ನೀವು ಗೆದ್ದಿಲ್ಲ ಎಂದ ಮಾತ್ರಕ್ಕೆ ಮತಯಂತ್ರ ದೂಷಿಸಬೇಡಿ
Team Udayavani, Apr 1, 2017, 10:20 PM IST
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಹಾಗೆಲುವು ಸಾಧಿಸಲು ಮತಯಂತ್ರಗಳನ್ನು ತಿರುಚಿದ್ದು ಕಾರಣ ಎಂದು ವಿಭಿನ್ನ ಆರೋಪ ಮಂಡಿಸಿದವರು ಬಿಎಸ್‌ಪಿ ನಾಯಕಿ ಮಾಯಾವತಿ. ಆ ಬಳಿಕ ಆಪ್ ನಾಯಕ ಅರವಿಂದ ಕೇಜ್ರಿವಾಲ್ ಅದಕ್ಕೆ ದನಿಗೂಡಿಸಿದರು. ಅದೊಂದು ರಾಷ್ಟ್ರಮಟ್ಟದ ಚರ್ಚೆಗೂ ಕಾರಣವಾಯಿತು. ಈ ಬಗ್ಗೆ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ವಿ. ಎಸ್. ಸಂಪತ್ ರೀಡಿಫ್ ಡಾಟ್‌ಕಾಮ್‌ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ಆರೋಪಗಳ ಬಗ್ಗೆ ನೀವೇನು ಹೇಳುತ್ತೀರಿ? ಅದು ಸಾಧ್ಯವೇ?
ನಮ್ಮ ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಕೆಗೆ ತಂದು ಸಾಕಷ್ಟು ಕಾಲವಾಗಿದೆ. ಸ್ವತಂತ್ರ, ಯಾವುದೇ ನೆಟ್
ವರ್ಕ್‌ನ ಭಾಗವಲ್ಲ ಎಂಬ ಅವುಗಳ ಸಂರಚನೆಯ ಮೂಲ ಸ್ವಭಾವದಿಂದಾಗಿ ಅವುಗಳನ್ನು ತಿರುಚುವುದು ಸಾಧ್ಯವಿಲ್ಲ. ಇದಲ್ಲದೆ ಚುನಾವಣಾ ಪ್ರಕ್ರಿಯೆಯ ವೇಳೆ ಅವು ಒಳಪಡುವ ಭದ್ರತೆ ಮತ್ತು ಸುರಕ್ಷತೆಯ ಕ್ರಮಗಳಿಂದಾಗಿಯೂ ಇವಿಎಂಗಳನ್ನು ತಿರುಚುವುದು ಅಸಾಧ್ಯವಾಗಿದೆ. 2010ರ ಸುಮಾರಿಗೆ ಅಮೆರಿಕದ ಒಬ್ಬರು ಪ್ರೊಫೆಸರ್ ಹರಿಪ್ರಸಾದ್ ಎಂಬುವರ ಜತೆ ಸೇರಿ ಒಂದು ಇವಿಎಂನ್ನು ಕದ್ದಿದ್ದರು; ಅದಕ್ಕೆ ಬ್ಲೂಟೂತ್ ಉಪಕರಣ ಅಳವಡಿಸಿ ಮೊಬೈಲ್ ಫೋನ್ ಸಂಕೇತಗಳ ಮುಖಾಂತರ ಫಲಿತಾಂಶವನ್ನು ತಿರುಚಲು ಸಾಧ್ಯ ಅನ್ನುವುದನ್ನು ಟಿವಿ ಮುಂದೆ ಪ್ರದರ್ಶಿಸಿ ತೋರಿಸಿದ್ದರು. ಅದೊಂದು ಕಚ್ಚಾ ಪ್ರಯತ್ನವಾಗಿತ್ತು. ಆದರೆ ಚುನಾವಣಾ ಆಯೋಗ ಆ ಪ್ರೊಫೆಸರ್ ಮತ್ತು ಇಡೀ ದೇಶಕ್ಕೆ ಚುನಾವಣೆಯಲ್ಲಿ ಬಳಕೆಯಾಗುವ ಇವಿಎಂಗಳು ಹಾಗೆಲ್ಲ ಯಾರಿಗೂ ಲಭ್ಯವಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿತ್ತು. ಯಾವುದೇ ಇಲೆಕ್ಟ್ರಾನಿಕ್ ಉಪಕರಣವಾಗಲಿ, ಯಾರಿಗಾದರೂ ಸಿಕ್ಕರೆ ಅದರ ಸಂರಚನೆಯಲ್ಲಿ ಮಾರ್ಪಾಟು ಉಂಟುಮಾಡಬಹುದು, ಅದನ್ನು ತಿರುಚಧಿಬಹುದು. ಆದರೆ, ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಉಪಯೋಗಿಸಲ್ಪಡುವ ಇವಿಎಂ ಬಗ್ಗೆ ಹೇಳುವುದಾದರೆ, ಅವು ಯಾವಾಗಲೂ ಚುನಾವಣಾ ಆಯೋಗದ ಸ್ವಾಧೀನದಲ್ಲಿ ಭದ್ರವಾಗಿರುತ್ತವೆ. ಯಾರಾದರೂ ಅದನ್ನು ಕದ್ದರೆ ಮರಳಿ ಅದನ್ನು ಚುನಾವಣಾ ಪ್ರಕ್ರಿಯೆಯ ಸರಪಣಿಯ ಒಳಕ್ಕೆ ಮರುಸ್ಥಾಪಿಸಲು ಸಾಧ್ಯವಿಲ್ಲ. ಹಾಗೇನಾದರೂ ನಡೆದರೂ ಮತಯಂತ್ರದ ಡಿಸ್‌ಪ್ಲೇಯನ್ನು ಮಾತ್ರ ಬದಲಾಯಿಸಲು ಸಾಧ್ಯ, ಅದರೊಳಗಿರುವ ಡಾಟಾವನ್ನಲ್ಲ. ಅದು ಒಂದು ಮತಯಂತ್ರದ ವಿಚಾರವಾಯಿತು; ಇಡೀ ಒಂದು ಚುನಾವಣೆಯ ಫಲಿತಾಂಶವನ್ನು ತಿರುಚಲು ಅದೆಷ್ಟು ಮತಯಂತ್ರಗಳನ್ನು ಕಳವು ಮಾಡಬೇಕು! ಮತಧಿಯಂತ್ರಗಳನ್ನು ತಿರುಚಲಾಗಿದೆ ಅನ್ನುವುದು ಗಮನ ನೀಡಬೇಕಾದ, ನಂಬಲರ್ಹವಾದ ಆಪಾದನೆ ಅಲ್ಲವೇ ಅಲ್ಲ.
ಇವಿಎಂಗಳ ಭದ್ರತೆ, ಸುರಕ್ಷೆಗೆ ಚುನಾವಣಾ ಆಯೋಗ ಕೈಗೊಳ್ಳುವ ಕ್ರಮಗಳೇನು?
ಚುನಾವಣೆ ನಡೆಯದ ಸಮಯದಲ್ಲೂ ಮತಯಂತ್ರಗಳಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. 2010ರವರೆಗೆ ಚುನಾವಣೆ ರಹಿತ ಸಮಯದಲ್ಲಿ ಮತಯಂತ್ರಗಳಿಗೆ ಸಶಸ್ತ್ರ ಭದ್ರತೆ ಇರಲಿಲ್ಲ. ಈಗ ಎಲ್ಲ ಕಾಲಗಳಲ್ಲೂ ಸಶಸ್ತ್ರ ಕಾವಲು ಖಾಯಂ ಆಗಿದೆ. ಚುನಾವಣೆಗೆ ಮುನ್ನ ಹಲವು ಸುತ್ತಿನ ತಪಾಸಣೆಗಳನ್ನು ನಡೆಸಿ ಮೊಹರು ಮಾಡಲಾಗುತ್ತದೆ. ಇವಿಎಂ ಕಂಪೆನಿಗಳ ತಾಂತ್ರಿಕ ತಜ್ಞರು ಹಳೆಯ ಡಾಟಾವನ್ನು ಸಂಪೂರ್ಣ ಅಳಿಸಿಹಾಕುತ್ತಾರೆ. ಇವೆಲ್ಲವನ್ನೂ ವಿವಿಧ ರಾಜಕೀಯ ಪಕ್ಷಗಳ ಪ್ರತಿಧಿನಿಧಿಗಳ ಸಮಕ್ಷಮದಲ್ಲಿಯೇ ನಡೆಸಲಾಗುತ್ತದೆ. ಹಳೆಯ ಡಾಟಾ ನಾಶವಾಗಿರುವುದು ಮತ್ತು ಹೊಸ ಮತಗಳು ದಾಖಲಾಗುತ್ತಿರುವುದನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳೇ ಪರೀಕ್ಷಿಸಿ ಖಾತರಿಪಡಿಸುತ್ತಾರೆ. ಆ ಬಳಿಕ ಇವಿಎಂಗಳು ಮತ್ತು ಅವುಗಳನ್ನಿರಿಸಿದ ಕೊಠಡಿಗಳನ್ನು ಮೊಹರು ಮಾಡಲಾಗುತ್ತದೆ. ಚುನಾವಣೆಯ ಸಂದರ್ಭದಲ್ಲಿ, ಅಭ್ಯರ್ಥಿಗಳ ಹೆಸರನ್ನು ಇವಿಎಂಗಳಿಗೆ ಫೀಡ್ ಮಾಡುವಾಗ ಅಭ್ಯರ್ಥಿಗಳ ಪ್ರತಿನಿಧಿಗಳು ಹಾಜರಿರುತ್ತಾರೆ. ಮತದಾನ ಆರಂಭವಾಗುವುದಕ್ಕೆ 30 ನಿಮಿಷ ಮುನ್ನ ಪಕ್ಷಗಳ ಪ್ರತಿನಿಧಿಗಳು ಮುಂದೆ ಅಣಕು ಮತದಾನ ನಡೆಸಿ ಮತ ಸರಿಯಾಗಿ ದಾಖಲಾಗುತ್ತಿರುವುದನ್ನು ಪರೀಕ್ಷಿಸಲಾಗುತ್ತದೆ. ಆ ಬಳಿಕ ಅಣಕು ಮತದಾನದ ಡಾಟಾ ಅಳಿಸಿ ಮತ್ತೆ ಮತಯಂತ್ರಗಳನ್ನು ಮೊಹರು ಮಾಡಲಾಗುತ್ತದೆ. ಇಷ್ಟು ಬಿಗಿಭದ್ರತೆ, ತಪಾಸಣೆಯ ಬಳಿಕವಷ್ಟೇ ಪ್ರತೀ ಇವಿಎಂ ಅನ್ನು ಮತದಾನದಲ್ಲಿ ಉಪಯೋಗಿಸುತ್ತೇವೆ. ಮತದಾನ ಮುಗಿದ ಮೇಲೆ ಕೂಡ ಯಂತ್ರಗಳ ಮತಗುಂಡಿಗಳ ಮೇಲೆ ಮೊಹರು ಮಾಡಲಾಗುತ್ತದೆ. ಮತಗಣನೆ ಕೇಂದ್ರಗಳಲ್ಲಿ ಇವಿಎಂ ಸ್ವೀಕರಿಸುವ ಮುನ್ನವೂ ಮೊಹರನ್ನು ಪರೀಕ್ಷಿಸಿಯೇ ಸ್ವೀಕರಿಸುತ್ತಾರೆ.
ನಿಮ್ಮ ಅನುಭವದಲ್ಲಿ ಮತಯಂತ್ರ ತೊಂದರೆಗೀಡಾದ ಉದಾಹರಣೆ ಇದೆಯೇ?
ಮತಯಂತ್ರಗಳನ್ನು ದಾಸ್ತಾನು ಮಾಡಲಾಗಿರುವ ಕೇಂದ್ರಗಳಲ್ಲಿ ಸಶಸ್ತ್ರ ಬಿಗಿ ಭದ್ರತೆಯಿರುತ್ತದೆ, ಸಿಸಿಟಿವಿ ಕಣ್ಗಾವಲು ಇರುತ್ತದೆ. ಅಪರೂಪದ ಸಂದರ್ಭಗಳಲ್ಲಿ ಮೊಹರುಗಳು ಉದ್ದೇಶಪೂರ್ವಕವಲ್ಲದೆ ಒಡೆದ, ಹಾನಿಗೊಂಡ ಪ್ರಕರಣಗಳು ನಡೆಯಬಹುದು. ಉದಾಹರಣೆಗೆ, ದುರ್ಗಮ ಪ್ರದೇಶಗಳಿಗೆ ಸಾಗಿಸುವಾಗ.
ಇವಿಎಂಗಳು ಚುನಾವಣಾ ಪ್ರಕ್ರಿಯೆಯನ್ನು ಪರಿವರ್ತಿಸಿವೆ ಅನ್ನುತ್ತೀರಾ? ಬ್ಯಾಲೆಟ್ ಪೇಪರ್‌ಗಿಂತ ಇವು ಸುರಕ್ಷಿತವೇ?
20-30 ವರ್ಷಗಳ ಹಿಂದೆ ದುಷ್ಕರ್ಮಿಗಳು ಮತಯಂತ್ರಧಿಗಳನ್ನು ಬಲವಂತಾಗಿ ಹೊತ್ತೂಯ್ಯುವ ಬೂತ್ ಕ್ಯಾಪರಿಂಗ್ ಪ್ರಕರಣಗಳು ನಡೆಯುತ್ತಿದ್ದವು. ರಿಪೋರ್ಟಿಂಗ್ ಆಫೀಸರ್‌ಗಳಿಗೆ ಬೆದರಿಕೆ ಹಾಕುವ ಮೂಲಕ ಇಂತಹ ಪ್ರಕರಣಗಳು ಯಾರ ಗಮನಕ್ಕೂ ಬಾರದಂತೆ ಕೂಡ ನೋಡಿಕೊಳ್ಳುತ್ತಿದ್ದರು. ಹೀಗೆ ರಟ್ಟೆಬಲ ಮತ್ತು ದಾದಾಗಿರಿಯಿಂದ ಅಭ್ಯರ್ಥಿಯೊಬ್ಬ ಗೆಲ್ಲುವುದಕ್ಕೆ ಸಾಧ್ಯವಿತ್ತು. ಇವಿಎಂಗಳ ಬಳಕೆ ಆರಂಭವಾದ ಮೇಲೆ ಮತದಾನ ಕೇಂದ್ರದಲ್ಲಿ ಭದ್ರತೆಗೆ ಯಾರೂ ಇಲ್ಲದಿದ್ದರೂ ನೀವು ಮತ ಚಲಾಯಿಸಿದಾಗ ವಿಶಿಷ್ಟ ಸಂಕೇತ ಶಬ್ದವೊಂದು ಹೊಮ್ಮುತ್ತದೆ. ಇದಲ್ಲದೆ, ಪ್ರತೀ ಮತ ಚಲಾವಣೆಯಾಗಲು ನಿರ್ದಿಷ್ಟ ಕನಿಷ್ಟ ಸಮಯವಿದೆ, ಹೀಗಾಗಿ 10-15 ನಿಮಿಷಗಳಲ್ಲಿ 500 ಮತ ಚಲಾವಣೆಯಾಗುವುದು ಅಸಾಧ್ಯ. ಬೂತ್ ಕ್ಯಾಪcರಿಂಗ್ ನಿಂತೇ ಹೋಗಿದೆ.
ಮತಯಂತ್ರ ತಿರುಚಲಾಗಿದೆ ಎಂಬಂತಹ ಆರೋಪಗಳು ಕೇಳಿಬಂದಾಗ ಚುನಾವಣಾ ಆಯೋಗ ಏನು ಮಾಡುತ್ತದೆ?
ಚುನಾವಣೆಯ ಪ್ರತೀ ಹಂತದಲ್ಲಿಯೂ ಇವಿಎಂ ಬಗೆಗೆ ವಿವಿಧ ನಿರ್ದಿಷ್ಟ ಭದ್ರತೆ ಮತ್ತು ಸುರಕ್ಷತೆಯ ಕ್ರಮಗಳು ಇದ್ದೇ ಇವೆ, ಹಾಗಾಗಿ ಇವತ್ತು ತಪಾಸಣೆ ನಡೆಸಿ ಪ್ರಮಾಣಪತ್ರ ನೀಡಬೇಕಾದಂಥ ವಿಚಾರ ಇದಲ್ಲ. ದಾಸ್ತಾನು, ಮತಕ್ಷೇತ್ರ, ಮತದಾನ ಮತ್ತು ಎಣಿಕೆ ಕೇಂದ್ರ -ಹೀಗೆ ವಿವಿಧ ಹಂತಗಳಲ್ಲಿ ತಪಾಸಣೆ ನಡೆಸದೆ ಅಂತಹ ಪ್ರಮಾಣಪತ್ರವನ್ನು ಕೊಡುವುದಕ್ಕೂ ಸಾಧ್ಯವಿಲ್ಲ. ಆದರೆ, ಚುನಾವಣೆಯ ಫಲಿತಾಂಶ ತಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದಮಾತ್ರಕ್ಕೆ ಮತಯಂತ್ರ ತಿರುಚಲಾಗಿದೆ ಎಂದು ಆರೋಪಿಸಿದರೆ ಅದು ಮೂರ್ಖತನವಲ್ಲದೆ ಬೇರೇನೂ ಅಲ್ಲ.
ವಿ. ಎಸ್. ಸಂಪತ್, ನಿವೃತ್ತ ಮುಖ್ಯ ಚುನಾವಣಾ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.