ರಾಷ್ಟ್ರಪತಿ ರೇಸ್‌ನಲ್ಲಿ ಜಾತ್ಯತೀತ ರಾಜಕೀಯ
Team Udayavani, Apr 24, 2017, 12:38 PM IST
ಒಂದು ವೇಳೆ ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳು ಸೋತರೂ, 2019ರ ಲೋಕಸಭೆ ಚುನಾವಣೆಯಲ್ಲಿ ಈ ಎಲ್ಲ ಪಕ್ಷಗಳು ಒಟ್ಟಾಗಿ ಪ್ರಧಾನಿ ಮೋದಿ ಅವರನ್ನು ಸೋಲಿಸಬಹುದು ಎಂಬ ಅಂದಾಜು ಇದೆ. ಅಲ್ಲದೆ ಈಗಿನಿಂದಲೇ ಮಹಾ ಮೈತ್ರಿಯ ಮಾತುಕತೆ, ಅದರ ಸುತ್ತಲಿನ ಸಿದ್ಧತೆಗಳನ್ನೂ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿ ಅಂತ್ಯವಾಗುವುದು ಜುಲೈಗೆ. ಆದರೆ, ಅವರ ಉತ್ತರಾಧಿಕಾರಿ ಯಾರು ಎಂಬುದು ಈಗಾಗಲೇ ಎಲ್ಲೆಡೆ ಚರ್ಚಿತ ವಿಷಯ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಈ ವಿಚಾರದಲ್ಲಿ ಬಿಗ್ ಸಪ್ರೈಸ್ ನೀಡಲಿದ್ದಾರೆ ಎಂಬ ಮಾತುಗಳು ದೆಹಲಿಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ರಾಷ್ಟ್ರಪತಿ ಆಗುವರು ಯಾರು ಎಂಬುದನ್ನು ಅರಿಯಲು ಇನ್ನೂ ಎರಡು ತಿಂಗಳು ಕಾಯಬೇಕು ಎಂಬುದು ಅಷ್ಟೇ ಸತ್ಯ.
ಸದ್ಯ ರಾಷ್ಟ್ರಪತಿ ಚುನಾವಣೆಗಾಗಿ ಎನ್‌ಡಿಎ ಆಸಕ್ತಿ ತೋರುತ್ತಿಲ್ಲ ಎಂಬುದು ಮೇಲ್ನೋಟದ ರಾಜಕಾರಣ. ಆದರೆ, ಬಿಜೆಪಿ ಆಂತರಿಕ ಮಟ್ಟದಲ್ಲಿ ಈ ಬಗ್ಗೆ ಆಗಲೇ ಬಹಳಷ್ಟು ಚರ್ಚೆಗಳು ಆಗಿಹೋಗಿವೆ. ಇತ್ತೀಚೆಗಷ್ಟೇ ಎನ್‌ಡಿಎ ತನ್ನೆಲ್ಲಾ ಅಂಗಪಕ್ಷಗಳನ್ನು ದೆಹಲಿಗೆ ಕರೆದು ಭೋಜನ ಕೂಟ ಏರ್ಪಡಿಸಿದ್ದು ರಾಷ್ಟ್ರಪತಿ ಚುನಾವಣೆಗಾಗಿಯೇ ಎಂಬುದು ಬಹಿರಂಗ ಸತ್ಯ. ಆದರೆ ಇಲ್ಲಿ ಚರ್ಚೆಯೇ ಆಗಲಿಲ್ಲ ಎಂದು ಬಿಜೆಪಿ ನಾಯಕರು ಹೇಳಿದರೂ, ಇದನ್ನು ನಂಬುವ ಸ್ಥಿತಿಯಲ್ಲಿ ರಾಜಕೀಯ ವಿಶ್ಲೇಷಕರೂ ಇಲ್ಲ. ಈಗಾಗಲೇ ಮೂರು ವರ್ಷ ಕಳೆಯುವ ಹಂತದಲ್ಲಿ ಸ್ನೇಹಿತರನ್ನು ಕರೆದು ಒಟ್ಟಾಗಿ ಊಟ ಮಾಡುತ್ತಾರೆಂದರೆ ಅಲ್ಲಿ ರಾಜಕೀಯ ಚರ್ಚೆ ಇರಲೇಬೇಕು ಎಂದೇ ಅಲ್ಲವೇ. ಇದರ ಜತೆಯಲ್ಲೇ, ಕೆಲ ವಿಚಾರಗಳ ಸಂಬಂಧ ಎನ್‌ಡಿಎ ಅಂಗಪಕ್ಷಗಳಾಗಿರುವ ಆಂಧ್ರ ಪ್ರದೇಶದ ತೆಲುಗುದೇಶಂ ನಾಯಕ ಹಾಗೂ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಮಹಾರಾಷ್ಟ್ರದ ಬಹುಕಾಲದ ಸ್ನೇಹಿತ ಶಿವಸೇನೆಗೆ ಸರ್ಕಾರದ ಮೇಲೆ ಬೇಸರವಾಗಿರುವ ಅಂಶವೂ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ತಲೆಯಲ್ಲಿತ್ತು. ಹೀಗಾಗಿಯೇ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಇರುವ ಸಣ್ಣಪುಟ್ಟ ವಿಚಾರಗಳನ್ನು ಬಗೆಹರಿಸಿಕೊಳ್ಳುವ ಸಂಧಾನ ಸಭೆ ಕೂಡ ಇದಾಗಿತ್ತು ಎಂದೂ ಹೇಳಬಹುದು.
ಇದು ಸಂಪೂರ್ಣವಾಗಿ ಆಡಳಿತ ಪಕ್ಷದ ಕಥೆಯಾದರೆ, ಇದೇ ರಾಷ್ಟ್ರಪತಿ ಚುನಾವಣೆ ದೇಶದ ಬಿಜೆಪಿಯೇತರ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವ ವೇದಿಕೆಯಾಗಿ ಸೃಷ್ಟಿಯಾಗಿದೆ. ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಕ್ಕೆ ಬರಸಿಡಿಲಂತೆ ಅಪ್ಪಳಿಸಿದ್ದು, ಕೆಲವೊಂದು ಪಾಠ ಕಲಿಸಿದೆ. ಬಿಹಾರದಲ್ಲಿ ರಚನೆಯಾಗಿದ್ದ ಮಹಾಘಟಬಂಧನ್ ರೀತಿಯಲ್ಲೇ, ಉತ್ತರ ಪ್ರದೇಶದಲ್ಲೂ ಮೈತ್ರಿಕೂಟ ಸ್ಥಾಪಿಸಿಕೊಂಡಿದ್ದರೆ, ಬಿಜೆಪಿಯನ್ನು ಮಣಿಸಬಹುದಿತ್ತು ಎಂಬುದು ಚುನಾವಣೋತ್ತರ ವಿಶ್ಲೇಷಣೆಗಳಲ್ಲಿ ಬಹಿರಂಗವಾಯಿತು. ಹೀಗಾಗಿಯೇ, ಬಿಜೆಪಿಯ ಗೆಲುವಿನ ನಾಗಾಲೋಟ ತಡೆಯುವ ದೃಷ್ಟಿಯಿಂದ ದೇಶದ ಎಲ್ಲಾ ಜಾತ್ಯತೀತ ಪಕ್ಷಗಳು ಒಟ್ಟಾಗಬೇಕು ಎಂಬುದು ಸದ್ಯದ ರಾಜಕೀಯ ಚಿತ್ರಣ.
ಇಂಥ ಸಮಯದಲ್ಲೇ ಬಿಜೆಪಿಯೇತರ ಪಕ್ಷಗಳಿಗೆ ಕಾಣಿಸಿದ್ದು ರಾಷ್ಟ್ರಪತಿ ಚುನಾವಣೆ. ಇವರ ಅಂದಾಜಿನ ಪ್ರಕಾರ, ಎನ್‌ಡಿಎಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಇನ್ನೂ 25 ಸಾವಿರಕ್ಕೂ ಹೆಚ್ಚು ಮತ ಬೇಕು. ಈ ಮತ ಸಿಗದಂತೆ ಮಾಡಿ, ಬಿಜೆಪಿಯೇತರ ಪಕ್ಷಗಳು ಒಂದಾದರೆ, ಆಡಳಿತ ಪಕ್ಷವನ್ನೇ ಸೋಲಿಸಬಹುದು. ಆಗ ಸರ್ಕಾರಕ್ಕೆ ಬಹುದೊಡ್ಡ ಮುಜುಗರವನ್ನುಂಟು ಮಾಡಬಹುದು ಎಂಬ ಲೆಕ್ಕಾಚಾರ ಇವರ ಮನದಲ್ಲಿದೆ.
ಕಳೆದ ವಾರ ದಿಢೀರ್ ದೆಹಲಿಗೆ ಹೋದ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ರಾಷ್ಟ್ರಪತಿ ಚುನಾವಣೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಸದ್ಯಕ್ಕೆ ಮಹಾಘಟಬಂಧನ್ ರಚನೆಯಾಗುವುದಾದರೆ ಅದರ ಸಂಚಾಲಕನಂತೆ ಕೆಲಸ ಮಾಡುತ್ತಿರುವುದು ಮತ್ತು ಮಾಡಬೇಕಾಗಿರುವುದು ನಿತೀಶ್‌ಕುಮಾರ್ ಅವರೇ. ಹೀಗಾಗಿಯೇ ಅವರು ಮೊದಲ ಹೆಜ್ಜೆಯಾಗಿ, ಲೋಕಸಭೆಯ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸೋನಿಯಾ ಗಾಂಧಿ ಅವರೇ ಮಹಾಘಟಬಂಧನ್ ನೇತೃತ್ವ ತೆಗೆದುಕೊಳ್ಳಬೇಕು ಎಂದೂ ಪ್ರಸ್ತಾಪಿಸಿದ್ದಾರೆ. ಇದಾದ ಮರುದಿನವೇ ಪಶ್ಚಿಮ ಬಂಗಾಳದ ಎಡಪಕ್ಷಗಳ ನೇತಾರ ಸೀತಾರಾಂ ಯೆಚೂರಿ ಅವರೂ ಸೋನಿಯಾ ನಿವಾಸಕ್ಕೆ ತೆರಳಿ ಇದೇ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ರಾಷ್ಟ್ರೀಯ ಜನತಾ ದಳದ ನೇತಾರ ಲಾಲು ಪ್ರಸಾದ್ ಯಾದವ್ ಕೂಡ ಸದ್ಯದಲ್ಲೇ ಸೋನಿಯಾ ಮನೆಗೆ ತೆರಳಿ ಮಾತುಕತೆ ನಡೆಸುವುದು ಖಚಿತವಾಗಿದೆ.
ಈ ಬೆಳವಣಿಗೆಗಳ ಮಧ್ಯೆಯೇ, ಒಡಿಶಾದ ಭುವನೇಶ್ವರದಲ್ಲಿ ಅಲ್ಲಿನ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇವರ ಚರ್ಚೆಯ ವಸ್ತುವೂ ರಾಷ್ಟ್ರಪತಿ ಚುನಾವಣೆಯೇ ಎಂಬುದು ಬಹಿರಂಗ ಸತ್ಯ. ವಿಶೇಷವೆಂದರೆ, ಇವರಿಬ್ಬರ ಮಾತುಕತೆ ರಾಷ್ಟ್ರಪತಿ ಚುನಾವಣೆಗಿಂತ ಮಿಗಿಲಾಗಿ ತಮ್ಮ ರಾಜ್ಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದೇ ಆಗಿದೆ. ಇದಕ್ಕೆ ಕಾರಣ, ಈ ಎರಡರಲ್ಲೂ ಬಿಜೆಪಿ ನಿಧಾನಗತಿಯಲ್ಲಿ ತಳವೂರುತ್ತಿರುವುದು ಮತ್ತು ಅಮಿತ್ ಷಾ ಅವರ ಕಣ್ಣಿಗೆ ಬಿದ್ದಿರುವುದು.
ಆದರೆ, ಇವರೆಲ್ಲರೂ ಒಟ್ಟಾದರೂ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಸೋಲಿಸುವುದು ಕಷ್ಟ ಎಂಬುದು ಇವರಿಗೆಲ್ಲಾ ಗೊತ್ತಿದೆ. ಇದಕ್ಕಾಗಿಯೇ ಪ್ರತಿಪಕ್ಷಗಳು ಸರ್ವಸಮ್ಮತ ಮತ್ತು ಜಾತ್ಯತೀತ ವ್ಯಕ್ತಿಯೊಬ್ಬರು ರಾಷ್ಟ್ರಪತಿ ಆಗಬೇಕು ಎಂದು ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿವೆ. ಸದ್ಯ ಇವರ ದೃಷ್ಟಿಯಲ್ಲಿರುವುದು ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಶರದ್ ಪವಾರ್, ಬಿಹಾರದ ಜೆಡಿಯು ನಾಯಕ ಶರದ್ ಯಾದವ್, ಕಾಂಗ್ರೆಸ್ ನಾಯಕಿ ಮೀರಾಕುಮಾರ್. ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಕೇವಲ ಪ್ರತಿಪಕ್ಷಗಳ ಮತಗಳನ್ನು ನಂಬಿ ಮತ್ತೂಮ್ಮೆ ಸ್ಪರ್ಧಿಸುವ ಅವಕಾಶ ತೀರಾ ವಿರಳ. ಒಂದೊಮ್ಮೆ ಆಡಳಿತ ಪಕ್ಷ ಬೆಂಬಲ ನೀಡಿದರೆ ಮತ್ತೂಂದು ಅವಧಿ ಬಗ್ಗೆ ಚಿಂತಿಸಬಹುದು. ಇನ್ನು ಮನಮೋಹನ್ ಸಿಂಗ್ ಬಗ್ಗೆ ಎಲ್ಲಾ ಪಕ್ಷಗಳಲ್ಲಿಯೂ ಗೌರವವಿದೆ. ಇವರನ್ನು ಕಣಕ್ಕಿಳಿಸಿದರೆ ಮತ ಕೇಳುವುದು ಸುಲಭ. ಒಂದೊಮ್ಮೆ ಬಿಜೆಪಿಯೇ ಮನಮೋಹನ್ ಸಿಂಗ್ ಒಪ್ಪಿಕೊಳ್ಳಬಹುದೇ ಎಂಬ ಮಾತುಗಳೂ ಇವೆ. ಹಾಗೆಯೇ, ಮಹಾರಾಷ್ಟ್ರದ ಶರದ್ ಪವಾರ್ ವಿಚಾರದಲ್ಲಿ ಜಾತ್ಯತೀತ ಪಕ್ಷಗಳ ಮತ ಗಳಿಕೆ ಸಲೀಸಿನ ವಿಚಾರ. ಶರದ್ ಪವಾರ್ ಅವರಿಗೆ ಎನ್‌ಡಿಎ ಅಂಗಪಕ್ಷ ಶಿವಸೇನೆ ಕೂಡ ಬೆಂಬಲ ನೀಡಬಹುದು ಎಂಬ ಲೆಕ್ಕಾಚಾರವೂ ಇದೆ. ಶರದ್ ಯಾದವ್ ಮತ್ತು ಮೀರಾ ಕುಮಾರ್ ಅವರಿಗೂ ಪಕ್ಷ ಬೇಧ ಮರೆತು ಬೆಂಬಲ ಸಿಗುವ ಆಶಯವೂ ಮಹಾಘಟಬಂಧನ್ ನಾಯಕರಿಗೆ ಇದೆ.
ಇದೆಲ್ಲದಕ್ಕಿಂತ ಮಿಗಿಲಾಗಿ, ಒಂದು ವೇಳೆ ರಾಷ್ಟ್ರಪತಿ ಚುನಾವಣೆಯಲ್ಲಿ ಸೋತರೂ, 2019ರ ಲೋಕಸಭೆ ಚುನಾವಣೆಯಲ್ಲಿ ಈ ಎಲ್ಲ ಪಕ್ಷಗಳು ಒಟ್ಟಾಗಿ ಪ್ರಧಾನಿ ಮೋದಿ ಅವರನ್ನು ಸೋಲಿಸಬಹುದು ಎಂಬ ಅಂದಾಜು ಇದೆ. ಅಲ್ಲದೆ ಈಗಿನಿಂದಲೇ ಮೈತ್ರಿಯ ಮಾತುಕತೆ, ಅದರ ಸುತ್ತಲಿನ ಸಿದ್ಧತೆಗಳನ್ನೂ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
ಇದಿಷ್ಟು ಪ್ರತಿಪಕ್ಷಗಳ ಮಾತಾದರೆ, ಆಡಳಿತ ಪಕ್ಷದಲ್ಲಿ ಇನ್ನೂ ರಾಷ್ಟ್ರಪತಿ ಚುನಾವಣೆ ಬಗ್ಗೆ ಮಾತೇ ಇಲ್ಲ. ಆದರೂ, ಚರ್ಚೆಗೆ ಕಾರಣವಾಗಿದ್ದು, ಇತ್ತೀಚಿನ ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸುಪ್ರೀಂ ತೀರ್ಪು. ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರು ವಿಚಾರಣೆ ಎದುರಿಸಲೇಬೇಕು ಎಂದು ಸುಪ್ರೀಂಕೋರ್ಟ್ ನೀಡಿದ ಆದೇಶ ಇವರಿಬ್ಬರ ರಾಷ್ಟ್ರಪತಿ ಕನಸಿಗೆ ತಣ್ಣೀರು ಹಾಕಿತು ಎಂದು ದೆಹಲಿ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಇದರ ನಡುವೆಯೇ ಎನ್‌ಡಿಎ ಕಡೆಯಿಂದ ರಾಷ್ಟ್ರಪತಿ ಅಭ್ಯರ್ಥಿ ಯಾರಾಗಬಹುದು ಎಂಬ ಚರ್ಚೆಗಳು ಶುರುವಾಗಿವೆ. ಇದರಲ್ಲಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಜಾರ್ಖಂಡ್ ರಾಜ್ಯಪಾಲೆ ದ್ರೌಪದಿ ಮುರ್ಮು, ವೆಂಕಯ್ಯ ನಾಯ್ಡು ಅವರ ಹೆಸರುಗಳು ತೇಲಿಬರುತ್ತಿವೆ.
ಒಂದು ವೇಳೆ ಮೋದಿ ಮತ್ತು ಷಾ ಅವರ ಸಪೈìಸ್ ಅಭ್ಯರ್ಥಿಯಾಗಿ ಅಡ್ವಾಣಿ ಹೊರಹೊಮ್ಮಿದರೆ, ಪ್ರತಿಪಕ್ಷಗಳ ಮಹಾಘಟಬಂಧನ್‌ನಲ್ಲೇ ಒಡಕುಂಟಾಗಬಹುದು. ಹಿಂದಿನಿಂದಲೂ ಆಡ್ವಾಣಿ ಕಂಡರೆ ನಿತೀಶ್‌ಕುಮಾರ್ ಮತ್ತು ಮಮತಾ ಬ್ಯಾನರ್ಜಿ ಅವರಿಗೆ ಗೌರವ ಕೂಡ. ಇವರಿಬ್ಬರೂ ಅನಾಯಾಸವಾಗಿ ಅಡ್ವಾಣಿ ಅವರನ್ನು ಬೆಂಬಲಿಸಬಹುದು. ಹಾಗೆಯೇ ಒಡಿಶಾದ ನವೀನ್ ಪಟ್ನಾಯಕ್ ಕೂಡ ಎನ್‌ಡಿಎ ಕೈ ಹಿಡಿಯಬಹುದು. ಸುಮಿತ್ರಾ ಮಹಾಜನ್ ಅವರ ಬಗ್ಗೆ ಎಲ್ಲ ಕಡೆ ಗೌರವವಿದ್ದರೂ ಇವರು ಬಿಜೆಪಿ ವ್ಯಕ್ತಿ ಎಂಬ ಆರೋಪ ಪ್ರತಿಪಕ್ಷಗಳಲ್ಲಿ ಇದೆ. ಆದರೆ ಇವರ ಅಭ್ಯರ್ಥಿತನಕ್ಕೆ ಮಹಾರಾಷ್ಟ್ರದ ಮೂಲ ಲಾಭವಾಗಬಹುದು. ಅಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ಕೂಡ ಬೆಂಬಲಿಸಬಹುದು. ಸುಷ್ಮಾ ಸ್ವರಾಜ್ ಬಗ್ಗೆಯೂ ಎಲ್ಲ ಪಕ್ಷಗಳಲ್ಲಿ ಒಳ್ಳೆ ಅಭಿಪ್ರಾಯವಿದೆ. ಒಂದು ಮಾತಿನ ಪ್ರಕಾರ, ಸುಷ್ಮಾಗೆ ಸೋನಿಯಾ ಗಾಂಧಿ ಅವರೇ ಬೆಂಬಲಿಸಿದರೂ ಅಚ್ಚರಿಯೇನಿಲ್ಲ ಎಂದು ಹೇಳಲಾಗುತ್ತಿದೆ. ದ್ರೌಪದಿ ಮುರ್ಮು ಅವರು ಆದಿವಾಸಿ ಮಹಿಳೆಯಾಗಿದ್ದು, ಆಯ್ಕೆಯಾದಲ್ಲಿ ಮೊದಲ ಆದಿವಾಸಿ ಸಮುದಾಯದ ರಾಷ್ಟ್ರಪತಿಯಾಗುತ್ತಾರೆ. ಆಗ ಜಾತಿ ಸಮೀಕರಣದಲ್ಲಿ ನಾವು ಹಿಂದುಳಿದ ವರ್ಗದವರನ್ನು ರಾಷ್ಟ್ರಪತಿ ಮಾಡಿದ್ದೇವೆ ಎಂದು ಮೋದಿ ಮತ್ತು ಷಾ ಅವರು ಹೇಳಿಕೊಳ್ಳಬಹುದು ಎಂಬ ಮಾತುಗಳಿವೆ. ಇನ್ನು ವೆಂಕಯ್ಯ ನಾಯ್ಡು ಅವರನ್ನು ರಾಷ್ಟ್ರಪತಿಗಿಂತ ಉಪರಾಷ್ಟ್ರಪತಿ ಹುದ್ದೆಗೆ ಪರಿಗಣಿಸಬಹುದು ಎಂದೇ ಹೇಳಲಾಗುತ್ತಿದೆ. ಆದರೂ, ಇವೆಲ್ಲಾ ಸಮೀಕರಣಗಳು ಗೊತ್ತಾಗಲು ಇನ್ನೂ ಒಂದೂವರೆ ತಿಂಗಳು ಕಾಯಲೇಬೇಕು.
ಸೋಮಶೇಖರ ಸಿ.ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.