ಹೈದರಾಬಾದ್‌ಗೆ ಇಂದು ಮೊದಲ ಅಗ್ನಿಪರೀಕ್ಷೆ
Team Udayavani, Apr 12, 2017, 3:23 PM IST
ಮುಂಬಯಿ: ಹಾಲಿ ಚಾಂಪಿಯನ್ ಸನ್‌ರೈಸರ್ ಹೈದರಾಬಾದ್ 10ನೇ ಐಪಿಎಲ್‌ನಲ್ಲಿ ಬುಧವಾರ ಮೊದಲ ಸಲ ಅಗ್ನಿಪರೀಕ್ಷೆಗೆ ಗುರಿಯಾಗಲಿದೆ. ಎರಡೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ವಾರ್ನರ್ ಪಡೆ ಮುಂಬೈ ಇಂಡಿಯನ್ಸ್ ಸವಾಲಿಗೆ ಜವಾಬು ನೀಡಬೇಕಿದೆ.
ಚಾಂಪಿಯನ್ ರೀತಿಯಲ್ಲೇ ಆಟವಾಡುತ್ತಿರುವ ಹೈದರಾಬಾದ್ ಮೊದಲೆರಡು ಪಂದ್ಯಗಳಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಲಯನ್ಸ್‌ಗೆ ಸೋಲುಣಿಸಿತ್ತು. ಅಂತರ 35 ರನ್ ಹಾಗೂ 8 ವಿಕೆಟ್. ಆದರೆ ಸನ್‌ರೈಸರ್ ಈ ಎರಡೂ ಪಂದ್ಯ ಗಳನ್ನು ಆಡಿದ್ದು ತವರು ನೆಲವಾದ ಹೈದರಾಬಾದ್‌ನಲ್ಲಿ. ಈಗ ಮೊದಲ ಬಾರಿಗೆ ತವರಿನಾಚೆ ಆಡಲಿಳಿಯಲಿದೆ. ಮುಂಬೈ ವಿರುದ್ಧದ ಈ ಪಂದ್ಯ ನಡೆಯುವುದು “ವಾಂಖೇಡೆ ಸ್ಟೇಡಿಯಂ’ನಲ್ಲಿ. ಹೀಗಾಗಿ ಸಹಜವಾಗಿಯೇ ಹೆಚ್ಚಿನ ಕುತೂಹಲ ಮೂಡಿದೆ.
ಸೋಲಿನಿಂದ ಗೆಲುವಿಗೆ…
ಇನ್ನೊಂದೆಡೆ ರೋಹಿತ್ ಶರ್ಮ ಸಾರಥ್ಯದ ಮುಂಬೈ ಇಂಡಿಯನ್ಸ್ ಸೋಲಿನ ಆರಂಭ ಕಂಡರೂ ಅನಂತರ ಗೆಲುವಿನ ಟ್ರ್ಯಾಕ್ ಏರಿದೆ. ಸೋಲು ಎದುರಾದದ್ದು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ, ಪುಣೆಯಲ್ಲಿ. ಅಂತರ 7 ವಿಕೆಟ್. ಆಗ ಕೇವಲ ಒಂದು ಎಸೆತವಷ್ಟೇ ಉಳಿದಿತ್ತು. ಕೈರನ್ ಪೊಲಾರ್ಡ್ ಅವರ 2 ಎಸೆತಗಳನ್ನು ಬೆನ್ನು ಬೆನ್ನಿಗೆ ಸಿಕ್ಸರ್‌ಗೆ ರವಾನಿಸಿದ ಸ್ಟೀವನ್ ಸ್ಮಿತ್ ಮುಂಬೈ ತಂಡದ ಗೆಲುವನ್ನು ಕಸಿದಿದ್ದರು.
ಮುಂಬೈ ಇಂಡಿಯನ್ಸ್ ತನ್ನ 2ನೇ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಗೆ 4 ವಿಕೆಟ್‌ಗಳ ಸೋಲುಣಿಸಿತು. ಆಗಲೂ ಒಂದು ಎಸೆತ ಉಳಿದದ್ದು ಕಾಕತಾಳೀಯ. ಯುವ ಬ್ಯಾಟ್ಸ್‌ಮನ್ ನಿತೀಶ್ ರಾಣ ಅಮೋಘ ಬೀಸುಗೆಯಲ್ಲಿ 50 ರನ್ ಬಾರಿಸಿ ಮುಂಬೈಗೆ ಗೆಲುವು ತಂದಿತ್ತಿದ್ದರು. ಇದಕ್ಕೂ ಹಿಂದಿನ ಪಂದ್ಯದಲ್ಲಿ ಕೆಕೆಆರ್ 10 ವಿಕೆಟ್‌ಗಳಿಂದ ಗುಜರಾತ್ ಲಯನ್ಸ್‌ಗೆ ಸೋಲುಣಿಸಿದ್ದನ್ನು ಮರೆಯುವಂತಿಲ್ಲ.
ಅಂದಹಾಗೆ ಮುಂಬೈಗೆ ಈ ಗೆಲುವು ಒಲಿದದ್ದು “ವಾಂಖೇಡೆ ಸ್ಟೇಡಿಯಂ’ನಲ್ಲಿ ಎಂಬುದನ್ನಿಲ್ಲಿ ಗಮನಿಸಬೇಕು. ತವರು ಅಂಗಳ ಮುಂಬೈಗೆ ಅದೃಷ್ಟವನ್ನು ತೆರೆದಿರಿಸಿದೆ. ತಂಡದ ಉತ್ಸಾಹ ಸಹಜವಾಗಿಯೇ ಹೆಚ್ಚಿದೆ.
ಮುಂಬೈ ಮೊದಲ ಪಂದ್ಯವನ್ನು ಪ್ರಧಾನ ಬೌಲರ್‌ಗಳಾದ ಲಸಿತ ಮಾಲಿಂಗ, ಹರ್ಭಜನ್ ಸಿಂಗ್ ಅನುಪಸ್ಥಿತಿಯಲ್ಲಿ ಆಡಿತ್ತು. ಆದರೆ ಕೋಲ್ಕತಾ ವಿರುದ್ಧ ಇವರಿಬ್ಬರೂ ತಂಡವನ್ನು ಕೂಡಿಕೊಂಡರು. ಹೀಗಾಗಿ ತಂಡದ ಬೌಲಿಂಗ್ ಸಾಮರ್ಥ್ಯ ಸಹಜವಾಗಿಯೇ ಹೆಚ್ಚಿದೆ.
ಪಾರ್ಥಿವ್ ಪಟೇಲ್, ಬಟ್ಲರ್, ರಾಣ, ಪಾಂಡ್ಯದ್ವಯರು ಮುಂಬೈ ತಂಡದ ಇನ್ನಿತರ ಪ್ರಮುಖರು. ಆದರೆ ತವರಿನ ಈ ಪಂದ್ಯದಲ್ಲಿ ಮುಂಬೈ ಒಂದೆರಡು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಅಪಾಯಕಾರಿ ಹೈದರಾಬಾದ್
ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಸನ್‌ರೈಸರ್ ಹೈದರಾಬಾದ್ ಅತ್ಯಂತ ಅಪಾಯಕಾರಿ ತಂಡ ಎಂಬುದರಲ್ಲಿ ಅನುಮಾನವಿಲ್ಲ. ಹಾಗೆಯೇ ಅದಕ್ಕೆ ಈವರೆಗೆ ಎದುರಾದ ತಂಡಗಳೂ ಬಲಾಡ್ಯವಾಗೇನೂ ಇರಲಿಲ್ಲ. ಗುಜರಾತ್ ಮತ್ತು ಆರ್‌ಸಿಬಿಗಿಂತ ಮುಂಬೈ ಹೆಚ್ಚು ಶಕ್ತಿಶಾಲಿ ಎಂಬುದನ್ನು ವಾರ್ನರ್ ಬಳಗ ಅರಿಯಬೇಕಿದೆ.
ಕಪ್ತಾನ ಡೇವಿಡ್ ವಾರ್ನರ್ ಸ್ವತಃ ಮುಂಚೂ ಣಿಯಲ್ಲಿ ನಿಂತು ರನ್ ಪೇರಿಸುವ ಸಾಮರ್ಥ್ಯ ಹೊಂದಿದ್ದಾರೆ. ಶಿಖರ್ ಧವನ್, ಮೊಸಸ್ ಹೆನ್ರಿಕ್ಸ್, ಯುವರಾಜ್ ಸಿಂಗ್, ದೀಪಕ್ ಹೂಡಾ ಅವರೆಲ್ಲ ಬ್ಯಾಟಿಂಗ್ ಸರದಿಯ ಇತರ ಹುರಿಯಾಳುಗಳು.ಬೌಲಿಂಗ್ ವಿಭಾಗ ರಶೀದ್ ಖಾನ್, ಆಶಿಷ್ ನೆಹ್ರಾ, ಭುವನೇಶ್ವರ್ ಕುಮಾರ್, ಬೆನ್ ಕಟಿಂಗ್, ಬಿಪುಲ್ ಶರ್ಮ ಅವರಿಂದ ಸದೃಢವಾಗಿದೆ.
ಹೀಗಾಗಿ ಮುಂಬೈ ಇಂಡಿಯನ್ಸ್-ಸನ್‌ರೈಸರ್ ಹೈದರಾಬಾದ್ ನಡುವಿನ ಬುಧವಾರ ರಾತ್ರಿಯ ಪೈಪೋಟಿ ಕಾವೇರಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.