ಮನಗೆದ್ದ ಅನಂತ ನಾಟಕೋತ್ಸವ
Team Udayavani, Mar 24, 2017, 3:50 AM IST
ಆಧುನಿಕ ಪ್ರಯೋಗಶೀಲ ರಂಗಭೂಮಿಯ ಚಟುವಟಿಕೆಗಳು ಕೇವಲ ನಗರ ಕೇಂದ್ರಿತವಾಗಿವೆ. ಹಳ್ಳಿಗಳಲ್ಲಿ ಅದೇ ಹಳೇ ಪರದೆ ನಾಟಕಗಳೇ ಮುಂದುವರಿದಿವೆ ಎಂಬ ಭಾವನೆಯನ್ನು ಸುಳ್ಳು ಮಾಡಿದ್ದು ಪೆರ್ಡೂರು ಪ್ರೌಢಶಾಲಾ ಬಯಲು ರಂಗಮಂಟಪದಲ್ಲಿ ಇತ್ತೀಚೆಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಅನಂತ ಮಕ್ಕಳ ನಾಟಕೋತ್ಸವ ಮತ್ತು ಮಕ್ಕಳ ಚಲನಚಿತ್ರೋತ್ಸವ. ಊರಿನ ಆರಾಧ್ಯ ದೈವ ಅನಂತ ಪದ್ಮನಾಭನ ಹೆಸರಿನೊಂದಿಗೆ ಕಲೆಯ ಅನಂತತೆಯನ್ನು ಈ ಹೆಸರು ಸೂಚಿಸುವಂತಿತ್ತು.
ಇಂದಿನ ಪೀಳಿಗೆಯ ಮಕ್ಕಳಲ್ಲಿ ಕಲ್ಪನಾಶಕ್ತಿ, ಆಸ್ವಾದನಾಪ್ರಜ್ಞೆ ಬೆಳೆಸುವ ಗುರುತರವಾದ ಉದ್ದೇಶವನ್ನು ಇಟ್ಟುಕೊಂಡು ನಡೆದ ಈ ಸಾಂಸ್ಕೃತಿಕ ಸಂಭ್ರಮದ ಸಾರಥ್ಯ ವಹಿಸಿದವರು ಪೆರ್ಡೂರು ಪ್ರೌಢಶಾಲೆಯ ಶಿಕ್ಷಕ ಜಿ. ಪಿ. ಪ್ರಭಾಕರ ತುಮರಿ. ತನ್ನ ಅಭಿಮಾನಿ ಶಿಷ್ಯರು ಮತ್ತು ದಾನಿಗಳ ನೆರವಿನಿಂದ ಈ ರಂಗಹಬ್ಬವನ್ನು ಸಂಘಟಿಸಿದ ಅವರ ಸಾಹಸ ಮೆಚ್ಚುವಂಥದು. ಕಳೆದ ಐದು ದಶಕಗಳಿಂದ ಪಾಠದ ಜತೆಗೆ ಮಕ್ಕಳ ಮನೋಲೋಕವನ್ನು ಬುದ್ಧಿ -ಭಾವಲೋಕವನ್ನು ಹಿಗ್ಗಿಸುವಂತಹ ಚಟುವಟಿಕೆಗಳಿಗೆ ಮಹತ್ವ, ಆದ್ಯತೆ ನೀಡುತ್ತಾ ಬಂದಿರುವ ಪೆರ್ಡೂರು ಪ್ರೌಢಶಾಲೆ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಗ್ರಾಮೀಣ ಶಾಲೆ. ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸಂಸ್ಥೆಯ ಆಡಳಿತದ ಈ ಶಾಲೆಯಲ್ಲಿ ಕ್ರಿಯಾಶೀಲ ಪ್ರತಿಭಾವಂತ ಶಿಕ್ಷಕರು ಜಿ. ಪಿ. ಪ್ರಭಾಕರ ತುಮರಿ. ಲೇಖಕರು, ಸಾಹಿತ್ಯ ನಾಟಕ ವಿಮರ್ಶಕರಾಗಿರುವ ಅವರು ಎರಡು ದಶಕಗಳಿಂದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾದವರು.
ಪೆರ್ಡೂರು ಪರಿಸರದಲ್ಲಿ ಕಲಾತ್ಮಕ ಮತ್ತು ರುಚಿಶುದ್ಧಿಯ ರಂಗಭೂಮಿ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಪೂರಕ ಪರಿಸರ ನಿರ್ಮಿಸುವ ಕನಸನ್ನು ಹೆಗಲೇರಿಸಿಕೊಂಡು ಪ್ರಭಾಕರ ತುಮರಿ ಪಟ್ಟ ಪಾಡು ಶಿಷ್ಯವೃಂದಕ್ಕೆ ಚೆನ್ನಾಗಿ ತಿಳಿದಿದೆ. ಹಳೆ ವಿದ್ಯಾರ್ಥಿಗಳ ಜತೆಗೆ ತನ್ನ ಭಾವನಾತ್ಮಕ ನಂಟನ್ನು ಉಳಿಸಿಕೊಂಡದ್ದರಿಂದ ಶಿಷ್ಯವೃಂದವೂ ಅವರ ಈ ಸಾಹಸಕ್ಕೆ ಬೆನ್ನೆಲುಬಾಗಿ ನಿಂತಿತು.
ಮೊದಲು ಎರಡು ದಿನ ನಡೆದ ಮಕ್ಕಳ ಚಲನ ಚಿತ್ರೋತ್ಸವ ವನ್ನು ಪತ್ರಕರ್ತ ಶಶಿಧರ ಮಾಸ್ತಿಬೈಲು ಉದ್ಘಾಟಿಸಿದರು. ಮಕ್ಕಳ ಸಿನೆಮಾಗಳು ಮುಗ್ಧತೆ ಮತ್ತು ಕನಸಿನ ಮೂಲಕ ಬೆಳೆಯುತ್ತವೆ ಎಂದು ಹೇಳುತ್ತಾ ಕಲಾತ್ಮಕ ಸಿನೆಮಾ ನೋಡುವ ಬಗೆ ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ದೀಪಕ್ ಜೈನ್ ಮಕ್ಕಳಿಗೆ ಸಿನೆಮಾದ ಶೈಕ್ಷಣಿಕ ಮಹತ್ವ ವಿವರಿಸಿದರು.
ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ ರೆಡ್ ಬಲೂನ್, ಜಂಗಲ್‌ಬುಕ್ ಮೊದಲಾದ ಚಲನಚಿತ್ರಗಳನ್ನು ಪ್ರದರ್ಶಿಸ ಲಾಯಿತು. ಜನಪ್ರಿಯ ಚಿತ್ರಗಳ ಅಬ್ಬರ, ಹಿಂಸೆಗಳನ್ನು ನೋಡಿ ಕ್ಷೋಭೆಗೊಂಡ ಮಕ್ಕಳ ಮನಸ್ಸಿಗೆ ಕಲಾತ್ಮಕ ಚಿತ್ರಗಳ ಸರಳತೆ, ಮುಗ್ಧತೆ, ನೈಜತೆಗಳು ವಿಭಿನ್ನ ಅನುಭವ ನೀಡಿದವು. ಭಾಷೆಯ ತೊಡಕನ್ನು ಮೀರಿ ಮಕ್ಕಳು ಚಿತ್ರಗಳನ್ನು ಆಸ್ವಾದಿಸಿದರು. ಪ್ರತೀ ತಿಂಗಳು ಚಿತ್ರವೊಂದನ್ನು ತೋರಿಸಬೇಕೆಂಬ ಆಗ್ರಹವೂ ಮಕ್ಕಳ ಕಡೆಯಿಂದ ಕೇಳಿಬಂತು.
ಬಳಿಕ ಮೂರು ದಿನಗಳ ಕಾಲ ಪ್ರತಿದಿನ ಸಂಜೆ ಪ್ರೌಢಶಾಲಾ ಬಯಲು ರಂಗಮಂಟಪದಲ್ಲಿ ನಡೆದ ಅನಂತ ಮಕ್ಕಳ ನಾಟಕೋತ್ಸವಕ್ಕೆ ಸಾಹಿತಿ ವೈದೇಹಿ ಚಾಲನೆ ನೀಡಿದರು. ಅನೇಕ ರಂಗಕರ್ಮಿಗಳು, ಸಮಾಜದ ಗಣ್ಯರು, ರಾಜಕೀಯ ನೇತಾರರು ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಟಕ ಸಂಭ್ರಮಕ್ಕೆ ಕಳೆ ನೀಡಿದರು.
ಮೊದಲ ದಿನ ನಾಟಕ ರೋಹಿತ್ ಎಸ್. ಬೈಕಾಡಿ ನಿರ್ದೇಶನದ ಮದುವೆ ಹೆಣ್ಣು. ನಾಟಕಕಾರ ಎಚ್. ಎಸ್. ಶಿವಪ್ರಕಾಶ್ ರಚನೆಯನ್ನು ಪ್ರದರ್ಶಿಸಿದ ತಂಡ ಬಿ. ಡಿ. ಶೆಟ್ಟಿ ಬಿಬಿಎಂ ಕಾಲೇಜ್ ಹಂಗಾರಕಟ್ಟೆ ಬ್ರಹ್ಮಾವರ ಇಲ್ಲಿನ ತಂಡ. ನಾಟಕದ ವಸ್ತು ಸ್ವಲ್ಪ ಗಂಭೀರವಾಗಿದ್ದರೂ ನಾಟಕದ ಇತರ ಅಂಶಗಳು ಜನಮನ ಆಕರ್ಷಿಸಿದವು. ಮನುಷ್ಯನ ಜೀವನದಲ್ಲಿ ವಿಧಿಯಾಟದ ಕ್ರೌರ್ಯ, ವ್ಯಂಗ್ಯ, ಮನುಷ್ಯನ ಅಸಹಾಯಕತೆ, ಪ್ರೀತಿಯ ದೈವಿಕತೆ ಇತ್ಯಾದಿ ಸಂಗತಿಗಳು ನಾಟಕದಲ್ಲಿ ಬಿಂಬಿತವಾಗಿವೆ. ಒಳ್ಳೆಯ ವೇಷಭೂಷಣ, ರಂಗಸಜ್ಜಿಕೆ, ಬೆಳಕು, ಸಂಗೀತ ನಾಟಕದ ಆಕರ್ಷಣೆಯಾಗಿದ್ದವು. ಕಾಲೇಜು ಮಕ್ಕಳಾದರೂ ಅಭಿನಯವು ಚೆನ್ನಾಗಿ ಮೂಡಿಬಂತು.
ಎರಡನೇ ದಿನ ಎರಡು ಕಿರು ನಾಟಕಗಳು ಪ್ರದರ್ಶನ ಗೊಂಡವು- ಹುತಾತ್ಮ ಭಗತ್ ಸಿಂಗ್ ಮತ್ತು ಧರಣಿ ಮಂಡಲ ಮಧ್ಯದೊಳಗೆ. ಈ ಎರಡೂ ನಾಟಕಗಳನ್ನು ನಿರ್ದೇಶಿಸಿ ದವರು ಸಂತೋಷ ನಾಯಕ್ ಪಟ್ಲ. ಪ್ರದರ್ಶಿಸಿದ ತಂಡ ಎಸ್. ವಿ. ಎಸ್. ಕಟಪಾಡಿ ಇಲ್ಲಿನ ಬಾಲರಂಗ ಮಕ್ಕಳ ನಾಟಕಶಾಲೆ. ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ಸಾಹಸ ತೋರಿದ ಭಗತ್ ಸಿಂಗ್ ಜೀವನ ಆಧಾರಿತ ನಾಟಕ ಇದು. ಭಗತ್ ಸಿಂಗ್‌ನ ತತ್ವಬದ್ಧತೆ, ಬಡವರ ಕುರಿತ ಪ್ರೀತಿ ಇದರಲ್ಲಿ ಮೂಡಿಬಂತು. ಉತ್ತಮ ರಂಗಪರಿಕರ, ರಂಗಸಜ್ಜಿಕೆ, ವೇಷಭೂಷಣ ಮಕ್ಕಳನ್ನು ರಂಜಿಸಿತು. ಇನ್ನೊಂದು ನಾಟಕ ಧರಣಿಮಂಡಲ ಮಧ್ಯದೊಳಗೆ. ಎಚ್. ಎಸ್. ವೆಂಕಟೇಶಮೂರ್ತಿ ರಚನೆಯನ್ನು ಅದೇ ಮಕ್ಕಳು ಅತ್ಯುತ್ತಮವಾಗಿ ಅಭಿನಯಿಸಿದರು. ಇದರಲ್ಲಿ ಮಕ್ಕಳ ಒಟ್ಟು ಅಭಿನಯ ಎಲ್ಲರ ಮನಸೂರೆಗೊಂಡಿತು. ಗೋವಿನ ಕತೆಯನ್ನು ಹೊಸ ಅರ್ಥದಲ್ಲಿ ಇಲ್ಲಿ ಹೇಳಿದ್ದಾರೆ. ವ್ಯಕ್ತಿಯೊಬ್ಬನಲ್ಲೇ ಇರುವ ಹಸು ಮತ್ತು ಹುಲಿ ಮುಖವಾಡಗಳ ಬಯಲು ಮಾಡುವ ತಂತ್ರ ಇದರಲ್ಲಿದೆ. ಇಂದಿನ ರಾಜಕೀಯ ಭ್ರಷ್ಟತೆ, ಮೋಸ ವಂಚನೆಗಳನ್ನು ಈ ನಾಟಕದಲ್ಲಿ ತುಂಬಾ ಸೂಕ್ಷ್ಮವಾಗಿ ಮನ ದಟ್ಟಾಗುವಂತೆ ಬಿಂಬಿಸಲಾಗಿದೆ. ಮಕ್ಕಳ ಗುಂಪಿನ ಅಭಿನಯ ವಂತೂ ನಿರ್ದೇಶಕರ ಜಾಣ್ಮೆಗೆ ಸಾಕ್ಷಿಯಾಗಿತ್ತು. ಸಂಗೀತ, ಬೆಳಕು, ರಂಗಪರಿಕರ, ರಂಗಸಜ್ಜಿಕೆ ಎಲ್ಲವೂ ಅತ್ಯಾಕರ್ಷಕವಾಗಿದ್ದು ಮಕ್ಕಳ ಮನೋಲೋಕವನ್ನು ಬೇಗ ಮುಟ್ಟುವಂತಿತ್ತು.
ಮೂರನೆಯ ದಿನ ಸುಮನಸಾ ಕೊಡವೂರು ತಂಡದಿಂದ ಮುದ್ರಾರಾಕ್ಷಸ ಪ್ರದರ್ಶನಗೊಂಡಿತು. ಮೂಲ ಸಂಸ್ಕೃತ ವಿಶಾಖ ದತ್ತನ ನಾಟಕವನ್ನು ನಿರ್ದೇಶಕ ವಿದ್ದು ಉಚ್ಚಿಲ ನಿರ್ದೇಶನ ಮಾಡಿದ್ದರು. ಚಾಣಕ್ಯನ ಕತೆ ಪ್ರಸಿದ್ಧವಾಗಿದ್ದರೂ ಇದರಲ್ಲಿ ಸ್ವಲ್ಪ ಭಿನ್ನವಾಗಿ ಕತೆ ಇದೆ. ನವನಂದರ ಮಂತ್ರಿಯಾಗಿದ್ದ ಅಮಾತ್ಯ ರಾಕ್ಷಸನನ್ನು ತನ್ನ ಪಕ್ಷಕ್ಕೆ ಕರೆತರಲು ಚಾಣಕ್ಯನ ತಂತ್ರಗಳು ಈ ನಾಟಕದ ಮುಖ್ಯ ಆಶಯ. ನಂದರ ನಾಶದ ಬಳಿಕ ಚಾಣಕ್ಯ ಇದಕ್ಕೆ ಅನೇಕ ತಂತ್ರಗಳನ್ನು ಹೆಣೆಯುತ್ತಾನೆ. ಈ ತಂತ್ರಗಳೇ ಇಲ್ಲಿ ಒಂದೊಂದು ಸನ್ನಿವೇಶವಾಗಿ ಇಡೀ ನಾಟಕವನ್ನು ವಿಶಿಷ್ಟವಾಗಿ ನಡೆಸುತ್ತದೆ. ಚಾಣಕ್ಯ ಪಾತ್ರಧಾರಿ ಎಂ. ಎಸ್. ಭಟ್ ಅಭಿನಯ ಜನರನ್ನು ಆಕರ್ಷಿಸಿತು. ಶಸ್ತ್ರವೆತ್ತದೆ ಅಹಿಂಸಾತ್ಮಕವಾಗಿ ಅಮಾತ್ಯ ರಾಕ್ಷಸನ ಮನ ವೊಲಿಸಿ, ಚಂದ್ರಗುಪ್ತನಿಗೆ ಮಂತ್ರಿಯಾಗಿಸಿದ ಚಾಣಕ್ಯ ತಂತ್ರ ಇಂದಿನ ರಾಜಕೀಯಕ್ಕೊಂದು ಮಾದರಿ ಎನಿಸಿತು.
ನಾಟಕೋತ್ಸವದ ಉದ್ಘಾಟನೆಯ ಸಂದರ್ಭದಲ್ಲಿ ಲೇಖಕಿ ವೈದೇಹಿ ಹೇಳಿದ ಹಾರೈಕೆಯ ಮಾತು, “ಊರಿನಲ್ಲೊಂದು ಕನಸುಗಾರ ಸಂಘಟಕನಿದ್ದರೆ ಇಡೀ ಊರಿನ ಸಾಂಸ್ಕೃತಿಕ ಲೋಕ ಜೀವ ಪಡೆಯುತ್ತದೆ.’ ಎಲ್ಲ ಊರುಗಳಲ್ಲಿ ಇಂತಹ ಕನಸುಗಾರರು ಉದಯಿಸಲಿ, ಅವರ ಕನಸುಗಳು ನನಸಾಗಲಿ.
ಉಷಾರಾಣಿ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.