ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…
Team Udayavani, Mar 29, 2017, 12:15 AM IST
‘ಜೀವನವೆಲ್ಲ ಬೇವು ಬೆಲ್ಲ, ಎರಡೂ ಸವಿವನೆ ಕವಿ ಮಲ್ಲ’ ಎಂದು ವಿದ್ವಾಂಸರು ಹೇಳಿದ್ದಾರೆ. ವರ್ಷವೆಲ್ಲಾ ಹರ್ಷದಾಯಕವಾಗಲಿ, ಸಿಹಿಯೊಡನೆ ಕಹಿಯನ್ನು ಸಹಿಸುವ ಶಕ್ತಿ ಬರಲಿ ಎಂಬ ನಂಬಿಕೆಯಿಂದ ಯುಗಾದಿ ಹಬ್ಬ ಅಂದಿನಿಂದ ಇಂದಿನವರೆಗೂ ಬಳಕೆಗೆ ಬಂದಿದೆ. ಹೊಸತನದ ದ್ಯೋತಕವಾಗಿ ಹೊಸ ಬಟ್ಟೆ ತೊಟ್ಟು ದೇವರಿಗೂ, ಗುರು ಹಿರಿಯರಿಗೂ ವಂದಿಸಿ ದೈವೀ ಗುಣಗಳಿಂದ ಪ್ರೀತಿ, ತಾಳ್ಮೆ, ಕ್ಷಮೆ, ನಿಸ್ವಾರ್ಥತೆ, ಕರ್ತವ್ಯಪರತೆ ಗಳಿಂದ ಸುಸಂಸ್ಕಾರಗಳ ಗಣಿಯಾಗಿ ವೃದ್ಧಿಸಿಕೊಂಡು ಹೊಸ ಮನುಜರಾಗುವ, ದೇವರಾಗುವ ದೀಕ್ಷೆ ತೊಡುವ ಹಬ್ಬ ಇದು. ಆ ದೇವರ ನಾಮಸ್ಮರಣೆ ನಾಲಿಗೆಯಲ್ಲಿ ಸದಾ ಇರುವಾಗ ಬೇವೂ ಒಂದೇ. ಬೆಲ್ಲವೂ ಒಂದೇ. ನೋವು ಬರಲಿ, ನಲಿವೇ ಬರಲಿ, ನಿನ್ನ ಕೃಪೆ ಮಾತ್ರ ಎಂದೆಂದೂ ಇರಲಿ ಎಂದೇ ಆ ದೇವರ ನಾಮ ಸ್ಮರಣೆಯೊಂದಿಗೆ ಸಿಹಿ ಕಹಿಗಳ ಮಿಲನದೊಂದಿಗೆ ಸವಿದು ಕಷ್ಟ ಸುಖಗಳ ಹಂಚಿ ತಾಳ್ಮೆ, ಒಲವು, ಗೆಲುವುಗಳಿಂದ ಒಗ್ಗಟ್ಟಾಗಿ ಬಾಳಿ ತುಂಬು ಕುಟುಂಬದ ಸದಸ್ಯರಾಗಿ ಎಲ್ಲರೊಳಗೊಂದಾಗಿ ಬಾಳೋಣ ಬದುಕೋಣ !
ನವಯುಗದ ಆದಿಯಿಂದ ಅಂತ್ಯದವರೆಗೂ ಪ್ರೀತಿ, ವಿಶ್ವಾಸ, ಸಂತೋಷ, ಸಹಬಾಳ್ವೆ, ಸೌಹಾರ್ದ, ಸಾಮರಸ್ಯ, ಸಂಭ್ರಮ, ಸಹಕುಟುಂಬದೊಂದಿಗೆ ಬೆರೆತು ಕಲೆತು ಹೃದಯಾಂತರಾಳದ ಪ್ರೀತಿಯ ಧಾರೆಯೆರೆದು ಮುಂಜಾನೆದ್ದು ಎಲ್ಲರೂ ಸ್ನಾನ ಸಂಧ್ಯಾವಂದನೆ ಮುಗಿಸಿ ಸೂರ್ಯ ದೇವರಿಗೆ ಸ್ಮರಿಸಿ ಶಿವನಾಮ ಸ್ಮರಣೆ ಮಾಡಿ ಹೊಸ ಉಡುಗೆ, ತೊಡುಗೆಗಳಿಂದ ಅಲಂಕರಿಸಿ ದೇವಾಲಯಗಳಿಗೆ ಹೋಗಿ ಗಂಧ, ತೀರ್ಥ ಸ್ವೀಕರಿಸಿ ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿ ಕಹಿಬೇವು ಸವಿದ ನಂತರ ಬೆಳಗ್ಗೆ ಉಪಾಹಾರ ಕೊಟ್ಟಿಗೆ ಚಟ್ನಿ ತಿಂದು ಸವಿ ನುಡಿದು ಮಧ್ಯಾಹ್ನದ ಭೋಜನಕ್ಕೆ ತಯಾರಿ ನಡೆಸುತ್ತಾರೆ. ಈ ದಿನ ಇಷ್ಟದೇವತೆಗೆ ಹೂ, ಹಣ್ಣು, ಕಾಯಿ, ಹಾಲು, ಅಳಿದು ಹೋದ ಹರಿಯರ ನೆನಪಿಗೆ ಮಾಸ್ತಿ ದೇವಿ ಹೆಸರಿನಲ್ಲಿ ಸೀರೆ, ಅರಸಿನ, ಕುಂಕುಮ, ರವಿಕೆ ಕಣ, ಕೆಂಪು ಪಚ್ಚೆ ಬಳೆಗಳನ್ನು ಇಡುವ ಸಂಪ್ರದಾಯವಿದೆ. ಬಿಳಿ ಶರ್ಟ್ ಬಟ್ಟೆ, ಧೋತಿ ಇಡುವರು. ಅವರ ಆತ್ಮಕ್ಕೆ ಮೋಕ್ಷ ದೊರೆತು ಸದ್ಗತಿ ಲಭಿಸಲೆಂದು ಪ್ರತಿ ವರ್ಷ ಯುಗಾದಿಗೆ ಈ ಕ್ರಮ ಪಾಲಿಸುವರು.
‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ’ – ಎಂಬ ಕವಿ ಬೇಂದ್ರೆ ಅವರ ವಾಣಿಯಂತೆ ಹೊಸ ವರ್ಷ ಹರ್ಷದಾಯಕವಾಗಲೆಂದು ಎಲ್ಲರ ಅಭಿಲಾಷೆ. ‘ಋತೂನಾಂ ಕುಸುಮಾಕರಂ’ ಎಂಬ ಗೀತಾಚಾರ್ಯರ ವಾಣಿಯಂತೆ ಋತುರಾಜ ವಸಂತದ ಶುಭಾಗಮನದ ದಿನ. ಈ ಋತುವಿನಲ್ಲಿ ಪ್ರಕೃತಿ ಮಾತೆ ಹೊಸ ಚಿಗುರಿನ ಹಸಿರು ವಸ್ತ್ರವನ್ನುಟ್ಟು ರಾರಾಜಿಸುವ ನಿಸರ್ಗವನ್ನು ಕಂಡಾಗ, ಕೋಗಿಲೆಗಳ ಇಂಚರವನ್ನು ಆಲಿಸಿದಾಗ ಆನಂದಮಯ ಈ ಜಗ ಹೃದಯ ಎಂಬ ಕವಿ ನುಡಿಯ ಸತ್ಯತೆ ಅರಿವಾಗುತ್ತದೆ. ಆಗ ತಾನೇ ಸುಗ್ಗಿ ಮುಗಿದು, ಹಿಗ್ಗಿನ ಬುಗ್ಗೆಯಾಗಿರುವ ಜನತೆಗೆ ಉಂಡಿದ್ದೆ ಯುಗಾದಿ. ಈ ಹಬ್ಬದ ಹಿರಿಮೆ, ಗರಿಮೆ, ಮಹಿಮೆಗಳನ್ನು ಅಥರ್ವಣ ವೇದ, ಶತಪಥ ಬ್ರಾಹ್ಮಣ, ಧರ್ಮ ಸಿಂಧು ಮುಂತಾದ ಧರ್ಮ ಶಾಸ್ತ್ರ ಗ್ರಂಥಗಳಲ್ಲಿ ಪುರಾಣಗಳಲ್ಲಿ ಉಲ್ಲೇಖವಿದೆ.
ಆಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವಿಶೇಷತೆ. ಈ ದಿನ ಶ್ರೀರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಬಂದು ರಾಜ್ಯವಾಳಲು ಪ್ರಾರಂಭಿಸಿದ. ಅಂದು ಶ್ರೀರಾಮ ವಿಜಯಕ್ಕೆ ಕನ್ನಡ ನಾಡಿನ ಕಪಿ ವೀರರು, ಅಯೋಧ್ಯೆಯ ಪ್ರಜೆಗಳು ಉಂಡುಟ್ಟು ನಲಿದಾಡಿದರು. ಇಡೀ ಅಯೋಧ್ಯೆಯೇ ವಿಜಯ ಪತಾಕೆ ಹಾರಿಸಿದರು. ಅಂದಿನ ರಾಮರಾಜ್ಯದ ಕನಸು ನನಸಾಗಲು ಇಂದು ಈ ಪದ್ಧತಿ ರೂಢಿಯಲ್ಲಿದೆ.
ಶಾಲಿವಾಹನ ಶಕೆ ಆರಂಭವಾಗಿ 78 ವರ್ಷಗಳ ತರುವಾಯ ನರ್ಮದಾ – ಕಾವೇರಿಗಳ ನಡುವೆ ರಾಜ್ಯವಾಳುತ್ತಿದ್ದ ಶಾಲಿವಾಹನ, ಅವರ ಬಲವನ್ನು ಮುರಿದು ವಿಜಯ ಬಾವುಟ ಹಾರಿಸಿದ ದಿನ ಚೈತ್ರಶುದ್ಧ ಪ್ರತಿಪದೆ. ಅಂದು ಬ್ರಹ್ಮನು ಈ ಜಗತ್ತನ್ನು ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದ. ಅಂದೇ ಗ್ರಹ, ನಕ್ಷತ್ರ, ಮಾಸ, ಋತು ವರ್ಷ, ವರ್ಷಾಧಿಪತಿಗಳನ್ನು ಸೃಷ್ಟಿಸಿ ಕಾಲಗಣನೆ ಆರಂಭಿಸಿದ. ವರ್ಷಾರಂಭದ ಪ್ರತೀಕವೆಂದು ಭಾವಿಸಿ ವರ್ಷ ಫಲವನ್ನು ತಿಳಿಯಲಾಗುತ್ತದೆ. ಶಕ್ತಿ ಉಪಾಸನೆಯ ಆರಂಭದ ದಿನ, ಮಧ್ಯದ ಶರದೃತುಗಳ ಆರಂಭಕಾಲ, ಅನಿಷ್ಟ ನಿವಾರಣೆಗೆ, ದೇವತಾನುಗ್ರಹ ಪ್ರಾಪ್ತಿಗೆ ಶ್ರೇಷ್ಠವೆಂದು ನಂಬಿಕೆ. ಈ ಎರಡೂ ಋತುಗಳ ಆರಂಭದಲ್ಲಿ ವಸಂತ ನವರಾತ್ರಿ ಹಾಗೂ ಶರತ್ ನವರಾತ್ರಿ ಆಚರಿಸುವ ರೂಢಿ ಬೆಳೆದು ಬಂದಿದೆ. ವಾತಾವರಣದಲ್ಲಿ ಬದಲಾವಣೆಯಾಗುವ ಈ ಎರಡೂ ಋತುಗಳು ಶಕ್ತಿಯಲ್ಲಿ ಭಕ್ತಿ ಇಡಲು ಪ್ರಶಸ್ತ ಮುಹೂರ್ತಗಳಾಗಿವೆ.
ಚಂದ್ರನ ಚಲನೆಯನ್ನು ಅನುಸರಿಸಿ ಅಮಾವಾಸ್ಯೆ ಹುಣ್ಣಿಮೆಗಳ ಆಧಾರದ ಮೇಲೆ ಮಾಸ ಗಣನೆ ಮಾಡುವ ಪದ್ಧತಿಗೆ ‘ಚಾಂದ್ರಮಾನ’ ಎಂದು ಹೆಸರು. ತಿಂಗಳು ಎಂಬ ಹೆಸರು ಬಂದಿರುವುದು ಚಂದ್ರನಿಂದಲೇ ಸರಿ. (ತಿಂಗಳ ಬೆಳಕು ಅಂದರೆ ಚಂದ್ರನ ಬೆಳದಿಂಗಳು ಎಂದರ್ಥ) ಚಂದ್ರ ಹುಣ್ಣಿಮೆಯಂದು ಚಿತ್ರಾನಕ್ಷತ್ರಯುಕ್ತನಾಗಿದ್ದರೆ ಅದು ಚೈತ್ರ ಮಾಸ, ವಿಶಾಖ ನಕ್ಷತ್ರದಲ್ಲಿದ್ದರೆ ಅದು ವೈಶಾಖ ಮಾಸ. ಇಲ್ಲಿಯ ತಿಥಿಗಳು, ಮಾಸಗಳು ಎಲ್ಲವೂ ಖಗೋಳದಲ್ಲಿ ಸಂಭವಿಸುವ ಘಟನೆಗಳಿಗೆ ಸಂವಾದಿಯಾಗಿವೆ. ಕ್ರಿ.ಶ. 5 ನೇ ಶತಮಾನದಲ್ಲಿದ್ದ ಪ್ರಸಿದ್ಧ ಖಗೋಳ ವಿಜ್ಞಾನಿ ವರಾಹಮಿಹಿರಾಚಾರ್ಯನು ವಸಂತ ವಿಷುವತ್ ಅಶ್ವಿನಿಯಲ್ಲಿ ಸಂಭವಿಸುವುದನ್ನು ಪರಿಗಣಿಸಿ ಚೈತ್ರ ಶುದ್ಧ ಪಾಡ್ಯ ಹೊಸ ವರ್ಷವೆಂದು ದೃಢೀಕರಿಸಿದ್ದಾರೆ.
‘ಶತಾಯುರ್ವಜ್ರ ದೇಹಾಯೆ ಸರ್ವಸಂಪತ್ಕರಾಯಚ ಸರ್ವಾರಿಷ್ಟ ವಿನಾಶಾಯೆ ನಿಂಬಸ್ಯದಳ ಭಕ್ಷಣಂ’ ಬೇವು ನೂರು ಕಾಲ ಆಯುಷ್ಯವನ್ನೂ, ಸರ್ವಸಂಪನ್ನೂ ನೀಡುವುದಲ್ಲದೆ ಅನಿಷ್ಟಗಳನ್ನೆಲ್ಲ ನಿವಾರಿಸುತ್ತದೆ ಎಂದು ಹೇಳಲಾಗಿದೆ. ದೇಹಕ್ಕೆ ತಂಪು ನೀಡುವ ಬೇವೂ ಬೇಕು. ಉಷ್ಣ ಪ್ರಧಾನ ಬೆಲ್ಲವೂ ಬೇಕು. ಆಯುರ್ವೇದದ ಪ್ರಕಾರ ವಸಂತ ಋತುವಿನಲ್ಲಿ ಉಂಟಾಗುವ ಕಾಯಿಲೆಗಳಿಗೆ ಬೇವು ಬೆಲ್ಲ ಸಿದ್ದೌಷಧ.
ಬೇವು ಬೆಲ್ಲ ಹಗಲು – ರಾತ್ರಿ, ಪ್ರೀತಿ-ದ್ವೇಷಗಳ ಸಂಕೇತ. ಭಗವದ್ಗೀತೆಯ ವಾಕ್ಯದಂತೆ ಸುಖದುಃಖಗಳ ಸಮರಸವೇ ಜೀವನ. ದ್ವೇಷ ಮೆಟ್ಟಿ ಪ್ರೀತಿ ಬೆಳೆಸಲು ಯತ್ನಿಸಬೇಕು. ಭೂತಕಾಲದ ಕಹಿ ಅನುಭವ ಭವಿಷ್ಯದ ಸಿಹಿ ಅನುಭವಕ್ಕೆ ನಾಂದಿಯಾಗಬೇಕು. ಯುಗಾದಿ ನಮ್ಮನ್ನು ಕಾಮನಿಂದ ರಾಮನತ್ತ, ಕಹಿಯಿಂದ ಸಿಹಿಯತ್ತ, ಕತ್ತಲೆಯಿಂದ ಬೆಳಕಿನತ್ತ ಒಯ್ದು ಆಯುರಾರೋಗ್ಯ ಭಾಗ್ಯವನ್ನು ಹಾರೈಸುವ ಹಬ್ಬವಾಗಿದೆ.
– ಕಸ್ತೂರಿರಾಜ್ ಬೇಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.