ಕಾಂಗ್ರೆಸ್ ಡೈರಿ ಪ್ರಕರಣ: ಧರಣಿ ಕೈ ಬಿಟ್ಟ ಬಿಜೆಪಿ
Team Udayavani, Mar 21, 2017, 11:10 AM IST
ವಿಧಾನಸಭೆ: ಹೈಕಮಾಂಡ್‌ಗೆ ಕಪ್ಪ ನೀಡಿದ ಮಾಹಿತಿಯುಳ್ಳ ಡೈರಿ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಎರಡು ದಿನ ವಿಧಾನಸಭೆಯಲ್ಲಿ ಧರಣಿ ನಡೆಸಿದ್ದ ಬಿಜೆಪಿ ಸೋಮವಾರ ಧರಣಿ ವಾಪಸ್ ಪಡೆಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರಾದರೂ ಅದರ
ನಡುವೆಯೇ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ನೀಡಿರುವ ಮಾಹಿತಿಯಿರುವ ಡೈರಿ ಬಗ್ಗೆ ಸದನದಲ್ಲಿ ಮಾತನಾಡಲು ಅವಕಾಶ ಕೋರಿದ್ದೆವು.
ಸರ್ಕಾರ ಮೊಂಡುತನಕ್ಕೆ ಬಿದ್ದಿದೆ. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯಿದೆ. ಪಶ್ಚಿಮ ಘಟ್ಟ ಕುರಿತು ಡಾ. ಕೆ. ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಬೇಕಿದೆ. ಹೀಗಾಗಿ, ಡೈರಿ ವಿಚಾರದ ಬಗ್ಗೆ ಸದನದ ಹೊರಗೆ ಹೋರಾಟ ಮುಂದುವರಿಸುತ್ತೇವೆ. ಈ ಹಿನ್ನೆಲೆ ಧರಣಿ ವಾಪಸ್ ಪಡೆಯುವ ಬಗ್ಗೆ ಪ್ರಕಟಿಸಿದರು.
ಪಾಟೀಲ್-ಶೆಟ್ಟರ್ ಮಾತಿನ ಚಕಮಕಿ: ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದ ಜಗದೀಶ್ ಶೆಟ್ಟರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ವಿಷಯದ ಮೇಲೆ ಚರ್ಚೆಗೆ ಅವಕಾಶ ನೀಡದಿರುವ ಈ ಸರ್ಕಾರದ ಮೊಂಡುತನಕ್ಕೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ರಾಜ್ಯದಲ್ಲಿ ಚರ್ಚಿಸಲು ಸಾಕಷ್ಟು
ವಿಷಯಗಳಿವೆ. ಅದರ ಬದಲು ಉಪಯೋಗಕ್ಕೆ ಬಾರದ ಡೈರಿ ವಿಷಯ ಇಟ್ಟುಕೊಂಡು ಧರಣಿ ಮಾಡುತ್ತಿರುವುದಕ್ಕೆ
ರಾಜ್ಯದ ಜನತೆ ಉಗಿಯುತ್ತಿದ್ದಾರೆ. ಅದಕ್ಕೆ ಧರಣಿ ವಾಪಸ್ ಪಡೆಯುತ್ತಿದ್ದೀರಿ ಎಂದು ಕೆಣಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಬಿಜೆಪಿ ವಿರುದ್ದ ವಾಗ್ಧಾಳಿ ನಡೆಸಿ, ಕೋಟಿ ಕೋಟಿ ಲೂಟಿ ಮಾಡಿದವರು ನೀವು,
ನಿಮ್ಮಿಂದ ಪಾಠ ಕಲಿಯಬೇಕಿಲ್ಲ. ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ಪ್ರತಿಪಕ್ಷದ ಸ್ಥಾನವನ್ನೂ ಪಡೆಯುವ ಅರ್ಹತೆ ಕಳೆದುಕೊಂಡಿತು. ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಭೂತದ ಬಾಯಲ್ಲಿ ಭಗವದ್ಗೀತೆ ಕೇಳಬೇಕಾ? ನಿಮ್ಮ ಯೋಗ್ಯತೆಯನ್ನು ಜನರ ಮುಂದಿಡುತ್ತೇವೆಂದು ವಾಗ್ಧಾಳಿ ನಡೆಸಿದರು. ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಜಗದೀಶ ಶೆಟ್ಟರ್, ಸದನದಲ್ಲಿ ಡೈರಿ ವಿಷಯ ಚರ್ಚೆಗೆ ಅವಕಾಶ ನೀಡದಿದ್ದರೇನಂತೆ, ನಿಮ್ಮ ಬಣ್ಣವನ್ನು ಜನರ ಎದುರು
ಬಯಲು ಮಾಡುತ್ತೇವೆ. ಸದನದ ಹೊರಗೆ ಹೋರಾಟ ಮುಂದುವರಿಸುತ್ತೇವೆ. ಬೇರೆ ವಿಷಯಗಳ ಚರ್ಚೆ ಮಾಡಿ,
ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತೇವೆಂದು ಧರಣಿಯನ್ನು ವಾಪಸ್ ಪಡೆದುಕೊಂಡರು.
ಈ ನಡುವೆ ಕಾಂಗ್ರೆಸ್ ಸದಸ್ಯರು ಬಿಜೆಪಿಯ ಸಹರಾ ಮತ್ತು ಲೆಹರ್‌ಸಿಂಗ್ ಡೈರಿ ಕುರಿತ ಭಿತ್ತಿ ಪತ್ರಗಳನ್ನು ಸದನದಲ್ಲಿ ತಂದು ಪ್ರದರ್ಶಿಸಿದರು.
ಪ್ರತಿಭಟನೆ ದಿಢೀರ್ ವಾಪಸ್: ಬಿಜೆಪಿ ಕೆಲ ಶಾಸಕರಲ್ಲಿ ಅಸಮಾಧಾನ
ಡೈರಿ ವಿಚಾರದಲ್ಲಿ ಆರಂಭಿಸಿದ್ದ ಪ್ರತಿಭಟನೆ ದಿಢೀರ್ ವಾಪಸ್ ಪಡೆದ ಬಗ್ಗೆಯೂ ಬಿಜೆಪಿಯ ಕೆಲವು ಶಾಸಕರಲ್ಲಿ
ಅಸಮಾಧಾನ ಉಂಟಾಗಿದೆ ಎನ್ನಲಾಗಿದೆ. ಪ್ರತಿಪಕ್ಷ ನಾಯಕರು ಶಾಸಕರ ಜತೆ ಚರ್ಚಿಸದೆ ಏಕಾಏಕಿ ನಿಲುವು
ಪ್ರಕಟಿಸಿದರು. ಸೋಮವಾರವೂ ಪ್ರತಿಭಟನೆ ಮುಂದುವರಿಸಿ ಸ್ಪೀಕರ್ ಕೊಠಡಿಯಲ್ಲಿ ಸಂಧಾನ ಸಭೆ ಕರೆದಾಗ ಸಮ್ಮತಿ
ಸೂಚಿಸಿ, ನಂತರ ಪ್ರತಿಭಟನೆ ಕೈ ಬಿಟ್ಟಿದ್ದರೆ ನಮಗೂ ಬೆಲೆ ಇರುತ್ತಿತ್ತು ಎಂದು ಅಸಮಾಧಾನಿತ ಶಾಸಕರು ಅಭಿಪ್ರಾಯ
ವ್ಯಕ್ತಪಡಿಸಿದರು ಎನ್ನಲಾಗಿದೆ. ಒಂದೊಮ್ಮೆ ಪ್ರತಿಪಕ್ಷ ಬಿಜೆಪಿ ಡೈರಿ ವಿಚಾರ ಮುಂದಿಟ್ಟುಕೊಂಡು ಸೋಮವಾರವೂ
ಪ್ರತಿಭಟನೆ, ಧರಣಿ ಮುಂದುವರಿಸಿದರೆ ಗದ್ದಲದ ನಡುವೆಯೇ ಮೂರು ತಿಂಗಳ ಲೇಖಾನುದಾನಕ್ಕೆ ಒಪ್ಪಿಗೆ ಪಡೆದು
ಬುಧವಾರ ಸದನವನ್ನು ಅನಿರ್ದಿಷ್ಟ ಕಾಲ ಮುಂದೂಡುವ ಮೂಲಕ, ಬರದ ಬಗ್ಗೆ ಚರ್ಚೆಗೆ ಅವಕಾಶ ನೀಡದ ಬಿಜೆಪಿ
ವಿರುದ್ಧ ಜನಾಕ್ರೋಶ ವ್ಯಕ್ತವಾಗುವಂತೆ ನೋಡಿಕೊಳ್ಳಲು ಆಡಳಿತಾರೂಢ ಕಾಂಗ್ರೆಸ್ ಚಿಂತನೆ ನಡೆಸಿತ್ತು. ಇದರ ಸುಳಿವರಿದ ಬಿಜೆಪಿ, ಡೈರಿ ವಿಚಾರ ಕೈ ಬಿಡುವ ತೀರ್ಮಾನಕ್ಕೆ ಬಂದಿತು ಎಂದು ಹೇಳಲಾಗಿದೆ.
ಪರಿಷತ್‌ನಲ್ಲೂ ಮಾತಿನ ಸಮರ
ವಿಧಾನಪರಿಷತ್ತು: ವಿಧಾನಸಭೆ ಕಲಾಪ ಬಲಿ ಪಡೆದುಕೊಂಡಿದ್ದ “ಡೈರಿ’ ಪ್ರಕರಣ ಸೋಮವಾರ ಮೇಲ್ಮನೆಯಲ್ಲೂ ಪ್ರಸ್ತಾಪವಾಗಿ ಕೆಲ ಕಾಲ ಕೋಲಾಹಲಕ್ಕೆ ಕಾರಣವಾಗಿದ್ದಲ್ಲದೇ ಲೆಹರ್‌ಸಿಂಗ್‌ಗೆ ಮಾತನಾಡಲು ಸಭಾಪತಿ ಅವಕಾಶ ನಿರಾಕರಿಸಿದ್ದಕ್ಕೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗವೂ ನಡೆಯಿತು.
ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡುತ್ತ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಆಡಳಿತ ಪಕ್ಷದ ಭ್ರಷ್ಟಾಚಾರದ ಬಗ್ಗೆ ಹೇಳುತ್ತ ಡೈರಿ ವಿಷಯ ಪ್ರಸ್ತಾಪಿಸಿದರು. ಇದಕ್ಕೆ “ಯಾವ ಡೈರಿ’ ಎಂದು ಕಾಂಗ್ರೆಸ್ ಸದಸ್ಯರು ಛೇಡಿಸಿದರು. ಸಿಟ್ಟಿಗೆದ್ದ ಈಶ್ವರಪ್ಪ ಹೆಸರು ಹೇಳಬೇಕಾ “ಗೋವಿಂದರಾಜ್ ಡೈರಿ’ ಎಂದು ಟಾಂಗ್ ಕೊಟ್ಟರು. ಸಿಟ್ಟಿಗೆದ್ದ ಕಾಂಗ್ರೆಸ್ ಸದಸ್ಯರು ಸಹಾರಾ ಡೈರಿ, ಲೇಹರ್‌ಸಿಂಗ್ ಡೈರಿ ಬಗ್ಗೆಯೂ ಹೇಳಿ ಎಂದು ಕೆಣಕಿದರು. ಈ ವೇಳೆ ಬಿಜೆಪಿ-ಕಾಂಗ್ರೆಸ್
ಸದಸ್ಯರ ನಡುವೆ ಜಟಾಪಟಿ ನಡೆಯಿತು. ಈ ವೇಳೆ ಬಿಜೆಪಿ ಸದಸ್ಯ ಲೇಹರ್ ಸಿಂಗ್ ಮಧ್ಯ ಪ್ರವೇಶಿಸಿ, ನನ್ನ ಹೆಸರು ಪ್ರಸ್ತಾಪವಾಗಿದೆ. ಹಾಗಾಗಿ ನನಗೆ ಮಾತನಾಡಲು ಅವಕಾಶ ಕೊಡಬೇಕೆಂದು ಮನವಿ ಮಾಡಿದರು. ಆದರೆ,
ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಇದಕ್ಕೆ ಅಸಮಧಾನಗೊಂಡ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.
ಈ ವೇಳೆ ಸದನದಲ್ಲಿ ಮತ್ತೆ ಗಲಾಟೆ ಆರಂಭವಾಯಿತು. ಡೈರಿಗಳ ಬಗ್ಗೆ ಹೈಕೋರ್ಟ್ ಸ್ಪಷ್ಟವಾದ ಅಭಿಪ್ರಾಯ ಹೇಳಿದೆ. ಹಾಗಾಗಿ ಆ ವಿಚಾರ ಇಲ್ಲಿ ಪ್ರಸ್ತಾಪ ಮಾಡುವುದು ಸರಿಯಲ್ಲ ಎಂದು ಪರಮೇಶ್ವರ್ ಹೇಳಿದರು. ಡೈರಿ ವಿಚಾರ ಮೊದಲು ಆರಂಭಿಸಿದ್ದು ಕಾಂಗ್ರೆಸ್ ಸದಸ್ಯರು ಎಂದು ಈಶ್ವರಪ್ಪ ತಿರುಗೇಟು ನೀಡಿದರು.
ಮರಿತಿಬ್ಬೇಗೌಡ ಬೇಸರ: ಬಜೆಟ್ ಮೇಲಿನ ಚರ್ಚೆ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಿಂದ ಅನಗತ್ಯ ವಿಷಯಗಳು ಪ್ರಸ್ತಾಪ ಆಗಿರುವುದಕ್ಕೆ ಮನಸ್ಸಿಗೆ ತುಂಬಾ ನೋವಾಗಿದೆ. ಡೈರಿ ವಿಷಯ ಇಲ್ಲಿಗೇ ಬಿಡಿ. ಲೇಹರ್‌ಸಿಂಗ್ ಹೆಸರು ಕಡತದಿಂದ ತೆಗೆದು ಹಾಕಿಸುತ್ತೇನೆ. ಧರಣಿ ಕೈಬಿಟ್ಟು ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂದು ಬಿಜೆಪಿ ಸದಸ್ಯರಿಗೆ ಮರಿತಿಬ್ಬೇಗೌಡ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Incentive: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಪ್ರೋತ್ಸಾಹಧನ ದ್ವಿಗುಣ: ಸಚಿವ ಮಹದೇವಪ್ಪ
Mining Case: ಶಿಕ್ಷೆ ರದ್ದು ಕೋರಿ ಶಾಸಕ ಸೈಲ್ ಸೇರಿ ನಾಲ್ವರು ಹೈಕೋರ್ಟ್‌ಗೆ
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.