ನಿರೀಕ್ಷೆಯಂತೆ ಪರಿಣಾಮಕಾರಿ ಆಡಳಿತ ಕೊಡಲಾಗುತ್ತಿಲ್ಲ: ಕಾಗೋಡು ವಿಷಾದ
Team Udayavani, Apr 18, 2017, 3:45 AM IST
ಬೆಂಗಳೂರು: “ಅಧಿಕಾರಿಗಳು ಮತ್ತು ಶಾಸಕರು ಸರಿಯಾಗಿ ಸಹಕರಿಸದ ಕಾರಣ ನನ್ನ ನಿರೀಕ್ಷೆ ಪ್ರಕಾರ ಪರಿಣಾಮಕಾರಿ ಆಡಳಿತ ಕೊಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನನಗೆ ನೋವು, ಬೇಸರ ಇದೆ’.
ಬಗರ್‌ಹುಕುಂ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡಲು ಮಾರ್ಚ್ ಅಂತ್ಯದ ಗಡುವು ವಿಧಿಸಿದ್ದರೂ ಅರ್ಧಕ್ಕಿಂತಲೂ ಹೆಚ್ಚು ಕೆಲಸ ಬಾಕಿ ಇರುವ ಬಗ್ಗೆ ಹಾಗೂ ನಗರ ಅಕ್ರಮ-ಸಕ್ರಮ (94ಸಿಸಿ) ಮತ್ತು ಗ್ರಾಮೀಣ ಅಕ್ರಮ-ಸಕ್ರಮ (94 ಸಿ) ಯೋಜನೆಯಡಿ ಅರ್ಜಿಗಳು ಇತ್ಯರ್ಥವಾಗದ ಬಗ್ಗೆ ಈ ರೀತಿ ತಮ್ಮ ಬೇಸರ ಹೇಳಿಕೊಂಡಿದ್ದು ಸ್ವತಃ ಕಂದಾಯ ಸಚಿವ ಕಾಗೋಡು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಗರ್‌ಹುಕುಂ ಅರ್ಜಿಗಳನ್ನು ಇತ್ಯರ್ಥಪಡಿಸಲು ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಭೆಗೆ ಶಾಸಕರು ಸರಿಯಾಗಿ ಬಾರದೆ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ ಎಂದು ಹೆಚ್ಚುವರಿ ಸಮಿತಿಗಳನ್ನು ಮಾಡಲು ಹೊರಟರೆ ಅದಕ್ಕೂ ತಾವೇ ಅಧ್ಯಕ್ಷರಾಗಬೇಕು ಎಂದು ಶಾಸಕರು ಹೇಳುತ್ತಾರೆ. ಇನ್ನು ಕಾಲಮಿತಿಯಲ್ಲಿ ಕೆಲಸ ನಿರ್ವಹಿಸುವಂತೆ ಸರ್ಕಾರ ಸಾಕಷ್ಟು ಬಾರಿ ಸುತ್ತೋಲೆ, ಆದೇಶ ಹೊರಡಿಸಿದರೂ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ. ಹಾಗೆಂದು ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಮಾನತುಗೊಳಿಸಿದರೆ ಕೆಲಸ ಮಾಡಲು ಅಧಿಕಾರಿಗಳೇ ಇಲ್ಲ ಎನ್ನುವಂತಾಗುತ್ತದೆ. ಈ ಸಂಕಟದಲ್ಲಿ ನಾನಿದ್ದೇನೆ ಎಂದು ಹೇಳಿದರು.
3 ಲಕ್ಷ ಬಗರ್ ಹುಕುಂ ಅರ್ಜಿ ಬಾಕಿ
ಬಗರ್‌ಹುಕುಂ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡಲು ಸರ್ಕಾರ ಅರ್ಜಿ ಆಹ್ವಾನಿಸಿದ್ದು, ಮಾರ್ಚ್ ಅಂತ್ಯದೊಳಗೆ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡಲು ತೀರ್ಮಾನಿಸಿತ್ತು. ಅದರಂತೆ ಸುಮಾರು 5 ಲಕ್ಷ ಅರ್ಜಿಗಳು ಬಂದಿದ್ದು, ಇದುವರೆಗೆ ಎರಡು ಲಕ್ಷ ಅರ್ಜಿ ಮಾತ್ರ ವಿಲೇವಾರಿಯಾಗಿ ಇನ್ನೂ ಮೂರು ಲಕ್ಷ ಅರ್ಜಿ ಬಾಕಿ ಉಳಿದಿದೆ. ಇವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅರ್ಜಿ ಸಮಿತಿಯ ಮೂವರು ಸದಸ್ಯರದಲ್ಲಿ ಇಬ್ಬರು ಇದ್ದರೂ ಇತ್ಯರ್ಥಪಡಿಸುವಂತೆ ಸೂಚಿಸಲಾಗಿತ್ತು. ಅದರಂತೆ ಇಬ್ಬರು ಕುಳಿತು ಅರ್ಜಿ ಇತ್ಯರ್ಥಪಡಿಸಿದರೂ ಹಕ್ಕುಪತ್ರ ವಿತರಿಸಲು ಅಡ್ಡಿಪಡಿಸಲಾಗುತ್ತಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಈ ಮಧ್ಯೆ ಬಾಕಿ ಅರ್ಜಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ತಾಲೂಕಿನಲ್ಲಿ ಹೆಚ್ಚುವರಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಆದರೆ, ಈ ಸಮಿತಿಗೂ ತಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಕೆಲವು ಶಾಸಕರು ಹೇಳುತ್ತಿದ್ದಾರೆ. ಮೊದಲ ಸಮಿತಿಯಲ್ಲೇ ಸರಿಯಾಗಿ ಕೆಲಸ ನಿರ್ವಹಿಸದ ಶಾಸಕರನ್ನು ಎರಡನೇ ಸಮಿತಿಗೂ ಅಧ್ಯಕ್ಷರನ್ನಾಗಿ ಮಾಡಿದರೆ ಹೇಗೆ ಕೆಲಸವಾಗುತ್ತದೆ ಎಂದು ಅವರು ಪ್ರಶ್ನಿಸಿದರು.
ಈ ಮಧ್ಯೆ ಹಕ್ಕುಪತ್ರ ವಿತರಿಸಲು ಡೀಮ್ಡ್ ಫಾರೆಸ್ಟ್ ಮತ್ತು ಗೋಮಾಳ ಜಮೀನಿನ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ವೇ ನಡೆಸಿ ಸಾಗುವಳಿ ಜಮೀನಿನಲ್ಲಿ ಡೀಮ್ಡ್ ಫಾರೆಸ್ಟ್ ಇದ್ದರೆ ಅದನ್ನು ಕೈಬಿಟ್ಟು ಕಂದಾಯ ಜಮೀನಿಗೆ ಹಕ್ಕುಪತ್ರ ನೀಡಬೇಕು ಎಂದು ಸೂಚಿಸಲಾಗಿದೆ. ಅದೇ ರೀತಿ ಗೋಮಾಳ ಜಮೀನಿಗೆ ಸಂಬಂಧಿಸಿದಂತೆ ಒಂದು ಬಾರಿಯ ಕ್ರಮ ಎಂದು ಪರಿಗಣಿಸಿ ಅವುಗಳಿಗೆ ಹಕ್ಕುಪತ್ರ ನೀಡುವಂತೆ ತಿಳಿಸಲಾಗಿದೆ. ಹೇಗಾದರೂ ಮಾಡಿ ಇನ್ನು 3-4 ತಿಂಗಳಲ್ಲಿ ಇರುವ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.
ಅಕ್ರಮ-ಸಕ್ರಮ:
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿಕೊಂಡಿರುವ ಮನೆಗಳನ್ನು 94ಸಿ ಮತ್ತು 94 ಸಿಸಿ ಅಡಿ ಸಕ್ರಮ ಮಾಡಿಕೊಡಲು ಸಲ್ಲಿಸಿರುವ ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲು ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಲೆಕ್ಕಿಗರು, ಕಾರ್ಯದರ್ಶಿ ಮತ್ತು ಕಂದಾಯ ಇನ್ಸ್‌ಪೆಕ್ಟರ್ ಅವರು ಗ್ರಾಮನಕ್ಷೆ ಪರಿಶೀಲಿಸಿ ಯಾವ ಸರ್ವೇ ನಂಬರ್‌ನಲ್ಲಿ ಮನೆ ಇದೆ ಎಂಬುದನ್ನು ಗುರುತಿಸಿ ಸ್ಥಳದಲ್ಲೇ ಮನೆ ಮಾಲೀಕರಿಂದ ಅರ್ಜಿ ಪಡೆದು ಸಕ್ರಮಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ. ಇನ್ನು ಎರಡು ತಿಂಗಳಲ್ಲಿ ಅಕ್ರಮ ಮನೆಗಳನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮತ್ತೆ ಅರ್ಜಿ ಸಲ್ಲಿಸಲು ಅವಕಾಶ
ಬಗರ್‌ಹುಕುಂ ಹಾಗೂ ನಗರ ಮತ್ತು ಗ್ರಾಮೀಣ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಮತ್ತೆ ಒಂದು ಅಥವಾ ಎರಡು ತಿಂಗಳು ಅವಕಾಶ ನೀಡುವ ಬಗ್ಗೆ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಬಗರ್ ಹುಕುಂ ಸಾಗುವಳಿ ಪತ್ರಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್ ಕೊನೆಯವರೆಗೆ ಕಾಲಾವಕಾಶ ವಿಸ್ತರಿಸಲಾಗಿತ್ತು. ಆದರೂ ಇನ್ನೂ ಸಾಕಷ್ಟು ಮಂದಿ ಅರ್ಜಿ ಸಲ್ಲಿಸದ ಕಾರಣ ಅವಧಿ ವಿಸ್ತರಿಸುವ ಅನಿವಾರ್ಯತೆ ಇದೆ. ಅದೇ ರೀತಿ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸುವ ಕಾಲಮಿತಿಯನ್ನೂ ವಿಸ್ತರಿಸಬೇಕಾಗಿದೆ. ಹೀಗಾಗಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ
Editorial: ಸುವರ್ಣ ಕರ್ನಾಟಕ: ವಿಕಾಸಕ್ಕೆ ಕಾರ್ಯಸೂಚಿ ಅಗತ್ಯ
ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು
Kannada: ಬೆಳೆ ಕನ್ನಡ : ಸರಣಿ-1 ಕನ್ನಡ ಚಿತ್ರರಂಗ; ಬದಲಾದ ಬದುಕೇ ಸಿನೆಮಾ ಭಾಷೆಗೂ ಕುತ್ತು
New Delhi: ಹುಸಿ ಬಾಂಬ್ ಕರೆ ಪತ್ತೆಗೆ ಇಂಟರ್‌ಪೋಲ್ ಮೊರೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.