“ಜನಸ್ನೇಹಿ’ ಪೊಲೀಸ್ ವ್ಯವಸ್ಥೆಗೆ “ಬೀಟ್ ಪೊಲೀಸಿಂಗ್’
Team Udayavani, Mar 31, 2017, 7:17 AM IST
ಬೆಂಗಳೂರು: ಅಪರಾಧ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡುವ ದೂರದೃಷ್ಟಿ, ತಳಹಂತದ ಸಿಬ್ಬಂದಿಗೂ ಜವಾಬ್ದಾರಿಯ ನೊಗ ಹೊರಿಸಿ “ಜನಸ್ನೇಹಿ’ ಪೊಲೀಸ್ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಗೃಹ ಇಲಾಖೆ ಮಹತ್ವದ ಹೆಜ್ಜೆ ಯಿರಿಸಿದೆ. ಈ ನಿಟ್ಟಿನಲ್ಲಿ ಸದ್ಯ
ಚಾಲ್ತಿಯಿರುವ ಪೊಲೀಸ್ ಗಸ್ತು ವ್ಯವಸ್ಥೆಯ ರಚನೆ ಮತ್ತು ಕಾರ್ಯವಿಧಾನವನ್ನು ಬದಲಿಸಿ ಸುಧಾರಿತ “ಬೀಟ್ ಪೊಲೀಸಿಂಗ್’ ವ್ಯವಸ್ಥೆಯನ್ನು ಜಾರಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
“ಪ್ರದೇಶಕ್ಕೊಬ್ಬ ಪೊಲೀಸ್’ ತತ್ವದ ಅಡಿಯಲ್ಲಿ ರೂಪಿಸ ಲಾಗಿರುವ ಸುಧಾರಿತ ಬೀಟ್ ಪೊಲೀಸಿಂಗ್ ಪದ್ಧತಿಯು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಸಣ್ಣ ಪೊಲೀಸ್ ಘಟಕವಾಗಿ ಕಾರ್ಯನಿರ್ವಹಿಸಲಿದೆ. ಈ ಸುಧಾರಿತ ಬೀಟ್ ಪೊಲೀಸಿಂಗ್ ವ್ಯವಸ್ಥೆಯನ್ನ
ಏಪ್ರಿಲ್ 1 ರಿಂದ ಅಧಿಕೃತವಾಗಿ ಜಾರಿಗೊಳಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ ದತ್ತಾ, ಎಲ್ಲಾ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಿಬ್ಬಂದಿ ಸಂಖ್ಯೆಗೆ ಅನುಗುಣವಾಗಿ ವಿಂಗಡಣೆ: ಹೊಸ ಬೀಟ್ ಪೊಲೀಸಿಂಗ್ ಅನ್ವಯ ಪ್ರತಿ ಪೊಲೀಸ್ ಠಾಣೆಯಲ್ಲಿರುವ ಕಾನ್ಸ್‌ಟೇಬಲ… ಮತ್ತು ಹೆಡ್‌ಕಾನ್ಸ್ ಟೇಬಲ…, ಕ್ರೈಂ ಸಿಬ್ಬಂದಿ ಸೇರಿದಂತೆ ಠಾಣಾ ಸಿಬ್ಬಂದಿ ಒಟ್ಟು ಸಂಖ್ಯೆಗೆ ಅನುಗುಣವಾಗಿ ಆಯಾ ಪೊಲೀಸ್ ಠಾಣಾ ವ್ಯಾಪ್ತಿ ಯನ್ನು ವಿಂಗಡಣೆ ಮಾಡಿ, ಪ್ರತಿ ಸಿಬ್ಬಂದಿಗೂ ನಿರ್ದಿಷ್ಟ ಪ್ರದೇಶದ ಕಾರ್ಯನಿರ್ವಹಣೆಯ ಜವಾಬ್ದಾರಿ ವಹಿಸಲಾಗುತ್ತದೆ. ಈ ರೀತಿ ನೇಮಕಗೊಂಡ ಸಿಬ್ಬಂದಿ, ತಮಗೆ ವಹಿಸಿದ ಪ್ರದೇಶಕ್ಕೆ ಕರ್ತವ್ಯಾಧಿಕಾರಿಯಾಗಿರುತ್ತಾರೆ. ನಿರ್ದಿಷ್ಟ ಪ್ರದೇಶಕ್ಕೆ ಬೀಟ್ ಪೊಲೀಸ್ ಆಗಿ ನಿಯೋಜನೆಗೊಂಡ ಸಿಬ್ಬಂದಿ , ಅಪರಾಧ ಚಟುವಟಿಕೆಗಳ ಮೇಲೆ ಸದಾ ನಿಗವಹಿಸುವುದು, ಪಾಸ್‌ಪೋರ್ಟ್ ಪರಿಶೀ ಲನೆ, ಉದ್ಯೋಗ ಗುಣನಡತೆ ಪರಿಶೀಲನೆ, ಎಂಒಬಿ ಮತ್ತು ರೌಡಿಗಳ ಮಾಹಿತಿ, ನ್ಯಾಯಾಲಯದ ಆದೇಶಗಳ ಜಾರಿ ವ್ಯವಸ್ಥೆಯ ಪರಿಶೀಲನೆಯ ಕಾರ್ಯನಿರ್ವಹಣೆ ನಿಗದಿ ಪಡಿಸಲಾಗಿದೆ.
ನಾಗರಿಕ ಸದಸ್ಯರ ಆಯ್ಕೆ
ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ನಾಂದಿ ಹಾಡುವ ಸಲುವಾಗಿ, ಆಯಾ ಬೀಟ್ (ಗಸ್ತು)ನಲ್ಲಿ ಬರುವ ಗ್ರಾಮಗಳು ಅಥವಾ ಪ್ರದೇಶಗಳಲ್ಲಿ ಎಲ್ಲಾ ಧರ್ಮ, ಜಾತಿ ವಯೋಮಾನಕ್ಕೆ ಸೇರಿದ ಸೂಕ್ತವೆನಿಸುವಷ್ಟು ಸಂಖ್ಯೆಯ ಮಹಿಳೆ ಹಾಗೂ ಪುರುಷರನ್ನು ಬೀಟ್ ಪೊಲೀಸಿಂಗ್‌ನ ನಾಗರಿಕ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಅಂತಹ ನಿರ್ದಿಷ್ಟ ಪ್ರದೇಶದ ಬೀಟ್
ನ ಜವಾಬ್ದಾರಿ ಹೊತ್ತ ಸಿಬ್ಬಂದಿ, ನಾಗರಿಕ ಸದಸ್ಯರೊಡನೆ ಸತತ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಬೀಟ್ ಪೊಲೀಸರ ಮೊದಲ ಉಸ್ತುವಾರಿಯನ್ನು ಠಾಣೆಯ ಎಎಸ್‌ಐ ನೋಡಿಕೊಳ್ಳಲಿದ್ದಾರೆ.
ತಿಂಗಳಿಗೊಮ್ಮೆ ಸಭೆ
ಇನ್ನು ಆಯಾ ಪ್ರದೇಶದ ಉಸ್ತುವಾರಿಗೆ ನೇಮಕಗೊಂಡ ಸಿಬ್ಬಂದಿ ಒಂದು ವರ್ಷದವರೆಗೆ ಅದೇ ಪ್ರದೇಶದ ಜವಾಬ್ದಾರಿ
ವಹಿಸಿಕೊಳ್ಳಬೇಕು. ಆ ಪ್ರದೇಶದಲ್ಲಿ ಯಾವುದೇ ರೀತಿ ಅಕ್ರಮ ಚಟುವಟಿಕೆಗಳ ಬಗ್ಗೆ ನಿಗಾವಹಿಸಬೇಕು, ಪ್ರತಿ ಬೆಳವಣಿಗೆಯ
ಬಗ್ಗೆ ಠಾಣಾಧಿಕಾರಿಗೆ ಮಾಹಿತಿ ನೀಡಬೇಕು. ತಿಂಗಳಿಗೊಮ್ಮೆ ಠಾಣಾಧಿಕಾರಿ ಬೀಟ್ ಪೊಲೀಸ್ ಮತ್ತು ನಾಗರಿಕ ಸದಸ್ಯರ ನಡುವೆ ಸಭೆ ನಡೆಸಬೇಕು. ಸಭೆಯ ನಡಾವಳಿಗಳನ್ನು ಬೀಟ… ಪುಸ್ತಕದಲ್ಲಿ ದಾಖಲಿಸಬೇಕು. ಕಾನೂನು ಸುವ್ಯಸ್ಥೆ ಮತ್ತು ನೈಸರ್ಗಿಕ ದುರಂತ, ಅಪಾಯಕಾರಿ ಸಂದರ್ಭಗಳಲ್ಲಿ ಬೇರೆ ಬೇರೆ ಗಸ್ತು ಪೇದೆಗಳನ್ನು ಒಟ್ಟಾಗಿ ಕಾರ್ಯನಿರ್ವಹಣೆಗೆ ಕಳುಹಿಸಬೇಕು
ಎಂದು ನಿಯಮ ರೂಪಿಸಲಾಗಿದೆ.