ಸುಮಧುರ ಪ್ರೇಮಗೀತೆಯಲ್ಲಿ ನಿನಗ್ಯಾಕೆ ಅಪಶ್ರುತಿ ಕೇಳಿಸ್ತು?
Team Udayavani, Mar 28, 2017, 3:50 AM IST
ಪ್ರೀತಿಯ ಮನದೊಡೆಯ,
ಏನಯ್ಯ ನಿನ್ನ ಲೀಲೆ? ಹೀಗ್ಯಾಕೆ ಅನುಕ್ಷಣವೂ ಎಡೆಬಿಡದೆ, ನಿದ್ದೆಯ ಕನವರಿಕೆಯಲ್ಲೂ, ಹಗಲಿನ ಜೋಂಪಿನಲ್ಲೂ, ಸಂತಸದಲ್ಲಿ, ಕೋಪದಲ್ಲಿ, ವೇದನೆಯಲ್ಲಿ ಅಷ್ಟೆಲ್ಲಾ ಯಾಕೆ, ಎಕ್ಸಾಮ್ ಹಾಲ್‌ನಲ್ಲೂ ಕಾಡುವುದೇನೋ ಹುಡುಗ? ಹೊರಗಡೆ ಮೈ ಕೊರೆವ ಚಳಿ, ಒಳಗಡೆ ಧಗಧಗಿಸುವ ನಿನ್ನ ನೆನಪು. ಯಾಕಿಷ್ಟು ಕೋಪ, ತಿರಸ್ಕಾರ ನನ್ನ ಮೇಲೆ? ಯಾಕೋ ಕಣ್ಣೀರಾದೆ ಇಂದು ನಿನ್ನ ನೆನೆದು. ಹರೆಯದಲ್ಲಿ ಈ ಅನುರಾಗ ಚೆಲ್ಲಾಟಗಳು ಇನಿಯನ ದನಿಗಾಗಿ ಹಾತೊರೆಯುವುದು ಸಹಜ ಬಿಡು. ಆದರೆ ಮುಪ್ಪಿನಲ್ಲೂ ಒಬ್ಬರಿಗೊಬ್ಬರು ಆಸರೆಯಾಗಿ, ಮುಪ್ಪಿನ ಭಯ, ಆತಂಕಗಳು, ಜಿಗುಪ್ಸೆ ಕಾಡದಂತೆ ನಿನ್ನ ಆದರಿಸಿ ಜೊತೆಯಾಗಿರಬೇಕು. ಬರುವ ಸವಾಲುಗಳಿಗೆ ಎದೆಯೊಡ್ಡಿ ನಿನ್ನನ್ನು ಜತನದಿಂದ ಕಾಪಿಟ್ಟುಕೊಳ್ಳಬೇಕು ಎನಿಸುತ್ತದೆ. ಆ ಕಾಲವು ನಿರ್ಧರಿಸುತ್ತದೆ ನನ್ನ ಒಲವಿನ ಬಲವು ಎಷ್ಟಿದೆಯೆಂದು.
ಒಂದೊಮ್ಮೆ ನಿನ್ನನ್ನು ವರ್ಣಿಸಿ ಕವನವನ್ನೋ, ಲೇಖನವನ್ನೋ ಬರೆಯೋಣ ಎಂದುಕೊಳ್ಳುತ್ತೇನೆ. ಪದಗಳು ಸಾಕೆನಿಸುವುದಿಲ್ಲ, ಮುಗಿಯದಷ್ಟು ರಾಶಿ ಭಾವಗಳು. ಏನಿದೆಯೋ ಅಷ್ಟು ನಿನ್ನಲ್ಲಿ? ಈ ತರಹ ಒಬ್ಬ ಹುಡುಗಿಗೆ ನಿನ್ನ ಹುಚ್ಚು ಹಿಡಿಸುವ ಪರಿಯೇನು ಹುಡುಗ? ಮನಸ್ಸು ನಿನ್ನಲ್ಲಿ ಸೋತಾಯಿತು. ಅದೆಂಥ ಮನೋಹರವಾದ ಮೋಹ ನಿನ್ನಲ್ಲಿ ತಳೆದಿದೆ. ಸನಿಹ ಬರಲು ಹಠ ಹಿಡಿವ ಕಣ್ಣ ಬಿಂದುಗಳು ನಿನ್ನ ನೆನೆದಾಗ ಮಾತ್ರ ಸರಾಗವಾಗಿ ಹರಿಯುತ್ತವೆ. ಹೀಗೇಕೆ ನೀ ಮೌನದಿ ದೂರ ಸರಿದೆ, ಜೀವ ಚೇತನವೆ? ಸುಖವಿರಲಿ ದುಃಖವಿರಲಿ ನಿನ್ನ ನೆನಪಿರುತ್ತೆ ಕಣೋ. ಜೀವ ಜೀವದ ಕಣವೂ ನೀನಾಗಿರುವಾಗ ಬೇರೇನನ್ನೂ ನೆನೆಯದಾದೆ ಗೆಳೆಯ. ಒಲವಿನ ಭಾವ ತರಂಗಿಣಿಯನ್ನು ಹರಿಸುವ ಸವಿಜೇನ ಪನ್ನೀರು ನೀನು. ಇಷ್ಟು ದಿನದ ನಿನ್ನ ಸಾಂಗತ್ಯದಲ್ಲಿ ಒಂದು ದಿನವೂ ಒಂಟಿಯೆನಿಸಿರಲಿಲ್ಲ. ದೂರವಿದ್ದರೂ ನೀ ನನಗೆ ಸಿಗುವುದಿಲ್ಲ ಎಂದು ತಿಳಿದಿದ್ದರೂ ನಿನ್ನ ನೆನಪಲ್ಲಿ ಬದುಕಬಲ್ಲೆನೆಂದು ಪಣ ತೊಟ್ಟವಳು ನಾನು. ಆದರೂ ನನ್ನ ಪ್ರೀತಿಯಲ್ಲಿ ನಿನಗ್ಯಾಕೆ ಅಪಶ್ರುತಿ ಕೇಳಿಸಿತು? ಕಾರಣ ತಿಳಿಯುತ್ತಿಲ್ಲ.
ಒಮ್ಮೊಮ್ಮೆ ಕನಸಿನಿಂದ ಎಚ್ಚರವಾದರೆ ಇದ್ದಕ್ಕಿದ್ದ ಹಾಗೆ ಮದುವಣಗಿತ್ತಿ ಆಗ್ತೀನೆ. ಪಚ್ಚೆ ಹಸಿರ ಸೀರೆಯುಟ್ಟು, ನನ್ನ ಬಾಳಿನ ಭಾಗ್ಯದ ನಿನ್ನ ಸಿಂಧೂರವನ್ನಿಟ್ಟು ಹಣೆಗೆ, ಹೂ ಮುಡಿದು ನನ್ನ ಸೆರಗಿಗೆ, ನಿನ್ನ ಜೀವದ ಸೆರಗಿಗೆ, ನಿನ್ನ ಸಾಮೀಪ್ಯದ ಶಲ್ಯಕ್ಕೆ ಒಲವಿನ ಗಂಟು ಹಾಕಿ, ನಿನ್ನ ಕಿರು ಬೆರಳಿಗೆ ನನ್ನ ಬೆರಳು ಬೆರೆಸಿ ನಿಂತೆನೆಂದರೆ ನಾನೇ ಸೌಭಾಗ್ಯವತಿ ಅಲ್ಲವೆ? ಕಂಡ ಕನಸುಗಳೆಲ್ಲ ನಿಜವಾಗಿದ್ದರೆ ಬದುಕಿಗೆ ಅರ್ಥವೇನಿರುತ್ತಿತ್ತು ಅಲ್ಲವಾ? ನನಗೂ ತಿಳಿದಿದೆ ನಿನ್ನ ಕೈ ಹಿಡಿದು ನಡೆಯುವಷ್ಟು ಅದೃಷ್ಟವಿಲ್ಲ, ಸಂಗಾತಿಯಾಗಿ ಬಾಳುವ ಸುದಿನವೂ ಮುಂದಿಲ್ಲ. ಯಾವುದೋ ಖಾಲಿ ಎದೆಯಲ್ಲಿ ನಿನ್ನ ಪ್ರತಿ ಬಿಂಬವನ್ನೇ ಮುಂದಿಟ್ಟು ಇದೇ ಪ್ರೀತಿ, ಇದು ನನ್ನೆದೆಯ ಜೀವಾಳ ಎಂದು ಬದುಕಿನ ಬಂಡಿಯನ್ನು ನಡೆಸುತ್ತಿರುವವಳು ನಾನು.
ನೀನು ನನ್ನ ಜೀವಮಾನದ ಅಫಿಡೆವಿಟ್ಟಿನ ಪ್ರೀತಿಯನ್ನು ನೀಡುತ್ತೀ ಎಂಬ ಸ್ವಾರ್ಥದಿಂದ, ನನಗೆ ಮಾತ್ರ ಸೀಮಿತ ಪ್ರೀತಿ ನೀಡುತ್ತೀಯ ಎಂದು ಪ್ರೀತಿ ಕೊನರಲಿಲ್ಲಯ್ನಾ. ನಿನ್ನ ಅನುರಾಗ ದೊರೆಯದಾದರೂ ನೀನೆಂದೂ ನನ್ನವನೇ. ಕನಸಿನಲ್ಲಿ ಮಾತ್ರ ದಕ್ಕಿದವನು. ಬೆಚ್ಚನೆಯ ಹೃದಯದಲ್ಲಿ ನಿನ್ನ ಒಡನಾಟಕ್ಕಾಗಿ ಕಾದವಳು. ಏನು ಮಾಡಲಿ ಹೇಳು? ಎಷ್ಟೇ ಸಮಾಧಾನ ಹೇಳಿಕೊಂಡರೂ, ಕೆಲವೊಮ್ಮೆ ನಿನ್ನ ಮೇಲಿನ ಒಲವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ.
ಇಂತಿ ನಿನ್ನ ಅಭಿಸಾರಿಕೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.