ಬೂದಿ ಮುಚ್ಚಿದ್ದ ಕೆಂಡ ಮತ್ತೆ ಬೆಂಕಿ ಹತ್ತಿಸಿದೆ!
Team Udayavani, Apr 15, 2017, 4:00 AM IST
“ವಾರದ ಹಿಂದೆಯೇ ಡೇವಿಸ್ ಕಪ್ ತಂಡದಲ್ಲಿ ಯಾರ್ಯಾರು ಆಡಬೇಕು ಅನ್ನುವುದು ಅಂತಿಮ ನಿರ್ಧಾರವಾಗಿಬಿಟ್ಟಿತ್ತು. ಇದನ್ನು ಮೊದಲೇ ಹೇಳಬಹುದಿತ್ತು. ಆದರೆ ಮೆಕ್ಸಿಕೋದಿಂದ ನನ್ನನ್ನ ಕರೆಯಿಸಿ ಅವಮಾನ ಮಾಡುವ ಅಗತ್ಯವಿರಲಿಲ್ಲ. ಒಂದೇ ಒಂದು ಫೋನ್ ಕರೆಗೆ ಬಂದಿದ್ದೇನೆ. ಒಬ್ಬ ಟೆನಿಸ್ ಪ್ರೇಮಿಯಾಗಿ, ದೇಶಕ್ಕಾಗಿ ಆಡಲು ಯಾವಾಗಲೂ ಸಿದ್ಧ’ ಈ ಮಾತನ್ನು ಹೇಳಿದ್ದು, ಖ್ಯಾತ ಟೆನಿಸಿಗ ಲಿಯಾಂಡರ್ ಪೇಸ್. ಡೇವಿಸ್ ಕಪ್‌ಗೆ ಪದಾರ್ಪಣೆ ಮಾಡಿ 27 ವರ್ಷಗಳ ನಂತರ ಸ್ಥಾನ ಕಳೆದುಕೊಂಡ ನೋವು ಪೇಸ್ ಮುಖದಲ್ಲಿತ್ತು. ಇದೇ ನೋವಲ್ಲಿ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತನಾಗಿದ್ದ, ಸದ್ಯ ಭಾರತ ತಂಡದ ಆಟವಾಡದ ನಾಯಕ ಮಹೇಶ್ ಭೂಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೂಪತಿ ನಾಯಕನಾದಾಗಲೇ ಸುಳಿವು
ಭಾರತ ತಂಡಕ್ಕೆ ಆಟವಾಡದ ತಂಡದ ನಾಯಕನಾಗಿದ್ದ ಪ್ರಕಾಶ್ ಅಮೃತ್‌ರಾಜ್ ನಿವೃತ್ತಿಯ ನಂತರ ಯಾರು ಅನ್ನುವ ಪ್ರಶ್ನೆ ಬಂದಿತ್ತು. ಅಂತಿಮವಾಗಿ ಆ ಪಟ್ಟ ಖ್ಯಾತ ಟೆನಿಸ್ ಆಟಗಾರ, ಪೇಸ್‌ಗೆ ಒಂದು ಕಾಲದ ಆತ್ಮೀಯ ಸ್ನೇಹಿತನಾಗಿದ್ದ ಮಹೇಶ್ ಭೂಪತಿಗೆ ಒಲಿಯಿತು. ಈ ಸಂದರ್ಭದಲ್ಲಿಯೇ ಪೇಸ್ ಮತ್ತು ಭೂಪತಿ ನಡುವಿನ ಹೊಂದಾಣಿಕೆ ಹೇಗಿರುತ್ತೆ? ಇಬ್ಬರೂ ತಮ್ಮ ಮುನಿಸನ್ನು ಬಿಟ್ಟು ಮತ್ತೇ ಒಂದಾಗುತ್ತಾರಾ? ಇಲ್ಲವೇ ಗುದ್ದಾಟ ನಡೆಸುತ್ತಾರಾ? ಅನ್ನುವ ಕುತೂಹಲ ಟೆನಿಸ್ ಪ್ರೇಮಿಗಳಲ್ಲಿತ್ತು. ಅಂತೂ ಟೆನಿಸ್ ಪ್ರೇಮಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ದುರಾದೃಷ್ಟವಶಾತ್ ಗುದ್ದಾಟ ನೋಡಬೇಕಾಗಿದೆ.
ನಿವೃತ್ತಿಯ ಸನಿಹದಲ್ಲಿ ಅವಮಾನ
ಸಾಮಾನ್ಯವಾಗಿ ಕ್ರೀಡಾ ಜಗತ್ತಿನಲ್ಲಿ ಮಿಂಚಿ ಸ್ಟಾರ್ ಆದ ಆಟಗಾರರಲ್ಲಿ ನಿವೃತ್ತಿಯ ಸಮೀಪ ಅವಮಾನ ಅನುಭವಿಸಿದವರೇ ಹೆಚ್ಚು. ಕ್ರಿಕೆಟಿಗರಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿ.ವಿ.ಎಸ್.ಲಕ್ಷ್ಮಣ್….ಜೀವನದಲ್ಲಿಯೂ ಇದನ್ನು ನೋಡಿದ್ದೇವೆ. ಸಚಿನ್ ತೆಂಡುಲ್ಕರ್‌ಗೂ ಕೂಡ ನಿವೃತ್ತಿ ಘೋಷಿಸಲು ಬಿಸಿಸಿಐ ಆಯ್ಕೆ ಮಂಡಳಿ ಸೂಚಿಸಿತ್ತು ಎನ್ನುವುದು ಇತ್ತೀಚೆಗೆ ಸಂದೀಪ್ ಪಟೇಲ್ ಸುದ್ದಿಯನ್ನು ಹೊರಹಾಕಿದ್ದರು. ಇದೀಗ ಈ ಸಾಲಿಗೆ ಲಿಯಾಂಡರ್ ಪೇಸ್ ಹೊಸ ಸೇರ್ಪಡೆಯಾಗಿದ್ದಾರೆ ಅಷ್ಟೇ. ಹೀಗಾಗಿ ಹಲವು ಆಟಗಾರರು ಫಾರ್ಮ್ನಲ್ಲಿರುವಾಗಲೇ ನಿವೃತ್ತಿ ಘೋಷಿಸಿ ಬಿಡುತ್ತಾರೆ. ಭಾರತಕ್ಕೆ ಟಿ20, ಏಕದಿನ ವಿಶ್ವಕಪ್ ತಂದುಕೊಟ್ಟ ಎಂ.ಎಸ್.ಧೋನಿ ಫಾರ್ಮ್ನಲ್ಲಿದ್ದರೂ ನಾಯಕ ಸ್ಥಾನಕ್ಕೆ ನಿವೃತ್ತಿ ಘೋಷಿಸಿದ್ದನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಕ್ರೀಡಾ ಜಗತ್ತಲ್ಲಿ ಗೌರವಯುತ ನಿವೃತ್ತಿ ತುಂಬಾ ಕಡಿಮೆ.
ಡಬಲ್ಸ್‌ನಲ್ಲಿ ಯಶಸ್ವಿ ಜೋಡಿ
ಒಂದು ಕಾಲದಲ್ಲಿ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಡಬಲ್ಸ್‌ನಲ್ಲಿ ಯಶಸ್ವಿ ಜೋಡಿ. ಎದುರಾಳಿಗಳು ಯಾರೇ ಆದರೂ ಅವರನ್ನು ಬಗ್ಗು ಬಡಿಯುವ ಕೌಶಲ್ಯ ಈ ಜೋಡಿಯಲ್ಲಿತ್ತು. ಈ ಜೋಡಿ ಹಲವಾರು ಎಟಿಪಿ ಪ್ರಶಸ್ತಿಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಗ್ರ್ಯಾನ್ ಸ್ಲಾಮ್‌ನಲ್ಲಿ 2 ಫ್ರೆಂಚ್ ಓಪನ್, 1 ವಿಂಬಲ್ಡ್‌ನ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಅದೇ ರೀತಿ ಮೂರು ಗ್ರ್ಯಾನ್ ಸ್ಲಾಮ್‌ನಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತರಾಗಿದ್ದಾರೆ. ಟೆನಿಸ್ ಪ್ರೇಮಿಗಳು ಇವರನ್ನು ನೋಡಿ ಖುಷಿಪಟ್ಟಿದ್ದಾರೆ. ನಾನು ಪೇಸ್ ಅಥವಾ ಭೂಪತಿ ಹಾಗೇ ಆಗಬೇಕು ಎಂದು ಯುವ ಟೆನಿಸ್ ಪ್ರತಿಭೆಗಳು ಕನಸು ಕಂಡಿದ್ದಾರೆ. ಆದರೆ ಅಲ್ಪ ಕಾಲದಲ್ಲಿಯೇ ಇಬ್ಬರ ನಡುವೆ ವಿರಸ ಉಂಟಾಗಿದ್ದು, ವಿಪರಿರ್ಯಾಸ. ಜತೆಗೆ ಭಾರತೀಯ ಟೆನಿಸ್‌ಗೂ ನಷ್ಟ. ಇಲ್ಲದಿದ್ದರೆ ಭಾರತಕ್ಕೆ ಇನ್ನಷ್ಟು ಗ್ರ್ಯಾನ್ ಸ್ಲಾಮ್ ಮತ್ತು ಎಟಿಪಿ ಪ್ರಶಸ್ತಿಗಳು ಹರಿದು ಬರುವುದು ಖಚಿತವಾಗಿತ್ತು.
ಪೇಸ್ ಜತೆ ಆಡಲು ಹಿಂಜರಿಕೆ ಯಾಕೆ?
ಮಹೇಶ್ ಭೂಪತಿ ಮಾತ್ರವಲ್ಲ. ಇತರೆ ಯುವ ಆಟಗಾರರು ಕೂಡ ಪೇಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೇಸ್ ಜತೆ ಆಡುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್ ಮತ್ತು 2016 ರಿಯೋ ಒಲಿಂಪಿಕ್ಸ್‌ನಲ್ಲಿ ಇದನ್ನು ನಾವು ನೋಡಿದ್ದೇವೆ. ಡಬಲ್ಸ್‌ನಲ್ಲಿ ಆಡಲು ರೋಹನ್ ಬೋಪಣ್ಣ ಹಿಂದೆ ಸರಿಯುವ ಸೂಚನೆ ನೀಡಿದ್ದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ನಡೆದ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ನಾನು ಪೇಸ್ ಜತೆ ಆಡುವುದಿಲ್ಲ ಎಂದು ನೇರವಾಗಿಯೇ ಹೇಳಿಬಿಟ್ಟಿದ್ದರು. ಆದರೆ ಅಖೀಲ ಭಾರತ ಟೆನಿಸ್ ಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆ ಹರಿದಿತ್ತು. ಮಹೇಶ್ ಭೂಪತಿ ಮತ್ತು ಪೇಸ್ ನಡುವಿನ ಮುನಿಸಿಗೆ ಏನಾದರೂ ಕಾರಣ ಇರಬಹುದು. ಆದರೆ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಅವರಂತವರೂ ಕೂಡ ಪೇಸ್ ಜತೆ ಆಡಲು ಹಿಂಜರಿಯುವುದು ಯಾಕೆ? ಅನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
27 ವರ್ಷಗಳ ನಂತರ ಪೇಸ್ ಔಟ್!
ಲಿಯಾಂಡರ್ ಪೇಸ್ ಮೊದಲ ಬಾರಿಗೆ ಡೇವಿಸ್ ಕಪ್ ಆಡಿದ್ದು, 1990ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ 27 ವರ್ಷಗಳ ಕಾಲ ರಾಷ್ಟ್ರೀಯ ತಂಡದಲ್ಲಿ ಆಡುತ್ತಾ ಬಂದಿದ್ದಾರೆ. ಯಾವುದೇ ಕ್ರೀಡೆಯಲ್ಲಿ ಇಷ್ಟೊಂದು ದೀರ್ಘಾವಧಿ ಇರುವುದು ಅಷ್ಟು ಸಲಭವಲ್ಲ. ಫಾರ್ಮ್ ಕಾಯ್ದುಕೊಳ್ಳುವುದು ಒಂದು ರೀತಿಯ ಸವಾಲಾಗಿರುತ್ತೆ. ಫಿಟೆ°ಸ್, ಗಾಯ…ಹೀಗೆ ನಾನಾ ಕಾರಣಗಳು ಅಡ್ಡಿಯಾಗಿ ಬಿಡುತ್ತವೆ. ಪೇಸ್ ಅವೆಲ್ಲವನ್ನು ಮೆಟ್ಟಿನಿಂತು ಇಷ್ಟು ವರ್ಷಗಳ ಕಾಲ ಟೆನಿಸ್‌ನಲ್ಲಿರುವುದು ವಿಶೇಷ. ಕ್ರಿಕೆಟ್ ದಂಥಕತೆ ಸಚಿನ್ ತೆಂಡುಲ್ಕರ್ ವೃತ್ತಿ ಜೀವನ ಕೂಡ 24 ವರ್ಷಕ್ಕೆ ಅಂತ್ಯವಾಗಿದೆ ಅನ್ನುವುದನ್ನು ನಾವು ಮನಗಾಣಬಹುದು. ಈ ನಿಟ್ಟಿನಲ್ಲಿ ನಮಗೆ ಪೇಸ್ ವಿಶೇಷವಾಗಿ ಕಾಣಿಸುತ್ತಾರೆ. 1996ರ
ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದ ಕೀರ್ತಿ ಇವರದಾಗಿದೆ. ಇಂತಹ ಜನಪ್ರಿಯ ಆಟಗಾರ ಪೇಸ್ ಉಜ್ಬೇಕಿಸ್ಥಾನ್ ವಿರುದ್ಧ ನಡೆದ ಡೇವಿಸ್ ಕಪ್ ತಂಡದಿಂದ ಹೊರಬಿದ್ದಿರುವುದು ಅವರ ಅಭಿಮಾನಿಗಳಲ್ಲಿ ನೋವಿದೆ. ಆದರೆ ಯುವ ಆಟಗಾರರಿಗೆ ಅವಕಾಶ ಸಿಕ್ಕಿದೆ ಅನ್ನುವುದನ್ನು ಮರೆಯಲಾಗದು. ಅದೇನೆ ಇರಲಿ ಇದು ಪೇಸ್ ಟೆನಿಸ್ ವೃತ್ತಿ ಜೀವನ ನಿವೃತ್ತಿಯ ಸನೀಹ ಅನ್ನುವುದನ್ನು ಸೂಚಿಸುತ್ತಿದೆ.
ಮಂಜು ಮಳಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.