ಅಂತಿಮ ಪಂದ್ಯದಲ್ಲಿ ಎಡವಿದ ವಿಂಡೀಸ್: ಪಾಕಿಸ್ಥಾನಕ್ಕೆ 3-1 ಸರಣಿ
Team Udayavani, Apr 4, 2017, 2:51 PM IST
ಪೋರ್ಟ್ ಆಫ್ ಸ್ಪೇನ್: ಮಧ್ಯಮ ವೇಗಿ ಹಸನ್ ಅಲಿ ಮತ್ತು ಲೆಗ್‌ಸ್ಪಿನ್ನರ್ ಶಾದಾಬ್ ಖಾನ್ ದಾಳಿಗೆ ತತ್ತರಿಸಿದ ಆತಿಥೇಯ ವೆಸ್ಟ್ ಇಂಡೀಸ್ 4ನೇ ಹಾಗೂ ನಿರ್ಣಾಯಕ ಟಿ-20 ಪಂದ್ಯದಲ್ಲಿ ಮತ್ತೆ ಸೋಲಿನ ಆಘಾತಕ್ಕೆ ಸಿಲುಕಿದೆ. ಪಾಕಿಸ್ಥಾನ 3-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.
ಇಲ್ಲಿನ “ಕ್ವೀನ್ಸ್ ಪಾರ್ಕ್ ಓವಲ್’ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ 8 ವಿಕೆಟಿಗೆ 124 ರನ್ನುಗಳ ಸಾಮಾನ್ಯ ಮೊತ್ತ ಪೇರಿಸಿದರೆ, ಪಾಕಿಸ್ಥಾನ 19 ಓವರ್‌ಗಳಲ್ಲಿ 3 ವಿಕೆಟಿಗೆ 127 ರನ್ ಬಾರಿಸಿ ವಿಜಯಿಯಾಯಿತು. ಸರಣಿ ಸಮಬಲಕ್ಕೆ ತರಬೇಕಾದರೆ ಆತಿಥೇಯ ವಿಂಡೀಸ್ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು.
3 ಓವರ್ ಮೇಡನ್
ವಿಂಡೀಸ್ ಬ್ಯಾಟಿಂಗಿಗೆ ನಿಯಂತ್ರಣ ಹೇರುವಲ್ಲಿ ಮೀಡಿಯಂ ಪೇಸ್ ಬೌಲರ್ ಹಸನ್ ಅಲಿ ಪ್ರಮುಖ ಪಾತ್ರ ವಹಿಸಿದರು. ಅಲಿ ಸಾಧನೆ 12 ರನ್ನಿಗೆ 2 ವಿಕೆಟ್. 4 ಓವರ್‌ಗಳ ಕೋಟಾದಲ್ಲಿ ಅವರು 2 ಓವರ್‌ಗಳನ್ನು ಮೇಡನ್ ಮಾಡಿದ್ದರು. ಇನ್ನೊಂದು ಮೇಡನ್ ಓವರ್ ರುಮ್ಮನ್ ರಯೀಸ್ ಅವರಿಂದ ಬಂತು. ಈ ಸರಣಿಯ ಶೋಧವೆನಿಸಿದ ಶಾದಾಬ್ ಖಾನ್ ಸಾಧನೆ 16ಕ್ಕೆ 2 ವಿಕೆಟ್. ಹಸನ್ ಅಲಿ ಪಂದ್ಯಶ್ರೇಷ್ಠ, ಶಾದಾಬ್ ಖಾನ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಪಾಕ್ ಚೇಸಿಂಗ್ ವೇಳೆ ಆರಂಭಕಾರ ಅಹ್ಮದ್ ಶೆಹಜಾದ್ 53 ರನ್ ಬಾರಿಸಿ ಮಿಂಚಿದರು (45 ಎಸೆತ, 6 ಬೌಂಡರಿ, 1 ಸಿಕ್ಸರ್). ಮತ್ತೂಬ್ಬ ಓಪನರ್ ಕಮ್ರಾನ್ ಅಕ್ಮಲ್ 20 ರನ್, ಬಾಬರ್ ಆಜಂ 38 ರನ್ ಬಾರಿಸಿದರು. ಮೊದಲ ವಿಕೆಟಿಗೆ 6.2 ಓವರ್‌ಗಳಿಂದ 40 ರನ್, ದ್ವಿತೀಯ ವಿಕೆಟಿಗೆ ಶೆಹಜಾದ್-ಆಜಂ 10.4 ಓವರ್‌ಗಳಿಂದ 70 ರನ್ ಪೇರಿಸಿದರು.
ವೆಸ್ಟ್ ಇಂಡೀಸ್ ಪರ ಮೂವರಷ್ಟೇ ಎರಡಂಕೆಯ ಮೊತ್ತ ತಲುಪಿದರು. ಇವರಲ್ಲಿ ಓಪನರ್ ಚಾಡ್ವಿಕ್ ವಾಲ್ಟನ್ ಸರ್ವಾಧಿಕ 40 ರನ್ ಹೊಡೆದರೆ (31 ಎಸೆತ, 2 ಬೌಂಡರಿ, 4 ಸಿಕ್ಸರ್), ನಾಯಕ ಕಾರ್ಲೋಸ್ ಬ್ರಾತ್‌ವೇಟ್ ಔಟಾಗದೆ 37, ಸಾಮ್ಯುಯೆಲ್ಸ್ 22 ರನ್ ಮಾಡಿದರು.
ಇತ್ತಂಡಗಳಿನ್ನು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಲಿವೆ. ಮೊದಲ ಪಂದ್ಯ ಎ. 7ರಂದು ಗಯಾನಾದಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-8 ವಿಕೆಟಿಗೆ 124 (ವಾಲ್ಟನ್ 40, ಬ್ರಾತ್‌ವೇಟ್ ಔಟಾಗದೆ 37, ಸಾಮ್ಯುಯೆಲ್ಸ್ 22, ಹಸನ್ ಅಲಿ 12ಕ್ಕೆ 2, ಶಾದಾಬ್ 16ಕ್ಕೆ 2). ಪಾಕಿಸ್ಥಾನ-19 ಓವರ್‌ಗಳಲ್ಲಿ 3 ವಿಕೆಟಿಗೆ 127 (ಶೆಹಜಾದ್ 53, ಆಜಂ 38, ವಿಲಿಯಮ್ಸ್ 16ಕ್ಕೆ 2). ಪಂದ್ಯಶ್ರೇಷ್ಠ: ಹಸನ್ ಅಲಿ, ಸರಣಿಸ್ರೇಷ್ಠ: ಶಾದಾಬ್ ಖಾನ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.