ಮ್ಯಾಕಿಬಿ: ಹೊಸ ಸಂವೇದನೆಯ ಬಂಧ
Team Udayavani, Apr 29, 2017, 4:31 PM IST
ಕಾಲದ ಚಕ್ರಗತಿಗೆ ಸಿಕ್ಕಿಯೂ ನಿರಂತರ ಮರುಹುಟ್ಟು ಪಡೆದುಕೊಳ್ಳುವ ಕೃತಿಕಾರ ಎಲ್ಲ ಕಾಲದಲ್ಲೂ ಜೀವಂತ. ಪರಿಷ್ಕರಣೆ, ಹೊಸರೂಪ, ಹೊಸ ಸಂವೇದನೆಗಳಿಗೆ ಕೃತಿಯನ್ನು ಹಲವರು ಒಗ್ಗಿಸುತ್ತಿದ್ದರೂ ಕೃತಿಕಾರನ ಮೂಲ ದ್ರವ್ಯದ ಕಿಮ್ಮತ್ತು ಹಾಗೇ ಉಳಿದುಕೊಂಡಿರುತ್ತದೆ. ಶೇಕ್ಸ್‌ಪಿಯರ್ ಈ ಬಗೆಯ ಪ್ರಯೋಗಗಳಿಗೆ ಶತಮಾನಗಳಿಂದ ಪಕ್ಕಾಗುತ್ತಲೇ ಇದ್ದಾನೆ. ಆತನ ನಾಟಕ ಕೃತಿಗಳು ಅವನ ಕಾಲಕ್ಕೆ ಸೀಮಿತವಾಗಿ ಸ್ಥಾವರಗೊಳ್ಳಲಿಲ್ಲ; ಜಂಗಮವಾದವು; ಅಳಿವು ನೀಗಿಕೊಳ್ಳಲು ಆರಂಭಿಸಿದವು. ಪರಿಣಾಮವಾಗಿ ಅವನ ಒಂದೊಂದೂ ನಾಟಕವೂ ಕಾಲ ದೇಶಗಳನ್ನು ಮೀರಿದವು. ನಿರ್ದೇಶಕರ ಸಂವೇದನೆ ಮತ್ತು ಸೃಜನಶೀಲನೆಯನ್ನೂ ಅವು ಹಿಗ್ಗಿಸುತ್ತಲೇ ಇವೆ.
ಇದಕ್ಕೆ ಈಚಿನ ಉದಾಹರಣೆ ರಜತ್ ಕಪೂರ್ ನಿರ್ದೇಶಿಸಿದ “ವಾಟ್ ಈಸ್ ಡನ್ ಈಸ್ ಡನ್’ ನಾಟಕ. ಇದು ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶನಗೊಂಡಿತು. ಶೇಕ್ಸ್‌ಪಿಯರ್‌ನ “ಮ್ಯಾಕ್‌ಬೆತ್’ ನಾಟಕದ ಮರುರೂಪವಿದು. ಮೂಲದ್ರವ್ಯ ಅದೇಯಾದರೂ ಕಾಲದ ಓಘದಲ್ಲಿ ಜೀವನ ಕ್ರಮ ಹಾಗೂ ಬದುಕುವ ವಹಿವಾಟಿನ ಬಗೆ ಬದಲಾವಣೆಗೆ ಒಳಗಾಗಿರುತ್ತದೆ. ಈ ಕಾರಣಕ್ಕಾಗಿಯೇ ರಜತ್ ಕಪೂರ್ ಕಾಲದ ಚಿತ್ರವನ್ನು ಇವತ್ತಿಗೆ ಬದಲಾಯಿಸಿಕೊಂಡಿದ್ದಾರೆ.
“ಮ್ಯಾಕ್‌ಬೆತ್’ ನಾಟಕದ ವಸ್ತು ಮತ್ತು ಆಶಯ ತಿಳಿದೇ ಇದೆ. ರಾಜನಿಗೆ ಯೋಧ “ಮ್ಯಾಕ್‌ಬೆತ್’ ಅತ್ಯಂತ ನಿಷ್ಠನಾಗಿರುತ್ತಾನೆ. ಆದರೆ, ಅವನ ಮನಸ್ಸಿನಲ್ಲಿ ರಾಜನಾಗುವ ಬಯಕೆಯನ್ನು ಮೂರು ದುಷ್ಟಶಕ್ತಿಗಳು ತುಂಬುತ್ತವೆ. ನಿಷ್ಠೆ ದ್ರೋಹವಾಗಿ ಬದಲಾಗಿ ರಾಜನ ಕೊಲೆಯಲ್ಲಿ ಪರ್ಯಾವಸಾನವಾಗುತ್ತದೆ. ಕೊಲೆ ಮಾಡಿದ್ದೂ ಆಗಿದೆ. ಆದರೆ, ಮನದಾಳದಲ್ಲಿ ಸುಳಿಗಳೇಳುವ ಪರಿಯನ್ನು ಶೇಕ್ಸ್‌ಪಿಯರ್ ಕಟ್ಟಿಕೊಟ್ಟಿರುವ ರೀತಿ ಅನನ್ಯ. ಇದು ಒಂದು ರೀತಿ ಬಹಿರಂಗದ ತೋರುಗಾಣಿಕೆಯೊಂದಿಗೆ ಅಂತರಂಗ ನಿತ್ಯ ಹೂಡುವ ಯುದ್ಧ. ಇವುಗಳ ತೊಳಲಾಟದಲ್ಲಿ ಮನುಷ್ಯ ತತ್ತರಿಸುವ ಪರಿಗೆ ಮೂಲ ಕಾರಣವೇ ದ್ರೋಹ. ಅದನ್ನು ಮಾಡಿದ್ದು ಮುಗಿದ ನಂತರ ಏನೆಲ್ಲಾ ತಡಕಾಡಿದರೂ ನೆಮ್ಮದಿ ಎನ್ನುವುದು ಮರೀಚಿಕೆಯೇ. ದ್ರೋಹದ ಕ್ರಿಯೆಯನ್ನು ನಡೆಸಿದ್ದಾಗಿದೆ. ಇದು ರಜತ್ ಕಪೂರ್ “ಮ್ಯಾಕ್‌ಬೆತ್’ ನಾಟಕವನ್ನು ಒಂದೆಳೆಯಲ್ಲಿ ಗ್ರಹಿಸಿರುವ ರೀತಿ.
ಆಧುನಿಕ ಕಾಲದ ಚಿತ್ರಕ್ಕೆ ಕಥೆಯನ್ನು ಕರೆತರಲು ಅವರು ಮ್ಯಾಕ್‌ಬೆತ್‌ನನ್ನು “ಮ್ಯಾಕಿಬಿ’ ಮಾಡಿದ್ದಾರೆ; ಲೇಡಿ ಮ್ಯಾಕ್‌ಬೆತ್‌ಳನ್ನು ಲೇಡಿ ಮ್ಯಾಕಿಬಿ ಆಗಿಸಿದ್ದಾರೆ. ತುಂಬಾ ಸ್ವಾರಸ್ಯದ ಸಂಗತಿಯೆಂದರೆ, ಮೂಲ ನಾಟಕದ ನಿರೂಪಣಾ ಮಾದರಿಗೇ ರಜತ್ ಜೋತುಬಿದ್ದಿಲ್ಲ. ಅಲ್ಲಿನ ಸಂಕೇತಗಳನ್ನು ಗ್ರಹಿಸಿ ಅವುಗಳನ್ನೂ ಪಾತ್ರಗಳಾಗಿ ಅಳವಡಿಸಿಕೊಂಡಿದ್ದರು. ಉದಾ: ಮೂರು ದುಷ್ಟಶಕ್ತಿಗಳು ಮೊದಲಿಗೆ ಪಾತ್ರಗಳಾಗಿ ಕಾಣಿಸಿಕೊಳ್ಳುತ್ತವೆ. ಆದರೆ, ಮುಂದಕ್ಕೆ ಅವೇ ಮೂರು ದುಷ್ಟಶಕ್ತಿಗಳು ಮ್ಯಾಕಿಬಿನ ಮನಸ್ಸನ್ನು ಅಲ್ಲೋಲಕಲ್ಲೋಲಗೊಳಿಸುವ ಸುಪ್ತ ಪಾತ್ರಗಳಾಗಿಯೂ ಜೊತೆಗೆ ಲೇಡಿ ಮ್ಯಾಕಿಬಿಯ ಮನಸ್ಸಿನ ಪ್ರತಿರೂಪದ ಚಿತ್ರಗಳಾಗಿಯೂ ಇಲ್ಲಿ ಬಿಂಬಿತವಾದವು.
ಈ ಎಲ್ಲವೂ ಸರಿ, ನಿರೂಪಣಾಕ್ರಮದ ಹಿಂದೆ ರಜತ್‌ರಲ್ಲಿ ಒಂದು ಚಿಂತನೆ ಇದೆ; ಸಂಕೇತಗಳನ್ನು ಪಾತ್ರಗಳಾಗಿ ಕಟ್ಟುವ ಕೌಶಲ್ಯವಿದೆ. ಇದನ್ನು ಒಂದು ಬಿಗಿ ಬಂಧದಲ್ಲಿ ಕಟ್ಟಬೇಕೆನ್ನುವ ಇರಾದೆಯೂ ಕಾಣುತ್ತಿತ್ತು. ಆದರೆ, ರಜತ್ ತಮ್ಮ ಅಲೋಚನೆಗಳನ್ನು ವಿದೂಷಕರಿಂದ ಹೇಳಿಸುವಾಗ ಚೂರು ಜಿಪುಣರಾಗಬೇಕಿತ್ತು. ಏಕೆಂದರೆ, ಇಬ್ಬರು ವಿದೂಷಕರು ನಾಟಕದ ವಸ್ತುವಿಗೆ ಸಂಬಂಧಿಸಿದಂತೆ ರಂಜಿಸುತ್ತಿದ್ದಾರೆ ಅನಿಸುತ್ತಿದ್ದರೇನೋ ನಿಜ. ಪ್ರತಿ ದೃಶ್ಯದ ಮುಕ್ತಾಯದ ನಂತರ ಮತ್ತೆ ಕಾಣಿಸಿಕೊಂಡು ಲಂಬಿಸುತ್ತಿದ್ದಾರೇನೋ ಅನಿಸಲಿಕ್ಕೆ ಶುರುವಾದರು. ಇದು ಅಗತ್ಯವಿರಲಿಲ್ಲ. ಉಳಿದಂತೆ ರಜತ್ ನಾಟಕದಲ್ಲಿ ಯಾವ ರಂಗಸಜ್ಜಿಕೆಯನ್ನೂ ಬಳಸದೆ ಅತಿ ಕಡಿಮೆ ರಂಗಪರಿಗಳನ್ನು ಬಳಸಿ ಸಂಗೀತ ಹಾಗೂ ಬೆಳಕಿನ ವ್ಯವಸ್ಥೆಯಲ್ಲೇ ಒಂದು ಚೆಂದದ ಬಂಧ ಕಟ್ಟಿಕೊಟ್ಟರು. ಈ ಬಿಗಿ ಬಂಧ ವಿದೂಷಕರು ಬಂದಾಗ ಜಾಳಾಗುತ್ತಿದ್ದದ್ದು ಬಿಟ್ಟರೆ ಅವರ ಮಾತುಗಳಲ್ಲಿದ್ದ ತಾತ್ವಿಕತೆ ಚಿಂತನೆಗೇನೋ ಹಚ್ಚುತ್ತಿತ್ತು. ಚೂರು ವಾಚ್ಯಗಳನ್ನು ಬಿಟ್ಟು ಬಂಧ ಬಿಗಿಯಾಗಿಸಿದ್ದರೆ ನಾಟಕದ ಲಯದಲ್ಲಿ ಕವಿತೆಯ ಛಂದಸ್ಸು ಇರುತ್ತಿತ್ತು.
– ಎನ್.ಸಿ. ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.