ನೌಕರರ ಭವಿಷ್ಯ ನಿಧಿಯಲ್ಲಿ ಹೊಸ ಬದಲಾವಣೆಗಳು
Team Udayavani, Apr 24, 2017, 12:33 PM IST
ನೌಕರರ ಭವಿಷ್ಯ ನಿಧಿ ಅಥವಾ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (ಇಪಿಎಫ್) ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಇತ್ತೀಚೆಗಿನ ದಿನಗಳಲ್ಲಂತೂ ಈ ನಿಧಿ ಬಹಳಷ್ಟು ಸಂಚಲನವನ್ನು ಉಂಟು ಮಾಡುತ್ತಿದೆ. ಬಹುತೇಕ ಪ್ರತಿ ತಿಂಗಳು ಎನ್ನುವಂತೆ ಈ ಭವಿಷ್ಯ ನಿಧಿಯಲ್ಲಿ ಬದಲಾವಣೆಗಳು ಬರುತ್ತಲೇ ಇರುತ್ತವೆ.
ಮೊತ್ತ ಮೊದಲನೆಯದಾಗಿ ನಾವು ಗಮನಿಸಬೇಕಾದ ಅಂಶವೆಂದರೆ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಎನ್ನುವುದು ನಮ್ಮ ನೌಕರಿಗೆ ಸಂಬಂಧ ಪಟ್ಟದ್ದು. ನಾವು ಕೆಲಸ ಮಾಡುವ ಕಂಪೆನಿಯು ನಮ್ಮ ಸಂಬಳದಿಂದ ಕಡಿತಗೊಳಿಸಿ ಸರಕಾರಿ ನಿಧಿಗೆ ಕಟ್ಟುವಂಥದ್ದು. ಸ್ಟೇಟ್ ಬ್ಯಾಂಕ್/ಪೋಸ್ಟಾಫೀಸಿನಲ್ಲಿ ಯಾವುದೇ ಜನ ಸಾಮಾನ್ಯ ಖಾತೆ ತೆರೆದು ದುಡ್ಡು ಕಟ್ಟುವಂತಹ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಗಿಂತ ಇದು ಭಿನ್ನ. ಎರಡನೆಯದಾಗಿ ಇಪಿಎಫ್ ಅಥವಾ ನೌಕರರ ಭವಿಷ್ಯ ನಿಧಿಯು ಲೇಬರ್ ಮಿನಿಸ್ಟ್ರಿಯ ಅಡಿಯಲ್ಲಿ ಬರುತ್ತದೆ. ಇಲ್ಲಿ ಯಾವುದೇ ನಿಧಿ ಸಂಬಂಧಿ ನಿರ್ಣಯವನ್ನೂ ಸಿಬಿಟಿ ಅಥವಾ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ತೆಗೆದುಕೊಳ್ಳುತ್ತದೆ. ಸಿಬಿಟಿಯ ಅಂತಿಮ ನಿರ್ಧಾರದ ಬಳಿಕ ಅದು ಹಣಕಾಸಿಗೆ ಸಂಬಂಧಪಟ್ಟ ನಿರ್ಧಾರವಾಗಿದ್ದರೆ ಅದನ್ನು ವಿತ್ತ ಮಂತ್ರಾಲಯವು ಅಂಗೀಕರಿಸಬೇಕು. ಇಲ್ಲಿ ಸಮಸ್ಯೆಯೇನೆಂದರೆ, ಪ್ರತಿಯೊಂದು ಹಂತದಲ್ಲಿಯೂ ಇಪಿಎಫ್ ಬಗ್ಗೆ ಹೊರಬಂದ ಅಭಿಪ್ರಾಯ ಹಾಗೂ ತೆಗೆದುಕೊಂಡ ನಿರ್ಧಾರ ಸುದ್ದಿ ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತದೆ. ಹಾಗೆ ಪ್ರತಿಹಂತದಲ್ಲಿ ಬಂದ ಸುದ್ದಿಯನ್ನೂ ಅಂತಿಮ ನಿರ್ಧಾರವೋ ಎನ್ನುವಂತೆ ಜನತೆ ನಂಬಿ ಬಿಡುತ್ತದೆ. ವಾಸ್ತವದಲ್ಲಿ ವಿತ್ತ ಮಂತ್ರಾಲಯ ಒಪ್ಪಿಗೆ ಮುದ್ರೆ ಹಾಕಿ ನೋಟಿಫಿಕೇಷನ್ ಬಿಡುಗಡೆಯಾದ ಸುದ್ದಿ ಮಾತ್ರವೇ ಅಂತಿಮವಾಗಿದ್ದು, ಇತ್ತೀಚಿಗಿನ ದಿನಗಳಲ್ಲಿ ಇಪಿಎಫ್ ಬಗ್ಗೆ ವಿವಿಧ ಹಂತಗಳಲ್ಲಿ ತೆಗೆದುಕೊಂಡ ನಾಲ್ಕು ಮುಖ್ಯ ನಿರ್ಧಾರಗಳು ಸಾಕಷ್ಟು ಸುದ್ದಿ ಮಾಡಿವೆ.
ನಿರ್ಧಾರ 1: ಬಡ್ಡಿದರ
ಇದೇ 2016-17 ಸಾಲಿಗೆ ಇಪಿಎಫ್ ಮೇಲಿನ ಬಡ್ಡಿ ದರವನ್ನು ಇದೀಗ ಶೇ.8.65ಕ್ಕೆ ನಿಗದಿ ಪಡಿಸುವ ಸಿಬಿಟಿ ನಿರ್ಧಾರಕ್ಕೆ ವಿತ್ತ ಮಂತ್ರಾಲಯವು ಒಪ್ಪಿಗೆ ನೀಡಿದೆ. ಇನ್ನು ಈ ವಿಚಾರವಾಗಿ ಸರಕಾರಿ ನೋಟಿಫಿಕೇಶನ್ ಬರುವುದು ಮಾತ್ರ ಬಾಕಿ ಇದೆ. ಕಳೆದ ವರ್ಷ ಶೇ.8.8 ಇದ್ದ ಈ ಬಡ್ಡಿದರ ಸುಮಾರು ಶೇ.0.5ದಷ್ಟು ಕಡಿಮೆಯಾಗುವ ನಿರೀಕ್ಷೆ ಇತ್ತು. ಆದರೆ ಹಾಗೆ ಆಗದೆ ಕೇವಲ ಶೇ.0.15ದಷ್ಟು ಮಾತ್ರ ಕಡಿತವಾದದ್ದು ಜನರಿಗೆ ಸಂತಸ ತಂದಿದೆ.
ನಿರ್ಧಾರ 2: ಲಾಯಲ್ಟಿ ಲಾಭ
20 ವರ್ಷ ಮೀರಿದ ದೇಣಿಗೆ ನೀಡಿದ ಇಪಿಎಫ್ ಖಾತೆದಾರರಿಗೆ ನಿವೃತ್ತಿ ವೇಳೆಯಲ್ಲಿ ರೂ. 50,000 ದವರೆಗೆ ಲಾಯಲ್ಟಿ ಬೋನಸ್ ನೀಡುವುದಾಗಿ ಸಿಬಿಟಿ ಮಂಡಳಿ ನಿರ್ಧರಿಸಿ ಸರಕಾರಕ್ಕೆ ಶಿಫಾರಸು ಮಾಡಿದೆ. ಶಾಶ್ವತವಾಗಿ ಅಂಗ ಊನವಾಗಿದ್ದಲ್ಲಿ ಈ ಸೌಲಭ್ಯ 20 ವರ್ಷಕ್ಕಿಂತ ಕಡಿಮೆ ದೇಣಿಗೆ ನೀಡಿದವರಿಗೂ ಲಭ್ಯ. ಈ ಬಗ್ಗೆ ವಿಸ್ತೃತವಾಗಿ ಮಾಧ್ಯಮದಲ್ಲಿ ವರದಿಯಾಗಿದೆ. ಆದರೆ ಇದು ಅಂತಿಮವಾದ ತೀರ್ಮಾನವಲ್ಲ.
ನಿರ್ಧಾರ 3: ಕನಿಷ್ಠ ವಿಮಾ ಮೊತ್ತ
ನೌಕರರ ಪ್ರಾವಿಡೆಂಟ್ ಫಂಡ್ ಖಾತೆಯ ವತಿಯಿಂದ ನೌಕರಿಯಲ್ಲಿರುವಾಗ ಮೃತ ಪಟ್ಟವರಿಗೆ ಅಥವಾ ಶಾಶ್ವತವಾಗಿ ಅಂಗಊನ ಆದವರಿಗೆ ಒಂದು ಲೆಕ್ಕಾಚಾರದ (ಫಾರ್ಮ್ಯುಲಾ) ಅನುಸಾರ ರೂ. 6 ಲಕ್ಷದವರೆಗೆ ನೌಕರರ ಠೇವಣಿ ಆಧಾರಿತ ವಿಮೆಯ (Employees Deposit Linked Insurance) ಸೌಲಭ್ಯ ಈಗಾಗಲೇ ಇದ್ದರೂ ಅದರಲ್ಲಿ ಕನಿಷ್ಠ ಮೊತ್ತದ ಪ್ರಮೇಯ ಇದುವರೆಗೆ ಇದ್ದಿದ್ದಿಲ್ಲ. ಹಾಗಾಗಿ ಈ ಬಾರಿ ಸಿಬಿಟಿ ಮಂಡಲಿ ಕನಿಷ್ಠ ವಿಮೆಯಾಗಿ ರೂ. 2.5 ಲಕ್ಷ ಪ್ರತಿಯೊಬ್ಬರಿಗೂ ಸಿಗಬೇಕು ಎನ್ನುವ ನಿರ್ಧಾರವನ್ನು ಸರಕಾರಕ್ಕೆ ಶಿಫಾರಸು ಮಾಡಿದೆ.
ನಿರ್ಧಾರ 4: ಆಧಾರ್ ಲಿಂಕ್
ಇಪಿಎಫ್ ಖಾತೆಯ ಜತೆ ಕಡ್ಡಾಯವಾಗಿ ಆಧಾರ್ ನಂಬರ್ ಲಿಂಕ್ ಮಾಡುವ ಯೋಜನೆಗೆ ಇದ್ದ ಕೊನೆಯ ದಿನಾಂಕವನ್ನು ಮಾರ್ಚ್ 31ರಿಂದ ಎಪ್ರಿಲ್ 30ಕ್ಕೆ ಮುಂದೂಡಲಾಗಿದೆ. ಇದು ನೋಟಿಫೈ ಆಗಿರುವ ಅಂತಿಮ ನಿರ್ಧಾರ.
ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್
Employees Provident Fund Act, 1952 ಕಾನೂನಿನ ಪ್ರಕಾರ ಸರಕಾರವು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (EPF) ಎಂಬ ನಿಧಿಯನ್ನು ನೌಕರ ವರ್ಗದ ಭವಿಷ್ಯ ಕಲ್ಯಾಣಕ್ಕಾಗಿ ಸ್ಥಾಪಿಸಿತು. ಇದು ಸರಕಾರಿ ಹಾಗೂ ಖಾಸಗಿ ಕ್ಷೇತ್ರದ ನೌಕರರೀರ್ವರಿಗೂ ಸಮಾನವಾಗಿ ಅನ್ವಯಿಸುವ ಸೌಲಭ್ಯ. 20ಕ್ಕೂ ಹೆಚ್ಚು ಉದ್ಯೋಗಿಗಳು ಇರುವ ಒಂದು ಸಂಸ್ಥೆಯಲ್ಲಿ ಈ ರೀತಿ ಪಿ.ಎಫ್. ಕಡಿತ ಮಾಡುವುದು ಕಡ್ಡಾಯ. ಅದರಿಂದ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಪಿ.ಎಫ್. ನಿಧಿ ಅನುಷ್ಠಾನ ಕಡ್ಡಾಯವಲ್ಲ. ಅಲ್ಲದೆ, ಮಾಸಿಕ ಸಂಬಳ ರೂ. 15,000 (ಬೇಸಿಕ್+ಡಿ.ಎ.) ಗಿಂತ ಜಾಸ್ತಿ ಇರುವ ಉದ್ಯೋಗಿಗಳ ಮೇಲೆ ಕೂಡ ಈ ಸ್ಕೀಮು ಕಡ್ಡಾಯವಲ್ಲ. ಈ ಮಿತಿಯ ಒಳಗೆ ವೇತನ ಪಡೆಯುವ ವರ್ಗಕ್ಕೆ ಮಾತ್ರ ಈ ಸ್ಕೀಮು ಕಡ್ಡಾಯ. ಸರಕಾರದ ಕಾನೂನುಗಳು ದುರ್ಬಲ ವರ್ಗದವರನ್ನು ರಕ್ಷಿಸುವ ದೃಷ್ಟಿಯಿಂದ ಮಾಡಿದ್ದಾಗಿರುತ್ತವೆ. ಆದರೂ ಬಹುತೇಕ ಉತ್ತಮ ಕಂಪೆನಿಗಳು ತಮ್ಮ ಎಲ್ಲ ಉದ್ಯೋಗಿಗಳಿಗೂ ಪಿ.ಎಫ್.ಕಡಿತವನ್ನು ಐಚ್ಛಿಕವಾಗಿಯಾದರೂ ಉದ್ಯೋಗಿಗಳ ಹಿತದೃಷ್ಠಿಯಿಂದ ಮಾಡುತ್ತಿವೆ. ಯಾಕೆಂದರೆ, ಪ್ರಾವಿಡೆಂಟ್ ಫಂಡ್ ಎಂಬುದು ಭವಿಷ್ಯಕ್ಕಾಗಿ ಮಾಡುವಂತಹ ಒಂದು ಉತ್ತಮವಾದ ಉಳಿತಾಯ ಯೋಜನೆ. ನಿಗದಿತ, ಕರಮುಕ್ತ ಆದಾಯಕ್ಕೆ ಪಿ.ಎಫ್.ನಷ್ಟು ಪ್ರಶಸ್ತವಾದ ಹೂಡಿಕೆ ಇನ್ನೊಂದಿಲ್ಲ. ಸಂಘಟಿತ ಉದ್ಯಮಗಳಿಗೆ ಈ ಕಾನೂನು ಕಟ್ಟುನಿಟ್ಟಾಗಿ ಅನ್ವಯಿಸುವುದಾದರೂ ಅಸಂಘಟಿತ ಕ್ಷೇತ್ರದ ಬಹುಪಾಲು ಕಾರ್ಮಿಕರಿಗೆ ಈ ಸೌಲಭ್ಯ ಇನ್ನೂ ದೊರಕುತ್ತಿಲ್ಲ ಎನ್ನುವುದು ದುಃಖದ ವಿಚಾರ. ಅಂಥವರಿಗೆ ಬ್ಯಾಂಕ್/ಪೋಸ್ಟಾಫೀàಸಿನ ಪಿಪಿಎಫ್ ಒಂದು ಪರ್ಯಾಯ.
ದೇಣಿಗೆ
ವೇತನದ (ಬೇಸಿಕ್ ಮತ್ತು ಡಿಎ) ಶೇ.12 ಉದ್ಯೋಗಿಯ ಸಂಬಳದಿಂದ ಕಡಿದು ಈ ನಿಧಿಗೆ “ಎಕೌಂಟ್ ಎ’ ಅಡಿಯಲ್ಲಿ ಜಮೆ ಮಾಡಲಾಗುತ್ತದೆ. ಅದಲ್ಲದೆ ಉದ್ಯೋಗದಾತನ ವತಿಯಿಂದಲೂ ಪ್ರತ್ಯೇಕವಾಗಿ ಇನ್ನೊಂದು ಶೇ.12 ಕಡಿತಗೊಳಿಸಿ “ಕೌಂಟ್ ಬಿ’ ಅಡಿಯಲ್ಲಿ ಉದ್ಯೋಗಿಯ ಪಿಎಫ್ಖಾತೆಗೆ ಸೇರಿಸಲಾಗುತ್ತದೆ. ಹಾಗಾಗಿ ಒಟ್ಟು ಜಮೆ ಶೇ.24. ಸ್ಥೂಲವಾಗಿ ನಾವು ಶೇ.24 ಎಂದು ಹೇಳುತ್ತೇವಾದರೂ ಅಸಲಿಗೆ ನಮ್ಮ ಪಿಎಫ್ ಖಾತೆಗೆ ಈ ಶೇ.24 ಸಂಪೂರ್ಣವಾಗಿ ಜಮೆಯಾಗುವುದಿಲ್ಲ. ಉದ್ಯೋಗದಾತರ ಶೇ.12ನಲ್ಲಿ ಎರಡು ಭಾಗಗಳಿವೆ. ಸಂಬಳದ ಶೇ.8.33 (ಗರಿಷ್ಠ ಸಂಬಳ ರೂ. 15,000 ಮಿತಿಯೊಳಗೆ, ಅಂದರೆ ಗರಿಷ್ಠ ದೇಣಿಗೆ ರೂ.1,250) ಪಿಎಫ್ ಅಡಿಯಲ್ಲಿಯೇ ಬರುವ ಒಂದು ಪೆನ್ಶನ್ ಉಪಖಾತೆಗೆ ಹೋಗುತ್ತದೆ. ಎಂಪ್ಲಾಯೀ ಪೆನ್ಶನ್ ಸ್ಕೀಮ್ ಅಥವಾ ಇಪಿಎಸ್ ಎನ್ನುವ ಈ ಸ್ಕೀಮು ನಿವೃತ್ತಿಯ ಬಳಿಕ ಸಿಗುವ ಪೆನ್ಶನ್‌ಗಾಗಿ ಮೀಸಲಾಗಿದೆ. ಹಾಗಾಗಿ ಇಪಿಎಫ್ನಲ್ಲಿ ಪೆನ್ಶನ್‌ದೇಣಿಗೆಯಾದ ಶೇ.8.33 ಅಥವಾ ಗರಿಷ್ಠ ರೂ. 1,250 ಕಳೆದು ಉಳಿದ ಮೊತ್ತ ಮಾತ್ರ ಪಿಎಫ್ನ “ಎಕೌಂಟ್ ಬಿ’ಗೆ ಜಮೆಯಾಗುತ್ತದೆ.
VPFಎಂದರೇನು?
ಶೇ.12% ನೌಕರನ ವತಿಯಿಂದ (ಎಕೌಂಟ್ ಎ) ಹಾಗೂ ಎಂಪ್ಲಾಯರ್ ವತಿಯಿಂದ (EPF) ಉಕಊ ಖಾತೆಯಲ್ಲಿ ಕಟ್ಟಲ್ಪಡುತ್ತದಷ್ಟೆ? ಒಬ್ಬ ನೌಕರನಿಗೆ ಸ್ವ-ಇಚ್ಛೆಯಿಂದ ತನ್ನ ಸಂಬಳದ (ಬೇಸಿಕ್+ಡಿ.ಎ) ಶೇ.100ದಷ್ಟನ್ನು ತನ್ನ ಪಿಎಫ್ ಖಾತೆಯ ಇನ್ನೊಂದು “ಎಕೌಂಟ್ ಸಿ’ಯಲ್ಲಿ ಐಚ್ಚಿಕ ಅಥವಾ ವಾಲೆಂಟರಿಯಾಗಿ ಹಾಕುವ ಸೌಲಭ್ಯವನ್ನು ಸರಕಾರ ಕಲ್ಪಿಸಿಕೊಟ್ಟಿದೆ. ಪ್ರಾವಿಡೆಂಟ್ ಫಂಡಿನ ಈ ಭಾಗವನ್ನು voluntary Provident Fund or VPF ಈ ಎಂದು ಕರೆಯುತ್ತಾರೆ. ಇದು ಪ್ರಾವಿಡೆಂಟ್ ಫಂಡ್ ಖಾತೆಯದೇ ಒಂದು ಅಂಗವಾಗಿದೆ ಹಾಗೂ ಇದಕ್ಕೆ “ಎ’ ಮತ್ತು “ಬಿ’ ಎಕೌಂಟಿನಷ್ಟೇ ಬಡ್ಡಿದರ, ಕರವಿನಾಯಿತಿ ಇತ್ಯಾದಿಗಳು ಅನ್ವಯ ಆಗುತ್ತದೆ. ಸ್ವ-ಇಚ್ಛೆಯಿಂದ “ಎಕೌಂಟ್ ಸಿ’ಯಲ್ಲಿ ವಿಪಿಎಫ್ ಜಮೆ ಮಾಡಬೇಕೆಂದಿದ್ದರೆ ಪ್ರತೀ ವಿತ್ತ ವರ್ಷ (ಎಪ್ರಿಲ್-ಮಾರ್ಚ್)ದ ಆರಂಭದಲ್ಲಿ ನಿಮ್ಮ ಕಂಪೆನಿಗೆ ತಿಳಿಸತಕ್ಕದ್ದು.
ಉಸ್ತುವಾರಿ ಹೇಗೆ?
ಎರಡು ವಿಧದಲ್ಲಿ ನಡೆಯಬಹುದು:
1. ಸರಕಾರದ ಆಧೀನದ EPFO ಸಂಸ್ಥೆಯಲ್ಲಿ ಪ್ರಾವಿಡೆಂಟ್ ಫಂಡ್‌ಕಮಿಶನರರ ಉಸ್ತುವಾರಿಯಲ್ಲಿ ಜಮಾ ಮಾಡುವುದು. ಹೆಚ್ಚಿನ ಚಿಕ್ಕ ಪುಟ್ಟ ಕಂಪೆನಿಗಳು ಮತ್ತು ಸರಕಾರಿ ಸಂಸ್ಥೆಗಳು ಈ ರೀತಿ ಸರಕಾರದ ಕೈಯಲ್ಲಿ ತಮ್ಮ ಪಿ.ಎಫ್. ದುಡ್ಡನ್ನು ಠೇವಣಿ ಇಡುತ್ತಾರೆ. ಅ ದುಡ್ಡು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಲಪತ್ರಗಳು, ಸರಕಾರಿ ಮತ್ತು ಖಾಸಗಿ ಕಂಪೆನಿಗಳ ಬಾಂಡು ಡಿಬೆಂಚರ್‌ಗಳಲ್ಲಿ ಹೂಡಲ್ಪಡುತ್ತವೆ.
2. ಕೆಲವೊಮ್ಮೆ ದೊಡ್ಡ ಕಂಪೆನಿಗಳು ತಮ್ಮ ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ದುಡ್ಡನ್ನು ತಾವೇ ಒಂದು ಟ್ರಸ್ಟಿ ರಚಿಸಿ ಅದನ್ನು ಹೂಡುವ ಅನುಮತಿಯನ್ನು ಸರಕಾರದಿಂದ ಪಡೆದಿರುತ್ತಾರೆ. ಇದು EPFOದಂತೆಯೇ ಅದರ ಮಾರ್ಗಸೂಚಿಯಂತೆ ನಡೆಯುತ್ತದೆ.
ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.