ರಾಜ್ಯಗಳ ಆದಾಯ ನಷ್ಟ ಭರಿಸಲು ಸಿಎಂ ಪಟ್ಟು
Team Udayavani, Apr 24, 2017, 10:35 AM IST
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಏಕ ರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆಯಿಂದ ರಾಜ್ಯಗಳಿಗೆ ಆಗುವ ಆದಾಯ ನಷ್ಟಕ್ಕೆ ಸೂಕ್ತ ಪರಿಹಾರವನ್ನು ವಿಳಂಬ ಮಾಡದೆ ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿ ಭಾನುವಾರ ನಡೆದ ನೀತಿ ಆಯೋಗದ ಮೂರನೇ ಸಭೆಯಲ್ಲಿ
ಪಾಲ್ಗೊಂಡು ಮಾತನಾಡಿದ ಅವರು, ಜಿಎಸ್‌ಟಿಯ ಯಶಸ್ವಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಪರಿಹಾರವನ್ನು ರಾಜ್ಯಗಳಿಗೆ ಕಾಲಮಿತಿಯೊಳಗೆ ನೀಡಬೇಕು. ಈ ರೀತಿಯ ಕ್ರಮ ಕೈಗೊಳ್ಳುವುದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವೆ ಪರಸ್ಪರ ನಂಬಿಕೆ ಮತ್ತು ಸೌಹಾರ್ದಯುತ ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಕುರಿತು ಪ್ರಸ್ತಾಪಿಸಿದ ಸಿಎಂ, ಸತತ ಆರು ವರ್ಷಗಳಿಂದ ರಾಜ್ಯದ ರೈತರು ಭೀಕರ ಬರಗಾಲದಿಂದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈ ವರ್ಷವೂ ಮುಂಗಾರು ಹಂಗಾಮಿನಲ್ಲಿ 135 ತಾಲೂಕುಗಳು ಮತ್ತು ಹಿಂಗಾರು ಹಂಗಾಮಿನಲ್ಲಿ 160 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನೀಡಿರುವ ಪರಿಹಾರ ಮೊತ್ತ ತೀರಾ ಕಡಿಮೆಯಾಗಿದೆ ಎಂದು ಹೇಳಿದ ಮುಖ್ಯಮಂತ್ರಿ, ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯವನ್ನು ಅಂಕಿ-ಅಂಶ
ಸಮೇತ ಪ್ರಧಾನಿಯವರಿಗೆ ವಿವರಿಸಿದರು. ವಿವಿಧ ಯೋಜನೆಗಳಲ್ಲಿ ರಾಜ್ಯಕ್ಕೆ ನೀಡುತ್ತಿರುವ ಕೇಂದ್ರದ ಪಾಲಿನ ಅನುದಾನವೂ ಕಡಿಮೆಯಾಗಿದೆ ಎಂದು ವಿವರಿಸಿದರು.
ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳ ಅನುದಾನ ಮೊತ್ತದಲ್ಲಿ ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಇದರಿಂದ ರಾಜ್ಯಕ್ಕೆ ತೊಂದರೆಯಾಗಿದೆ. ಹೀಗಾಗಿ ಕೊರತೆ ನೀಗಿಸಲು ಪರಿಹಾರವಾಗಿ 118.62 ಕೋಟಿ ರೂ. ಹೆಚ್ಚುವರಿ ಮೊತ್ತ ಬಿಡುಗಡೆ ಮಾಡಬೇಕು. ಕಳೆದ ವರ್ಷ ಉಂಟಾಗಿರುವ ಹಿಂಗಾರು ಬೆಳೆ ನಷ್ಟಕ್ಕೆ 3310 ಕೋಟಿ ರೂ. ಪರಿಹಾರವನ್ನು ಕೂಡಲೆ ಬಿಡುಗಡೆ ಮಾಡಬೇಕೆಂದು
ಸಿಎಂ, ಪ್ರಧಾನಿಗೆ ಒತ್ತಾಯಿಸಿದರು.
ಇಷ್ಟೆಲ್ಲ ಸಮಸ್ಯೆಗಳಿದ್ದರೂ ರಾಜ್ಯ ಸರ್ಕಾರ ಬರ ಪರಿಹಾರ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಿದೆ. ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ 16 ಲಕ್ಷ ರೈತರಿಗೆ ಇನ್‌ಫುಟ್ ಸಬ್ಸಿಡಿಯನ್ನು ಆನ್‌ಲೈನ್ ಮೂಲಕ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದರು. ಕರ್ನಾಟಕ ಜಾಗತಿಕ ಡಿಜಿಟಲ್ ಕ್ರಾಂತಿಯಲ್ಲಿ
ಮುಂಚೂಣಿಯಲ್ಲಿದ್ದು, ಬೆಂಗಳೂರು ಭಾರತದ ತಂತ್ರಜ್ಞಾನದ ರಾಜಧಾನಿಯಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿಯೂ ಡಿಜಿಟಲ್ ತಂತ್ರಜ್ಞಾನ ಅಳವಡಿಸಲಾಗಿದೆ. ಈ ವರ್ಷ 2500 ಗ್ರಾಮ ಪಂಚಾಯತಿಗಳಿಗೆ ವೈಫೈ ಸೌಲಭ್ಯ ಒದಗಿಸಲಾಗಿದೆ.
ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಭೂಮಿ, ಕಾವೇರಿ, ಮೋಜಿನಿ ಎಂಬ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು. ರಾಜ್ಯವು ಕರ್ನಾಟಕ ಕುಶಲ ನೀತಿ -2017 ಜಾರಿಗೆ ತರಲು ಅಂತಿಮ ಸಿದ್ಧತೆ ನಡೆಸಿದೆ. ಇದಕ್ಕಾಗಿ ಪ್ರತ್ಯೇಕ ವಿಭಾಗ ರಚಿಸಲಾಗಿದೆ. ಕುಶಲಕ ರ್ಮಿಗಳಿಗೆ ಅನುಕೂಲ ಕಲ್ಪಿಸಲು ಕೈಗಾರಿಕಾ ತರಬೇತಿಗೆ ಭದ್ರ ಬುನಾದಿ ಹಾಕಲಾಗಿದೆ ಎಂದು ತಿಳಿಸಿದರು. ಸ್ವತ್ಛ ಭಾರತದ ಉದ್ದೇಶಗಳನ್ನು ಈಡೇರಿಸಲು ಕರ್ನಾಟಕ ಸೂಕ್ತ ಗಮನ ಹರಿಸಿದೆ. ರಾಜ್ಯವನ್ನು ಬಹಿರ್ದೆಸೆ ಮುಕ್ತವಾಗಿಸಲು ಕ್ರಮ ಕೈಗೊಂಡಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ 30 ಲಕ್ಷ ಮನೆಗಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು
ಹೇಳಿದರು.
ಬರ ಪರಿಹಾರಕ್ಕೆ ಕೇಂದ್ರದ ಹಣ ಕೇಳಿದ್ದೇನೆ
ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಬಗ್ಗೆ ನೀತಿ ಆಯೋಗದ ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿ ಹೆಚ್ಚಿನ ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದೇನೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನೀತಿ ಆಯೋಗದ
ಸಭೆ ನಂತರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಕೇಂದ್ರ ಸರ್ಕಾರ 4702 ಕೋಟಿ ರೂ. ಕೊಡಬೇಕಿತ್ತು. ಆದರೆ, 1685 ಕೋಟಿ ರೂ. ಬಂದಿದೆ. ಹಿಂಗಾರು ಹಂಗಾಮಿನಲ್ಲಿ ಆಗಿರುವ ನಷ್ಟ 3310 ಕೋಟಿ ರೂ. ನೀಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಅದನ್ನಾದರೂ ರಾಜ್ಯಕ್ಕೆ ಕೊಡುವಂತೆ ಕೇಳಿದ್ದೇವೆ ಎಂದರು. ಕೇಂದ್ರ ಸರ್ಕಾರ ಪ್ರಾಯೋಜಿಸಿರುವ ಯೋಜನೆಗಳಿಗೆ ಸಹ ಅನುದಾನ ಕಡಿಮೆ ನೀಡುತ್ತಿದೆ. ಇದರಿಂದ ರಾಜ್ಯಗಳಿಗೆ ಹೊರೆಯಾಗುತ್ತಿದೆ. ಹಿಂದೆ ಇದ್ದಂತೆ ಅನುದಾನ ಮುಂದುವರಿಸಲು ಮನವಿ
ಮಾಡಿದ್ದೇವೆ. ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗುವ ನಷ್ಟವನ್ನು ಭರಿಸುವಂತೆಯೂ ಕೇಳಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.