ಹರಡಿತು ಮಾಲವಿಕಾ ನೃತ್ಯಪ್ರಭೆ


Team Udayavani, Mar 31, 2017, 3:50 AM IST

31-KALA-2.jpg

ಡಾ| ಮಾಲವಿಕಾ ಹೆಬ್ಟಾರ್‌ ಯುವ ವೈದ್ಯೆ, ಭರತನಾಟ್ಯ ಪಟು. ಈಕೆ ಇತ್ತೀಚೆಗೆ ಕುಂದಾಪುರದಲ್ಲಿ ರಂಗಪ್ರವೇಶವೆಂಬ ತನ್ನ ಪೂರ್ಣಪ್ರಮಾಣದ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನವನ್ನು ಉತ್ತಮವಾಗಿ ನೀಡಿ ಕಲಾರಸಿಕರನ್ನು ತೃಪ್ತಿಪಡಿಸಿದರು. ಈಕೆಯ ಗುರು ಲಕ್ಷ್ಮೀ ಗುರುರಾಜ್‌ ನೃತ್ಯ ಸಂಯೋಜನೆ ಹಾಗೂ ಸಮರ್ಥ ನಿರ್ದೇಶನದಲ್ಲಿ ಈ ಮಾರ್ಗಂ ಪದ್ಧತಿಯ ನೃತ್ಯ ಪ್ರದರ್ಶನವು ಕುಂದಾಪುರ ಭಂಡಾರ್ಕಾರ್ ಕಾಲೇಜಿನ ಆರ್‌. ಎನ್‌. ಶೆಟ್ಟಿ ಸಭಾಂಗಣದಲ್ಲಿ ಮೂಡಿಬಂತು. ಸುಮಾರು ಏಳು ನೃತ್ಯಬಂಧಗಳನ್ನು ಪೋಣಿಸಿದ್ದ ಪ್ರದರ್ಶನವು ಶುದ್ಧ ಶಾಸ್ತ್ರೀಯ ಸಂಪ್ರದಾಯ ಪದ್ಧತಿಯಲ್ಲಿದ್ದುದು ವಿಶೇಷ.

ಕಾರ್ಯಕ್ರಮ ಹಿನ್ನೆಲೆ ಗಾಯಕ ವಿ. ರಘುರಾಂ ಬೆಂಗಳೂರು ಅವರ ಸುಶ್ರಾವ್ಯವಾದ ನಾಟ ರಾಗದ ಮಹಾ ಗಣಪತಿಂನಿಂದ ಆರಂಭಗೊಂಡಿತು. ಮಾಲವಿಕ ತನ್ನ ಪ್ರದರ್ಶನವನ್ನು ವಿ| ಬಾಲಸುಬ್ರಹ್ಮಣ್ಯ ಶರ್ಮ ರಚಿಸಿದ  ನಿರಂಜನಿ ರಾಗ, ಮಿಶ್ರಛಾಪು ತಾಳದ ಪುಷ್ಪಾಂಜಲಿಯಿಂದ ಪ್ರಾರಂಭಿಸಿದರು. ವಿವಿಧ ಅಡವು, ವಿನ್ಯಾಸ, ಶೊಲ್ಕಟ್ಟು, ತೀರ್ಮಾನ ಗಳಿಂದ ಈ ನೃತ್ಯಬಂಧ ಸರ್ವರಿಗೂ ನಮನಗೈಯುವ ಭಾವ ಹೊಂದಿದ್ದು ನರ್ತಕಿ ಇದನ್ನು ಚೆನ್ನಾಗಿ ನಿರ್ವಹಿಸಿದರು.

ಮುಂದಿನ ನೃತ್ಯ ರಾಗಮಾಲಿಕೆ, ಏಕತಾಳದ ತ್ರಿಮಾತಾ ಕೌತುವಂ. ಲಕ್ಷ್ಮೀ, ಶಾರದೆ, ಪಾರ್ವತಿಯವರ ವರ್ಣನೆಯೊಂದಿಗೆ ಪುಟ್ಟ ಜತಿಗಳು, ಗದ್ಯದ ಪಾಠಾಕ್ಷರಗಳಿಂದ ಹೆಣೆದ ಈ ಕೌತುವಂನಲ್ಲಿ ಈ ಮಾತೆಯರ ವಾಹನಗಳ ಬಗ್ಗೆ ವಿವರಣೆ, ಅವರ ರೂಪ ವಿವರಣೆಯ ನಿಶ್ಚಿತ ಭಂಗಿ, ಅಂಗಹಾರಗಳಿಂದ ಶೋಭಿಸಿದವು. ಲಯ ಪ್ರಧಾನವಾದ ಈ ನೃತ್ಯದ ಗದ್ಯದ ಪಾಠಾಕ್ಷರ ಪಠಣ ಗುರು ಲಕ್ಷ್ಮೀ ಅವರಿಂದ ನಡೆದರೆ, ಗಾಯಕರು ಅದನ್ನು ಸಂಗೀತದಲ್ಲಿ ಬಿತ್ತರಿಸಿದ್ದು ಚೆನ್ನಾಗಿತ್ತು. ಇಲ್ಲಿ ಪಕ್ಕವಾದ್ಯಗಳಾದ ಮೃದಂಗ, ಕೊಳಲು, ವೀಣೆ ಒಳ್ಳೆಯ ಕಸುಬುಗಾರಿಕೆ ಪ್ರದರ್ಶಿಸಿದವು.

ಮುಂದೆ ಪ್ರದರ್ಶನದ ಪ್ರಧಾನ ನೃತ್ಯಬಂಧವಾಗಿದ್ದ ಪದವರ್ಣವು ಅತ್ಯಂತ ಶಿಸ್ತುಬದ್ಧ, ಸಂಪ್ರದಾಯಬದ್ಧವಾಗಿ  ಪ್ರೌಢ ಮಟ್ಟದಲ್ಲಿ ಸಂಯೋಜನೆಗೊಂಡಿತ್ತು. ಇದನ್ನು ಮಾಲವಿಕಾ ಅಷ್ಟೇ ಕಲಾತ್ಮಕವಾಗಿ ಪ್ರಸ್ತುತಪಡಿಸಿದರು. ಸಾಮಾನ್ಯವಾಗಿ ತಮಿಳು, ತೆಲುಗು ಭಾಷೆಯಲ್ಲಿರುವ ವರ್ಣದ ಬದಲು ಮಾಲವಿಕಾ ಕನ್ನಡ ವರ್ಣವನ್ನು ಆಯ್ದುಕೊಂಡದ್ದು ಸಾಹಿತ್ಯ ಭಾಗ ರಸಿಕರಿಗೆ ಹೆಚ್ಚು ಚೆನ್ನಾಗಿ ಮುಟ್ಟುವಲ್ಲಿ ನೆರವಾಯಿತು. ಖ್ಯಾತ ವೇಣುವಾದಕಿ ದ್ವಾರಕಿ ಕೃಷ್ಣಸ್ವಾಮಿಯವರ ರಚನೆಯಾದ ಭುವನ ಸುಂದರನ ಎಂಬ, ಕಮಾಚ್‌ ರಾಗ, ಆದಿತಾಳದ ಈ ಪದವರ್ಣವು ಸುಮಾರು 45 ನಿಮಿಷಗಳ ಕಾಲ ಸುಲಲಿತವಾಗಿ ನಿರ್ವಹಿಸಲ್ಪಟ್ಟಿತು. ವಿರಹೋತ್ಕಂಠಿತ ನಾಯಿಕೆ ವಿರಹವೇದನೆಯಿಂದ ಬಳಲುವ, ಅವನನ್ನು ತನ್ನೆಡೆ ಕರೆತರಲು ಸಖೀಯನ್ನು ಓಲೈಸಿ ಅಟ್ಟುವ, ಶ್ರೀಕೃಷ್ಣನ ವಿವಿಧ ಸರಸಸಲ್ಲಾಪಗಳನ್ನು ನೆನಪಿಸುವ ಅನೇಕ ಸಂಚಾರಿ ಅಭಿನಯಗಳನ್ನು ಹೊಂದಿತ್ತು. ತ್ರಿಕಾಲ ಜತಿಯ ಜತೆಗೆ ನಡೆ ಭೇದಗಳನ್ನು ಪೋಣಿಸಿದ ಇತರ ಜತಿಗಳು, ಆರುಧಿಗಳು, ಪಲ್ಲವಿ, ಅನುಪಲ್ಲವಿ, ಎತ್ತುಗಡೆ ಸ್ವರ ಸಾಹಿತ್ಯ, ಚರಣ ಸ್ವರ ಸಾಹಿತ್ಯ ಹೀಗೆ ನೃತ್ತ -ನೃತ್ಯಗಳ ಸಮಪಾಕದಲ್ಲಿ ನಿರ್ವಹಿಸಲ್ಪಡ ಬೇಕಾದ ವರ್ಣ ಪ್ರೌಢವಾಗಿ ಮೂಡಿಬಂತು. ಮಾಲವಿಕಾ ಅವರು ಅಭಿನಯ ಭಾಗದಲ್ಲಿ ಸಂಪೂರ್ಣವಾಗಿ ಮಗ್ನರಾಗಿ ನರ್ತಿಸಿದ್ದರು. ಅಡವುಗಳ ನಿರ್ವಹಣೆ, ಅರೆಮಂಡಿ, ಹಸ್ತ ಕ್ಷೇತ್ರದ ಹರವಿನ ನಿಖರತೆ, ಪಾದಗಳ ಹೆಜ್ಜೆಗಾರಿಕೆಯ ಸ್ಪಷ್ಟತೆ ಮುಂತಾದ ನೃತ್ತ ವಿಭಾಗಕ್ಕೆ ಹೆಚ್ಚು ಗಮನಹರಿಸಿದರೆ ನೃತ್ತ ಹಾಗೂ ನೃತ್ಯ ಈ ಎರಡೂ ವಿಭಾಗಗಳಲ್ಲೂ ಹೆಚ್ಚು ಪಕ್ವತೆ ಪಡೆಯಲು ಸಾಧ್ಯ ಅನ್ನಿಸಿತು. ಮಾಲವಿಕಾ ಲಯ ವಿಭಾಗದಲ್ಲಿ ಹೊಂದಿರುವ ಹಿಡಿತ ಈ ವರ್ಣದ ನೃತ್ಯ ಭಾಗದಿಂದ ಮನವರಿಕೆಯಾಯಿತು. ವರ್ಣವು ಹಿಮ್ಮೇಳ ಕಲಾವಿದರ ಸಹಕಾರ ದಿಂದ ಪುಷ್ಟಿಗೊಂಡಿತು.

ಜನಪದೀಯ ಶೈಲಿಯ ಒಂದು ತಮಿಳು ಪದವನ್ನು (ಮೂಲ ವೆಂಕಟ ಸುಬ್ಬಯ್ಯರ್‌) ಈ ನೃತ್ಯಕ್ಕಾಗಿ ಗುರು ಲಕ್ಷ್ಮೀ ಅವರು ಭಾವಾರ್ಥದ ಅಂದಗೆಡದಂತೆ ಕನ್ನಡಕ್ಕೆ ಅನುವಾದಿಸಿದ್ದು, ನೆರೆದವರನ್ನು ಸುಲಭವಾಗಿ ತಟ್ಟಿತು. ಮುದ್ದುಕೃಷ್ಣ ಮತ್ತು ಅಮ್ಮ ಯಶೋದೆಯ ಸಲುಗೆಯ ಸಂಭಾಷಣೆಯ ವಸ್ತುವನ್ನೊಳಗೊಂಡ ಈ ಕೃತಿ ತಿಶ್ರ ಏಕ ತಾಳದಲ್ಲಿದ್ದು, ಮಾಲವಿಕಾ ಬಹಳ ಲವಲವಿಕೆಯಿಂದ ಅಮ್ಮ-ಮಗುವಿನ ಅಭಿನಯವನ್ನು ಸ್ಪಷ್ಟವಾಗಿ ವಿಭಾಗಿಸಿ ಅಭಿನಯಿಸಿ ರಂಜಿಸಿದರು.

ತದನಂತರ ಪ್ರಸ್ತುತಿಗೊಂಡ ತುಸು ಗಂಭೀರವಾದ ಸಾಹಿತ್ಯ, ಲಯ ಪ್ರಧಾನವಾಗಿರುವ ಭೈರವಿ ರಾಗದ ಯಾರೋ ಇವರ್ಯಾರೋ ತಮಿಳು ಪದಂನ ನಾಯಕ ಶ್ರೀರಾಮ ಹಾಗೂ ನಾಯಕಿ ಸೀತಾ. ಸೀತಾ ಸ್ವಯಂವರದ ಒಂದು ಪೂರ್ವಭಾವಿ ಸನ್ನಿವೇಶದಲ್ಲಿ ನಾಯಕ ಮತ್ತು ನಾಯಕಿ ಪರಸ್ಪರ ಅವಲೋಕಿಸುವ, ಅವರಲ್ಲಿ, ಮುಖ್ಯವಾಗಿ ಸೀತೆಯಲ್ಲಿ ಉಂಟಾಗುವ ಶೃಂಗಾರಪೂರ್ಣ ಭಕ್ತಿ ಮುಂತಾದ ಸಮ್ಮಿಶ್ರ ಭಾವಗಳು ಈ ಪದಂನ ವಸ್ತು. ಬಹಳ ಹಳೆಯದಾದ, ಸಂಗೀತ ಕಛೇರಿಗಳಲ್ಲಿ ಗಾಯಕರ ಪ್ರಧಾನ ಆಯ್ಕೆ ಎನಿಸಿದ ಈ ವಿಳಂಬ ಆದಿ ತಾಳದ ಪದಂನ್ನು ಆಯ್ಕೆ ಮಾಡಿ ನೃತ್ಯ ಸಂಯೋಜಿಸಿದ ಗುರುಗಳಿಗೂ ನರ್ತಿಸಿದ ಶಿಷ್ಯೆಗೂ ವಿಶೇಷ ಅಭಿನಂದನೆಗಳು. ಜೀವನಾನುಭವ ಪಕ್ವತೆಯೇ ಈ ಪದಂನ್ನು ಅಭಿನಯಿಸಲು ಬೇಕಾದ ಗುಣ. ಮಾಲವಿಕಾ ಹಿತವಾಗಿ ಇದನ್ನು ಅಭಿನಯಿಸಿದರು.

ಜಯದೇವನ ಗೀತ ಗೋವಿಂದ ಅಷ್ಟನಾಯಿಕೆಯರ ಭಾವ ಪೋಷಣೆಗೆಂದೇ ಸೃಷ್ಟಿಗೊಂಡಂತಿರುವ ರಚನೆ. ಎಂಟು ಪದ್ಯಗಳಿರುವ ಸರ್ಗಗಳನ್ನು ಹೊಂದಿರುವ ಈ ಗೀತಗೋವಿಂದದ ಕೆಲವು ಸರ್ಗಗಳನ್ನು ಮೆಡ್ಲೆ ರೂಪದಲ್ಲಿ ಪ್ರಸ್ತುತಪಡಿಸಿದರು. ರಾಧೆಯ ವಿರಹೋತ್ಕಂಠಿತಾ, ಖಂಡಿತಾ, ಕಲಹಂತರಿಕಾ ಮುಂತಾದ ನಾಯಕೀಭಾವಗಳನ್ನು ಬಿಂಬಿಸುತ್ತಾ ಕೊನೆಗೆ ಮಾಧವನಲ್ಲಿ ಐಕ್ಯವಾಗುವ ಸಾಹಿತ್ಯದ ಅಭಿನಯವನ್ನು ನೃತ್ಯಗಾತಿ ಮನೋಜ್ಞವಾಗಿ ನಿರ್ವಹಿಸಿದರು. ಇದಕ್ಕೆ ಗಾಯಕ ರಘುರಾಂ ಅವರ ರಾಗ ಸಂಯೋಜನೆ ಆಪ್ಯಾಯಮಾನವಾಗಿತ್ತು.

ಕಾರ್ಯಕ್ರಮದ ಮಂಗಳವು ವಿ| ಗುರುಮೂರ್ತಿಯವರ ಜೋಗ್‌ ರಾಗದ ತಿಲ್ಲಾನ ಖಂಡ ತ್ರಿಪುಟ ತಾಳದಲ್ಲಿದ್ದು, ವಿವಿಧ ಅಡವುಗಳು, ಭಂಗಿಗಳು, ಆರುಧಿಗಳು ಹಾಗೂ ರಂಗಾಕ್ರಮಣಗಳಿಂದ ಸುಂದರವಾಗಿ ಮೂಡಿಬಂತು.
ಹಿಮ್ಮೇಳ ಕಲಾವಿದರು ಈ ಪ್ರದರ್ಶನಕ್ಕೆ ಮಹತ್ವದ ಕೊಡುಗೆ ನೀಡಿದರು. ಗಾಯಕ ರಘುರಾಂ ಸಾಹಿತ್ಯ ಸ್ಪಷ್ಟತೆಯ ಮಧುರ ಗಾಯನ ನೀಡಿದರೆ, ಮೃದಂಗವಾದಕ ಹರ್ಷ ಸಾಮಗ ತಮ್ಮ ಮೃದಂಗದ ಎಡಬಲಗಳ ಸರಿದೂಗುವ ನುಡಿತಗಳಿಂದ ನಟುವಾಂಗದ ಗುರುಗಳಿಗೂ ನೃತ್ಯಾಂಗನೆಗೂ ಉತ್ತಮ ನೆರವು ನೀಡಿದರು. ನಿತೀಶ್‌ ಅಮ್ಮಣ್ಣಾಯ ತನ್ನ ಕೊಳಲಿನ ನಿನಾದದ ಅಲೆಯನ್ನು ಮಧುರವಾಗಿ ತೇಲಿಸಿದರೆ, ಬೆಂಗಳೂರಿನ ವಿ| ಗೋಪಾಲರು ತಮ್ಮ ವೀಣೆಯ ಝೇಂಕಾರದಿಂದ ಕಳೆ ತುಂಬಿದರು. ಉತ್ತಮ ವೇದಿಕೆ, ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ, ಪ್ರಸಾಧನ ಮತ್ತು ವಸ್ತ್ರಾಲಂಕಾರಗಳ ಜತೆಗೆ ಪ್ರಬುದ್ಧ ಪ್ರೇಕ್ಷಕರು ಕೂಡ ಈ ರಂಗಪ್ರವೇಶದ ಯಶಸ್ಸಿಗೆ ಕಾರಣರು.

ಕುಂದಾಪುರದ ಹೆಬ್ಟಾರ್‌ ಕ್ಲಿನಿಕ್‌ನ ಡಾ| ಎಚ್‌.ಆರ್‌. ಹೆಬ್ಟಾರ್‌ ಹಾಗೂ ಡಾ| ಪುಷ್ಪಗಂಧಿನಿ ಹೆಬ್ಟಾರ್‌ ದಂಪತಿಯ ಪುತ್ರಿಯಾಗಿರುವ ಮಾಲವಿಕಾ ಕೂಡ ವೈದ್ಯೆ. ಮಣಿಪಾಲದ ಕೆಎಂಸಿಯಲ್ಲಿ ಜೆನೆಟಿಕ್ಸ್‌ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ. ತನ್ನ ಸ್ವ ಆಸಕ್ತಿ ಹಾಗೂ ಹೆತ್ತವರ ಒತ್ತಾಸೆಯಿಂದ ಎಳವೆಯಿಂದಲೇ ಭರತನಾಟ್ಯ ಕಲಿಕೆಗೆ ಒಡ್ಡಿಕೊಂಡವರು. ಈಕೆಯ ಪ್ರಥಮ ಗುರುಗಳು ಶ್ರೀನಿವಾಸ ಆಚಾರ್ಯ ಹಾಗೂ ಅವರ ಪುತ್ರಿ ಶ್ರದ್ಧಾ ಆಚಾರ್ಯ. ಆ ಬಳಿಕ ವಿ| ಲಕ್ಷ್ಮೀ ಗುರುರಾಜ್‌ ಅವರಿಂದ ನೃತ್ಯಶಿಕ್ಷಣವನ್ನು ಅತ್ಯಂತ ಶ್ರದ್ಧೆ, ಬದ್ಧತೆ ಹಾಗೂ ಪರಿಶ್ರಮಗಳಿಂದ ಪಡೆಯುತ್ತಿದ್ದಾರೆ.

ವಿ| ಪ್ರತಿಭಾ ಎಂ.ಎಲ್‌. ಸಾಮಗ

ಟಾಪ್ ನ್ಯೂಸ್

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

Arrest

Mangaluru: ಮದ್ಯ ಅಕ್ರಮ ದಾಸ್ತಾನು: ಮನೆ ಮೇಲೆ ಅಬಕಾರಿ ದಾಳಿ; ಮದ್ಯ ಸಹಿತ ಇಬ್ಬರು ವಶಕ್ಕೆ

1

Brahmavara: ಉದ್ಯೋಗ ಭರವಸೆ ನೀಡಿ ಹಣ ವಂಚನೆ

12

Manipal: ರೈಲಿನಲ್ಲಿ ಲಕ್ಷಾಂತರ ರೂ. ಒಡವೆ ಕಳ್ಳತನ

2

Mulki: ವ್ಯಕ್ತಿ ನಾಪತ್ತೆ; ಸೂಚನೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.