಿ ತಟ್ಟಿ ಒಂದಷ್ಟು ಕಾಯಿಗಳನ್ನು ಕಿತ್ತು ಕೆಳ ಹಾಕಿದ. ನಾವೆಲ್ಲರೂ ಅದರ ತೊಟ್ಟಿಗೆ ಒಂದೆರಡು ಕಾಡಿನೆಲೆಗಳನ್ನು ಅಂಟಿಸಿ ನಮ್ಮ ಬಟ್ಟೆಗೆ ಮಯಣವಾಗದಂತೆ ಜಾಗ್ರತೆ ಮಾಡುತ್ತ ಹೊರ ಬಂದು ಸಮತಟ್ಟಿನ ಜಾಗದಲ್ಲಿಟ್ಟೆವು. ಹಿಂದಿನಿಂದ ಬರುತ್ತಿದ್ದ ನಂದನ ಮುಖದಲ್ಲಿ ನಗೆ ಅಗಲ ಗೆರೆಯಾಗಿತ್ತು. ಅವನು ಇಳಿಸಿದ ಹಸಿರು ಮುಳ್ಳುಗಳಿದ್ದ ಮೂರ್ನಾಲ್ಕು ಹಲಸುಗಳು ಮೆತ್ತಗಿತ್ತು. “ಹಣ್ಣು’ ಎಂದು ಪಿಸುಗುಟ್ಟಿದ. ಬೆರಳುಗಳಿಂದಲೇ ಅದನ್ನು ಬಗೆದ. ಹಳದಿ ಬಣ್ಣದ ಮೆತ್ತನೆಯ ಬೆರಳು ಗಾತ್ರದ ತೊಳೆಗಳು ಕಣ್ಣಿಗೆ ಬಿದ್ದದ್ದೇ ನಾವೆಲ್ಲರೂ ಮುಗಿಬಿದ್ದೆವು. ಜಗಿಯುವ ಕೆಲಸವೇ ಇಲ್ಲ. ಸಿಹಿರಸ ನಾಲಿಗೆಗೆ ತಾಕುತ್ತಿದ್ದಂತೆ ತೊಳೆ ಹೊಟ್ಟೆಗಿಳಿದಾಗುತ್ತಿತ್ತು. ಮೊದಲ ಸಲ ತುಳುವ ಹಣ್ಣು ನನ್ನ ಬಾಯಿ ತುಂಬಿದ್ದು ಹೀಗೆ.
ದೊಡ್ಡ ರಜೆಯಲ್ಲಿ ದೊಡ್ಡಮ್ಮನ ಮಗ ನಮ್ಮಲ್ಲಿಗೆ ಬರುವುದಿತ್ತು. ಅವನು ಬಂದರೆ ಕಾಡುಮೇಡು ಅಲೆಯಲು ನಮಗೆಲ್ಲ ಪರ್ಮಿಷನ್ ಗ್ಯಾರಂಟಿ. ಎಲ್ಲಾ ಮಕ್ಕಳು ಕುದುರೆಮೊಟ್ಟೆ ಎಂಬ ಹೆಸರಿನ ನಮ್ಮ ಮಟ್ಟಿಗೆ ಪರ್ವತವೇ ಎಂದು ಹೇಳಬಹುದಾದ ಗುಡ್ಡವನ್ನೇರುವ ಸಾಹಸಕ್ಕೆ ತೊಡಗುತ್ತಿದ್ದೆವು. ದಾರಿಯಲ್ಲಿ ಸಿಗುತ್ತಿದ್ದ ತರಕಾರಿ ತೋಟಗಳಲ್ಲಿ ಜನರ್ಯಾರು ಇಲ್ಲದಿದ್ದರೆ, ನಾಲ್ಕಾರು ಜೋಳಗಳನ್ನು, ಎಳೆ ಸೌತೆ ಮಿಡಿಗಳನ್ನು ನಾವೇ ಕೊಯ್ದು ತಿನ್ನುತ್ತಿದ್ದೆವು. ಜನರಿದ್ದರೆ ಭಾರೀ ಸುಬಗರಂತೆ ಕೇಳಿ ಕೊಯ್ದುಕೊಳ್ಳುತ್ತಿದ್ದೆವು. ಕಾಡು ಸಿಗುವವರೆಗೆ ಮೇಯಲು ಇದು ಆಹಾರವಾದರೆ ಕಾಡು ಸಿಕ್ಕಿದ ಕೂಡಲೇ ಇಕ್ಕೆಲೆಗಳಲ್ಲಿ ಸಿಗುತ್ತಿದ್ದ ಸೀಬೆಕಾಯಿಗಳು, ಹಣ್ಣು ಹೀಚುಗಳೆಂಬ ಭೇದವಿಲ್ಲದೇ ನಮ್ಮ ಹೊಟ್ಟೆಯೆಂಬ ಬ್ರಹ್ಮಾಂಡವನ್ನು ಸೇರಿ ಮರೆಯಾಗುತ್ತಿದ್ದವು. ಕುದುರೆ ಮೊಟ್ಟೆ ಮುಕ್ಕಾಲು ಪಾಲು ಕಾಡುಗಳಿಂದ ಕೂಡಿದ್ದ ಮೇಲ್ಭಾಗದಲ್ಲಿ ಗಾಳಿಯ ವೇಗದಿಂದಾಗಿ ಕುರುಚಲುಗಳಷ್ಟೇ ಇದ್ದ ಗುಡ್ಡ. ಕಾಡಿನ ಒಳ ಹೊಕ್ಕು ಮೇಲೇರುತ್ತಾ ಸಾಗಿದಂತೆ ಅಲ್ಲಿಯವರೆಗೆ ತಿಂದ¨ªೆಲ್ಲ ಕರಗಿ ಹಸಿವು ಶುರು ಆಗುತ್ತಿತ್ತು. ಆಗ ನಮ್ಮ ಹಸಿವನ್ನು ತಣಿಸುತ್ತಿದ್ದುದು ಇವೇ ಕಾಡುಹಲಸಿನ ಹಣ್ಣುಗಳು. ಗಾತ್ರದಲ್ಲಿ ಸಣ್ಣದಾಗಿದ್ದ ಕಾರಣ ಇವುಗಳನ್ನೂ ಹೊತ್ತು ಗುಡ್ಡದ ಮೇಲೇರಿ ತಿನ್ನುತ್ತಾ ಪ್ರಕೃತಿಯನ್ನು ಅಸ್ವಾದಿಸುವುದು ನಮ್ಮ ಅಮೂಲ್ಯ ಕ್ಷಣಗಳಾಗಿರುತ್ತಿದ್ದವು.
ಹೀಗೆ ನಮ್ಮನ್ನು ಕಾಯುತ್ತಿದ್ದ ಆ ಹಲಸು ಕಾಫಿ ತೋಟದವರ ದುಃಸ್ವಪ್ನಗಳಲ್ಲಿ ಒಂದಾಗಿರುತ್ತಿತ್ತು. ತೋಟದ ಒಳಗೆ ನೆರಳಿಗೆಂದು ನೆಟ್ಟಿದ್ದ ಈ ಹಲಸಿನ ಮರಗಳು ಬಿಡುವ ಹಣ್ಣಿನ ಪರಿಮಳಕ್ಕೆ ದನಗಳು ಎಂತಹ ಬಲಿಷ್ಟ ಬೇಲಿಯನ್ನೂ ಲೆಕ್ಕಿಸದೇ ಒಳನುಗ್ಗುತ್ತಿದ್ದುದು ಇದರ ಕಾರಣವಾಗಿತ್ತು. ಅದಕ್ಕಾಗಿ ಅವರು ಎಳೆ ಹಲಸಿನ ಕಾಯಿಗಳನ್ನೇ ಕಿತ್ತು ತೋಟದ ಹೊರಗೆ ಎಸೆಯುತ್ತಿದ್ದರು. ಅದನ್ನು ತಿನ್ನಲು ದನಗಳು ಕಿತ್ತಾಡುತ್ತ ಕಾಲ ಕಳೆಯುವುದು ನಾವು ದಿನನಿತ್ಯ ನೋಡುವ ದೃಶ್ಯವಾಗಿತ್ತು.
ಕರಾವಳಿಗೆ ಬಂದ ಮೇಲೆ ನನಗೆ ತುಳುವ ಹಲಸಿನ ಹಣ್ಣುಗಳು ಭಾರೀ ಗಾತ್ರವನ್ನು ಹೊಂದಿರುತ್ತವೆ ಎಂಬ ಅರಿವಾಗಿದ್ದು. ನಮ್ಮಲ್ಲಿದ್ದ ಒಂದು ಮರದ ಹಲಸಿನಕಾಯಿಯನ್ನೆತ್ತಲು ಇಬ್ಬರು ಗಟ್ಟಿಮುಟ್ಟಾದ ಆಳುಗಳೇ ಬೇಕಿತ್ತು. ಎಳೆ ಕಾಯಿಗಳ (ಗುಜ್ಜೆ) ಪಲ್ಯ, ಸಾಂಬಾರುಗಳು ಮುಗಿದೊಡನೆಯೇ ಬೆಳೆದ ಕಾಯಿಗಳ ಚಿಪ್ಸ್ , ಹಪ್ಪಳ ಎಣ್ಣೆಯಲ್ಲಿ ತೇಲತೊಡಗುತ್ತವೆೆ. ಹಣ್ಣಾದರೆ ಇದರ ರಸ ತೆಗೆದು ಅಕ್ಕಿ ತರಿ ತೆಂಗಿನಕಾಯಿ ಬೆಲ್ಲ ಸೇರಿಸಿ ಬಾಳೆ ಎಲೆಯಲ್ಲಿ ಕಟ್ಟಿಟ್ಟು ಉಗಿಯಲ್ಲಿ ಬೇಯಿಸಿದರೆ ! ಆಹಾ… ಬರೆಯುವಾಗಲೇ ಬಾಯಲ್ಲಿ ನೀರು.
ಈಗಷ್ಟೇ ನೋಡಿ ಬಂದೆ. ತೋಟದ ಎಲ್ಲಾ ಮರಗಳೂ ಫಲ ಹೊತ್ತು ಬೀಗುತ್ತಿವೆ. ಮೇಲಿನ ಕನಸೆಲ್ಲ ಸ್ವಲ್ಪ ದಿನಗಳಲ್ಲೇ ನನಸಾಗುವ ಕಾಲ ಬಂದೇ ಬರುತ್ತದೆ. ಅಂದ ಹಾಗೇ ಕೇಳಲಿಕ್ಕೇ ಮರೆತಿದ್ದೆ ; ನಿಮ್ಮ ಮನೆಯ ಮರದಲ್ಲೂ ಹಲಸಿನಹಣ್ಣು ಬಿಟ್ಟಿದೆಯಾ?
ಅನಿತಾ ನರೇಶ ಮಂಚಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.