ಯಾಂತ್ರಿಕ ಮೀನುಗಾರಿಕೆ ಅವಧಿ: ಈ ಬಾರಿ ಮೀನಿನ ಬರದಲ್ಲೇ ಮುಕ್ತಾಯ ?
Team Udayavani, Mar 23, 2017, 4:35 PM IST
ಮಲ್ಪೆ: ರಾಜ್ಯದ ಪ್ರಮುಖ ಮೀನುಗಾರಿಕಾ ಬಂದರು ಮಲ್ಪೆಯಲ್ಲಿ ತೀವ್ರ ಮೀನಿನ ಕ್ಷಾಮ ಉಂಟಾಗಿದ್ದು ಮೀನುಗಾರರು ತತ್ತರಿಸಿದ್ದಾರೆ. ಒಂದೆಡೆ ಡಿಸೇಲ್ ದರ ಹೆಚ್ಚಳ ಮತ್ತೂಂದಡೆ ಮೀನಿಗೆ ಬರಗಾಲ. ಇದರಿಂದಾಗಿ ಮೀನುಗಾರಿಕಾ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಈ ಬಾರಿ ಯಾಂತ್ರಿಕ ಮೀನುಗಾರಿಕಾ ಅವಧಿ ಪೂರ್ತಿ ಮೀನಿನ ಕ್ಷಾಮದಿಂದಲೇ ಮುಗಿದು ಹೋಗುವಂತಾಗಿದೆ. ಯಾಂತ್ರಿಕ ಮೀನುಗಾರಿಕಾ ಋತು ಆರಂಭಗೊಂಡ ದಿನದಿಂದ ಹಿಡಿದು ಇದುವರೆಗೂ ಮೀನುಗಾರರಿಗೆ ಸರಿಯಾದ ಪ್ರಮಾಣದ ಮೀನು ಸಿಗದೇ ಅಕ್ಷರಶಃ ಬರಗಾಲದ ಅವಧಿಯನ್ನು ಕಳೆಯುವಂತಾಗಿದೆ. ಋತು ಆರಂಭದ ಮೂರು ಮತ್ತು ಅಂತ್ಯದ ಮೂರ್‍ನಾಲ್ಕು ತಿಂಗಳು ಭರ್ಜರಿ ಕಮಾಯಿ ಮಾಡಿಕೊಳ್ಳುತ್ತಿದ್ದ ಯಾಂತ್ರಿಕ ಮೀನುಗಾರರಿಗೆ ಬೋಟನ್ನು ಮೀನು ಗಾರಿಕೆಗೆ ಕಳುಹಿಸಲು ಸಾಧ್ಯವಾಗದೆ ಈ ಬಾರಿ ದಡದಲ್ಲೇ ಕಾಲ ಕಳೆದದ್ದು ಹೆಚ್ಚು.
ವಿವಿಧ ಬಗೆಯ ಮೀನುಗಳನ್ನು ಹಿಡಿದು ಉತ್ತಮ ಆದಾಯ ಪಡೆಯ ಬೇಕಾಗಿದ್ದ ಈ ಸಮಯದಲ್ಲಿ ಸಮುದ್ರದಲ್ಲಿ ಮೀನು ಸಿಗದೆ ಕ್ಷಾಮ ಉಂಟಾಗಿರುವುದು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನೇನು ಯಾಂತ್ರಿಕ ಮೀನುಗಾರಿಕೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಮಳೆಗಾಲದಲ್ಲಿ ಯಾಂತ್ರಿಕ ದೋಣಿಗಳನ್ನು ಸಮುದ್ರಕ್ಕೆ ಇಳಿಸು ವಂತಿಲ್ಲ. ಉಳಿದ ಎರಡು ತಿಂಗಳುಗಳ ಕಾಲ ಸಾಕಷ್ಟು ಮೀನುಗಾರಿಕೆ ನಡೆಸಿ ಲಾಭ ಪಡೆದು ಕೊಳ್ಳಬೇಕಾದ ಮೀನುಗಾರರು ಮೀನಿಲ್ಲದೆ ಕಂಗಾಲಾಗಿದ್ದಾರೆ.
ಪ್ರಸ್ತುತ ಮಲ್ಪೆ ಬಂದರಿನಲ್ಲಿ ಸುಮಾರು 1200 ಆಳಸಮುದ್ರ (ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ನಡೆಸುವ ಗಂಗೊಳ್ಳಿ, ಹೊನ್ನಾವರ, ಕಾರಾವಾರ, ಭಟ್ಕಳ ಬಂದರಿನ ಕೆಲವು ಬೋಟುಗಳು ಸೇರಿ) ಬೋಟ್‌ಗಳಿದ್ದು ಶೇ. 30 ರಷ್ಟು ಮೀನುಗಾರಿಕೆ ನಡೆಸುತ್ತಿದ್ದರೆ ಉಳಿದ ಶೇ. 70 ಆಳಸಮುದ್ರ ಬೋಟ್‌ಗಳು ಈಗಾಗಲೇ ಬಂದರಿನಲ್ಲಿ ಲಂಗರು ಹಾಕಿವೆ.
ಡಿಸೇಲ್ ದರ ಹೆಚ್ಚಳ ಮೀನುಗಾರಿಕೆಗೆ ಹೊಡೆತ
ಸಮುದ್ರದಲ್ಲಿ ಮೀನಿನ ಕ್ಷಾಮದ ಜತೆಗೆ ಡೀಸೆಲ್ ದರ ಹೆಚ್ಚಳವಾಗಿರುವುದು ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರಲ್‌ಗೆ ಕಡಿಮೆಯಾಗಿದ್ದರೂ ಕೇಂದ್ರ ಸರಕಾರ ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡುವ ಅವಕಾಶ ಇದೆ. ಆದರೆ ಸರಕಾರ ದರ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿದ್ದರೆ ಮೀನುಗಾರಿಕೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಹೊಡೆತ ಬೀಳುವ ಸಾಧ್ಯತೆ ಇಲ್ಲವಾಗಿತ್ತು ಎಂಬ ಅಭಿಪ್ರಾಯ ಮೀನುಗಾರರದ್ದು ಕಳೆದ ಸಾಲಿನಲ್ಲಿ ಲೀಟರಿಗೆ 54 ರೂ. ಇದ್ದ ಡೀಸೆಲ್ ದರ ಈ ಬಾರಿ 63ಕ್ಕೆ ಏರಿಕೆಯಾಗಿದೆ. 9 ರೂ. ಹೆಚ್ಚಳದಿಂದಾಗಿ ಪ್ರತಿ ಟ್ರಿಪ್‌ಗೆ ರೂ. 54 ಸಾವಿರ ಈ ವರ್ಷ ಹೆಚ್ಚುವರಿ ಭರಿಸುವಂತಾಗಿದೆ. ಆಳ ಸಮುದ್ರ ಮೀನುಗಾರಿಕೆಗೆ 10 ದಿನಕ್ಕೆ 6,000 ಲೀ ಡಿಸೇಲ್ ತುಂಬಬೇಕು. ಕನಿಷ್ಠ 4 ಲಕ್ಷ ಡೀಸೆಲ್‌ಗೆ ತೆಗೆದಿರಿಸಬೇಕು ಇನ್ನು ದುಡಿಯುವವರ ಪಾಲು, ಬಲೆ, ಮಂಜುಗಡ್ಡೆ ಹಾಗೂ ಇನ್ನಿತರ ಖರ್ಚು ಬೇರೆ. ಒಟ್ಟು 5.5 ಲಕ್ಷ ರೂಪಾಯಿ ಮೀನು ಹಿಡಿದರೂ ಬೋಟ್ ಮಾಲಕರಿಗೆ ಇದರಲ್ಲಿ ಲಾಭ ಇರುವುದಿಲ್ಲ. ಪ್ರಸ್ತುತ ದಿನಗಳಲ್ಲಿ ಮೀನುಗಾರಿಕೆಗೆ ತೆರಳಿದ ಬೋಟ್‌ಗಳಿಗೆ ಗರಿಷ್ಠ 3ರಿಂದ 4 ಲಕ್ಷ ರೂ. ಮೌಲ್ಯದ ಮೀನು ದೊರೆಯುತ್ತದೆ.
ಹೆಚ್ಚುವರಿ ಒಂದೂವರೆ ಲಕ್ಷ ರೂ. ನಷ್ಟವನ್ನು ಮುಂದಿನ ಟ್ರಿಪ್‌ನಲ್ಲಾದರೂ ಭರಿಸಬಹುದೆಂಬ ನಿರೀಕ್ಷೆಯಲ್ಲಿ ಮೀನು ವ್ಯಾಪಾರಸ್ಥರಿಂದ ಮುಂಗಡ ಹಣ ಪಡೆದು ಬೋಟನ್ನು ಮೀನುಗಾರಿಕೆಗೆ ಬಳಸಿದರೆ ತೀರಾ ನಷ್ಟವನ್ನು ಹೊಂದಿದ ಹೆಚ್ಚಿನ ಆಳ ಸಮುದ್ರ ಬೋಟನ್ನು ಲಂಗರು ಹಾಕಲಾಗಿದೆ.
ಉತ್ತಮ ಜಾತಿಯ ಮೀನು ಕಡಿಮೆ
ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದುವರೆಗೆ ಸಿಕ್ಕಿರುವ ಎಲ್ಲ ತರದ ಮೀನಿನ ಪ್ರಮಾಣ ಭಾರೀ ಕುಸಿತ ಕಂಡಿದೆ. ಹೆಚ್ಚು ಲಾಭ ತಂದು ಕೊಡುತ್ತಿದ್ದ ಉತ್ತಮ ಜಾತಿಯ ಮೀನುಗಳಾದ ಪಾಪ್ಲೆಟ್, ಅಂಜಲ್, ಕೋಲು ಬೊಂಡಸ, ಅಡೆಮೀನು, ಬಂಗುಡೆ, ರಾಣಿಮೀನಿನ ಪ್ರಮಾಣ ತೀರ ಕುಸಿದಿದೆ. ಒಂದು ಬೋಟಿನಲ್ಲಿ 2-3 ಟನ್‌ಗಳಷ್ಟು ಸಿಗುತ್ತಿದ್ದ ಬಂಗುಡೆ, ರಾಣಿಮೀನುಗಳ ಪ್ರಮಾಣ 400-500 ಕೆ ಜಿ. ಗೆ ಇಳಿದರೆ, ಉತ್ತಮ ದರ ಕೋಲು ಬೊಂಡಾಸ (ಸ್ಕಾಡ್) ಒಂದು ಟನ್‌ನಿಂದ 200-300 ಕೆಜಿಗೆ ಕುಸಿದಿದೆ.
ಮೀನಿನ ಬರಕ್ಕೆ ಕಾರಣ ?
ಕೆಲವು ಮೀನುಗಾರರ ಪ್ರಕಾರ ಆರಂಭದಲ್ಲಿ ಸರಿಯಾದ ತೂಫಾನ್ ಆಗದಿರುವುದೇ ಕ್ಷಾಮ ಉಂಟಾಗಲು ಕಾರಣ ಎಂದು ಹೇಳಲಾಗುತ್ತದೆ. ಇನ್ನೊಂದು ಕಡೆ ಸಮುದ್ರದಲ್ಲಿ ಬೋಟಿನ ಸಂಖ್ಯೆ ಹೆಚ್ಚಾಗಿದ್ದರಿಂದ ಮೀನಿನ ಸಂತಾನೋತ್ಪತ್ತಿ ಆಗುತ್ತಿಲ್ಲ. ಮೀನುಗಳ ಸಂತತಿ ನಶಿಸಿ ಹೋಗುತ್ತಿದೆ ಎಂಬ ಕಾರಣವೂ ಇದೆ. ಮೀನುಗಾರಿಕೆಯಲ್ಲಿ ಹೊಸ ಹೊಸ ಪರಿಕ್ರಮ ಅನ್ವೇಷಣೆಯ ಫಲದಿಂದ ಹೀಗಾಗಿರಲೂ ಬಹುದು ಎನ್ನುವುದೂ ಮೀನುಗಾರರ ಅಭಿಪ್ರಾಯ.
ಪ್ರತಿ ಟ್ರಿಪ್ ನಷ್ಟವಾಗುತ್ತಿರುವುದರಿಂದ ಬೋಟ್‌ಗಳನ್ನು ಕಡಲಿಗಿಳಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಬ್ಯಾಂಕ್ ಸಾಲ, ವೆಚ್ಚಕ್ಕೆ ತಕ್ಕಷ್ಟು ಲಾಭ ಸಿಗುತ್ತಿಲ್ಲ. ಬೋಟಿನ ಡೀಸೆಲ್‌ಗಳಿಗೂ ನಮ್ಮ ಕೈಯಿಂದಲೇ ಖರ್ಚು ಆಗುತ್ತದೆ. ಹಾಗಾಗಿ ಲಂಗರು ಹಾಕಿದೇªವೆ. ಬ್ಯಾಂಕಿನ ಸಾಲದ ಕಂತು ಬಡ್ಡಿ ಏರುತ್ತಿದೆ.
– ಕೃಷ್ಣ ಪ್ಪ ಕರ್ಕೇರ , ಬೋಟ್ ಮಾಲಕರು, ಮಲ್ಪೆ
ಈ ಬಾರಿ ಕರಾವಳಿ ಎಲ್ಲ ಮೀನುಗಾರರ ಅದೃಷ್ಟ ಚೆನ್ನಾಗಿಲ್ಲ. ಈ ಬಾರಿ ಮೀನುಗಾರಿಕಾ ಋತು ಆರಂಭದಿಂದಲೂ ಮತ್ಸಕ್ಷಾಮದ ಹೊಡೆತವಾಗಿದೆ. ಮತ್ತೂಂದೆಡೆ ಡೀಸೆಲ್ ದರ ಏರಿಕೆ. ರಾಜ್ಯದ ಹಾಗೂ ಹೊರರಾಜ್ಯದ ಎಲ್ಲ ಮೀನುಗಾರರೆಲ್ಲರು ಒಟ್ಟಾಗಿ ಸಮುದ್ರ ಸಂಪತ್ತನ್ನು ಉಳಿಸಿ ಬೆಳೆಸುವ ಚಿಂತನೆ ಮಾಡಬೇಕಾಗಿದೆ. ದೇಶದ ಪಶ್ಚಿಮ ಕರಾವಳಿಯಲ್ಲಿ ಏಕರೂಪದ ಕಾನೂನು ಜಾರಿಯಾಗಬೇಕು.
– ಹಿರಿಯಣ್ಣ ಟಿ. ಕಿದಿಯೂರು, ಅಧ್ಯಕ್ಷರು ಮಲ್ಪೆ ಮೀನುಗಾರರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.