ಯೋಗಿಗೊಲಿದ ಸಿಎಂ ಯೋಗ: ಇಂದು ಪ್ರಮಾಣ
Team Udayavani, Mar 19, 2017, 3:50 AM IST
ಲಕ್ನೋ: ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗುತ್ತಲೇ ಇರುವ ಪ್ರಬಲ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ರವಿವಾರ ಮಧ್ಯಾಹ್ನ ದೇಶದ ಅತೀದೊಡ್ಡ ರಾಜ್ಯ ಉತ್ತರ ಪ್ರದೇಶದ 32ನೇ ಮುಖ್ಯಮಂತ್ರಿಯಾಗಿ ಯೋಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.
ಇನ್ನೊಂದು ವಿಶೇಷವೆಂದರೆ ಇತ್ತೀಚಿನ ಅಪರೂಪದ ಬೆಳವಣಿಗೆ ಎನ್ನುವಂತೆ ದಿನೇಶ್ ಶರ್ಮ ಮತ್ತು ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದಿನೇಶ್ ಶರ್ಮ ಅವರು ಅಮಿತ್ ಶಾ ಅವರ ಆಪ್ತರಾಗಿದ್ದರೆ, ಮೌರ್ಯ ಯುಪಿಯ ಬಿಜೆಪಿ ಅಧ್ಯಕ್ಷ. ಒಟ್ಟಾರೆ ಉತ್ತರ ಪ್ರದೇಶದಲ್ಲಿ ಪ್ರಚಂಡ ಗೆಲುವಿನೊಂದಿಗೆ ಬಹುಮತ ಗಿಟ್ಟಿಸಿಕೊಂಡಿರುವ ಬಿಜೆಪಿ ಹದಿನೈದು ವರ್ಷಗಳ ಬಳಿಕ ಮತ್ತೆ ರಾಜ್ಯಾ ಡಳಿತದ ಚುಕ್ಕಾಣಿ ಹಿಡಿಯಲಿದೆ.
ರಾಜಧಾನಿ ಲಕ್ನೋದಲ್ಲಿ ಶನಿವಾರ ಅಪರಾಹ್ನ ನಡೆದ 312 ಸದಸ್ಯರನ್ನೊಳಗೊಂಡ ಶಾಸಕ ಪಕ್ಷದ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಲಾಯಿತು. ಈ ಮೂಲಕ ಚುನಾವಣೆ ಫಲಿತಾಂಶ ಬಳಿಕ ಸಿಎಂ ಯಾರಾಗುತ್ತಾರೆನ್ನುವ “ಮಹಾ ಕುತೂಹಲ’ಕ್ಕೆ ಕಡೆಗೂ ತೆರೆಬಿದ್ದಿತು. ಸಾಕಷ್ಟು ಪ್ರೌಢನಾಯಕರಾಗಿ ಗುರುತಿಸಿ ಕೊಂಡಿದ್ದ ಕೇಶವ್ ಪ್ರಸಾದ್ ಮೌರ್ಯ ಬದಲಾಗಿ ಯೋಗಿ ಆದಿತ್ಯನಾಥ್ ಆಯ್ಕೆ ಸಹಜವಾಗಿಯೇ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆರ್‌ಎಸ್‌ಎಸ್ ಮನೋಜ್ ಸಿನ್ಹಾ ಅವರ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರೂ ಅಂತಿಮವಾಗಿ ಪ್ರಧಾನಿ ಮೋದಿ ಸೂಚನೆ ಮೇರೆಗೆ ಆದಿತ್ಯನಾಥ್ ಅವರ ಆಯ್ಕೆ ನಡೆದಿದೆ ಎಂದೂ ಹೇಳಲಾಗುತ್ತಿದೆ.
ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸಿಎಂ ಆಯ್ಕೆ ಜವಾಬ್ದಾರಿಯನ್ನು ಮೌರ್ಯ ಅವರಿಗೇ ನೀಡಿದ್ದರಿಂದ ಸಹಜವಾಗಿ ಸಿಎಂ ಆಗುವ ಅವಕಾಶವೊಂದನ್ನು ಕೈಚೆಲ್ಲಿದರು ಎನ್ನುವ ಮಾತುಗಳು ಕೇಳಿಬಂದಿವೆ.
ಬೆಂಬಲಿಗರಿಂದ ಶಕ್ತಿ ಪ್ರದರ್ಶನ: ಉತ್ತರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ಮತ್ತು ಯೋಗಿ ಆದಿತ್ಯನಾಥ್ ಬೆಂಬಲಿಗರು ಪಕ್ಷದ ಪ್ರಧಾನ ಕಚೇರಿ ಎದುರು ಶಾಸಕ ಪಕ್ಷದ ಸಭೆಗೂ ಮುನ್ನ ಭಾರೀ ಪ್ರತಿಭಟನೆ ನಡೆಸಿ ಶಕ್ತಿ ಪ್ರದರ್ಶಿಸಿದರು. ಕಡೇ ಹಂತದವರೆಗೂ ಮನೋಜ್ ಸಿನ್ಹಾ ಅಥವಾ ಕೇಶವ್ ಪ್ರಸಾದ್ ಮೌರ್ಯ ಅವರನ್ನೇ ನೇಮಕ ಮಾಡಲಾಗುತ್ತದೆನ್ನುವ ಮಾತುಗಳು ಕೇಳಿಬಂದಿದ್ದವು. ಈ ನಡುವೆ ಒಂದಿಷ್ಟು ಶಾಸಕರು ಮನೋಜ್ ಸಿನ್ಹಾ ಅವರೂ ಸಾಮರ್ಥ್ಯವುಳ್ಳ ನಾಯಕರು ಎಂದು ಪ್ರತಿಬಿಂಬಿಸುವ ಪ್ರಯತ್ನ ನಡೆಸಿದ್ದರು.
ಯಾರೆಲ್ಲ ರೇಸ್‌ನಲ್ಲಿದ್ದರು?: ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಆದಿತ್ಯನಾಥ್, ಕೇಶವ್ ಪ್ರಸಾದ್ ಮೌರ್ಯ ಜತೆ ಇನ್ನೂ ಒಂದಷ್ಟು ನಾಯಕರ ಹೆಸರು ಕೇಳಿಬಂದಿತ್ತು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೂ ಆಗಬಹುದಾದ ಸಾಧ್ಯತೆ ಇತ್ತು ಎನ್ನಲಾಗಿತ್ತು.
ಯೋಗಿ ಆಯ್ಕೆಗೆ ಐದು ಕಾರಣಗಳು
1. ಪ್ರಬಲ ಹಿಂದೂ ನಾಯಕ: ಹಿಂದೂ ಸಮುದಾಯದ ಮತ ದಾರರ ಬೇಡಿಕೆ ಈಡೇರಿಸಲು ಹಿಂದು ತ್ವದ ಕಟ್ಟಾ ಪ್ರತಿಪಾದಕ ಯೋಗಿಯಿಂದ ಸಾಧ್ಯ ಎಂಬ ನಂಬಿಕೆ ಪ್ರಧಾನಿ ಮೋದಿ , ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರದ್ದು.
2. ಹಿಂದುತ್ವ ರಾಜಕಾರಣ
ನಿರೀಕ್ಷೆಗಳನ್ನು ಮೀರಿ ಯೋಗಿ ಅವರನ್ನು ಆಯ್ಕೆ ಮಾಡಿ ತನ್ನ ಅಂತರಂಗದ ರಾಜಕಾರಣ ವಾದ ಹಿಂದುತ್ವದ ಪ್ರತಿಪಾದನೆಗೆ ಸಾಂವಿಧಾನಿಕ ಮುದ್ರೆ ಒತ್ತುವ ಪ್ರಯತ್ನದ ಮೊದಲ ಹೆಜ್ಜೆ ಇದಾಗಿರಬಹುದು.
3. 2019ರ ಲೋಕಸಭೆ ಚುನಾವಣೆಗಾಗಿ
ಕಳೆದ ಚುನಾವಣೆಯಲ್ಲಿ 73 ಸ್ಥಾನ ಗಳನ್ನು ಗೆದ್ದಿದ್ದ ಬಿಜೆಪಿ, 2019ರ ಲ್ಲಿಯೂ ಅದೇ ಪ್ರಮಾಣದ ಸಾಧನೆ ಮಾಡಬೇಕಿದೆ. ಇದಕ್ಕಾಗಿ ಅವರಿಗೆ ಫೈರ್ ಬ್ರ್ಯಾಂಡ್ ನಾಯಕ ಬೇಕಿತ್ತು.
ಆ ಶಕ್ತಿ ಆದಿತ್ಯನಾಥ್‌ರಲ್ಲಿದೆ.
4. ಠಾಕೂರ್ ಸಮುದಾಯದ ನಾಯಕ
ಉತ್ತರ ಪ್ರದೇಶದಲ್ಲಿ ಬಲಿಷ್ಠವಾಗಿರುವ ಠಾಕೂರ್ ಸಮುದಾಯಕ್ಕೆ ಸೇರಿದವರು. ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಧಾನಿ ಮೋದಿ ಬಿಟ್ಟರೆ ಅತೀ ಹೆಚ್ಚು ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದಲ್ಲದೆ, ಬೆಂಬಲಿಗರ ದಂಡೇ ಹೊಂದಿರುವುದು.
5. ಪರಿವಾರ ಹಿಡಿತಕ್ಕೆ
ಸಂಘ ಪರಿವಾರದ ಅಭ್ಯರ್ಥಿ ರಾಜನಾಥ್ ಸಿಂಗ್ ಅವರ ಆಯ್ಕೆ ಯನ್ನು ನಿರಾಕರಿಸುವುದರ ಜತೆಗೆ ಪಕ್ಷ ಮತ್ತು ಪರಿವಾರವನ್ನು ತಮ್ಮ ಹಿಡಿತಕ್ಕೆ ತೆಗೆದು ಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಪ್ರಯತ್ನ ಇದು.
ಅಪರಾಹ್ನ 2.15ಕ್ಕೆ ಪ್ರತಿಜ್ಞೆ
ರವಿವಾರ ಅಪರಾಹ್ನ 2.15ಕ್ಕೆ ಸ್ಮತಿ ಉಪವನ್‌ನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ರಾಜಭವನ ಮೂಲಗಳು ಹೇಳಿವೆ. ಸಮಾ ರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹಿತ 15 ಕೇಂದ್ರ ಸಚಿವರು, ನಾಲ್ವರು ರಾಜ್ಯಪಾಲರು, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯ ಮಂತ್ರಿಗಳು, ಮಿತ್ರಪಕ್ಷಗಳ ನಾಯಕರು ಹಾಗೂ ದೇಶದ ನಾನಾ ಭಾಗಗಳ ಪಕ್ಷದಲ್ಲಿನ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ವೇದಿಕೆ ಮುಂಭಾಗದಲ್ಲಿ 50 ಸಾವಿರ ಮಂದಿ ಕುಳಿತು ವೀಕ್ಷಿಸುವಂತೆ ಸಿದ್ಧತೆ ನಡೆದಿದೆ.
8000ಕ್ಕೂ ಹೆಚ್ಚು ಭದ್ರತಾ ಸಿಬಂದಿ
ಪ್ರಮಾಣ ವಚನ ಸಮಾರಂಭದಲ್ಲಿ ಸಾಕಷ್ಟು ಮಂದಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ. ಚುನಾವಣೆ ಸಮಯದಲ್ಲಿ ನಡೆದ ಕೆಲವೊಂದು ಅಹಿತಕರ ಘಟನೆಗಳು ಮರುಕಳಿಸಬಾರದು ಎನ್ನುವುದೂ ಇದಕ್ಕೊಂದು ಕಾರಣವಾಗಿದೆ. ಅಧಿಕಾರಿಗಳು, ಭದ್ರತಾ ಸಿಬಂದಿ, ಕೇಂದ್ರ ಭದ್ರತಾ ದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ವಿಶೇಷ ಕಮಾಂಡೋ ಸಹಿತ 8,000ಕ್ಕೂ ಹೆಚ್ಚು ಮಂದಿಯನ್ನು ನಿಯೋಜಿಸಲಾಗಿದೆ. ಇನ್ನೂ ಹೆಚ್ಚಿನ ಭದ್ರತೆಗಾಗಿ ಡ್ರೋನ್ ಮತ್ತು ಲೋಹ ಪತ್ತೆಯಂತ್ರವನ್ನೂ ಬಳಸಿಕೊಳ್ಳಲಾಗುತ್ತಿದೆ.
ಅಧಿಕಾರಿಗಳಿಗೆ ಎಚ್ಚರಿಕೆ
ಸರಕಾರ ರಚನೆ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ನಿಗದಿತ ಸಮಯ ದಲ್ಲಿ ಕಚೇರಿಗೆ ಹಾಜರಾಗುವಂತೆ ತಿಳಿಸಿದ್ದಾರೆ. ಯಾವುದೇ ಸಮಯದಲ್ಲಿ ಸರಕಾರ ರಚನೆ ಯಾಗುವ ಸಾಧ್ಯತೆಗಳು ಇವೆ. ಮಾರ್ಚ್ 20ರಿಂದ ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸಬೇಕು. ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸಗಳನ್ನು ಮುಗಿಸಿ ರಬೇಕು ಎಂದು ತಿಳಿಸಿದ್ದಾರೆ.
ಯೋಗಿ ಕಿರುಪರಿಚಯ
26ನೇ ವಯಸ್ಸಿನಲ್ಲೇ ಸಂಸತ್ತಿಗೆ
ಪ್ರವೇಶಿಸಿದ ಯೋಗಿ. ಗೋರಖ್‌ಪುರದಿಂದ
5 ಬಾರಿ ಸಂಸದರಾಗಿ ಆಯ್ಕೆ.
ಗಣಿತದಲ್ಲಿ ಪದವಿ ಪಡೆದ ರಜಪೂತ
ಕುಟುಂಬದ ಅಜಯ್ ಸಿಂಗ್, ನಾಥ ಪಂಥದ
ಮಠ ಸೇರಿ ಆದಿತ್ಯನಾಥರಾದರು.
ಗೋರಖ್‌ನಾಥ್ ಮಠದ ಪ್ರಸಕ್ತ ಪೀಠಾಧ್ಯಕ್ಷ
ಹಿಂದೂ ಯುವವಾಹಿನಿ ಸಂಘಟನೆಯ
ಸ್ಥಾಪಕ. ಅಲ್ಪಸಂಖ್ಯಾಕರ ವಿರುದ್ಧ
ಯಾವಾಗಲೂ ಕಿಡಿ ಮಾತು
ರಾಮಮಂದಿರ ನಿರ್ಮಾಣದ ಪ್ರಬಲ ಪ್ರತಿಪಾದಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.