ಇಂದು ಬಿಜೆಪಿ ಆತ್ಮಾವಲೋಕನ ಸಭೆ
Team Udayavani, Apr 23, 2017, 3:45 AM IST
ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಆತ್ಮಾವಲೋಕನ ಸಭೆ ಕರೆದಿದ್ದಾರೆ. ಪಕ್ಷದಲ್ಲಿ ಮತ್ತೆ ಬಹಿರಂಗಗೊಂಡಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.
ಆದರೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಅಸಮಾಧಾನಿತರ ಗುಂಪು ಈ ಸಭೆಗೆ ಬರುವ ಸಾಧ್ಯತೆ ಇಲ್ಲ. ಹೀಗಾಗಿ ಸಭೆ ಹೆಚ್ಚಿನ ಕಾವೇರಿಸದಿದ್ದರೂ ಸೋಲಿನ ಪರಾಮರ್ಷೆ ಸಂದರ್ಭದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾದ ಕೆಲವೊಂದು ಅಂಶಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಈಶ್ವರಪ್ಪ ಅವರು ಪೂರ್ವನಿಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಭೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂಬ ಸಂದೇಶವನ್ನು ಈಗಾಗಲೇ ಯಡಿಯೂರಪ್ಪ ಅವರಿಗೆ ರವಾನಿಸಿದ್ದಾರೆ. ಇದೇ ಕಾರಣದಿಂದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕೂಡ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಕೈಗೊಂಡ ಮುಖಂಡರನ್ನು ಮಾತ್ರ ಸಭೆಗೆ ಆಹ್ವಾನಿಸಿರುವುದರಿಂದ ಅಸಮಾಧಾನಿತ ಮುಖಂಡರೂ ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎನ್ನಲಾಗಿದೆ.
ಈ ಮಧ್ಯೆ ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಅತೃಪ್ತಿ ಹೊಂದಿರುವ ಪಕ್ಷದ ಕೆಲವು ಮುಖಂಡರು ಸಭೆಯಲ್ಲಿ ಭಾಗವಹಿಸುತ್ತಿದ್ದಾರಾದರೂ ತಮ್ಮ ಅತೃಪ್ತಿಯನ್ನು ಬಹಿರಂಗವಾಗಿ ಹೇಳಿಕೊಳ್ಳುವ ಧೈರ್ಯ ಅವರಲ್ಲಿ ಇಲ್ಲ. ಆದರೂ ಅಸಮಾಧಾನದ ಪ್ರಕರಣವನ್ನು ಮುಂದಿಟ್ಟುಕೊಂಡು ಸಭೆಯಲ್ಲಿ ಪದಾಧಿಕಾರಿಗಳ ಬದಲಾವಣೆ ಕುರಿತಂತೆ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಅಸಮಾಧಾನಿತರ ಆರೋಪವೇನು?: ರಾಜ್ಯದ ಕೆಲವು ಜಿಲ್ಲೆಗಳ ಪಕ್ಷದ ಅಧ್ಯಕ್ಷರನ್ನು ಬದಲಾವಣೆ ಮಾಡುವ ಕುರಿತಂತೆ ಪ್ರಸ್ತಾಪಿಸಿದ್ದ ಅಸಮಾಧಾನಿತ ನಾಯಕರ ಬೇಡಿಕೆಯಲ್ಲಿ ಮೈಸೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲಾ ಅಧ್ಯಕ್ಷರ ಬದಲಾವಣೆ ಮಾಡಬೇಕು. ಈಗಿರುವ ಅಧ್ಯಕ್ಷರ ಬದಲಾಗಿ ಪಕ್ಷಕ್ಕೆ ಹಲವು ವರ್ಷಗಳಿಂದ ದುಡಿದಿರುವವರನ್ನು ಪರಿಗಣಿಸಬೇಕು ಎಂಬ ಅಂಶವೂ ಇದೆ.
ಇದರ ಮಧ್ಯೆಯೇ ನಂಜನಗೂಡು (ಮೈಸೂರು ಗ್ರಾಮಾಂತರ) ಮತ್ತು ಗುಂಡ್ಲುಪೇಟೆ (ಚಾಮರಾಜನಗರ) ಉಪ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಿದೆ. ಈ ಸೋಲಿಗೆ ಪಕ್ಷದ ಸಂಘಟನೆ ಸರಿಯಾಗಿ ಪಾಲ್ಗೊಳ್ಳದೇ ಇರುವುದೇ ಕಾರಣ ಎಂಬ ಮಾತನ್ನು ಯಡಿಯೂರಪ್ಪ ಹೇಳಿದ್ದರು. ಆದರೆ, ಆ ಜಿಲ್ಲೆಗಳ ಬಿಜೆಪಿ ಅಧ್ಯಕ್ಷರು ನಿಷ್ಠಾವಂತರನ್ನು ಸೌಜನ್ಯಕ್ಕಾದರೂ ಪ್ರಚಾರಕ್ಕೆ ಕರೆದಿರಲಿಲ್ಲ. ಹೀಗಿರುವಾಗ ಸಂಘಟನೆ ಬಗ್ಗೆ ಆರೋಪಿಸುವುದು ಸರಿಯಲ್ಲ ಎಂಬುದು ಅಸಮಾಧಾನಿತ ಮುಖಂಡರ ಅಭಿಪ್ರಾಯವಾಗಿದೆ. ಇದನ್ನು ಈಗಾಗಲೇ ಭಾನುವಾರದ ಸಭೆಯಲ್ಲಿ ಭಾಗವಹಿಸುತ್ತಿರುವ ಕೆಲವು ಮುಖಂಡರ ಗಮನಕ್ಕೂ ತಂದಿದ್ದಾರೆ. ಹೀಗಾಗಿ ಈ ವಿಚಾರ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
27ರ ಸಭೆ ಕುರಿತು ಚರ್ಚೆ?: ಇದು ಉಪ ಚುನಾವಣೆ ಸೋಲಿನ ಆತ್ಮಾವಲೋಕನ ಸಭೆಯಾದರೂ ಯಡಿಯೂರಪ್ಪ ಅವರ ಮೇಲೆ ಅಸಮಾಧಾನಗೊಂಡಿರುವ ಗುಂಪು ಏ. 27ರಂದು ಬೆಂಗಳೂರಿನಲ್ಲಿ ಬಿಜೆಪಿ ಸಂಘಟನೆ ಉಳಿಸಿ ಎಂಬ ಸಭೆ ಆಯೋಜಿಸಿದ್ದು, ಈ ಬಗ್ಗೆ ಭಾನುವಾರ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಉಪ ಚುನಾವಣೆ ಸೋಲಿನ ಜತೆಗೆ ಭಿನ್ನಮತೀಯ ಚಟುವಟಿಕೆಗಳೂ ಹೆಚ್ಚಾದರೆ ಮುಂಬರುವ ವಿಧಾನಸಭೆ ಚುನಾವಣಾ ಸಿದ್ಧತೆಗೆ ಅಡ್ಡಿಯಾಗಲಿದೆ. ಆದ್ದರಿಂದ ಹೇಗಾದರೂ ಮಾಡಿ ಏ. 27ರ ಅಸಮಾಧಾನಿತ ಗುಂಪಿನ ಸಭೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಯಡಿಯೂರಪ್ಪ ಅವರ ಮೇಲೆ ಕೆಲ ಮುಖಂಡರು ಒತ್ತಡ ಹೇರಬಹುದು ಎನ್ನಲಾಗಿದೆ.
ಆದರೆ, ತಮ್ಮ ವಿರುದ್ಧ ತಿರುಗಿ ಬಿದ್ದಿರುವ ಮುಖಂಡರ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಯಡಿಯೂರಪ್ಪ, ಅವರು ಎಲ್ಲಿಗೆ ಬೇಕಾದರೂ ಹೋಗಲಿ ಎನ್ನುವ ಮೂಲಕ ಈ ರೀತಿಯ ಒತ್ತಡಗಳಿಗೆ ಮಣಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹೀಗಿರುವಾಗ ಭಾನುವಾರದ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದರೆ ಯಡಿಯೂರಪ್ಪ ಅವರ ಪ್ರತಿಕ್ರಿಯೆ ಹೇಗಿರುತ್ತದೆ? ಅಸಮಾಧಾನ ಶಮನಕ್ಕೆ ಅವರು ಪ್ರಯತ್ನಿಸಲಿದ್ದಾರೆಯೇ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್ ವಿಕ್ರಂ ಗೌಡ ಆಡಿಯೋ!
CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.