ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆತಿಲ್ಲ…
Team Udayavani, Apr 25, 2017, 3:45 AM IST
ಪ್ರತೀಕಾರ ತೀರಿಸಿಕೊಳ್ಳಲೇಬೇಕೆಂದು ನಿರ್ಧರಿಸಿದೆವು. ಒಂದು ಮಾಸ್ಟರ್ ಪ್ಲಾನ್ ಸಿದ್ಧವಾಯಿತು. ಮರುದಿನ ಕ್ಲಾಸಲ್ಲಿ ಯಾರೂ ಇಲ್ಲದ ಹೊತ್ತಿನಲ್ಲಿ ಗುರುಗಳು ಕೂರುವ ಕುರ್ಚಿ ಮೇಲೆ ಗುಂಡು ಪಿನ್ನು ಇಡಬೇಕು, ಆಮೇಲೆ ಗುರುಗಳು ನೋವಿನಿಂದ ಚೀರಿಕೊಂಡಾಗ ಈ ಕೆಲಸ ಮಾಡಿದ್ದು ಹುಡುಗರೇ ಎಂದು ತೋರುವಂತೆ ಮಾಡಬೇಕು. ಇದು ನಮ್ಮ ಉಪಾಯ.
ಬಾಲ್ಯವೆಂದರೆ ಬರೀ ತುಂಟಾಟಗಳೇ… ಬಾಲ್ಯದಲ್ಲಿ ನಾವು ಮಾಡಿದ ಕಿತಾಪತಿಗಳು ಒಂದಾ… ಎರಡಾ? ಎಷ್ಟು ಹೇಳಿದರೂ ಮುಗಿಯುವುದಿಲ್ಲ! ನಮ್ಮ ತರಗತಿಯಲ್ಲಿ ಒಟ್ಟು 30 ವಿದ್ಯಾರ್ಥಿಗಳಿದ್ದರು. ಅದರಲ್ಲಿ ಹುಡುಗಿಯರು ನಾವೈದು ಮಂದಿ ಮಾತ್ರ. ಹುಡುಗರು 25 ಮಂದಿ. ವಿದ್ಯಾರ್ಥಿನಿಯರು ಕಡಿಮೆ ಸಂಖ್ಯೆಯಲ್ಲಿದ್ದುದರಿಂದ ಶಿಕ್ಷಕರು ನಮ್ಮ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಿದ್ದರು. ಇದನ್ನೇ ನೆಪ ಮಾಡಿಕೊಂಡು ನಾವು ತುಂಬಾನೇ ತುಂಟಾಟಗಳನ್ನು ಮಾಡುತ್ತಿದ್ದೆ. ಮೊದಲಿನಿಂದಲೂ, ನಮಗೂ ಕ್ಲಾಸಿನ ಹುಡುಗರಿಗೂ ಅಷ್ಟಕ್ಕಷ್ಟೆ. ಹಾವು ಮುಂಗುಸಿಯಂತೆ ನಾವು ಕಿತ್ತಾಡುತ್ತಿದ್ದೆವು. ನಮ್ಮ ಈ ದ್ವೇಷಕ್ಕೂ ಒಂದು ಬಲವಾದ ಕಾರಣವಿತ್ತು.
ಅಂದು ಶಾಲೆಯಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು. ನಮಗೆ ನೀಡಲಾದ ಜ್ಯೂಸು ಉಪ್ಪುಪ್ಪಾಗಿತ್ತು. ಹುಡುಗರೆಲ್ಲರೂ ಬಾಯಿ ಚಪ್ಪರಿಸಿಕೊಂಡು ಜ್ಯೂಸು ಕುಡಿಯುತ್ತಿದ್ದರೆ ನಾವು ಹುಡುಗಿಯರು ಮಾತ್ರ ಮುಖ ಮುಖ ನೋಡುತ್ತಾ ಕುಳಿತೆವು. ಜ್ಯೂಸನ್ನು ಚೆಲ್ಲೋಣವೆಂದರೆ ಶಿಕ್ಷಕರು ಅಲ್ಲೇ ನಿಂತಿದ್ದರು. ಊಟದಲ್ಲಿ ಒಂದು ಅಗುಳು ಬಿಟ್ಟರೂ ಬೈಯುತ್ತಿದ್ದ ಅವರು ನಾವು ಜ್ಯೂಸು ಚೆಲ್ಲುವುದನ್ನು ನೋಡಿದರೆ ನಮ್ಮನ್ನು ಸುಮ್ಮನೆ ಬಿಡಲಿಕ್ಕಿಲ್ಲವೆಂದು ಉಪ್ಪುಪ್ಪು ಜ್ಯೂಸನ್ನೇ ಕಷ್ಟಪಟ್ಟು ಕುಡಿದಿದ್ದೆವು. ಜ್ಯೂಸಿನಲ್ಲಿ ಸಕ್ಕರೆಗೆ ಬದಲಾಗಿ ಉಪ್ಪು ಹಾಕಿದ್ದು ನಮ್ಮ ಕ್ಲಾಸಿನ ಹುಡುಗರೇ ಎಂದು ಆಮೇಲೆ ತಿಳಿಯಿತು. ಅಂದಿನಿಂದ ಶುರುವಾಯಿತು ನೋಡಿ ನಮ್ಮ ದ್ವೇಷ! ಅವತ್ತಿನಿಂದ ಅವರಿಗೆ ಗುರುಗಳಿಂದ ಹೊಡೆತ ಬೀಳಿಸುವುದೇ ನಮ್ಮ ಗುರಿಯಾಯಿತು.
ನಾವೈದು ಮಂದಿ ಗಣಿತದಲ್ಲಿ ತುಂಬಾನೇ ವೀಕು. ಇಂಗ್ಲೀಷ್ ಅಂದರೆ ಪ್ರಂಚಪ್ರಾಣ. ಒಂದು ದಿನ ಗಣಿತ ಶಿಕ್ಷಕರು ಮರುದಿನ ಎಲ್ಲರೂ ಥಿಯರಂ ಕಲಿತುಕೊಂಡು ಬರುವಂತೆ ಹೇಳಿದರು. ಏನು ಮಾಡಿದರೂ ಆ ಕೆಲಸ ನಮ್ಮಿಂದ ಆಗುವುದಿಲ್ಲವೆಂದು ಗೊತ್ತಿತ್ತು. ಇದಕ್ಕೆ ಏನಾದರೂ ಉಪಾಯ ಮಾಡಬೇಕೆಂದು ಗೆಳತಿಯರು ಒಟ್ಟಾಗಿ ಸಂಜೆ ಸಿಗುವುದೆಂದು ಮಾತಾಡಿಕೊಂಡೆವು.
ಸಂಜೆ ಸಿಕ್ಕಿ ಮರುದಿನ ಶಾಲೆಗೆ ಮಾಸ್ ಬಂಕ್ ಮಾಡುವುದೆಂದು ತೀರ್ಮಾನಿಸಿದೆವು. ಶಾಲೆಗೆ ಹೊರಡುವಂತೆ ಮನೆಯಿಂದ ಹೊರಟು ಎಲ್ಲರೂ ಫಿಲಂಗೆ ಹೋಗುವುದೆಂದು ಮಾತಾಡಿಕೊಂಡೆವು. ಮನೆಯಲ್ಲಿಯೇ ಇದ್ದರೆ ಮನೆಯವರಿಗೆ ಗೊತ್ತಾಗುತ್ತದೆ ಎಂದು ಈ ಉಪಾಯ. ಅದು ಹೇಗೋ ನಮ್ಮ ಈ ಉಪಾಯ ನಮ್ಮ ಕ್ಲಾಸ್‌ಮೇಟ್ ಹುಡುಗರಿಗೆ ತಿಳಿದುಹೋಯಿತು. ಇಷ್ಟು ದಿನ ನಮ್ಮ ಕಾಟದಿಂದ ಬೇಸತ್ತಿದ್ದ ಅವರಿಗೆ ಸೇಡು ತೀರಿಸಿಕೊಳ್ಳಲು ಒಳ್ಳೆಯ ಸಂದರ್ಭವನ್ನೇ ನಾವು ಮಾಡಿಕೊಟ್ಟಿದ್ದೆವು. ಕೊನೆಗೂ ಅವರು ಈ ವಿಷಯವನ್ನು ಗುರುಗಳ ಮುಂದೆ ಹೇಳಿಬಿಟ್ಟರು. ಅಂದಿನಿಂದ ಶುರುವಾಯಿತು ನಮ್ಮ ಗ್ರಹಚಾರ! ಇಷ್ಟು ದಿನ ನಮ್ಮನ್ನು ಇಷ್ಟಪಡುತ್ತಿದ್ದ ಗುರುಗಳು ಅಂದಿನಿಂದ ದಿನ ನಿತ್ಯ ಬೈಯಲು ಶುರು ಮಾಡಿದರು. ಪೆಟ್ಟು ಕೊಡಲೂ ಶುರುವಿಟ್ಟುಕೊಂಡರು.
ಈ ಘಟನೆಯಾದ ಮೇಲಂತೂ ನಮ್ಮ ಜಿದ್ದು ಇನ್ನೂ ಹೆಚ್ಚಿತು. ಅವರು ಚಾಡಿ ಹೇಳಿ ಗುರುಗಳಿಗೆ ನಮ್ಮನ್ನು ಹಿಡಿಸಿಕೊಟ್ಟಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲೇಬೇಕೆಂದು ನಿರ್ಧರಿಸಿದೆವು. ಒಂದು ಮಾಸ್ಟರ್ ಪ್ಲಾನ್ ಸಿದ್ಧವಾಯಿತು. ಮರುದಿನ ಕ್ಲಾಸಲ್ಲಿ ಯಾರೂ ಇಲ್ಲದ ಹೊತ್ತಿನಲ್ಲಿ ಗುರುಗಳು ಕೂರುವ ಕುರ್ಚಿ ಮೇಲೆ ಗುಂಡು ಪಿನ್ನು ಇಡಬೇಕು, ಆಮೇಲೆ ಗುರುಗಳು ನೋವಿನಿಂದ ಚೀರಿಕೊಂಡಾಗ ಈ ಕೆಲಸ ಮಾಡಿದ್ದು ಹುಡುಗರೇ ಎಂದು ತೋರುವಂತೆ ಮಾಡಬೇಕು. ಇದು ನಮ್ಮ ಉಪಾಯ. ಅದರಂತೆ ಗುಂಡು ಪಿನ್ನನ್ನು ಮೊದಲೇ ಇಟ್ಟು ತಡವಾಗಿ ಕ್ಲಾಸಿಗೆ ಹೋದೆವು. ಅದೇ ಸಮಯಕ್ಕೆ ಗುರುಗಳೂ ಕ್ಲಾಸಿಗೆ ಬಂದರು. ನಮ್ಮ ಎಣಿಕೆಯಂತೆಯೇ ಗುರುಗಳಿಗೆ ಗುಂಡುಪಿನ್ನು ಚುಚ್ಚಿತು. ಗುರುಗಳು ಕಿರುಚಿಕೊಂಡರು. ಅದನ್ನು ಕಂಡು ಹುಡುಗರು ಜೋರಾಗಿ ನಕ್ಕರು. ಅವರು ನಕ್ಕಿದ್ದರಿಂದ ಇಮ್ಮಷ್ಟು ಕೋಪಗೊಂಡ ಗುರುಗಳು ಬೆತ್ತ ಹಿಡಿದು ಅವರಿಗೆ ಬಾರಿಸಲು ಶುರುಮಾಡಿದರು. ಹುಡುಗರು ಇದು ನಮ್ಮ ಕೆಲಸವಲ್ಲ ಹುಡುಗಿಯರದೆಂದು ಬೊಬ್ಬೆ ಹಾಕಿದರು. ಗುರುಗಳು ನಮ್ಮತ್ತ ತಿರುಗಿದರು. ನಾವು ಗೆಳತಿಯರು ಸೈಲೆಂಟ್ ಆಗಿ ಅದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ನಿಂತಿದ್ದೆವು. ನಮ್ಮಲ್ಲೊಬ್ಬಳು “ಸಾರ್, ನಾವು ಮಾಡಿಲ್ಲ. ನಾವು ಬಂದಿದ್ದೇ ಈಗ, ನೀವೇ ನೋಡಿದ್ದೀರಿ.’ ಎಂದಳು. ನಮ್ಮ ಮಾತನ್ನು ನಂಬಿದ ಗುರುಗಳು “ಮಾಡೋದೆಲ್ಲಾ ಮಾಡಿ ಪಾಪ ಹುಡುಗಿಯರ ಮೇಲೆ ಹಾಕುತ್ತೀರಾ!’ ಅಂತ ಹುಡುಗರಿಗೆ ನಾಲ್ಕೇಟು ಹೆಚ್ಚಿಗೆ ಕೊಟ್ಟು ಮರುದಿನ 30 ಬಾರಿ ಥಿಯರಂ ಬರೆದುಕೊಂಡು ಬರಲು ಆಜ್ಞಾಪಿಸಿದರು. ಅದು ನಾವು ಸೇಡು ತೀರಿಸಿಕೊಂಡಿದ್ದರ ಸಂತೋಷಕ್ಕೆ ಕುಣಿದದ್ದೇ ಕುಣಿದದ್ದು. ಈಗಲೂ ನಾವು ಗೆಳತಿಯರು ಸೇರಿದಾಗೆಲ್ಲಾ ಈ ಘಟನೆ ನೆನಪು ಮಾಡಿಕೊಂಡು ಹೊಟ್ಟೆ ಹುಣ್ಣಾಗುವಷ್ಟು ನಗುತ್ತೇವೆ.
– ಮೇಘಾ ಎಸ್., ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.