ಯುವಸಮುದಾಯದ ಜಾಗೃತಿ ಅಗತ್ಯ: ಜಸ್ಟಿಸ್ ಸಂತೋಷ ಹೆಗ್ಡೆ
Team Udayavani, Mar 22, 2017, 12:37 PM IST
ಉಳ್ಳಾಲ: ಕಳೆದ ಹಲವು ವರ್ಷಗಳಿಂದ ಭ್ರಷ್ಟಾಚಾರ ಸೇರಿದಂತೆ ಹಲವು ಹಗರಣಗಳಿಂದ ದೇಶ ಅಧಃಪತನದತ್ತ ಸಾಗಿದ್ದು, ಈ ನಿಟ್ಟಿನಲ್ಲಿ ಇಂದಿನ ಯುವ ಸಮುದಾಯ ಎಚ್ಚೆತ್ತುಕೊಂಡು ಸಮಾಜವನ್ನು ಬದಲಾಯಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರೆ ಸಮಾಜ ಕಳೆದುಕೊಂಡಿರುವ ಮೌಲ್ಯವನ್ನು ಮರಳಿ ಪಡೆಯಲು ಸಾಧ್ಯವಿದೆ ಎಂದು ನಿವೃತ್ತ ಲೋಕಾಯುಕ್ತ ಜಸ್ಟಿಸ್ ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಡೆಂಟೋಫೇಶಿಯಲ್ ಆ್ಯಂಡ್ ಸ್ಟೊಮೊಟೋಗ್ನಾಟಿಕ್ ಸೈನ್ಸ್ ಆಶ್ರಯದಲ್ಲಿ ಲೀಗಲ್ ಸರ್ವೀಸ್ ಅಥಾರಿಟಿ ಆಫ್ ದಕ್ಷಿಣ ಕನ್ನಡ ಇದರ ಸಯೋಗದಲ್ಲಿ ಕಾಲೇಜಿನ ವಿಂಶತಿ ಭವನದಲ್ಲಿ ಮಂಗಳವಾರ ನಡೆದ ಡೆಂಟಲ್ ಆ್ಯಸ್ಪೆಕ್ಟ್ ಇನ್ ಡೆಂಟಲ್ ಪ್ರಾಕ್ಟಿಸ್ ವಿಚಾರದಲ್ಲಿ ನಿರಂತರ ದಂತ ಶಿಕ್ಷಣ (ಸಿಡಿಇ) ಕಾರ್ಯಕ್ರಮ ಮತ್ತು ಫಾರೆನ್ಸಿಕ್ ಓಡೊಂಟೋಲೋಜಿ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ದುರಾಸೆಯಿಂದ ಅಧಃಪತನಕ್ಕೆ
ವೈದ್ಯಕೀಯ, ನ್ಯಾಯಾಂಗ ಸೇರಿದಂತೆ ವೃತ್ತಿಪರ ಉದ್ಯೋಗಕ್ಕೆ ಅದರದ್ದೇ ಆದ ನೀತಿ ಸಂಹಿತೆಗಳಿದ್ದು, ಅದನ್ನು ನಿಯತ್ರಿಸುವ ಕೌನ್ಸಿಲ್‌ಗಳಿರುತ್ತವೆ. ಇಂತಹ ಕೌನ್ಸಿಲ್‌ಗಳು ಗ್ರಾಹಕರಿಗೆ ನ್ಯಾಯವನ್ನು ಒದಗಿಸಿಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಸಮಾಜದಲ್ಲಿ ಉನ್ನತಿ ಕಾಣಲು ಸಾಧ್ಯ ಎಂದ ಅವರು ಲೋಕಾಯುಕ್ತನಾಗಿ ಐದು ವರ್ಷದ ಅನುಭವದಲ್ಲಿ ದುರಾಸೆಯಿಂದ ದೇಶ ಅಧಃಪತನಕ್ಕೆ ಸಾಗುತ್ತಿರುವುದನ್ನು ಮನಗಂಡಿದ್ದೇನೆ. 1950ರಿಂದ ಪ್ರಾರಂಭಗೊಂಡ ಜೀಪ್ ಹಗರಣ, ಬೊಫೋರ್ಸ್ ಹಗರಣ, ಕಾಮನ್ ವೆಲ್ತ್ ಗೇಮ್ಸ್ ಹಗರಣ 2ಜಿ ಹಗರಣ ಸೇರಿದಂತೆ ಹಲವಾರು ಹಗರಣಗಳಿಗೆ ಭಾರತ ಸಾಕ್ಷಿಯಾಗಿದ್ದು, ಸಿಎಜಿ ನೀಡಿದ ವರದಿಯಂತೆ ಸರಕಾರದ ಬೊಕ್ಕಸದಿಂದ ಕೋಟ್ಯಂತರ ಹಣವನ್ನು ದೋಚಲಾಗಿದೆ. ಬಜೆಟ್‌ನಲ್ಲಿ ಕೋಟ್ಯಂತರ ರೂ. ವ್ಯಯ ಮಾಡಿದರೂ ಬಡವರನ್ನು ತಲುಪುವುದು ಕಡಿಮೆ. ಹೀಗೆ ಮುಂದುವರಿದಲ್ಲಿ ದೇಶವನ್ನು ದೋಚುವವರ ಸಂಖ್ಯೆಯೇ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಯುವಜನಾಂಗ ಜಾಗೃತರಾಗಿ ಪ್ರಾಮಾಣಿಕರಿಗೆ ಗೌರವಿಸುವಂತಹ ವಾತಾವರಣ ವನ್ನು ಸಮಾಜದಲ್ಲಿ ನಿರ್ಮಿಸುವಲ್ಲಿ ಪ್ರಯತ್ನಿಸ ಬೇಕಿದೆ ಎಂದರು. ನಿಟ್ಟೆ ವಿ.ವಿ. ಕುಲಾಧಿಪತಿ ಎನ್. ವಿನಯ ಹಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಲೀಗಲ್ ಸರ್ವೀಸ್ ಅಥಾರಿಟಿ ಆಫ್ ದಕ್ಷಿಣ ಕನ್ನಡ ಅಧ್ಯಕ್ಷ ಹಾಗೂ ಪ್ರಿನ್ಸಿಪಲ್ ಡಿಸ್ಟ್ರಿಕ್ಸ್ ಆ್ಯಂಡ್ ಸೆಷನ್ಸ್ ಜಡ್ಜ್ ಕೆ.ಎಸ್. ಬಿಳಗಿ, ನಿಟ್ಟೆ ವಿ.ವಿ. ಉಪಕುಲಪತಿ ಪ್ರೊ| ಎಸ್. ರಮಾನಂದ ಶೆಟ್ಟಿ, ಕ್ಯಾಡ್ಸ್‌ನ ನಿರ್ದೇಶಕ ಹಾಗೂ ದಂತ ವೈದ್ಯಕೀಯ ಕಾಲೇಜಿನ ವಿಶ್ರಾಂತ ಡೀನ್ ಪ್ರೊ| ಎನ್. ಶ್ರೀಧರ್ ಶೆಟ್ಟಿ, ಸ್ನಾತಕೋತ್ತರ ಅಧ್ಯಯನ ವಿಭಾಗದ ನಿರ್ದೇಶಕ ಹಾಗೂ ದಂತ ವೈದ್ಯಕೀಯ ಕಾಲೇಜಿನ ವಿಶ್ರಾಂತ ಡೀನ್ ಪ್ರೊ| ಬಿ. ರಾಜೇಂದ್ರ ಕುಮಾರ್, ಉಪ ಪ್ರಾಂಶುಪಾಲೆ ಪ್ರೊ| ಮಿತ್ರ ಎನ್. ಹೆಗ್ಡೆ, ಸಂಯೋಜಕರಾದ ಪ್ರೊ| ಸುಭಾಷ್ ಬಾಬು, ಪ್ರೊ| ಪುಷ್ಪರಾಜ್ ಶೆಟ್ಟಿ, ಸೀನಿಯರ್ ಸಿವಿಲ್ ಜಡ್ಜ್ ಮತ್ತು ಲೀಗಲ್ ಸರ್ವೀಸ್ ಅಥಾರಿಟಿ ಆಫ್ ದಕ್ಷಿಣ ಕನ್ನಡ ಇದರ ಕಾರ್ಯದರ್ಶಿ ಮಲ್ಲನ ಗೌಡ ಉಪಸ್ಥಿತರಿದ್ದರು.
ಅಡ್ವೋಕೇಟ್, ಅಡಿಷನಲ್ ಡಿಸ್ಟ್ರಿಕ್ ಗವರ್ನಮೆಂಟ್ ಪ್ಲೆಡರ್ ಮನೋರಾಜ್ ರಾಜೀವ ಮತ್ತು ಕ್ಷೇಮ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಡಾ| ಮಹಾಬಲ ಶೆಟ್ಟಿ ಉಪನ್ಯಾಸ ನೀಡಿದರು. ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪ್ರೊ| ಯು.ಎಸ್. ಕೃಷ್ಣನಾಯಕ್ ಸ್ವಾಗತಿಸಿದರು. ಡಾ| ಶ್ರುತಿ ರಾವ್ ನಿರ್ವಹಿಸಿದರು. ಡಾ| ಊರ್ವಶಿ ಶೆಟ್ಟಿ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.