ರೇಡಿಯೋ ಎಂಬ ಆಪ್ತಮಿತ್ರನ ನೆನಪಿನಲ್ಲಿ…
Team Udayavani, Apr 24, 2017, 3:14 PM IST
80ರ ದಶಕದಲ್ಲಿ ದೂರದರ್ಶನವೆಂಬುದು ಸಿರಿವಂತರಿಗೆ ಮಾತ್ರ ಕೈಗೆಟುಕುತ್ತಿದ್ದ ವಸ್ತುವಾಗಿತ್ತು. ಆಗೆಲ್ಲಾ ಮನೆ ಮನೆಗಳಲ್ಲಿ ರೇಡಿಯೋ ಎಂಬ ಮಾತನಾಡುವ ಮಾಂತ್ರಿಕನದ್ದೇ ಕಾರುಬಾರು.ಹುಟ್ಟುವಾಗಲೇ ಮನೆಯಲ್ಲಿ ರೇಡಿಯೋ ಇದ್ದ ಕಾರಣ ಅಪ್ಪನ ಯಕ್ಷಗಾನ ಪ್ರೇಮ. ಹೊಟ್ಟೆಗೂ ಬಟ್ಟೆಗೂ ತತ್ವಾರವಿದ್ದ ಕಾಲದಲ್ಲಿ ಪೈಸೆಗೆ ಪೈಸೆ ಕೂಡಿಸಿ ರೇಡಿಯೋ ಖರೀದಿಸಿದ್ದೇ ಒಂದು ದೊಡ್ಡ ಸಾಧನೆ. ಆ ಕಷ್ಟದ ಅರಿವು ಇದ್ದುದರಿಂದಲೇ ಏನೋ ಇಪ್ಪತ್ತು ವರುಷಗಳ ಸುದೀರ್ಘ ಸೇವೆಯನ್ನು ಆ ರೇಡಿಯೋ ನೀಡಿತ್ತು. ಆ ರೇಡಿಯೋ ಎಂದರೆ ಮನೆಯ ಓರ್ವ ಸದಸ್ಯನೆಂಬಂತೆ ಎಲ್ಲರಿಗೂ ಕಾಳಜಿ.ಹಣಕ್ಕೆ ವಸ್ತುಗಳಿಗೆ,ಮನುಷ್ಯರಿಗೆ ಬೆಲೆ ಇದ್ದ ಕಾಲದಲ್ಲಿ ಪ್ರತಿಯೊಂದು ಆತ್ಮಕ್ಕೆ ಹತ್ತಿರವಾದ ವಿಚಾರಗಳಾಗಿದ್ದವು.
ಬಾಲ್ಯದ ದಿನಗಳಲ್ಲಿ ನಮ್ಮ ಮನೆಯಲ್ಲಿ ಸುಪ್ರಭಾತವು ಬೆಳಗಿನ ಜಾವದ ರೇಡಿಯೋ ಕಾರ್ಯಕ್ರಮಗಳಿಂದಲೇ ಆಗುತ್ತಿದ್ದ ನೆನಪು. ಸಮಯ ನೋಡಲು ಯಾವತ್ತೂ ಗಡಿಯಾರ ನೋಡಿದವರಲ್ಲ. ರೇಡಿಯೋ ಕಾರ್ಯಕ್ರಮಗಳಿಂದಲೇ ಸಮಯವನ್ನು ನಿಖರವಾಗಿ ಹೇಳುವಷ್ಟರ ಮಟ್ಟಿಗೆ ರೇಡಿಯೋ ಎಂಬ ಮಿತ್ರ ನಮ್ಮ ಮನೆ ಮನಗಳನ್ನು ಅವರಿಸಿ ಬಿಟ್ಟದ್ದ. ಬೆಳಗಿನ ಜಾವದ ಸಿಹಿ ನಿದ್ದೆಯಿಂದ ಎಬ್ಬಿಸುತ್ತಿದ್ದ ಇಂಗ್ಲಿಷ್ ವಾರ್ತೆ, ಭಕ್ತಿಗೀತೆಗಳು, ದೇಶ ಪ್ರೇಮದ ಹಾಡುಗಳು, ಅನಂತರದಲ್ಲಿ ಕೇಳಿಬರುತ್ತಿದ್ದ ಚಿಂತನ. ವಿವಿಧ ಕಾರ್ಯಕ್ರಮಗಳ ವಿವರಗಳನ್ನು ಕೇಳಲು ಮನೆಯಲ್ಲಿ ಎಲ್ಲರೂ ಉತ್ಸುಕರು.ಪಟ್ಟಣದಲ್ಲಿ ಹುಟ್ಟಿ ಬೆಳೆದ ಕಾರಣಕ್ಕೊ ಏನೋ ರೈತರಿಗೆ ಸಲಹೆಯಲ್ಲಿ ಬರುವ ವಿಚಾರಗಳು ಸ್ವಲ್ಪ ಅಪರಿಚಿತವೆಂಬಂತೆ ಭಾಸವಾಗುತ್ತಿತ್ತು. ಕನ್ನಡ ಪ್ರದೇಶ ಸಮಾಚಾರ ವಾಚಿಸುತ್ತಿದ್ದ ಚಿತ್ತರಂಜನ ದಾಸ್, ರಸವಾರ್ತೆಯಲ್ಲಿ ರಸವತ್ತಾದ ಮಾಹಿತಿಗಳನ್ನು ಒದಗಿಸುತ್ತಿದ್ದ ಕೃಷ್ಣಕಾಂತ್,ರಾಷ್ಟ್ರೀಯ ವಾರ್ತಾ ವಾಚಕರಾಗಿದ್ದ ರಂಗರಾವ್, ಉಪೇಂದ್ರರಾವ್ ಇವೆಲ್ಲವೂ ಮನದಂಗಳದಲ್ಲಿ ಅಚ್ಚೊತ್ತಿದ್ದ ಹೆಸರುಗಳು. ಅವರು ವಾರ್ತೆಗಳನ್ನು ಓದುತ್ತಿದ್ದ ಧಾಟಿ ಸ್ವರಭಾರವನ್ನು ಆದೆಷ್ಟೋ ಬಾರಿ ಅನುಕರಣೆ ಮಾಡುವ ಆಟಗಳನ್ನಾಡಿದ ದಿನಗಳ ನೆನಪು ತುಟಿಯಂಚಿನಲ್ಲಿ ಮಂದಹಾಸವನ್ನು ಇಂದಿಗೂ ಮಿನುಗಿಸುತ್ತದೆ.ಕಂಚಿನ ಕಂಠದ ಉದ್ಘೋಷಕರಾಗಿದ್ದ ಕೆ.ಆರ್.ರೈ, ಸು#ಟ ಉಚ್ಚಾರದ ಮುದ್ದು ಮೂಡುಬೆಳ್ಳೆ, ನಾರಾಯಣಿ ದಾಮೋದರ್, ಶಕುಂತಲಾ ಆರ್.ಕಿಣಿ, ಶಂಕರ್ ಭಟ್ ಇವರ ಸ್ವರಗಳನ್ನು ದಿನಂಪ್ರತಿ ಕೇಳಿ ಬೆಳೆದ ದೇಹ ನಿದ್ದೆಯಲ್ಲೂ ಅವರ ಸ್ವರಗಳನ್ನು ಗುರುತಿಸುವಷ್ಟು ತರಬೇತಿ ಪಡೆದಿತ್ತು.
ಕೆಂಚನ ಕುರ‌್ಲರಿ ಕಾರ್ಯಕ್ರಮ ಕೇಳುತ್ತಿದ್ದಾಗಲೆಲ್ಲಾ ಕೆ.ಆರ್. ರೈಯವರ ಪ್ರತಿಭೆಗೆ ಬೆರಗಾಗಿ ಹೋಗುವಷ್ಟು ರೋಮಾಂಚನವಾಗುತ್ತಿತ್ತು. ಈ ಸ್ವರಗಳ ವ್ಯಕ್ತಿಗಳು ಹೀಗಿರಬಹುದೇ ?ಎಂಬ ಕಲ್ಪನೆಯೊಳಗೆ ಮನಸ್ಸು ಜಾರಿಹೋಗಿ ಅದರದ್ದೇ ಆದ ರೂಪವನ್ನು ತನ್ನೊಳಗೆ ನಿರ್ಮಾಣ ಮಾಡಿಬಿಟ್ಟ ಪುಟ್ಟ ಮನಸ್ಸು ರೇಡಿಯೋ ಎಂಬ ಬ್ಯಾಟರಿ ಚಾಲಿತ ಯಂತ್ರದೊಳಗೆ ಜೀವಂತಿಕೆಯನ್ನು ಹುಟ್ಟು ಹಾಕುತ್ತಾ ಸಾಗಿತ್ತು.
ಬೆಳಗ್ಗೆ ಮಧ್ಯಾಹ್ನ ರಾತ್ರಿಯೆಂಬಂತೆ ಕೇಳಿಬರುತ್ತಿದ್ದ ಚಿತ್ರಗೀತೆಗಳ ಹಾಡಿನೊಳಗೆ ನಮ್ಮದೇ ಪ್ರಪಂಚದಲ್ಲಿ ತೇಲಾಡುತ್ತಾ ಕಲ್ಪನಾ ಲೋಕದಲ್ಲಿ ವಿಹರಿಸಿದ ನೆನಪುಗಳನ್ನು ಕಟ್ಟಿಕೊಟ್ಟದ್ದು ರೇಡಿಯೋ ಎಂಬ ಈ ಮಿತ್ರ. ಕೋರಿಕೆ ನಿಮ್ಮ ಆಯ್ಕೆಯ ಚಿತ್ರಗೀತೆಗಳ ಕಾರ್ಯಕ್ರಮ ಎಂಬುದನ್ನು ಕಾತರದಿಂದ ಕಾಯುವ ಒಂದು ದೊಡ್ಡ ಯುವ ಸಮೂಹವೇ ಇದ್ದಿತ್ತು. ಅವರು ಹೇಳುವ ಹೆಸರುಗಳನ್ನು ಕೇಳುವುದರಲ್ಲೊಂದು ಸಂಭ್ರಮ. ನಮ್ಮ ಮನೆಯ ಸದಸ್ಯರ ಹೆಸರು ಅದರಲ್ಲಿ ಕಾಕತಾಳೀಯವಾಗಿ ಮೂಡಿಬಂದಾಗ ಆಗುತ್ತಿದ್ದ ಪುಳಕ ಸಂಭ್ರಮ ವರ್ಣನಾತೀತ. ನಮ್ಮ ಮೆಚ್ಚುಗೆಯ ಹಾಡಿದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು ಎಂಬಂಥ ಆನಂದವಾಗುತ್ತಿತ್ತು.
ಹಿಂದೆ ಬುಧವಾರ ರಾತ್ರಿ 9.30ಕ್ಕೆ ಮೂಡಿ ಬರುತ್ತಿದ್ದ ಯಕ್ಷಗಾನವನ್ನಂತೂ ಅಪ್ಪ ಬಿಟ್ಟದ್ದೇ ಇಲ್ಲ.ಯಕ್ಷಗಾನ ಹಾಡುಗಳ ಮತ್ತು ಮಾತಿನಮಲ್ಲರ ಧಾಟಿಯೇ ಜೋಗುಳವಾಗಿ ನಿದ್ದೆಗೆ ಜಾರಿದ ನೆನಪು. ಮರುದಿನ ಬೆಳಗ್ಗೆ ಪಕ್ಕದ ಮನೆಯ ಅಜ್ಜನೊಂದಿಗೆ, ಅಪ್ಪ ಕಳೆದ ರಾತ್ರಿಯ ಯಕ್ಷಗಾನ ಪಾತ್ರಧಾರಿಗಳ ಮಾತು,ಹಾಡುಗಾರಿಕೆಯ ವಿಮರ್ಶೆ ನಡೆಸುತ್ತಿದ್ದುದನ್ನು ಕೇಳಲು ಬಲು ಸೊಗಸೆನಿಸುತ್ತಿತ್ತು.
ರೇಡಿಯೋ ಕೇಳುತ್ತಾ ಕೇಳುತ್ತಾ ಅದರೊಳಗಿನ ಪಾತ್ರಗಳು ನಾವೇ ಆಗಿ ಉದ್ಘೋಷಕರಂತೆ ಮಿಮಿಕ್ರಿ ಮಾಡ ಹೊರಟದ್ದು, ನಾಟಕ,ಯಕ್ಷಗಾನಗಳ ಪಾತ್ರವನ್ನು ಅಭಿನಯಿಸಿದ್ದು ಹೀಗೆ ರೇಡಿಯೋ ಮಿತ್ರ ಕಟ್ಟಿಕೊಟ್ಟ ನೆನಪುಗಳು ಆಗೊಮ್ಮೆ ಈಗೊಮ್ಮೆ ಕಚಗುಳಿ ಇಡುತ್ತವೆ. ರೇಡಿಯೋದಲ್ಲಿ ಮಾತನಾಡುವವರನ್ನು ನೋಡುವ ಹಂಬಲದಿಂದಲೇ ಅವರೆಲ್ಲರೂ ನಮ್ಮ ಮನಸ್ಸಿನೊಳಗೆ ತಾರೆಗಳಾಗಿ ಬಿಟ್ಟಿದ್ದರು.
ಬೆಳೆದು ದೊಡ್ಡವರಾದಂತೆ ಶಾಲಾ ಕಾರ್ಯಕ್ರಮ ನೀಡಲು ರೇಡಿಯೋ ಸ್ಟೇಷನ್‌ಗೆ ಹೋದಾಗ ಸ್ವರ್ಗಕ್ಕೆ ಬಂದಿಳಿದ ಅನುಭವ. ಉದ್ಘೋಷಕರನ್ನು ಕಂಡಾಗಲಂತೂ ಗರಬಡಿದವರಂತೆ ನಿಂತು ನೋಡಿದ್ದೆ . ಇವರೆಲ್ಲರೂ ನಮ್ಮ ಹಾಗೆ ಇದ್ದಾರೆ ! ಎಂಬ ವಾಸ್ತವ ಪುಟ್ಟ ಮನಸುಗಳಿಗೆ ಅರಿವಾಗಿತ್ತು. ರೇಡಿಯೋ ಸ್ಟುಡಿಯೋದೆದುರು ಕನ್ನಡಿ ಇರುವ ಕೋಣೆಯ ಮುಂದಿನಿಂದ ಆ ನೀರವ ಕೋಣೆಯೊಳಗೆ ಮೈಕದೆದುರು ಮಾತನಾಡಿದ ಮೊದಲ ಅನುಭವ ! ನಮ್ಮ ಸ್ವರವನ್ನು ರೇಡಿಯೊದಲ್ಲಿ ಕೇಳಿ ಆನಂದಿಸಿದ ಆ ವಿನೂತನ ರಸ ಘಳಿಗೆ ಇವೆಲ್ಲವೂ ಆಪ್ಯಾಯಮಾನ ಕ್ಷಣಗಳು. ಮರೆಯಲಾಗದ ದಿನಗಳು ಸೇರಿಸಿಟ್ಟ ಕನಸು ಸಾಕಾರಗೊಂಡಂಥ ಭಾವ!
ಆನಂತರ ಮನೆ ಮನೆಗೂ ಲಗ್ಗೆ ಇಟ್ಟ ದೂರದರ್ಶನ, ಕಂಪೂrರ್‌ಗಳು ರೇಡಿಯೋ ಎಂಬ ಮಿತ್ರನನ್ನು ಮೂಲೆಗುಂಪಾಗಿಸಿದ್ದು ಸುಳ್ಳಲ್ಲ. ಇತ್ತೀಚಿಗಿನ ದಿನಗಳಲ್ಲಿ ಡಾ| ವಸಂತ್ ಕುಮಾರ್ ಪೆರ್ಲ, ಡಾ| ಸದಾನಂದ ಪೆರ್ಲರಂತಹಾ ಉತ್ಸಾಹಿ ಪ್ರಯೋಗಶೀಲ ಮಾಧ್ಯಮ ತಂಡದಿಂದ ಮನೆ ಮನೆಗಳಲ್ಲಿ ರೇಡಿಯೋ ಎಂಬ ಮಿತ್ರನನ್ನು ಕಾಣಲಾರಂಭಿಸಿದ್ದಾನೆ.ಮಾತ್ರವಲ್ಲದೆ ದೇಶದ ಪ್ರಧಾನಿಯವರೂ ರೇಡಿಯೋದ ಮಿತ್ರನಾಗಿ ತಮ್ಮ ಮನದಾಳದ ಮಾತನ್ನು ಮನ್ ಕಿ ಬಾತ್ ಮೂಲಕ ಮನೆ ಮನೆಗೆ ತಲಪಿಸುತ್ತಿರುವರು.ಆದರೂ ಫೇಸ್‌ಬುಕ್ ವಾಟ್ಸಾಪ್‌ಗ್ಳ ಭರಾಟೆಯಲ್ಲಿ ಈ ರೇಡಿಯೋ ಮಿತ್ರನೇಕೋ ಮಂಕಾಗಿದ್ದಾನೆ.
ಇಂಟರ್‌ನೆಟ್‌ಯುಗದ ವೈವಿಧ್ಯಮಯ ಆವಿಷ್ಕಾರಗಳ ದಾಸ್ಯಕ್ಕೆ ಒಳಗಾಗದೆ,ರಾತ್ರಿಯ ನೀರವ ಮೌನದಲ್ಲಿ ರೇಡಿಯೋ ಎಂಬ ಮಿತ್ರನೊಂದಿಗೆ ಹಾಡು ಕೇಳುತ್ತಾ ಬೆಳದಿಂಗಳ ರಾತ್ರಿಯನ್ನು ಸವಿಯುವ ರೇಡಿಯೋ ಪ್ರೇಮವನ್ನು ಕಂಡು ಮಕ್ಕಳು ನಗುತ್ತಾರೆ. ಕಂಪ್ಯೂಟರ್ ಅನಕ್ಷರಸ್ಥ ಎನ್ನುತ್ತಾರೆ. ಕಾಲಕ್ಕೆ ತಕ್ಕ ಕೋಲ ಎಂಬಂತೆ ಕಾಲ ಬದಲಾದಂತೆ ಜಗತ್ತು ಬದಲಾಗುತ್ತದೆ.ನಾವೂ ಬದಲಾಗಬೇಕು.ಯಾಕೆಂದರೆ ಪರಿವರ್ತನೆ ಜಗದ ನಿಯಮ. ಹೊಸ ಹೊಸ ತಂತ್ರ ಜನಗಳ ಅರಿವಿಲ್ಲದೇ ಹೋದಾಗ ನಿರಕ್ಷರ ಕುಕ್ಷಿಗಳಂತೆ ಭಾಸವಾಗುತ್ತದೆ.
ಪ್ರಧಾನಿಯವರ ಡಿಜಿಟಲ್ ಇಂಡಿಯಾ ಕ್ಯಾಶ್‌ಲೆಸ್ ಇಂಡಿಯಾದ ಪರಿಕಲ್ಪನೆಯಡಿಯಲ್ಲಿ ಜಗತ್ತು ಮುನ್ನಡೆಯುತ್ತಿರುವಾಗ ಹೊಸ ಆವಿಷ್ಕಾರಗಳ ಕುರಿತಾದ ತಿಳುವಳಿಕೆಯೂ ಮಹತ್ವವನ್ನು ಪಡೆದು ಕೊಳ್ಳುತ್ತದೆ.ಆದರೂ ಹಳೆಯ ಮಿತ್ರ ರೇಡಿಯೋ ನೀಡುವ ಆನಂದವನ್ನು ಇದ್ಯಾವುದೂ ಕೊಟ್ಟಿಲ್ಲವೇನೋ ಎಂಬ ರೇಡಿಯೋ ಪ್ರಿಯರಿಗೆ ಅನ್ನಿಸದಿರದು.
-ಆಶಾ ದಿಲೀಪ್ ಸುಳ್ಯಮೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.