ದಾರ್ಶನಿಕರ ದೃಷ್ಟಿಯಲ್ಲಿ ಬಸವಣ್ಣ
Team Udayavani, Apr 28, 2017, 7:23 PM IST
ದಾರ್ಶನಿಕರೆಂದರೆ ಆತ್ಮದರ್ಶನ ಮಾಡಿದವರು: ಪರಮಾತ್ಮನ ಅನುಭೂತಿ ಹೊಂದಿದವರು. ಅವರು ನಡೆದುದೆ ಧರ್ಮ, ನುಡಿದುದೆ ಮಂತ್ರ. ಅವರು ಯಾರಿಗೂ ಅಂಜುವವರಲ್ಲ. ದಾಕ್ಷಿಣ್ಯಕ್ಕೆ ಒಳಗಾಗಿ ಸತ್ಯವನ್ನು ಬಚ್ಚಿಡುವವರಲ್ಲ. ಹೊಟ್ಟೆ ಪಾಡಿಗಾಗಿ, ಅಧಿಕಾರ – ಕೀರ್ತಿ ಪ್ರಾಪ್ತಿಗಾಗಿ ಇನ್ನೊಬ್ಬರನ್ನು ಹೊಗಳು ವವರಲ್ಲ. ತಾವು ಸಾಕ್ಷಾತ್ಕರಿಸಿಕೊಂಡ ತತ್ವ ಸಾಧನೆಗಾಗಿ ಪ್ರಾಣವನ್ನೇ ಪಣವಾಗಿಡಬಲ್ಲರು. ಕುಲಗೋತ್ರಗಳ ಸೀಮೆ ಸಂಬಂಧವನ್ನು ದಾಟಿ ವಿಶ್ವ ಕುಟುಂಬಿಗಳಾದವರು ದಾರ್ಶನಿಕರು. ಭಾರತ ಮಾತೆ ಅನಾದಿಕಾಲದಿಂದಲೂ ಇಂತಹ ಲಕ್ಷಾಂತರ ಜನರಿಗೆ ಜನ್ಮವಿತ್ತ ಮಹಾಮಾತೆ. ಇಂತಹ ದೇವ ಭೂಮಿಯಲ್ಲಿ 12ನೇ ಶತಮಾನದಲ್ಲಿ ಸಹಸ್ರಾರು ದಿವ್ಯಾತ್ಮಗಳು ಒಟ್ಟಿಗೆ ಅವತರಿಸಿದವು. ಅವರಲ್ಲಿ 770 ಜನ ಅಮರಗಣಂಗಳೆನಿಸಿ, ಮತ್ತೆ ಭೂಮಿಗೆ ಬಾರದಂತೆ ಪರಮಾತ್ಮ ಸಾಗರದಲ್ಲಿ ಮಿಲನವಾದರು. ಅವರಿಗೆಲ್ಲಾ ನಾಯಕರು ಬಸವಣ್ಣನವರು. ಬಸವಣ್ಣನ ಕುರಿತಾಗಿ 12ನೇ ಶತಮಾನದಿಂದ 21ನೇ ಶತಮಾನದವರೆಗೆ ರಚನೆಯಾದ ಸಾಹಿತ್ಯ ಅಪಾರವಾದದ್ದು. ಕನ್ನಡ ಭಾಷೆಯಲ್ಲಿ ಬಸವಣ್ಣನ ಕುರಿತು ರಚನೆಯಾದಷ್ಟು ಸಾಹಿತ್ಯ ಇನ್ನಾರ ಬಗೆಗೂ ರಚನೆಯಾಗಿಲ್ಲ.
ಬಸವಣ್ಣನವರನ್ನು ಕಂಡು ಅವರ ಒಡನಾಡಿಯಾಗಿ ಅವರ ದೈವಿ ಶಕ್ತಿಯನ್ನು ಕಂಡ ಅವರ ಸಮಕಾಲೀನರು ಮಾತನಾಡಿರುವುದು ಸತ್ಯವಾಗಿರುತ್ತದೆ. ಅವರ ದೃಷ್ಟಿಕೋನದಂತೆ ಬಸವಣ್ಣನವರನ್ನು ಅರ್ಥ ಮಾಡಿಕೊಂಡರೆ ಸತ್ಯಕ್ಕೆ ಸಮೀಪವಾಗುತ್ತೇವೆ. ಇಲ್ಲವಾದರೆ ಮಿಥ್ಯ ಕಲ್ಪನೆಯಲ್ಲಿ ದಾರಿ ಕಳೆದುಕೊಂಡು ಪರಿತಪಿಸಬೇಕಾಗುತ್ತದೆ. ಆಯ್ದಕ್ಕಿ ಮಾರಯ್ಯ ಬಸವಣ್ಣನವರೊಂದಿಗೆ ಇದ್ದವರು. ಬಿದ್ದ ಕಾಳುಗಳನ್ನು ವ್ಯರ್ಥವಾಗಲು ಬಿಡದೆ ಅಂತಹ ದವಸ ಧಾನ್ಯಗಳನ್ನು ಆಯ್ದು ದಾಸೋಹ ಮಾಡಿ ಆಶಾರಹಿತವಾಗಿ ಬದುಕಿದವರು. ಅವರು ಬಸವಣ್ಣನವರನ್ನು ಕುರಿತು ಮನೋಜ್ಞವಾಗಿ ಹೇಳಿದ್ದಾರೆ.
‘ಹಮ್ಮು ಬಿಮ್ಮಳಿದ ಅನವರತ ಶಿವ ನೀನು/ ಎನ್ನ ಕರಸ್ಥಲದ ಕಳೆ ನೀನು/ ಎನ್ನ ಮನೋ ಮಧ್ಯದ ಸ್ವಯಂ ಜ್ಯೋತಿ ನೀನು/ ಅಮರೇಶ್ವರ ಲಿಂಗದ ಅನುವಿನ ಕಳೆ ನೀನು ಸಂಗನ ಬಸವಣ್ಣ’ ಯಾವುದೇ ಹಂಗಿಗೂ ಒಳಗಾಗದ ಮಾರಯ್ಯನವರ ಪ್ರಕಾರ ಬಸವಣ್ಣ ಸಾಕಾರನಾದ ಶಿವ. ಏಕೆಂದರೆ ಬಸವಣ್ಣನವರಿಗೆ ಹಮ್ಮು ಇಲ್ಲ. ಬಿಮ್ಮು ಇಲ್ಲ. ಬಸವಣ್ಣನವರು ಈ ಎರಡನ್ನು ಗೆದ್ದವರು. ಆದ್ದರಿಂದ ಅವರು ಶಿವಸ್ವರೂಪರು. ಬಿಜ್ಜಳನ ಪ್ರಧಾನಮಂತ್ರಿಯಾಗಿದ್ದರೂ ಅವರು ಬೇಡಿಕೊಂಡಿದ್ದು ಅರಸನ ಮನೆಯಲ್ಲಿ ಅರಸಿಯಾಗಿರುವುದಕ್ಕಿಂತ ಭಕ್ತರ ಮನೆಯಲ್ಲಿ ತೊತ್ತಾಗಿ ಇರ್ಪದು ಕರೆ ಲೇಸಯ್ಯ ಎಂಬುದನ್ನು ಮಾರಯ್ಯನವರು ತಮ್ಮ 2ನೇ ಸಾಲಿನಲ್ಲಿ ‘ಎನ್ನ ಕರಸ್ಥಲದ ಕಳೆ ನೀನು’ ಎಂದು ಹೇಳಿದ್ದಾರೆ.
ಕರಸ್ಥಲದ ಕಳೆ ಎಂದರೆ ಇಷ್ಟಲಿಂಗ. ಇಷ್ಟಲಿಂಗವನ್ನು ಬಹಳ ಜನ ಒಂದು ಜಾತಿಯ ಕುರುಹು ಎಂದು ಭಾವಿಸಿದ್ದಾರೆ. ಮತ್ತೆ ಕೆಲವರು ಗುಡಿಯ ಲಿಂಗವನ್ನು ಸಣ್ಣದಾಗಿ ಮಾಡಿದರೆ ಅದು ಇಷ್ಟಲಿಂಗವೆಂದು ಭಾವಿಸಿದ್ದಾರೆ. ಇದು ಖಂಡಿತ ತಪ್ಪು ಕಲ್ಪನೆ. ಇಷ್ಟ ಲಿಂಗವೆಂಬುದು ಜಗತ್ತಿಗೆ ನೀಡಿದ ವಿಶಿಷ್ಟವಾದ ಕೊಡುಗೆ. ಅದು ದೃಷ್ಟಿ ಯೋಗದ ಸಾಧನ, ಸಮಾನತೆಯ ದ್ಯೋತಕ. ವಿಶ್ವಾತ್ಮನ ಕುರುಹು. ಇಂತಹ ಇಷ್ಟಲಿಂಗವನ್ನು ಸಂಶೋಧಿಸಿದವರು ಮಹಾಗುರು ಬಸವಣ್ಣನವರು. ಇಂತಹ ಲಿಂಗವನ್ನು ಅರ್ಥ ಮಾಡಿಕೊಳ್ಳದೆ ಜಾತಿಯ ಕುರುಹು ಎಂದು ಭಾವಿಸುವುದು ಬಸವಣ್ಣನವರಿಗೆ ಮಾಡಿದ ಅಪಚಾರ. ಬಸವಣ್ಣನವರೇ ಇಷ್ಟಲಿಂಗದ ಧಾತ್ರು ಎಂಬುದನ್ನು ಮಹಾಯೋಗಿ ಶೂನ್ಯ ಪೀಠದ ಪ್ರಥಮಾಧ್ಯಕ್ಷ ಅಲ್ಲಮ ಪ್ರಭುಗಳು ಹೀಗೆ ಹೇಳುತ್ತಾರೆ.
ಅಂಗದ ಕೈಯಲ್ಲಿ ಲಿಂಗ ಮನದ ಕೈಯಲ್ಲಿ ನಿಸ್ಸಂಸಾರ ಎಂತಯ್ಯ?/ ಪ್ರಾಣಲಿಂಗ ಲಿಂಗ ಪ್ರಾಣವೆಂದು ಭಿನ್ನವಿಟ್ಟು ನುಡಿವರು ಹೊರಗೆ ಕುರುಹಾಗಿ ತೋರುತ್ತಿದೆ/
ಇದು ಕೃತಯುಗದಲ್ಲಿ ಮೂರ್ತಿಯಾದ ಕರಸ್ಥಲವಲ್ಲ
ಇದು ತೇತ್ರಾ ಯುಗದಲ್ಲಿ ಮೂರ್ತಿಯಾದ ಕರಸ್ಥಲವಲ್ಲ
ಇದು ದ್ವಾಪರ ಯುಗದಲ್ಲಿ ಮೂರ್ತಿಯಾದ ಕರಸ್ಥಲವಲ್ಲ
ಇದು ಕಲಿಯುಗದಲ್ಲಿ ಮೂರ್ತಿಯಾದ ಕರಸ್ಥಲವಲ್ಲ
ಸಂಗನ ಬಸವಣ್ಣನ ಕರಸ್ಥಲದೊಳಗೆ
ಗುಹೇಶ್ವರನೆಂಬ ಲಿಂಗವು ತೊಳಗಿ ಬೆಳಗುತ್ತಿದ್ದುದ ಕಂಡು
ನಮೋ ನಮೋ ಎನ್ನುತ್ತಿದ್ದೆನು !
ಜಿಜ್ಞಾಸುಗಳು, ಚಿಂತಕರು, ವಿಮರ್ಶಕರು, ವಿದ್ವಾಂಸರು ಮನದೆರದು ಪೂರ್ವಾಗ್ರಹವಳಿದು ಈ ವಚನವನ್ನು ಅರ್ಥ ಮಾಡಿಕೊಳ್ಳಬೇಕು. ಸ್ತ್ರೀಯನ್ನು ಭೋಗದ ವಸ್ತುವೆಂದು ಭಾವಿಸಿ ಲೈಂಗಿಕ ಕಿರುಕುಳ ನೀಡುತ್ತಿರುವ, ಆಕೆಯ ಬಾಳನ್ನು ಗೋಳು ಮಾಡಿ ಜೈಲು ಸೇರುತ್ತಿರುವ, ತ್ಯಾಗದ ವೇಷಧರಿಸಿ ವಿಕೃತ ಕಾಮಿಗಳಾಗಿರುವವರು ಬಸವಣ್ಣನವರ ಜೀವನದಿಂದ ಪಾಠ ಕಲಿಯಬೇಕು. ಮಹಾನ್ ವೈರಾಗ್ಯಶಾಲಿಯಾದ ಅಲ್ಲಮಪ್ರಭುಗಳು ಬಸವಣ್ಣನವರ ವೈಯಕ್ತಿಕ ಜೀವನವನ್ನು ಕುರಿತು ಹೀಗೆ ಹೇಳಿದ್ದಾರೆ.
ಸತಿಯ ಕಂಡು ವ್ರತಿಯಾದ ಬಸವಣ್ಣ/ ವ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ/ ಬ್ರಹ್ಮಚಾರಿಯಾಗಿ ಭವಗೆಟ್ಟ ಬಸವಣ್ಣ/ ಗುಹೇಶ್ವರ ಲಿಂಗದಲ್ಲಿ ಅಖಂಡ ಬ್ರಹ್ಮಚಾರಿಯಾದಾತ ಬಸವಣ್ಣನೊಬ್ಬನೇ!
ಅನುಭವ ಮಂಟಪದಲ್ಲಿ ಹಲ ಕೆಲವು ಜನ ಬ್ರಹ್ಮಚಾರಿಗಳಿದ್ದರು. ಸಿದ್ದರಾಮೇಶ್ವರರು, ಚನ್ನಬಸವಣ್ಣನವರು, ಮಹಾದೇವಿ ಅಕ್ಕನವರು, ಬೋಂತಾ ದೇವಿಯೆಂಬುವವರುಮತ್ತು ಸ್ವತಃ ಅಲ್ಲಮಪ್ರಭುಗಳೇ ಆಜನ್ಮ ಬ್ರಹ್ಮಚಾರಿಗಳಾಗಿದ್ದರು. ಆದರೂ ಬಸವಣ್ಣನವರನ್ನೇ ಆಜನ್ಮ ಬ್ರಹ್ಮಚಾರಿ ಎನ್ನಲು ಕಾರಣ? ಸಂಸಾರದಿಂದ ದೂರವಿದ್ದು, ಮದುವೆಯನ್ನು ಮಾಡಿಕೊಳ್ಳದೆ ಬ್ರಹ್ಮಚಾರಿಯಾಗಿರುವುದು ಅಷ್ಟೇನು ಕಷ್ಟವಲ್ಲ. ಆದರೆ ಆ ಎಲ್ಲದರ ಮಧ್ಯದಲ್ಲಿದ್ದು ಬ್ರಹ್ಮಚಾರಿಯಾಗಿರುವುದು ಅತ್ಯಂತ ಕಠಿಣ ಸಂಗತಿ. ಬಸವಣ್ಣನವರ ಬ್ರಹ್ಮಚಾರವನ್ನು ಕುರಿತು ಪ್ರಭುಗಳಿಗಿಂತಲೂ ಅಧಿಕೃತವಾಗಿ ಮಾತನಾಡುವ ಅರ್ಹತೆ ಇರುವುದು ಬಸವಣ್ಣನವರ ಮಡದಿ ನೀಲಾಂಬಿಕೆ ಅವರಿಗೆ. ಅವರು ತಮ್ಮ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ.
‘ಮಡದಿ ಎನ್ನಲಾಗದು ಬಸವಂಗೆ ಎನ್ನನು/ ಪುರುಷನೆನ್ನಲಾಗದು ಬಸವನ ಎನಗೆ/ ಉಭಯಕುಳವ ಹರಿದು ಬಸವಂಗೆ ಶಿಶುವಾದೆನು/ ಬಸವನೆನ್ನ ಶಿಶುವಾದ ಸಂಗನಯ್ಯನಿಕ್ಕಿದ ದಿಬ್ಬದ ಮೀರಿ ಬಸವನೊಳಗಾನಡಗಿದೆ.’
ನೀಲಾಂಬಿಕೆ ಹೇಳುತ್ತಾರೆ. ಪರಮಾತ್ಮನು ಗಂಡ ಹೆಂಡತಿಯಾಗಿರಲು ನಮ್ಮಿಬ್ಬರಿಗೆ ವಿಧಿಸಿದ್ದನು. ಅದನ್ನು ಮೀರಿ ನಾವಿಬ್ಬರೂ ಪರಸ್ಪರರಿಗೆ ಶಿಶುಗಳಾದೆವು. ಬಸವಣ್ಣನವರು ತಮ್ಮ ಒಂದು ವಚನದಲ್ಲಿ ನೀಲಾಂಬಿಕೆಯವರನ್ನು ಕುರಿತು ‘ಪೃಥ್ವಿಗಗ್ಗಳ ಚಲುವೆ ನೀಲಲೋಚನೆ’ ಎಂದು ಹೇಳಿದ್ದಾರೆ. ಇಂತಹ ಸುಂದರವಾದ ಪತ್ನಿ ಸಕಲ ಸಂಪದ್ಭರಿತನಾದ ಪತಿ ಅಂತಹವರು ವಿಕಾರ ಮುಕ್ತರಾಗಿ ಸಮಾಜವನ್ನು ಜಂಗಮವೆಂದು ಭಾವಿಸಿ ಕಿಂಕರರಾಗಿ ಸೇವೆ ಮಾಡುತ್ತಿದ್ದರು. ಇಂತಹವರೂ ಈ ಭೂಮಿಯ ಮೇಲೆ ಇರಬಹುದು ಎಂದು ನಂಬುದಕ್ಕೆ ಕಷ್ಟವಾಗುತ್ತದೆ. ಇಂತಹ ಶ್ರೇಷ್ಠ ನಿಲುವನ್ನು ಬಸವಣ್ಣನವರು ಹೇಗೆ ಗಳಿಸಿಕೊಂಡರು? ಇದು ಒಂದೆರೆಡು ದಿನದಲ್ಲಿ ಸಾಧಿಸಿದಲ್ಲ, ಯಾವನೋ ಗುರು ತಲೆಯ ಮೇಲೆ ಹಸ್ತವಿಟ್ಟು ಗಳಿಸಿಕೊಟ್ಟ ಸಿದ್ಧಿಯೂ ಅಲ್ಲ. ನಿರಂತರ ಜಾಗೃತಿ, ನಿಷ್ಕಳಂಕ ಚಾರಿತ್ರ್ಯದಿಂದ ಗಳಿಸಿಕೊಂಡ ಪ್ರಾಪ್ತಿ.
ಮಹಾದೇವಿ ಅಕ್ಕ ತಮ್ಮ ಒಂದು ವಚನದಲ್ಲಿ ಬಸವಣ್ಣನವರಿಗಿದ್ದ 52 ಸದ್ಗುಣಗಳನ್ನು ಚಿತ್ರಿಸಿದ್ದಾರೆ. ಆ ವಚನವನ್ನು ಇಲ್ಲಿ ಉದಾಹರಿಸಲು ಸಾಧ್ಯವಿಲ್ಲ. ಬಸವಣ್ಣನವರ ವ್ಯಕ್ತಿತ್ವವನ್ನು ಕುರಿತು ಚಿನ್ಮಯಜ್ಞಾನಿ ಚನ್ನಬಸವಣ್ಣವರು ಸಂಕ್ಷಿಪ್ತವಾಗಿ ಹೀಗೆ ಹೇಳಿದ್ದಾರೆ
‘ಶರಣ ಸಮತೆಯ ನಿಧಿ ಬಸವನಯ್ಯ/ ಭಕ್ತಿಯ ಬೆಳೆ ಸಿರಿ ಬಸವನಯ್ಯ/ ಮುಕ್ತಿಯ ತವನಿಧಿ ಬಸವನಯ್ಯ/ ಸತ್ಯದ ನಿಧಿ ಬಸವನಯ್ಯ/ ಹರಪದ ಕಮಲಭೃಂಗ ಬಸವನಯ್ಯ/ ಕೂಡಲಚನ್ನಸಂಗಯ್ಯನಲ್ಲಿ ಅನಿಮಿಷ ಬಸವನಯ್ಯ.’
ಯಾವುದೇ ಮಹತ್ತರವಾದ ಸಾಧನೆಯನ್ನು ಸಾಧಿಸಬೇಕಾದರೂ ಮೊದಲು ಬೇಕಾದ ಗುಣವೆಂದರೆ ಸಮತೆ, ಸಮಾಧಾನ. ಒಳ್ಳೆಯ ಕಾರ್ಯಗಳು ಒಮ್ಮೇಲೆ ಘಟಿಸುವುದಿಲ್ಲ. ಒಂದೇ ರಾತ್ರಿಯಲ್ಲಿ ಶ್ರೀಮಂತನಾಗಿ ಬಿಡಬಹುದು. ಕಳ್ಳಧನದ ಮೂಲಕ. ಒಂದೇ ಕ್ಷಣದಲ್ಲಿ ದುರಾಚಾರಿ ಎಂದೆನಸಬಹುದು ಕುಕೃತ್ಯಗಳ ಮೂಲಕ, ಒಂದೇ ದಿನದಲ್ಲಿ ವಿಶ್ವದಾದ್ಯಂತ ಪ್ರಸಿದ್ಧನಾಗಬಹುದು ಕ್ರಿಕೆಟ್‌ನಲ್ಲಿ ಶತಕ ಬಾರಿಸುವುದರ ಮುಖಾಂತರ, ಆದರೆ ನಿರ್ವಿಕಾರ ಸ್ಥಿತಿ ಬರಲು ಹತ್ತಾರು ವರ್ಷ ಆಜನ್ಮ ಪರಿಯಂತ ಸಮತೆ ಸಮಾಧಾನದಿಂದ ಸಾಧನೆ ಮಾಡಬೇಕಾಗುತ್ತದೆ. ಬಸವಣ್ಣನವರು ಭಕ್ತಿಯ ಬೆಳೆ ಸಿರಿ. ಬಸವಣ್ಣನವರು ಭಕ್ತಿಯನ್ನು ಸಾರಲು ಬಂದ ಪ್ರವಾದಿ. ಬುದ್ಧನು ತ್ಯಾಗಕ್ಕೆ, ಮಹಾವೀರನು ಅಹಿಂಸೆಗೆ, ಪತಂಜಲಿ ಋಷಿ ಯೋಗಕ್ಕೆ ಪ್ರಸಿದ್ಧರಾದಂತೆ. ಬಸವಣ್ಣನವರು ಭಕ್ತಿಗೆ ಪ್ರಸಿದ್ಧರಾದವರು. ಬಸವಣ್ಣನವರ ಧರ್ಮ ಭಕ್ತಿ ಧರ್ಮ. ಬಸವಣ್ಣನವರ ಯೋಗ ಭಕ್ತಿ ಯೋಗ. ಬಸವಣ್ಣನವರ ಭಕ್ತಿ ತೀರಾ ಸಾಮಾನ್ಯನಿಗೂ ನಿಲಕುವಂತಹ ಭಕ್ತಿ.
ಬುದ್ಧನ ತ್ಯಾಗ, ಮಹಾವೀರನ ಅಹಿಂಸೆ, ಪತಂಜಲಿಯ ಯೋಗ ಸರ್ವರಿಗೂ ಸಾಧ್ಯವಿಲ್ಲ. ರೈತರು ಕೂಲಿಕಾರರು, ಕಾರ್ಮಿಕರು ಎಲ್ಲರೂ ಕಾಯಕ ಮಾಡುತ್ತಲೇ ಬಸವಣ್ಣನವರ ಭಕ್ತಿಯನ್ನು ಆಚರಿಸಬಹುದು. ಗುಡಿ ಗುಂಡಾರಗಳ ಗೊಡವೆಯಿಲ್ಲದೆ, ಸೂತಕ-ಪಾತಕಗಳ ಭಯವಿಲ್ಲದೆ, ದಿನ -ವಾರ, ಗ್ರಹ- ನಕ್ಷತ್ರಗಳ ಭಯವಿಲ್ಲದೆ, ರಾಹುಕಾಲ -ಗುಳಿಕಾಲ, ಯಮಗಂಡಕಾಲದ ಜಂಜಾಟವಿಲ್ಲದೆ, ಜಾತಿ ವರ್ಣ, ವರ್ಗಗಳ ಭೇದವಿಲ್ಲದೆ ಬಸವಣ್ಣನವರ ಭಕ್ತಿಯೋಗವನ್ನು ಮಾಡಬಹುದು. ಈ ಕಾರಣದಿಂದಲೇ ದಾರ್ಶನಿಕ ಕವಿ ಸರ್ವಜ್ಞ ಹೇಳುತ್ತಾನೆ.
ಹಸವಿಗೆ ಅಂಬಲಿ ಮುದ್ದು/ ಬಿಸಿಲಿಗೆ ಕೊಡೆ ಮುದ್ದು/ ಬಸುರಿನಲ್ಲಿ ಬಂದ ಶಿಶುಮುದ್ದು/ ಲೋಕಕ್ಕೆ ಬಸವಣ್ಣನೇ ಮುದ್ದು ಸರ್ವಜ್ಞ!
ಹಸಿವಾದಾಗ ಯಾವೊಬ್ಬ ವ್ಯಕ್ತಿಗೂ ಹುಗ್ಗಿ ಹೋಳಿಗೆ ವಡೆ ಬೋಂಡಗಳು ಹಿತವಾಗುವುದಿಲ್ಲ. ಅಂಬಲಿಯೇ ಹಿತ. ಬಿಸಿಲಿನಲ್ಲಿ ನಡೆವವನಿಗೆ ರೇಷ್ಮೆ ಬಟ್ಟೆ ಪಿತಾಂಬರಗಳು ಹಿತ ನೀಡುವುದಿಲ್ಲ. ಸಾಮಾನ್ಯ ಕೊಡೆಯೇ ಹಿತ ನೀಡುತ್ತದೆ. ತನ್ನ ಹೊಟ್ಟೆಯಲ್ಲಿ ಹುಟ್ಟಿದ ಕೂಸು ಅದು ಹೇಗೆ ಇದ್ದರೂ ತಾಯಿಗೆ ಮುದ ನೀಡುತ್ತದೆ. ಹಾಗೆಯೇ ಅತ್ಯಂತ ಸರಳವಾದ ಭಕ್ತಿ ಮಾರ್ಗವನ್ನು ತೋರಿಸಿದ ಬಸವಣ್ಣನವರು ಸರ್ವಕಾಲದಲ್ಲಿಯೂ ಸರ್ವ ಜನಾಂಗಕ್ಕೂ ಇಷ್ಟವಾಗುತ್ತಾರೆ. ಈ ಕಾರಣದಿಂದಲೇ ಇಂಗ್ಲೆಂಡ್‌ನ ಜನನಾಯಕರು ಬಸವಣ್ಣನವರ ಮೂರ್ತಿಯನ್ನು ನಿಲ್ಲಿಸಲು ಅನುಮೋದನೆ ನೀಡಿದ್ದಾರೆ. ಹಿಂಸೆಯ ದಳ್ಳೂರಿಯಲ್ಲಿ ಭಯೋತ್ಪಾದನೆಯ ಭೀಭತ್ಸತೆಯಲ್ಲಿ ಬೆಯುತ್ತಿರುವ ಭೂಮಂಡಲಕ್ಕೆ ಬಸವಣ್ಣನವರ ದಯಾ ಪೂರ್ಣವಾದ, ಕಾಯಕ ಪ್ರಧಾನವಾದ ಭಕ್ತಿ ಮಾರ್ಗವೇ ದಾರಿ ತೋರಿಸಬಲ್ಲದು. ಬಸವಣ್ಣನವರ ಭಕ್ತಿ ಧರ್ಮದಲ್ಲಿ ಸ್ವರ್ಗ ನರಕಗಳು ಮೇಲಿಲ್ಲ. ಸತ್ತ ಮೇಲೆ ಸಿಗುವಂತಹವಲ್ಲ. ‘ಆಚಾರವೇ ಸ್ವರ್ಗ ಅನಾಚಾರವೇ ನರಕ’, ‘ಸತ್ಯವ ನುಡಿಯುವುದೇ ದೇವಲೋಕ ಮಿಥ್ಯವ ನುಡಿಯುವುದೇ ಮರ್ತ್ಯಲೋಕ’.
ಕೇವಲ ಬಸವಣ್ಣನವರ ತತ್ವವೇ ಜಗತ್ತಿಗೆ ಮಾರ್ಗ ದರ್ಶಕವಾಗಲಾರದು. ಆ ತತ್ವವನ್ನು ಅನುಷ್ಠಾನ ಮಾಡುವವರು ನಾವಾಗಬೇಕು. ಮಹರ್ಷಿ ಅರವಿಂದರು ಭಾರತ ದೇಶವನ್ನು ಪರಮಾತ್ಮನ ಪ್ರಯೋಗ ಶಾಲೆ ಎಂದು ಕರೆದಿದ್ದಾರೆ. ಇಂತಹ ದೇವ ಭೂಮಿ ಭ್ರಷ್ಟಾಚಾರ, ಅತ್ಯಾಚಾರ, ಅಸ್ವತ್ಛತೆ, ಆಲಸ್ಯಗಳಿಂದ ಕೂಡಿ ನರಕ ಸದೃಶವಾಗಿದೆ. ಇವುಗಳನ್ನು ತೊಡೆದು ಹಾಕಿ ಸತ್ಯ, ಸದಾಚಾರ, ಉತ್ತಮ ಪರಿಸರ, ಪ್ರಾಮಾಣಿಕತೆ ಕಾಯಕನಿಷ್ಠೆ ಇವುಗಳನ್ನು ಅಳವಡಿಸಿಕೊಳ್ಳುವುದೇ ಬಸವಣ್ಣನವರಿಗೆ ನಾವು ತೋರಿಸುವ ಗೌರವ. ಅದೇ ನಿಜವಾದ ಬಸವ ಜಯಂತಿ.
ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು.
– ಶ್ರೀ ಬಸವಾನಂದ ಶ್ರೀಗಳು, ಶ್ರೀ ಗುರು ಬಸವ ಮಹಾಮನೆ, ಮನಗುಂಡಿ, ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.