ಬಾವಿಗೆ ಬೆಲೆ ಕಟ್ಟಬಹುದು,ಜೀವಕ್ಕೆ ಬೆಲೆ ಕಟ್ಟಲಾದೀತೆ?
Team Udayavani, Apr 27, 2017, 1:21 PM IST
ಬೋರ್‌ವೆಲ್ ಮುಚ್ಚಿಸಲು ತಗಲುವುದು ಕೆಲವೇ ನೂರು ರೂಪಾಯಿಗಳು ಮಾತ್ರ. ಯಾರಿಗೆ ಗೊತ್ತು? ಬಾಯ್ದೆರೆದು ನಿಂತ ಕೊಳವೆ ಬಾವಿಗೆ ಮುಂದೊಂದು ದಿನ ಆ ಜಮೀನಿನ ಮಾಲೀಕರ ಮಗನೇ ಬಿದ್ದುಹೋಗಬಹುದು. ನಾವು ಒಂದು ಬಾವಿ ತೆಗೆಸಲು ಆಗುವ ಖರ್ಚಿಗೆ ಬೆಲೆ ಕಟ್ಟಬಹುದೇ ವಿನಃ ಒಂದು ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.
ಆರು ವರ್ಷದ ಬಾಲೆ ಕಾವೇರಿ ಕಣ್ಮರೆಯಾಗಿದ್ದಾಳೆ. ಕಥೆಯಾಗಿದ್ದಾಳೆ. ಗೋಡೆಯ ಮೇಲಿನ ಚಿತ್ರವಾಗಿದ್ದಾಳೆ. ಊರ ಜನರು ಹಾಗೂ ಬಂಧುಗಳ ಪಾಲಿಗೆ ಮರೆಯಲಾಗದ ನೆನಪಾಗಿದ್ದಾಳೆ. ಮಗುವನ್ನು ಕಳೆದುಕೊಂಡವರು, ಉಸಿರಾಡುವುದನ್ನೂ ಮರೆತು “ಅನಿವಾರ್ಯವಾಗಿ’ ಬದುಕುತ್ತಿದ್ದಾರೆ…ಕೊಳವೆ ಬಾವಿಯಿಂದ ಆದ ದುರಂತ, ಬೆಳಗಾವಿ ಸೀಮೆಯನ್ನು, ಆ ಮೂಲಕ ಕರ್ನಾಟಕವನ್ನು ಬಿಟ್ಟೂ ಬಿಡದೆ ಕಾಡುತ್ತಿದೆ, ಹೆದರಿಸುತ್ತಿದೆ.
ಆರು ದಿನಗಳ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಳ್ಳೋಣ. ಅವತ್ತು, ಇದ್ದಕ್ಕಿದ್ದಂತೆಯೇ, ಪುಟ್ಟ ಬಾಲಕಿ ಕಾವೇರಿ ಕೊಳವೆ ಬಾವಿಗೆ ಬಿದ್ದುಹೋಗಿದ್ದಾಳೆ ಎಂದು ಸುದ್ದಿ ಕೇಳಿಬಂತು. ಸ್ವಲ್ಪ ಸಮಯದ ನಂತರ, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಝಂಝರವಾಡ ಎಂಬ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಪುಟ್ಟ ಬಾಲಕಿ ಕಾವೇರಿ ಜಮೀನಿನಲ್ಲಿ ಆಟವಾಡುತ್ತ ಕುಳಿತಿದ್ದಾಗ ತೀರಾ ಆಕಸ್ಮಿಕವಾಗಿ ಈ ದುರ್ಘಟನೆ ನಡೆದುಹೋಯಿತು ಎಂಬ ಸುದ್ದಿಯೂ ಆಗಲೇ ಪಕ್ಕಾ ಆಯಿತು.
ಆನಂತರದಲ್ಲಿ, ಮನಸ್ಸಿಗೆ ತಾಕುವಂಥ ಹಲವು ಘಟನೆಗಳು ನಡೆದುಹೋದವು. ಕಾವೇರಿ, 25 ಅಡಿಗಳಷ್ಟು ಆಳದಲ್ಲಿ ಸಿಕ್ಕಿಕೊಂಡಿದ್ದಾಳೆ. ರಕ್ಷಣೆಗಾಗಿ ಚೀರಿಕೊಳ್ಳುತ್ತಿದ್ದಾಳೆ ಎಂದು ಗೊತ್ತಾದ ತಕ್ಷಣ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಂಬುಲೆನ್ಸ್ ಜೊತೆಗೇ ಪುಟ್ಟ ಊರು ಝಂಝರವಾಡಕ್ಕೆ ಬಂದರು. ಅವರ ಹಿಂದೆಯೇ ತಹಶೀಲ್ದಾರರು, ಜಿಲ್ಲಾಧಿಕಾರಿ, ಎಸ್ಪಿ, ಅಥಣಿಯ ಶಾಸಕ, ಬೆಳಗಾವಿಯ ಉಸ್ತುವಾರಿ ಸಚಿವ, ಕ್ಷಣ ಕ್ಷಣದ ಮಾಹಿತಿಯನ್ನೂ ಜಗತ್ತಿಗೆ ತಿಳಿಸುವ ಟಿವಿ ಮಾಧ್ಯಮದವರು, ಸುರಂಗ ತೋಡುವವರು, ಕೊರಕಲಿನಲ್ಲಿ ಇಳಿದು ಜೀವ ರಕ್ಷಿಸುವ ಸಾಹಸಿಗರು…ಹೀಗೆ ಎಲ್ಲರೂ ಒಂದೆಡೆ ಸೇರಿದರು. ಎಲ್ಲರ ಆಶಯವೂ ಒಂದೇ ಆಗಿತ್ತು. ಆ ಪುಟ್ಟ ಮಗು ಬದುಕಿ ಬರಲಿ ಎಂದೇ ಎಲ್ಲರೂ ಪ್ರಾರ್ಥಿಸಿದರು. ಮಗಳೇ ಕಾವೇರಿ, ಬದುಕಿ ಬಾ, ಗೆದ್ದು ಬಾ ಕಾವೇರಿ ಎಂದೆಲ್ಲಾ ಹಂಬಲಿಸಿದರು. ಆ ಪುಟ್ಟ ಮಗುವಿನ ಒಳತಿಗಾಗಿ ಪ್ರಾರ್ಥಿಸಿದ್ದರು. ಹರಕೆ ಕಟ್ಟಿಕೊಂಡಿದ್ದರು. ವಿಶೇಷ ಪೂಜೆ ಮಾಡಿಸಿದ್ದರು. ಆದರೆ, ಕಡೆಗೂ ಪ್ರಾರ್ಥನೆ ಫಲಿಸಲಿಲ್ಲ.
ಕೊಳವೆ ಬಾವಿಗೆ ಮಕ್ಕಳು ಆಕಸ್ಮಿಕವಾಗಿ ಬಿದ್ದುಹೋಗುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ “ಮಾಮೂಲಿ’ ಎಂಬಂತೆ ವರದಿಯಾಗುತ್ತಲೇ ಇವೆ. ಈ ಪೈಕಿ ಹೆಚ್ಚಿನ ಪ್ರಕರಣಗಳಲ್ಲಿ ಮಕ್ಕಳು ಜೀವ ಕಳೆದುಕೊಂಡಿವೆ. ಇಂಥದೊಂದು ದುರ್ಘಟನೆ ನಡೆದ ಸಂದರ್ಭದಲ್ಲೆಲ್ಲ, ಕೊಳವೆ ಬಾವಿಯ ಮಾಲೀಕನ ಮೇಲೆ ಪ್ರಕರಣ ದಾಖಲಿಸುವುದು, ಮಗುವನ್ನು ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ಘೋಷಿಸಿ, ಸಂತಾಪ ಸೂಚಿಸುವುದು ತೀರಾ ಸಹಜ ಮತ್ತು ಅನಿವಾರ್ಯ ಅನ್ನುವಂತೆ ನಡೆದುಹೋಗುತ್ತದೆ.
ಈಗ ಯೋಚಿಸೋಣ. ಪರಿಚಯವೇ ಇಲ್ಲದವರ ನೋವಿಗೆ ಮನುಷ್ಯ ಕಂಬನಿ ಮಿಡಿಯಲಾರ. ಮತ್ತೂಬ್ಬರ ನೋವು ಕಂಡು ನಾವು, ಅಯ್ಯೋ ಅನ್ನಬೇಕಾದರೆ, ಆ “ಮತ್ತೂಬ್ಬ’ ನಮ್ಮ ಬಂಧುವೋ, ಗೆಳೆಯನೋ ಮತ್ತೂಂದೋ ಆಗಿರಬೇಕು. ಆದರೆ ಕೊಳವೆ ಬಾವಿಗೆ ಯಾರಧ್ದೋ ಮಗು ಬಿದ್ದು ಹೋಗಿರುತ್ತದಲ್ಲ; ಆಗ, ನಮಗೇ ಗೊತ್ತಿಲ್ಲದಂತೆ ಒಂದು ಭಾವನಾತ್ಮಕ “ತಂತು’ ನಮ್ಮ ಹೃದಯಕ್ಕೆ ಕನೆಕ್ಟ್ ಆಗಿಬಿಟ್ಟಿರುತ್ತದೆ. ಈ ಕಾರಣದಿಂದಲೇ, ಗುರುತು ಪರಿಚಯವಿಲ್ಲದಿದ್ದರೂ ನಮ್ಮ ಮನಸ್ಸು ಆ ಮಗುವಿನ ಜೀವ ಉಳಿಯಲಿ ಎಂದು ಪ್ರಾರ್ಥಿಸಲು ಮುಂದಾಗಿಬಿಡುತ್ತದೆ.
ಇದು, ಮನೆಯೊಳಗೆ, ಟಿವಿಯ ಎದುರು, ಕಚೇರಿಯಲ್ಲಿ ಕುಳಿತು ಯೋಚಿಸುವವರ ವಿಚಾರವಾಯಿತು. ಇನ್ನು, ಆ ಮಗುವನ್ನು ಉಳಿಸಲೆಂದೇ ಘಟನೆ ನಡೆದ ಸ್ಥಳಕ್ಕೆ ಹೋಗಿರುತ್ತಾರಲ್ಲ; ಅವರ ಮನಸ್ಸಿನ ತಾಕಲಾಟವನ್ನು ಹೇಳುವುದು ಕಷ್ಟ. ಅವರು ಕರ್ತವ್ಯ ಪಾಲನೆಗೆಂದೇ ಬಂದಿರುತ್ತಾರೆ ನಿಜ; ಅದೆಷ್ಟೋ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿರುತ್ತಾರೆ. ಆಗೆಲ್ಲ ಸಾವು-ನೋವನ್ನು ಕಂಡಿರುತ್ತಾರೆ ಎಂಬುದೂ ನಿಜ. ಇಷ್ಟಾದರೂ, ಮಗುವೊಂದು ಕೊಳವೆ ಬಾವಿಗೆ ಬಿದ್ದು ಹೋಗಿದೆ ಎಂಬ ಸುದ್ದಿ ಕೇಳಿದಾಗ, ತಕ್ಷಣವೇ ತಮ್ಮ ಪರಿಚಯದ ಮತ್ಯಾವುದೋ ಕಂದನ ಚಿತ್ರ ಕಣ್ಮುಂದೆ ಬಂದುಬಿಡುತ್ತದೆ. ಆನಂತರದ ಕ್ಷಣಗಳಲ್ಲಿ ಅವರೂ ಆ ಮಗುವಿನ ಬಂಧುಗಳೇ ಆಗಿಬಿಡುತ್ತಾರೆ. ಪಾಪ; ಮಗುವಿಗೆ ಉಸಿರಾಟಕ್ಕೆ ಅದೆಷ್ಟು ತೊಂದರೆ ಆಗುತ್ತಿದೆಯೋ ಎಂದು ಅಂದಾಜು ಮಾಡಿಕೊಂಡು ಕಣ್ಣೀರಾಗುತ್ತಾರೆ. ಗಾಬರಿಯಾಗಿರುವ ಆ ಮಗುವಿನ ಮೇಲೆ ಕಣ್ಣು, ಮಣ್ಣು ಬೀಳದಿರಲಿ ಎಂದು ಬಹಳ ಜಾಗ್ರತೆ ವಹಿಸುತ್ತಾರೆ.
ಹೇಗಾದರೂ ಮಾಡಿ ಮಗುವನ್ನು ಉಳಿಸಿಕೊಳ್ಳಬೇಕು ಎಂಬ ಸದಾಶಯದಿಂದ, ಕೊಳವೆ ಬಾವಿಯಿಂದ 10-12 ಅಡಿ ಅಂತರದಲ್ಲಿ ಸುರಂಗ ತೋಡುತ್ತಾರಲ್ಲ; ಆಗ ಕೂಡ, ಕೊಳವೆ ಬಾವಿಯಿರುವ ಸ್ಥಳದಲ್ಲಿ ಮಣ್ಣು ಕುಸಿಯದಂತೆ ಎಚ್ಚರ ವಹಿಸಲಾಗುತ್ತದೆ. ಅದೆಷ್ಟೋ ಅಡಿ ಆಳದಲ್ಲಿ ಸಿಕ್ಕಿಬಿದ್ದಿರುವ ಮಗುವಿನ ಉಸಿರಾಟಕ್ಕೆ ತೊಂದರೆಯಾಗದಿರಲಿ ಎಂಬ ಆಶಯದಿಂದ, ನಿರಂತರವಾಗಿ ಆಮ್ಲಜನಕ ಪೂರೈಕೆಯಾಗುತ್ತಿರುತ್ತದೆ. ಒಂದು ಜೀವ ಉಳಿಸಬೇಕು ಎಂದ ಸದಾಶಯದಿಂದಲೇ ಇಷ್ಟೆಲ್ಲ ನಡೆಯುತ್ತದೆ. ಆದರೆ, ಹೆಚ್ಚಿನ ಸಂದರ್ಭದಲ್ಲಿ ನಮಗೆಲ್ಲ ಕೇಳಿಸುವುದು ಕೆಟ್ಟ ಸುದ್ದಿಯೇ.
ನೀರು ಬರಲಿಲ್ಲ ಎಂದು ತಿಳಿದಮೇಲೂ, ತೆರೆದ ಕೊಳವೆ ಬಾವಿಯಿಂದ ಯಾರಿಗಾದರೂ ತೊಂದರೆ ಆಗಬಹುದು ಎಂದು ತಿಳಿದ ಮೇಲೂ ಜಮೀನುಗಳ ಮಾಲೀಕರು, ಅವುಗಳನ್ನು ಮುಚ್ಚಿಸದೇ ಇರುವುದೇಕೆ ಎಂಬುದು ಉತ್ತರವೇ ಸಿಗದ ಪ್ರಶ್ನೆ. ಎಲ್ಲರಿಗೂ ಗೊತ್ತಿರುವಂತೆ, ಜಮೀನಿನಲ್ಲಿ ಕೊಳವೆ ಬಾವಿ ತೋಡಿಸಲು ಪ್ರತಿಯೊಬ್ಬರೂ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಒಂದು ವೇಳೆ ನೀರು ಬಂದುಬಿಟ್ಟರೆ ಕೊಳವೆ ಬಾವಿ ಇರುವ ಜಾಗದಲ್ಲೇ ಒಂದು ಪಂಪ್‌ಸೆಟ್ ಹೌಸ್ ಕೂಡ ಎದ್ದು ನಿಲ್ಲುತ್ತದೆ. ಕೂಡಿಟ್ಟ ಅಥವಾ ಸಾಲ ತಂದಿದ್ದ ಹಣವೆಲ್ಲ ಕೊಳವೆ ಬಾವಿ ತೆಗೆಸುವುದಕ್ಕೆ ಖರ್ಚಾಗಿ ಹೋಗಿದ್ದರೂ, ಮತ್ತಷ್ಟು ಸಾಲ ಮಾಡಿಯಾದರೂ ಪಂಪ್‌ಸೆಟ್ ಹೌಸ್ ಕಟ್ಟಿಸುವ ಜನ ನಮ್ಮ ನಡುವೆಯೇ ಇದ್ದಾರೆ.
ಅಕಸ್ಮಾತ್, ಕೊಳವೆ ಬಾವಿಯಲ್ಲಿ ನೀರು ಬರಲಿಲ್ಲ ಅಂದುಕೊಳ್ಳಿ; ಆಗ ಜಮೀನಿನ ಮಾಲೀಕರು ಅದಕ್ಕೆ ಒಂದು ಮುಚ್ಚಳ ಹಾಕಿಸುವ ಗೋಜಿಗೂ ಹೋಗುವುದಿಲ್ಲ. ಬಾವಿ ತೆಗೆಸಲಿಕ್ಕೆ ಸಾವಿರಾರು ರೂಪಾಯಿ ಖರ್ಚಾಗಿದೆ. ಮತ್ತಷ್ಟು ದುಡ್ಡನ್ನು ಯಾಕಾದರೂ ಖರ್ಚು ಮಾಡಲಿ? ಎಂಬ ಉಡಾಫೆ ಮತ್ತು ದಿವ್ಯ ನಿರ್ಲಕ್ಷ್ಯದಿಂದಲೇ ಹೆಚ್ಚಿನವರು “ನೀರು ಕೊಡದ’ ಕೊಳವೆ ಬಾವಿಗಳನ್ನು ಹಾಗೆಯೇ ಬಿಟ್ಟು ಹೋಗಿಬಿಡುತ್ತಾರೆ. ಇನ್ನು ಕೆಲವರಂತೂ ನಮ್ಮ ಜಮೀನಿನಲ್ಲಿ ಇರುವ ಕೊಳವೆ ಬಾವೀನ ಮುಚ್ಚಿಸುವುದು, ಬಿಡೋದು ನಮ್ಮಿಷ್ಟ. ಅದನ್ನು ಯಾರೇನು ಕೇಳ್ಳೋದು? ಎಂಬ ದರ್ಪದ ಮಾತಾಡುತ್ತಾರೆ.
ಉಹುಂ, ಕೊಳವೆಬಾವಿ ತೋಡಿಸುವ ಯಾರಿಗೂ ಇಂಥದೊಂದು ಮನೋಭಾವ ಬರಬಾರದು. ಬೋರ್‌ವೆಲ್ ಮುಚ್ಚಿಸಲು ತಗಲುವುದು ಕೆಲವೇ ನೂರು ರೂಪಾಯಿಗಳು ಮಾತ್ರ. ಯಾರಿಗೆ ಗೊತ್ತು? ಬಾಯ್ದೆರೆದು ನಿಂತ ಕೊಳವೆ ಬಾವಿಗೆ ಮುಂದೊಂದು ದಿನ ಆ ಜಮೀನಿನ ಮಾಲೀಕರ ಮಗನೇ ಬಿದ್ದುಹೋಗಬಹುದು. ನಾವು ಒಂದು ಬಾವಿ ತೆಗೆಸಲು ಆಗುವ ಖರ್ಚಿಗೆ ಬೆಲೆ ಕಟ್ಟಬಹುದೇ ವಿನಃ ಒಂದು ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.
ಹಾಗೆಯೇ, ತೀರಾ ಆಕಸ್ಮಿಕವಾಗಿ ಇಂಥ ಘಟನೆಗಳು ನಡೆದಾಗ, ಸುರಂಗ ತೋಡುವುದರಲ್ಲಿ, ಕೊಳವೆ ಬಾವಿಯ ಪಾತಾಳದ ಆಳಕ್ಕೆ ಇಳಿಯುವ ಸಾಹಸಿಗರು ನಮ್ಮ ನಾಡಿನಲ್ಲಿ ಇಲ್ಲ. ಅವರು ದೂರದ ಪುಣೆಯಿಂದಲೋ, ಹೈದರಾಬಾದಿನಿಂದಲೋ ಬರಬೇಕು. ಅವರು ಬರುವವರೆಗೂ ಕೊಳವೆ ಬಾವಿಯಲ್ಲಿ ಸಿಕ್ಕಿಬಿದ್ದಿರುವವರು ಜೀವಂತ ಉಳಿದಿರುತ್ತಾರೆ ಎಂಬ ಗ್ಯಾರಂಟಿ ಎಲ್ಲಿದೆ?
ಕೊಳವೆ ಬಾವಿ ದುರಂತದ ಘಟನೆ, ನಮ್ಮ ಮಿತಿಗಳನ್ನು ಮತ್ತೆ ಮತ್ತೆ ಎತ್ತಿ ತೋರಿಸುತ್ತದೆ. ಈಗಲಾದರೂ “ಬರಡು’ ಕೊಳವೆ ಬಾವಿಗಳನ್ನು ಮುಚ್ಚಿಸಲು ಜಮೀನಿನ ಮಾಲೀಕರು ಮುಂದಾಗಲಿ. ಮೃತ್ಯು ಕೂಪದಂತೆ ಬಾಯ್ದೆರೆದು ನಿಂತಿರುವ ಕೊಳವೆ ಬಾವಿಗಳನ್ನು ಮುಚ್ಚುವ ಕೆಲಸ ಒಂದು ಆಂದೋಲನದಂತೆ ನಡೆದುಹೋಗಲಿ. ಕಣ್ಮರೆಯಾದ ಕಂದಮ್ಮ “ಕಾವೇರಿ’ಯ ಆತ್ಮಕ್ಕೆ ಶಾಂತಿ ಸಿಗಲಿ.
ಗೀತಾಂಜಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.