ನಗರಗಳ ಬಾಯಾರಿಕೆಗೆ ಎಷ್ಟು ನೀರು ಹರಿದರೂ ಸಾಕಾಗದು
Team Udayavani, Mar 27, 2017, 4:26 PM IST
ಒಮ್ಮೆ ಬಳಸಿದ ನೀರನ್ನು ಪುನರ್ ಬಳಕೆ ಮಾಡುವತ್ತ ಗಮನಹರಿಸಬೇಕಾದ ಹೊತ್ತಿದು. ಯಾಕೆಂದರೆ, ಅದು ಕೂಡ ಎಲ್ಲ ನಗರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗದ ದಿನಗಳು ದೂರವಿಲ್ಲ.
ಮೊನ್ನೆ ತಾನೇ ಇಡೀ ವಿಶ್ವವೇ ನೀರಿನ ದಿನವನ್ನು ಆಚರಿಸಿತು. ಸಾಮಾನ್ಯವಾಗಿ ದಿನಗಳ ಆಚರಣೆ ಹೆಚ್ಚಾಗಿ ಬಳಕೆಯಲ್ಲಿರುವುದು ಸಂಬಂಧಪಟ್ಟ ಸಂಗತಿ/ವ್ಯಕ್ತಿ ಹುಟ್ಟಿದ್ದಕ್ಕೆ. ಅತ್ಯಂತ ಅಪರೂಪಕ್ಕೆ ಅವರ ಸಾಧನೆಗೋ ಹುತಾತ್ಮರಾಗಿದ್ದಕ್ಕೋ ನೆನಪಿಸಿಕೊಳ್ಳುವುದಿದೆ. ಇಂಥ ಸಂಗತಿಗಳೂ ತೀರಾ ಕಡಿಮೆ. ನೆನಪಿನಲ್ಲಿಡಬೇಕಾದ ಮತ್ತೂಂದು ಸಂಗತಿಯೆಂದರೆ ಅಳಿವಿನಂಚಿನ ಅಪಾಯದಲ್ಲಿರುವ ಕೆಲವು ವಸ್ತುಗಳು/ವಿಷಯಗಳ ಬಗ್ಗೆಯೂ ಜಾಗೃತಿ ಮೂಡಿಸುವ ಸಲುವಾಗಿ ದಿನಗಳನ್ನು ಆಚರಿಸುವ ಪದ್ಧತಿ ಇದೆ. ಬಹುಶಃ ವಿಶ್ವ ಜಲ ದಿನವನ್ನು ಇದೇ ದೃಷ್ಟಿಯಿಂದ ಆಚರಿಸಿರುವುದು ಮತ್ತು ಆಚರಿಸುತ್ತಿರುವುದು.
ವಿಶ್ವಸಂಸ್ಥೆ ಪ್ರತಿ ವರ್ಷ ನೀರಿನ ಸಂರಕ್ಷಣೆ ಕುರಿತಾದಂತೆ, ನೀರಿನ ಕುರಿತಾಗಿ ಜಾಗೃತಿ ಮೂಡಿಸಲು ಥೀಮ್ ಅನ್ನು ಪ್ರಕಟಿಸುತ್ತಿದೆ. ಅದರಂತೆ ಈ ವರ್ಷದ ಥೀಮ್ ತ್ಯಾಜ್ಯವಾಗುವ ನೀರಿನ ಸದ್ಬಳಕೆಯ ಕುರಿತಾಗಿತ್ತು. ಯಾಕೆ ನೀರನ್ನು ವ್ಯರ್ಥ ಮಾಡುತ್ತೀರಿ ಎನ್ನುವ ಸಂದೇಶದಲ್ಲಿ ನಮ್ಮೊಳಗೆ ಬಳಕೆಯ ಶಿಸ್ತನ್ನು ತರುವ ಉದ್ದೇಶವೂ ಇದರ ಹಿಂದೆ ಇದೆ. ಹಾಗೆಯೇ ಬಳಸಿದ ನೀರನ್ನು ಮತ್ತೆ ಮರುಬಳಕೆಗೆ ಸಾಧ್ಯವಿರುವಾಗ ಯಾಕೆ ವ್ಯರ್ಥ ಮಾಡುತ್ತೀರಿ ಎಂಬ ಅರ್ಥವೂ ಇದರೊಳಗಿದೆ.
ಅದು ನಿಜ
ವಿಶ್ವಸಂಸ್ಥೆಯ ಈ ಉಲ್ಲೇಖವನ್ನು ಇಟ್ಟುಕೊಂಡು ಒಂದಿಷ್ಟು ಅಧ್ಯಯನ ಮಾಡಿದಾಗ ಸಿಕ್ಕ ಮಾಹಿತಿ ಸಾಕಷ್ಟು ಚಿಂತನೆಗೆ ಹಚ್ಚಿದ್ದು ನಿಜ. ಅಷ್ಟೇ ಅಲ್ಲ; ನನ್ನೊಳಗೇ ಒಂದು ಬಗೆಯ ಎಚ್ಚರವನ್ನು ಮೂಡಿಸಿದ್ದು ಸುಳ್ಳಲ್ಲ. ಸಂಸ್ಥೆಯೊಂದು ನಡೆಸಿದ ಅಧ್ಯಯನ ಪ್ರಕಾರ, ದೇಶದಲ್ಲಿ ಪ್ರತಿ ವ್ಯಕ್ತಿಯೂ ಉಪಯೋಗಿಸುತ್ತಿರುವ ತಲಾ 135 ಲೀಟರ್ ಹೇಗೆ ಬಳಕೆಯಾಗುತ್ತಿದೆ ಎಂದು ತಿಳಿದರೆ ನಿಮಗೂ ಅಚ್ಚರಿಯಾದೀತು. ಕುಡಿಯಲು ಮತ್ತು ಅಡುಗೆ ಮಾಡುವುದಕ್ಕೆ ಬಳಸಲಾಗುವ ಸುಮಾರು ಹತ್ತು ಲೀಟರ್ ನೀರು ಅಂತರಂಗಕ್ಕೆ ಎಂಬುದನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಬಹಿರಂಗಕ್ಕೆ. ಸ್ನಾನ, ಬಟ್ಟೆ ಇತ್ಯಾದಿಗೆ ಶೇ.90ರಷ್ಟು ನೀರನ್ನು ಬಳಸುತ್ತೇವೆ. ಅದೂ ಶುದ್ಧ ನೀರನ್ನು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವೆಲ್ಲವನ್ನೂ ಮರುಬಳಕೆ ವಿಧಾನಗಳು ಸಾಧ್ಯವಿಲ್ಲವೇ ಎಂಬುದು ಚರ್ಚೆಗೀಡಾಗಿರುವಂಥದ್ದು.
ಹಳ್ಳಿಗಳಲ್ಲಿ ಇದರ ಪೂರ್ತಿಯಲ್ಲದಿದ್ದರೂ ಬಹುಪಾಲು ಬಳಕೆಗೆ ಮಾರ್ಗಗಳಿವೆ. ಆದರೆ ನಗರಗಳಲ್ಲಿ ಇವೆಯೇ, ಎಲ್ಲಿವೆ ಎಂಬುದು ಉತ್ತರ ಹುಡುಕಬೇಕಾದ ಪ್ರಶ್ನೆ. ಹಳ್ಳಿಗಳ ಸಂರಚನೆ ಹೇಗಿರುತ್ತದೆಂದರೆ, ಬಚ್ಚಲಿನ ನೀರು ಹಿತ್ತಲಿನ ತೆಂಗಿನ ಗಿಡಕ್ಕೋ ಬಾಳೆಯ ಬುಡಕ್ಕೋ ಹೋಗಿ ಸೇರುತ್ತದೆ. ಅಡುಗೆ ಮನೆಯ ಚಟುವಟಿಕೆಗಳು ಒಂದೋ ಎರಡೋ ತೆಂಗಿನ ಮರಕ್ಕೆ ವರ್ಷಪೂರ್ತಿ ನೀರು ಪೂರೈಸುತ್ತವೆ, ಶೌಚಾಲಯಕ್ಕೆ ಬಳಸುವ ನೀರು ಮಾತ್ರ ಬೇರೆ ವಿಧಿಯಿಲ್ಲದೆ ಗುಂಡಿಯನ್ನು ಸೇರುತ್ತದೆ. ಉಳಿದಂತೆ ಬಟ್ಟೆ ಒಗೆದ ನೀರು ಕೂಡ ಗಿಡದ ಬುಡಕ್ಕೆ ಬೀಳುತ್ತದೆ. ಇಂಥದೊಂದು ವ್ಯವಸ್ಥೆಯನ್ನು ನಗರದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವೇ? ಎಂದಿಗೂ ಇಲ್ಲ. ಇಡೀ ಮನೆಯ ಎಲ್ಲ ನೀರೂ ಒಂದು ಪೈಪ್‌ನಲ್ಲಿ ಹೋಗಿ ಒಳಚರಂಡಿ ಮೂಲಕ ಇನ್ನೆಲ್ಲೋ ಸೇರುವುದು ಎಲ್ಲರಿಗೂ ಗೊತ್ತಿದ್ದದ್ದೇ. ಅಂಥ ಬೃಹತ್ ಪ್ರಮಾಣದ ನೀರನ್ನು ಹೇಗೆ ಮರುಬಳಕೆ ಮಾಡಲು ಪ್ರಯತ್ನಿಸಬಹುದು ಎಂಬುದಕ್ಕೆ ನಗರವಾಸಿಗಳಾದ ನಾವು ಯೋಚಿಸಬೇಕಾಗಿದೆ.
ನಗರಗಳ ಆರೋಗ್ಯ ಸರಿಯಿಲ್ಲ
ಯಾಕೆಂದರೆ ನಗರಗಳ ಆರೋಗ್ಯ ಸರಿ ಇಲ್ಲ. ಮೂಲ ಸೌಕರ್ಯಗಳ ವಿಷಯವನ್ನು ಎತ್ತಿದರಂತೂ ಎಲ್ಲೆಡೆಯೂ ಕೊರತೆಯದ್ದೇ ಮೇಲುಗೈ. ವಿಶ್ವಸಂಸ್ಥೆಯ ಲೆಕ್ಕಾಚಾರದಂತೆ 2009ರಿಂದ ವಿಶ್ವದ ಜನಸಂಖ್ಯೆ 2050ರ ಸುಮಾರಿಗೆ ಸುಮಾರು 2.3 ಬಿಲಿಯನ್ ಹೆಚ್ಚಾಗಬಹುದು. ಅಂದರೆ ಹೆಚ್ಚಳವಾಗುವ ಪ್ರಮಾಣ ಸುಮಾರು 9.1 ಬಿಲಿಯನ್. ವಿಚಿತ್ರವೆಂದರೆ ಈ ಪೈಕಿ ನಗರಕ್ಕೆ ವಲಸೆ ಹೋಗುವವರ ಸಂಖ್ಯೆಯ ಗತಿ ಇನ್ನೂ ಜೋರಾಗಿದೆ. ಇದೇ ಅವಧಿಯಲ್ಲಿ ಸುಮಾರು 2.9 ಬಿಲಿಯನ್ ಜನ ನಗರಕ್ಕೆ ವಲಸೆ ಹೋಗಿರಬಹುದು. ಅಂದರೆ ಈ ಸಂಖ್ಯೆ 3.4ರಿಂದ 6. 3 ಬಿಲಿಯನ್‌ಗೆ ಏರಿಕೆಯಾಗುತ್ತದೆ. ಇನ್ನೂ ವಿಚಿತ್ರವಾದುದೆಂದರೆ, 2030ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನಗರಗಳಲ್ಲಿ 1 ಬಿಲಿಯನ್ ಜನರಿದ್ದರೆ, ಅಭಿವೃದ್ಧಿಶೀಲ ರಾಷ್ಟ್ರಗಳ ನಗರಗಳಲ್ಲಿ 3.9 ಬಿಲಿಯನ್ ಜನರಿರುತ್ತಾರಂತೆ. ಅಂದರೆ ಅಲ್ಲಿಗೆ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿನ ನಗರಗಳ ಬೆಳವಣಿಗೆಯ ಗತಿಯನ್ನು ಊಹಿಸಿಕೊಳ್ಳಿ.
ಈ ಎಲ್ಲ ಒತ್ತಡ ನೇರವಾಗಿ ಮತ್ತು ಹೆಚ್ಚು ಪರಿಣಾಮ ಬೀರುವುದು ವಸತಿ ಇತ್ಯಾದಿ ಮೂಲ ಸೌಕರ್ಯಗಳ ಮೇಲಲ್ಲ; ಬದಲಾಗಿ ನೀರಿನ ಮೇಲೆ. ಎಲ್ಲರಿಗೂ ಶುದ್ಧ ನೀರು ಪೂರೈಸಬೇಕೆಂಬ ಆಡಳಿತ ವ್ಯವಸ್ಥೆಯ ಲೆಕ್ಕಾಚಾರವನ್ನೂ ಇದು ಬುಡಮೇಲು ಮಾಡುತ್ತದೆ. ಹಾಗೆಯೇ ಒಳ್ಳೆಯ ಸೌಲಭ್ಯಗಳನ್ನು ಆಶಿಸಿ ನಗರಗಳಿಗೆ ವಲಸೆ ಬರುವ ಗ್ರಾಮೀಣ ಭಾಗದ ಕನಸನ್ನು ನುಚ್ಚುನೂರುಗೊಳಿಸುತ್ತದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯ ಸೂಕ್ತ ರೀತಿಯಲ್ಲಿ ಸಿಗದಿದ್ದರೆ ನಗರದ ಬದುಕನ್ನು ಊಹಿಸಿಕೊಳ್ಳಲೂ ಅಸಾಧ್ಯ ಎಂಬುದು ಈಗಾಗಲೇ ಸಾಬೀತಾಗಿರುವ ಸಂಗತಿ.
ಯಾಕೆ ಗೊತ್ತೇ?
ಜಾಗತಿಕ ಮಟ್ಟದಲ್ಲೇ ಲೆಕ್ಕ ಹಾಕಿ. ಶೇ.87ರಷ್ಟು ಮಂದಿಗೆ ಸುಧಾರಿತ ಮೂಲಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ಪ್ರಮಾಣ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೇ. 84ರಷ್ಟಿದೆ. ನಗರಗಳಲ್ಲಿ ಶೇ. 96ರಷ್ಟು ಮಂದಿಗೆ ಲಭ್ಯವಾಗುತ್ತಿರಬಹುದು. ಆದರೆ ಗುಣಮಟ್ಟ ಮತ್ತು ಲಭ್ಯತೆಯ ಬಗ್ಗೆ ಹಲವು ಪ್ರಶ್ನೆಗಳು ಹಾಗೇ ಉತ್ತರಿಸದೇ ಉಳಿದಿವೆ. ಒಂದೆಡೆ ಹೆಚ್ಚುತ್ತಿರುವ ವಲಸೆ, ಮತ್ತೂಂದೆಡೆ ಇರುವ ಸಂಪನ್ಮೂಲಗಳಿಗೇ ಹೆಚ್ಚುತ್ತಿರುವ ಬೇಡಿಕೆ ಇಡೀ ಪರಿಸ್ಥಿತಿಯನ್ನೇ ಗೋಜಲುಗೊಳಿಸುತ್ತಿದೆ. ಒಂದು ಹಣ್ಣನ್ನು ಇಬ್ಬರು ಹಂಚಿ ತಲಾ ಅರ್ಧ ಹಣ್ಣನ್ನು ತಿನ್ನಬಹುದು. ನಾಲ್ವರು ಬಂದರೆ ತಲಾ ಕಾಲು ಭಾಗವನ್ನು ತಿನ್ನಬಹುದು. ಹತ್ತು ಮಂದಿ ಬಂದರೆ ಒಂದೊಂದು ಹೋಳಿನಲ್ಲೇ ತೃಪ್ತಿ ಪಡಬೇಕಾಗಬಹುದು. ಆದರೆ, ಹಾಗೆ ನೀರಿನಲ್ಲಿ ತೃಪ್ತಿಪಟ್ಟುಕೊಳ್ಳಲು ಸಾಧ್ಯವೇ?
ಇರುವ ನೀರಿನ ಪ್ರಮಾಣ ಅಷ್ಟೇ. ನಗರಗಳಲ್ಲಿ ಬಹುಧಿಮಹಡಿಧಿಗಳನ್ನು ಕಟ್ಟಿ, ಬೋರ್‌ವೆಲ್‌ಗಳನ್ನು ತೋಡಿ ಅಂತರ್ಜಲ ಮಟ್ಟವನ್ನೂ ಸಂಪೂರ್ಣವಾಗಿ ಬಸಿದು ಬಿಟ್ಟಿದ್ದೇವೆ. ದೇಶದ ಯಾವುದೇ ನಗರಗಳಲ್ಲಿ ಇಂದು 400-500 ಅಡಿ ಕೆಳಗೆ ಹೋಗದೇ ನೀರಿನ ಸೆಲೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ವಿವಿಧ ವಿಧಾನಗಳಿಂದ ಭೂಮಿಗೆ ನೀರನ್ನು ಉಣಿಸದೇ, ಕೇವಲ ಬಸಿಯುತ್ತಿದ್ದರೆ ಇನ್ನಷ್ಟು ನೀರು ಸಿಗುವುದಾದರೂ ಹೇಗೆ? ಈ ಹಿನ್ನೆಲೆಯಲ್ಲೇ ನೀರಿನ ಮರುಬಳಕೆಯ ಬಗ್ಗೆ ಚಿಂತನೆ ನಡೆಸಬೇಕಾದ ಅಗತ್ಯ ಉದ್ಭವಿಸಿರುವುದು.
ಇಂದಿನ ತುರ್ತು
ತ್ಯಾಜ್ಯವಾಗುತ್ತಿರುವ ನೀರಿನ ಸದ್ಬಳಕೆ ವಿಶ್ವದ ಬಹಳಷ್ಟು ದೇಶಗಳಲ್ಲಿ ಆಗುತ್ತಿದೆ. ಅದರತ್ತ ಹಲವು ಸಂಶೋಧನೆಗಳೂ ನಡೆಯುತ್ತಿವೆ. ಇಂಥದೊಂದು ವ್ಯವಸ್ಥೆಯನ್ನು ಅಗ್ಗದ ದರದಲ್ಲಿ ಲಭ್ಯವಾಗುವಂತೆ ಮಾಡುವ ಪ್ರಯತ್ನಗಳೂ ನಡೆದಿವೆ. ನಮ್ಮ ದೇಶದಲ್ಲೂ ಕೆಲವು ನಗರಗಳಲ್ಲಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳು ಕಾರ್ಯಾಚರಿಸುತ್ತಿವೆ. ಬೆಂಗಳೂರಿನಲ್ಲೂ ಈ ವ್ಯವಸ್ಥೆ ಇದೆ. ಇದು ಎಲ್ಲ ನಗರಗಳಲ್ಲೂ ಸಾಧ್ಯವಾಗಿ ಶೇ.50ರಷ್ಟಾದರೂ ನೀರನ್ನು ಪುನರ್ ಬಳಕೆ ಸಾಧ್ಯವಾದರೆ ಅದುದೊಡ್ಡದೇ. ಕೆಲವೇ ವರ್ಷಗಳಲ್ಲಿ ತೀರಾ ನೀರಿನ ಕೊರತೆ ಎದುರಿಸುವ ದೇಶಗಳ ಪಟ್ಟಿಗೆ ನಾವೂ ಸೇರುತ್ತೇವೆ ಎನ್ನುವುದು ದಿಟ. ಹಾಗಾಗಿ ಆಡಳಿತ ವ್ಯವಸ್ಥೆಯಲ್ಲದೇ ವೈಯಕ್ತಿಕ ಮಟ್ಟದಲ್ಲೂ ನೀರಿನ ಪುನರ್ ಬಳಕೆಯತ್ತ ಮನಸ್ಸು ಮಾಡಬೇಕಾಗಿದೆ. ಅದೇ ಇಂದಿನ ತುರ್ತು.
– ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.