ಮಧುಗಿರಿಯ ಸಾವಿರಾರು ಜನರಿಂದ ನೇತ್ರಾವತಿ ದರ್ಶನ
Team Udayavani, Apr 12, 2017, 12:29 PM IST
ಬೆಳ್ತಂಗಡಿ: ತುಮಕೂರು ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದ ಸುಮಾರು 3,000 ಮಂದಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ನೇತ್ರಾವತಿ ನದಿಯ ಸ್ಥಿತಿಗತಿ ವೀಕ್ಷಿಸಿದರು. ಇದಕ್ಕೂ ಮುನ್ನ ಎತ್ತಿನಹೊಳೆ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿದ್ದರು.
ಮಧುಗಿರಿ ಕ್ಷೇತ್ರದ ಶಾಸಕ, ವಿಧಾನಧಿಸಭಾ ಭರವಸೆ ಈಡೇರಿಕೆ ಸಮಿತಿಯ ಕೆ. ಎನ್. ರಾಜಣ್ಣ ಅವರ ನೇತೃತ್ವದಲ್ಲಿ ಮಧುಗಿರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಧುಗಿರಿ ವಿಧಾನಸಭಾ ಕ್ಷೇತ್ರದ ಜನರನ್ನು ಎತ್ತಿನಹೊಳೆ ಕಾಮಗಾರಿ ಪ್ರಗತಿ ವೀಕ್ಷಣೆಗೆ ಕರೆತರಲಾಗಿತ್ತು. ಬಸ್, ಕ್ರೂಸರ್ ಜೀಪು, ಟೆಂಪೋ ಟ್ರಾವೆಲರ್, ಇನ್ನೋವಾ ಸೇರಿದಂತೆ 280ರಷ್ಟು ವಾಹನಗಳಲ್ಲಿ ಬೆಳಗ್ಗೆ ಮಧುಗಿರಿಯಿಂದ ಹೊರಟ ಮಂದಿಗೆ ಹಾಸನದ ಶಾಂತಿಗ್ರಾಮದಲ್ಲಿ ಊಟದ ಏರ್ಪಾಟು ಮಾಡಲಾಗಿತ್ತು. ಅನಂತರ ಸಕಲೇಶಪುರದ ಎತ್ತಿನಹೊಳೆಯಲ್ಲಿ ನಡೆಯುತ್ತಿರುವ 12,900 ಕೋ.ರೂ.ಗಳ ಕಾಮಗಾರಿ ವೀಕ್ಷಣೆಗೆ ಅವಕಾಶ ನೀಡಲಾಯಿತು. ಅಲ್ಲಿಂದ ಸಂಜೆ 3.30ರ ನಂತರ ಹತ್ತಾರು ವಾಹನಗಳು ಧರ್ಮಸ್ಥಳ ತಲುಪಿದವು.
ಶಾಸಕ ಕೆ.ಎನ್. ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ, ನಗರ ಸಭಾ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ, ಜಿ.ಪಂ. ಸದಸ್ಯರಾದ ಶಾಂತಲಾ ರಾಜಣ್ಣ, ಜಿ.ಜೆ. ರಾಜಣ್ಣ, ತಾ.ಪಂ. ಅಧ್ಯಕ್ಷೆ ಇಂದಿರಾ ದೇವಾನಾೖಕ್ ಮೊದಲಾದವರು ಇದ್ದರು.
ಶಾಸಕರ ನೇತೃತ್ವದ ನಿಯೋಗ ಧರ್ಮಸ್ಥಳದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗುವ ಇರಾದೆ ಹೊಂದಿದೆ. ಆದರೆ ನಿಯೋಗ ಧರ್ಮಸ್ಥಳ ತಲುಪುವಾಗಲೇ ರಾತ್ರಿಯಾಗಿದೆ. ಹಾಗೂ ಡಾ| ಹೆಗ್ಗಡೆಯವರು ಕೂಡ ಕಾರ್ಯಕ್ರಮ ನಿಮಿತ್ತ ಕೆರ್ವಾಶೆಗೆ ತೆರಳಿದ್ದು ರಾತ್ರಿಯಷ್ಟೇ ಮರಳಿದ್ದಾರೆ. ಆದ್ದರಿಂದ ಬುಧವಾರ ನಿಯೋಗ ಭೇಟಿ ಮಾಡಲಿದೆ. ಆಗಮಿಸಿದ ಸಾರ್ವಜನಿಕರು ದೇವರ ದರ್ಶನ, ಪ್ರಸಾದ ಭೋಜನ ಸೀÌಕರಿಸಿ ಊರಿಗೆ ಮರಳಲಿದ್ದಾರೆ.
ಭಿಕ್ಷೆ ಬೇಡುತ್ತೇವೆ
ನಗರಸಭೆ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ ಅವರನ್ನು ಮಾಧ್ಯಮದವರು ಮಾತನಾಡಿಸಿದಾಗ, ನಮ್ಮಲ್ಲಿ ಎಷ್ಟು ಕೊರೆದರೂ ನೀರಿಲ್ಲ. ಸದಾ ಬರದ ಸ್ಥಿತಿ ಇದೆ. ಮಳೆ ಇಲ್ಲ. ಜಾನುವಾರುಗಳಿಗೆ ಮೇವಿಲ್ಲ. ಜನರಿಗೆ ನೀರಿಲ್ಲ. ದ.ಕ.ದಲ್ಲಿ ಹರಿದು ಪೋಲಾಗುವ, ಸಮುದ್ರ ಸೇರುವ ನೀರನ್ನಷ್ಟೇ ನಮಗೆ ಬೊಗಸೆಯಲ್ಲಾದರೂ ಭಿಕ್ಷೆಯ ರೂಪದಲ್ಲಾದರೂ ಕುಡಿಯಲು ಕೊಡಿ ಎಂದು ಕೇಳುತ್ತಿದ್ದೇವೆ ಎಂದರು. ಕಾಮಗಾರಿ ವೀಕ್ಷಿಸಿದಾಗ ಅಲ್ಲಿ 24 ಟಿಎಂಸಿ ನೀರು ಇರದು ಎಂದು ನಿಮಗೆ ಅನಿಸಿಲ್ಲವೇ ಎಂದು ಪ್ರಶ್ನಿಸಿದಾಗ ಮುಂದಾದರೂ ಮಳೆ ಬಂದು ಅಲ್ಲಿ ನೀರು ಸಂಗ್ರಹವಾಗಿ ನಮಗೆ ದೊರೆಯಲಿ ಎಂದಷ್ಟೇ ನಮ್ಮ ಪ್ರಾರ್ಥನೆ. ಧರ್ಮಸ್ಥಳ ದೇವರಲ್ಲಿ ಕೂಡ ನಾವು ಅದನ್ನೇ ಪ್ರಾರ್ಥಿಸುವುದು, ಒಳ್ಳೆ ಮಳೆಯಾಗಿ ನಮಗೆ ನೀರು ದೊರೆಯಲಿ ಎಂದರು.
ಕುಡಿಯುವ ನೀರಿಗೆ ಆಕ್ಷೇಪವಲ್ಲ
ಎತ್ತಿನಹೊಳೆ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಶಶಿಕಿರಣ್ ಜೈನ್, ಹರೀಶ್ ಪೂಂಜಾ, ಕಿರಣ್ ಶೆಟ್ಟಿ ಮೊದಲಾದವರ ನಿಯೋಗ ಮಧುಗಿರಿಯಿಂದ ಆಗಮಿಸಿದವರನ್ನು ದಿಢೀರ್ ಭೇಟಿ ಮಾಡಿತು. ಎತ್ತಿನಹೊಳೆ ಕಾಮಗಾರಿಯೇ ಬೋಗಸ್. ಇಲ್ಲಿ ನೇತ್ರಾವತಿಯಲ್ಲಿಯೇ ನೀರಿಲ್ಲ. ಇನ್ನು ಕಾಮಗಾರಿ ಪ್ರದೇಶದಲ್ಲಿ 24 ಟಿಎಂಸಿ ದೊರೆಯಲು ಹೇಗೆ ಸಾಧ್ಯ. ಕುಡಿಯುವ ನೀರು ಕೊಡಲು ದ.ಕ. ಜನ ವಿರೋಧ ಅಲ್ಲ. ಇಲ್ಲದ ನೀರಿಗಾಗಿ ಹಣ ಪೋಲು ಮಾಡುತ್ತಿರುವ ಕುರಿತು ಮಾತ್ರ ಆಕ್ಷೇಪ. ದ.ಕ. ಹಾಗೂ ಇತರ ಜಿಲ್ಲೆಗಳ ಜನರ ನಡುವೆ ಮನಸ್ತಾಪದ ಅಗತ್ಯವಿಲ್ಲ. ಹೊಂದಾಣಿಕೆ ಮೂಲಕ ಮಾಹಿತಿ ನೀಡುವ ಕಾರ್ಯ ಸರಕಾರದಿಂದ ಆಗುತ್ತಿಲ್ಲ ಎಂದು ಮನವರಿಕೆ ಮಾಡಲಾಯಿತು.
ಮಳೆ ಬಂತು
ಸಾವಿರಾರು ಮಂದಿ ಎತ್ತಿನಹೊಳೆ ಪ್ರದೇಶದಲ್ಲಿ ವೀಕ್ಷಣೆಗೆ ಇಳಿದಾಗ ಅಚಾನಕ್ ಆಗಿ ಮಳೆ ಬಂತು. ಆಗಮಿಸಿದವರಿಗೆ ಹರ್ಷ ತಂದಿತು. ಇದೇ ರೀತಿ ಮಳೆಯಾಗಿ ನೀರು ಉಕ್ಕಿ ಹರಿಯಲಿ ಎಂದು ಪ್ರಾರ್ಥಿಸಿದರು.
ಪೊಲೀಸ್ ಬಂದೋಬಸ್ತ್
ಸಾವಿರಾರು ಮಂದಿ ಒಮ್ಮೆಲೇ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಎತ್ತಿನಹೊಳೆ ಪ್ರದೇಶದಿಂದ ಧರ್ಮಸ್ಥಳ ವರೆಗೂ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.