ನೇತ್ರಾಣಿ ದ್ವೀಪವೀಗ ನಿರಂತರ ಸ್ಕೂಬಾ ಡೈವಿಂಗ್ ತಾಣ
Team Udayavani, Apr 6, 2017, 3:45 AM IST
ಕಾರವಾರ: ನೇತ್ರಾಣಿ ದ್ವೀಪದಲ್ಲಿನ ಸ್ಕೂಬಾ ಡೈವಿಂಗ್ ದೇಶ ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತಿದ್ದು, ಕರ್ನಾಟಕ ಕರಾವಳಿಯ ಮುರುಡೇಶ್ವರ ಬಳಿಯ ಸಮುದ್ರದ ನಡುಗಡ್ಡೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ನೇತ್ರಾಣಿ ದ್ವೀಪ ಸಮುದ್ರದೊಳಗಿನ ಜೀವವೈವಿಧ್ಯ ಹಾಗೂ ಹವಳದ ದಿಬ್ಬಗಳಿಗೆ ಹೆಸರಾಗಿದೆ. ಈ ಹಿನ್ನೆಲೆಯಲ್ಲಿ ರವೀಂದ್ರನಾಥ ಟ್ಯಾಗೋರ್ ಕಡಲ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಮೂರು ಖಾಸಗಿ ಕಂಪನಿಗಳಿಗೆ ಟೆಂಡರ್ ಮೂಲಕ ದ್ವೀಪದ ಸುತ್ತಲಿನ ಸಮುದ್ರದಲ್ಲಿ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌ಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಡೈವ್ ಗೋವಾ, ಮುಂಬಯಿನ ವೆಸ್ಟ್ ಕೋಸ್ಟ್ ಮತ್ತು ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ ಸಂಸ್ಥೆಗಳು ಗುತ್ತಿಗೆ ಪಡೆದುಕೊಂಡಿವೆ. ಜಲ ಸಾಹಸ ಮತ್ತು ಜಲಚರ ಜೀವವೈವಿಧ್ಯದಲ್ಲಿ ಆಸಕ್ತರನ್ನು ಸೆಳೆಯಲಾಗುತ್ತಿದೆ.
ಡೈವಿಂಗ್‌ಗೆ ತಕ್ಕ ತಾಣ:
ನೇತ್ರಾಣಿ ದ್ವೀಪದ ಸುತ್ತಲಿನ ಸಮುದ್ರದಾಳದ ಜೀವ ಜಗತ್ತು ಅಪರೂಪದ್ದು. ಅಂಡಮಾನ್- ನಿಕೋಬಾರ್, ಲಕ್ಷದ್ವೀಪ, ಪಾಂಡಿಚೇರಿ ಹಾಗೂ ಗೋವಾ ಬಿಟ್ಟರೆ ಸ್ಕೂವಾ ಡೈವಿಂಗ್‌ಗೆ ಹೇಳಿ ಮಾಡಿಸಿದ ತಾಣ ಇರುವುದು ನೇತ್ರಾಣಿಯಲ್ಲಿ ಮಾತ್ರ. ನೇತ್ರಾಣಿ ದ್ವೀಪದ ಸುತ್ತಲಿನ ಕಡುನೀಲಿ ಬಣ್ಣದ ಸಮುದ್ರದಲ್ಲಿ ದಿನವಿಡೀ 9ರಿಂದ 12 ಮೀಟರ್ ತನಕ ಸಮುದ್ರದ ತಳಭಾಗ ದೋಣಿಯಲ್ಲಿ ನೋಡಿದರೂ ಕಾಣುತ್ತದೆ. ಆಮ್ಲಜನಕದ ಸಿಲಿಂಡರ್ ಸಹಾಯ ಪಡೆದು ಸಮುದ್ರದೊಳಗೆ ಪ್ರವೇಶಿಸಿದರೆ ವೈವಿಧ್ಯಮಯ ಮೀನುಗಳನ್ನು ಕಾಣಬಹುದು.
ನೇತ್ರಾಣಿ ದ್ವೀಪ ಕಾರವಾರದಿಂದ 130 ಕಿ.ಮೀ. ದೂರದಲ್ಲಿದೆ. ಭಟ್ಕಳ ತಾಲೂಕಿನ ಮುರುಡೇಶ್ವರದಿಂದ ಸಮುದ್ರದಲ್ಲಿ ಒಂದೂವರೆ ತಾಸಿನಲ್ಲಿ 17 ಕಿ.ಮೀ. ಪಯಣಿಸಿದರೆ ನೇತ್ರಾಣಿಯ ದರ್ಶನವಾಗುತ್ತದೆ. ನೀಲಿ ಬಟ್ಟಲಿನಲ್ಲಿ ಹಸಿರು ತಟ್ಟೆಯನ್ನು ತೇಲಿ ಬಿಟ್ಟಂತೆ ಕಾಣುವ ನೇತ್ರಾಣಿ ದ್ವೀಪ ಸಹಜ ಸುಂದರಿ.
ಜಿಲ್ಲಾಧಿಕಾರಿ ಯತ್ನ ಸಫಲ:
ಸ್ಕೂಬಾ ಡೈವಿಂಗ್ ಅನಧಿಕೃತವಾಗಿ 10 ವರ್ಷದ ಹಿಂದೆಯೇ ಪ್ರಾರಂಭವಾಗಿತ್ತು. ಮುಂಬಯಿ ಮೂಲದವರು ಗೋವಾ ಪ್ರವಾಸಿಗರನ್ನು ವರ್ಷದಲ್ಲಿ ನಾಲ್ಕಾರು ಬಾರಿ ಸ್ಕೂಬಾ ಡೈವಿಂಗ್ ಮಾಡಲು ಮತ್ತು ತರಬೇತಿ ನೀಡಲು ಕರೆತರುತ್ತಿದ್ದರು. ಆದರೆ ನಾಲ್ಕು ವರ್ಷಗಳಿಂದ ಪೂರ್ಣವಾಗಿ ಸ್ಥಗಿತವಾಗಿತ್ತು. ಅಂಡಮಾನ್ ನಿಕೋಬಾರ್, ಲಕ್ಷ ದ್ವೀಪದಲ್ಲಿ ನಿರಂತರವಾಗಿ ಸ್ಕೂಬಾ ಡೈವಿಂಗ್ ನಡೆಯುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆಸಕ್ತಿ ವಹಿಸಿದರು. ಟೆಂಡರ್ ಕರೆದು ನುರಿತ ಸ್ಕೂಬಾ ಡೈವಿಂಗ್ ನಡೆಸುವ ಕಂಪನಿಗಳ ಮೂಲಕ ರಾಯಲ್ಟಿ ಕಟ್ಟಿಸಿಕೊಳ್ಳುವ ಕರಾರು ಮಾಡಿಕೊಂಡು ಜಲಸಾಹಸ ನಿರಂತರವಾಗಿ ನಡೆಯುವಂತೆ ನೋಡಿಕೊಂಡರು.
2016 ಅಕ್ಟೋಬರ್‌ನಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದರೂ ಸ್ಥಳೀಯ ಕೆಲ ಮೀನುಗಾರರ ವಿರೋಧದಿಂದ ಸ್ಕೂಬಾ ಡೈವಿಂಗ್ ನಡೆಸಲು ಸಾಧ್ಯವಾಗಿರಲಿಲ್ಲ. ಇದೇ ಜನವರಿಯಲ್ಲಿ ಸ್ಕೂಬಾ ಡೈವಿಂಗ್‌ಗೆ ತೆರಳುತ್ತಿದ್ದ ಪ್ರವಾಸಿಗರ ಮೇಲೆ ಹಲ್ಲೆಯೂ ನಡೆಯಿತು. ಮೀನುಗಾರರಲ್ಲಿ ಇರುವ ಅನುಮಾನ ಹೋಗಲಾಡಿಸಿದ ನಂತರ ಯಾವುದೇ ಸಮಸ್ಯೆ ಎದುರಾಗಿಲ್ಲ. ಫೆಬ್ರವರಿಯಿಂದ ನಿರಂತರವಾಗಿ ಸ್ಕೂಬಾ ಡೈವಿಂಗ್ ನಡೆಯುವಂತೆ ಜಿಲ್ಲಾಡಳಿತ ನೋಡಿಕೊಂಡಿದೆ. ಸ್ಥಳೀಯರಿಗೂ ಉದ್ಯೋಗಾವಕಾಶಗಳು ಲಭ್ಯವಾಗಿವೆ. ಜಿಲ್ಲಾಡಳಿತದ ಬೀಚ್ ಅಭಿವೃದ್ಧಿ ಸಮಿತಿಗೆ ವಾರ್ಷಿಕವಾಗಿ ಮೂರು ಸ್ಕೂಬಾ ಡೈವಿಂಗ್ ಕಂಪನಿಗಳಿಂದ 16 ಲಕ್ಷ ರೂ. ಆದಾಯ ಬರಲಿದೆ.
ಪ್ರವಾಸಿಗರಲ್ಲಿ ಹೆಚ್ಚಳ:
ಸ್ಕೂಬಾ ಡೈವಿಂಗ್‌ನಿಂದಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ತಿಂಗಳಿಗೆ ಸರಾಸರಿ 100 ಪ್ರವಾಸಿಗರು ಸ್ಕೂಬಾ ಡೈವಿಂಗ್ ಮಾಡಲು ಬರತೊಡಗಿದ್ದಾರೆ. ಮುರುಡೇಶ್ವರ ಬೀಚ್‌ನಲ್ಲಿ ಜಲಸಾಹಸ ಕ್ರೀಡೆ ಹಾಗೂ ಪ್ಯಾರಾ ಗ್ಲೆ„ಡಿಂಗ್ ಮಾಡಲು ಉದ್ಯಮಿಯೊಬ್ಬರು ಗುತ್ತಿಗೆ ಪಡೆದಿದ್ದು, ಅವರು ವರ್ಷಕ್ಕೆ 1.20 ಕೋಟಿ ರೂ.ಗಳನ್ನು ಜಿಲ್ಲಾಡಳಿತದ ಬೀಚ್ ಅಭಿವೃದ್ಧಿ ಸಮಿತಿಗೆ ನೀಡಲು ಸಮ್ಮತಿಸಿದ್ದಾರೆ.
ಸ್ಕೂಬಾ ಡೈವಿಂಗ್‌ಗೆ ಕರೆದೊಯ್ಯುವ ಬೋಟ್‌ಗಳು ಲಂಗರು ಹಾಕುವಾಗ ಹವಳದ ದಿಬ್ಬಗಳಿಗೆ ಹಾನಿಯಾಗದಂತೆ 50 ಕೆಜಿ ತೂಕದ 6 ಸಿಮೆಂಟ್ ಬ್ಲಾಕ್ ಮಾಡಿ ನೀರಿನಾಳಕ್ಕೆ ಇಳಿಸಿ, ಅದಕ್ಕೆ ಶಾಶ್ವತವಾಗಿ ರೂಫ್ ಕಟ್ಟಲು ಚಿಂತನೆ ನಡೆದಿದೆ. ಬೋಟ್‌ಗಳ ನಿಲುಗಡೆಯ ಆ್ಯಂಕರ್ (ಲಂಗರು ) ಹವಳದ ದಿನ್ನೆಗೆ ತಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಮೀನುಗಾರರಿಗೆ ಇದ್ದ ತಪ್ಪು ಕಲ್ಪನೆಗಳನ್ನು ನಿವಾರಿಸಲಾಗಿದೆ. ಬರುವ ದಿನಗಳಲ್ಲಿ ನೇತ್ರಾಣಿ ದ್ವೀಪದಲ್ಲಿ “ಸ್ಕೂಬಾ ಡೈವಿಂಗ್ ಉತ್ಸವ’ ನಡೆಸಲು ಚಿಂತನೆ ನಡೆದಿದೆ.
– ಎಸ್.ಎಸ್.ನಕುಲ್, ಜಿಲ್ಲಾಧಿಕಾರಿ, ಉತ್ತರ ಕನ್ನಡ
– ನಾಗರಾಜ್ ಹರಪನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.