ಅಮ್ಮನ ಸೀರೆ ಮಡಿಸೋಕಾಗಲ್ಲ!
Team Udayavani, Apr 30, 2017, 3:50 AM IST
ಬೀರುವಿನ ಬಾಗಿಲು ತೆಗೆದರೆ ತುಂಬಿ ತುಳುಕಾಡುವ ಸೀರೆಗಳ ರಾಶಿ. ಹತ್ತು, ಹದಿನೈದು ವರ್ಷಗಳ ಹಿಂದಿನ ಸೀರೆಗಳೂ ಮಾಸದೆ, ಹರಿಯದೆ, ಸೇವೆಗೆ ಸಿದ್ಧ ಎನ್ನುವಂತೆ ಉಳಿಸಿಕೊಂಡಿರುವ ಆಕರ್ಷಣೆ. ಹಾಗೆಂದು ಜವಳಿ ಅಂಗಡಿಯಿಂದ ಕೊಂಡು ತಂದ ಸೀರೆಗಳನ್ನು ಉಟ್ಟೇ ಇಲ್ಲವೇ ಅಂದರೆ ಹಾಗೇನಲ್ಲ. ಉಟ್ಟುಟ್ಟು ಬೇಜಾರು ಬಂದು ಸದ್ಯಕ್ಕೆ ಮೂಲೆಗೆ ತಳ್ಳಿದ, ಅವಗಣನೆಗೆ ಗುರಿಯಾದ ಸೀರೆಗಳಿವು. ಈಗಿನ ಸಿಂಥೆಟಿಕ್ ಸೀರೆಗಳು ಹರಿಯುವುದು ಅನ್ನುವುದಿದೆಯಾ? ಬಿಲ್‌ಕುಲ್ ಇಲ್ಲ. ಅಲ್ಲದೆ ಮನೆಯಲ್ಲಿರುವಾಗ ಒಂದು ನೈಟಿ ನೇಲಿಸಿಕೊಂಡುಬಿಟ್ಟರೆ ಅದೇ ಸಲೀಸು, ಮನೆಗೆಲಸ ಮಾಡಲು ಆರಾಮ ಎನ್ನುವ ಕಾಲಮಾನದಲ್ಲಿ ಹೊರಗೆ ಹೋಗುವಾಗಲಷ್ಟೇ ಅಪರೂಪಕ್ಕೆ ಬಳಸಲ್ಪಡುವ ಸೀರೆಗಳು ಹಳೆಯದಾಗುವುದು ಹೇಗೆ? ಹತ್ತಿರದ ಜಾಗವಾದರೆ ಮನೆಯ ಹೊರಗೆ ಹೋಗುವಾಗಲೂ ಅಮರಿಕೊಂಡು ಬಿಡುತ್ತದೆ ಸೋಂಭೇರಿತನ. ನೈಟಿಯ ಮೇಲೊಂದು ಸ್ವೆಟರ್ ಏರಿಸಿಕೊಂಡೋ, ವೇಲ್ ಹೊದ್ದುಕೊಂಡೋ ಅಥವಾ ಬರೀ ನೈಟಿಧಾರಿಗಳಾಗಿಯೇ ಸನಿಹದ ಅಂಗಡಿಗಳಲ್ಲಿ ವ್ಯಾಪಾರ, ಪಾರ್ಕುಗಳಲ್ಲಿ ವಾಕಿಂಗು ಸಹಜವಾಗೆಂಬಂತೆ ನಡೆದುಬಿಡುತ್ತದೆ. ಸೀರೆಯ ಜಾಗವನ್ನು ಆಕ್ರಮಿಸಲು ಚೂಡೀದಾರ್ ಬಂದ ಮೇಲೆ ಎಷ್ಟೋ ಹೆಂಗಳೆಯರು ಅದಕ್ಕೆ ಒಗ್ಗಿಕೊಂಡುಬಿಟ್ಟಿ¨ªಾರೆ. ಆ ದಿರಿಸು ನಮ್ಮ ಮೈಕಟ್ಟಿಗೆ, ವಯಸ್ಸಿಗೆ ಹೊಂದುತ್ತದೆಯೋ, ಬಿಡುತ್ತದೆಯೋ ಬೇರೆ ಮಾತು. ಚೂಡೀದಾರ, ದುಪಟ್ಟಾ ಧರಿಸಿ ಹೊರಗೆ ಹೊರಟರೆ ಹತ್ತು ವರ್ಷ ಚಿಕ್ಕವರಾದ ಭಾವನೆ. ಪ್ಯಾಂಟಿನ ಮೇಲೆ ಟಾಪ್ ಹಾಕಿ ಟಿಪ್‌ಟಾಪಾಗಿರುವವರ ಸಂಖ್ಯೆ ಕೂಡಾ ದೊಡ್ಡದೇ ಇದೆ. ಬಿಡಿ, ಅವರವರ ಖಾಯಿಷುÒ. ಅವರವರ ಮನಸ್ಸು, ಅನುಕೂಲತೆ. ವರ್ಷಕ್ಕೆರಡು ಅನ್ನುವ ಲೆಕ್ಕದಲ್ಲಿ ಮನೆಯ ಗಂಡಸರೇ ತಂತಮ್ಮ ಮನೆಯೊಡತಿಯರಿಗೆ ಸೀರೆ ತಂದುಕೊಡುವ ಪದ್ಧತಿ ಒಂದು ಕಾಲದಲ್ಲಿ, ತೀರಾ ಹಿಂದೇನಲ್ಲ, ಹಳ್ಳಿಮನೆಗಳ ಕಡೆ ಇತ್ತು. “ಯಾವ ಬಣ್ಣದ್ದು ಬೇಕು?’ ಎಂದು ಕೇಳಿದರೆ ಅಂಥ ಗಂಡಂದಿರು ಸಲೀಸಾಗಿ ರಸಿಕಶಿಖಾಮಣಿಗಳ ಸಾಲಿಗೆ ಸೇರ್ಪಡೆ. ತರುತ್ತಿದ್ದುದಾದರೂ ಎಂಥ ಸೀರೆ? ಅದೇನು ಸಾವಿರಗಟ್ಟಲೆಯ ಸೀರೆಯಲ್ಲ, ಸಾಧಾರಣ ಹತ್ತಿಸೀರೆ. ಹೊಸ ಸೀರೆಗಳ ಗಳಿಗೆ ಮುರಿದು ಅದನ್ನು ಉಡುವುದಕ್ಕೆ ಅವತ್ತು ಯಾವ ವಾರ? ಅನ್ನುವ ಲೆಕ್ಕಾಚಾರ. ಸೋಮವಾರ ಉಟ್ಟರೆ ಸುಟ್ಟು ಹೋಗುತ್ತದೆ.
ಮಂಗಳವಾರ ದುಃಖ. ಬುಧವಾರ ಉಟ್ಟರೆ ಬುಧುಬುಧು ಹೊಸ ಸೀರೆ ಸಿಗುತ್ತಿರುತ್ತದೆ ಎಂದು ವಾರದ ಏಳೂ ದಿನಗಳ ಬಗ್ಗೆ ಒಂದೊಂದು ಹೇಳಿಕೆ. ಇವತ್ತಿಗೂ ಈ ಹೇಳಿಕೆಗಳ ಕುರಿತಾಗಿ ಪರಮಸತ್ಯ ಎನ್ನುವ ನಂಬಿಕೆ ಇಟ್ಟುಕೊಂಡು ಪಾಲಿಸುವವರಿ¨ªಾರೆ. ಹೊಸ ಬಟ್ಟೆ ಅಥವಾ ಹೊಸ ಸೀರೆ ಸಿಗುವ ಕುರಿತಾಗಿ ಏನೇನೆÇÉಾ ನಂಬಿಕೆಗಳಿದ್ದುವು ಎಂದು ನೆನೆದರೆ ನಗು ಬರುತ್ತದೆ. ಜೇಡ ಮೈಮೇಲೆ ಹತ್ತಿಕೊಂಡು ಹರಿದಾಡಿತು ಅಂದರೆ ಹೊಸ ಬಟ್ಟೆ, ಅಕಸ್ಮಾತ್ತಾಗಿ ತಿರುವುಮುರುವಾಗಿ ಬಟ್ಟೆ ಧರಿಸಿದರೆ ಹೊಸ ಬಟ್ಟೆ, ಹೀಗೆ ಹೊಸ ಬಟ್ಟೆಯ ಯೋಗ ಕೂಡಿ ಬರುವುದರ ಕುರಿತಾಗಿ ಕೆಲವೊಂದು ನಂಬಿಕೆಗಳಿದ್ದುವು. ಬೇಕೋ, ಬೇಡವೋ, ಹರಕೆ ಹೇಳಿಕೊಂಡಂತೆ ಶಾಪಿಂಗ್ ಮಾಡಿ, ತಂದಿದ್ದು ಸೊಗಸದೆ ವಾರೆಯಾಯಿತೆಂದರೆ ಹಾಗೇ ಮೂಲೆಗೆ ಬಿಸಾಡುವ ಕುರಿತು ಆಗೆÇÉಾ ಕಲ್ಪನೆಯೇ ಇರಲಿಲ್ಲ. ಮನೆಯಲ್ಲಿ ಹಳೆ ತಲೆಗಳಿದ್ದರೆ ಹೊಸ ಸೀರೆಯ ನೆರಿಗೆ ಹಿಡಿದು, ಬಿಗೀ ತಿರುಪಿ, ದೇವರ ಮುಂದೆ ಮಣೆಯ ಮೇಲಿಟ್ಟು, ಅದಕ್ಕೆ ಅರಿಶಿನ, ಕುಂಕುಮ ಏರಿಸಿ ನಂತರ ಉಡುವ ಕ್ರಮ. ಮನೆಯ ಗೃಹಿಣಿಯ ಮೈಮೇಲೆ ರಾರಾಜಿಸುವ ಹತ್ತಿ ಸೀರೆ ಹಳೆಯದಾಗಿಯೋ, ಹರಿದೋ, ಸೇವೆಯಿಂದ ನಿವೃತ್ತಿಯಾಗುವ ಸಂದರ್ಭ ಬಂದರೆ ನಿವೃತ್ತಿ ಅನ್ನುವ ಪದವೇ ಸರಿಯಲ್ಲ.
ನೆಲ ವರೆಸುವ ವರಸರಿವೆಯಾಗಿ ತೇಯುವವರೆಗೆ ಹತ್ತಿ ಸೀರೆ ಕೊಡಮಾಡುತ್ತಿದ್ದ ಸೇವೆಗಳು ಹತ್ತಾರು. ಮಲೆನಾಡಿನ ಹಳ್ಳಿಮನೆಗಳಲ್ಲಿ ಹುಟ್ಟಿ ಬೆಳೆದವರನ್ನು ಕೇಳಿ ನೋಡಿ, ಎಲ್ಲರೂ ಅಮ್ಮನ ಹಳೇ ಸೀರೆ ಹಾಸಿದ ಲೇಪಿನ ಮೇಲೆ ಮಲಗಿ ದೊಡ್ಡವರಾದವರೇ. ಹಳೆಯ ಹತ್ತಿ ಸೀರೆಯ ಮೇಲ್ಹಾಸು ಅಂದರೆ ಅಮ್ಮನ ಮಡಿಲಿನಲ್ಲಿ ತಲೆ ಇಟ್ಟು ಮಲಗಿದ ಬೆಚ್ಚನೆಯ ಸುಖ. ಮೆದು ಹಸ್ತದ ಮೃದುಸ್ಪರ್ಶದ ನವಿರು. ಮನೆಯಲ್ಲಿ ಬಸುರಿ ಹೆಂಗಸು ಇ¨ªಾಳೆಂದರೆ ಹಳೆಯ ಹತ್ತಿ ಸೀರೆಗೆ ಎಲ್ಲಿಲ್ಲದ ಡಿಮ್ಯಾಂಡು. ಮನೆಗೆ ಹೊಸ ಸದಸ್ಯನ(ಳ) ಆಗಮನದ ದಿನ ಹತ್ತಿರವಾದಂತೆ ಚಪ್ಪರಿವೆ ಗಂಟಿನಲ್ಲಿರುತ್ತಿದ್ದ ಹಳೇ ಸೀರೆಗಳು ಹೊರಗೆ ಬರುತ್ತಿದ್ದುವು. ಮಗುವಿನ ಅಂಡಡಿಗೆ ಹಾಕಲು, ತೊಟ್ಟಿಲಿಗೆ ಹಾಸಲು ಅನುಕೂಲವಾಗುವಂತೆ ಬೇಕಾದ ಅಳತೆಗೆ ಹರಿಯಲ್ಪಟ್ಟು, ಕುದಿ ನೀರಿನಲ್ಲಿ ನೆನೆಸಿಕೊಂಡು, ಒಗೆಸಿಕೊಂಡು, ಬಿಸಿಲಲ್ಲಿ ಗಣಗಣವಾಗಿ ಒಣಗಿ ಶೇಖರಣೆಯಾಗುತ್ತಿದ್ದುವು. ಮನೆಯ ಸುತ್ತಿನ ಬೇಲಿಸಾಲಿನ ಮೇಲೆ ಬಣ್ಣಬಣ್ಣದ ಅರಿವೆ ತುಂಡುಗಳನ್ನು ಒಣಗಲು ಹಾಕಿ¨ªಾರೆಂದರೆ ಆ ಮನೆಯಲ್ಲಿ ಬಾಣಂತಿಯಿ¨ªಾಳೆ ಎಂಬುದು ನಿಶ್ಚಿತ. ಬಸುರಿ ಬಾಣಂತಿಯಾದ ಮೇಲೆ ಉಬ್ಬಿದ್ದ ಹೊಟ್ಟೆ ಚಟ್ಟಿ ಮುನ್ನಿನಂತಾಗಲು ಬೇಕೇಬೇಕು ಹತ್ತಿ ಸೀರೆ. ಸುತ್ತು ಕಟ್ಟುವುದು ಎನ್ನುವ ಹೆಸರಿನ ಈ ಕ್ರಿಯೆಯಲ್ಲಿ ಬಾಣಂತಿಯ ಹೊಟ್ಟೆಗೆ ಬೆಲ್ಟಿನಂತೆ ಬಿಗಿಯಾಗಿ ಸೀರೆ ಸುತ್ತಿ ಗಂಟು ಹಾಕುವ ಕ್ರಮ ಇತ್ತು. ಅಮ್ಮನೊಡನೆ ಡಿಮ್ಯಾಂಡು ಮಾಡಿ ಎರಡೆರಡು ಸೀರೆಯನ್ನು ಸೊಂಟಕ್ಕೆ ಬಿಗೀ ಸುತ್ತಿಸಿಕೊಂಡು ಹೊಟ್ಟೆಯನ್ನು ಮೊದಲಿನ ಸ್ಥಿತಿಗೆ ತಂದುಕೊಳ್ಳಲು ಒ¨ªಾಡುತ್ತಿದ್ದ ಹೆಮ್ಮಕ್ಕಳೂ ಇರುತ್ತಿದ್ದರು. ಇನ್ನೂ ಬಿಗಿ, ಇನ್ನೂ ಬಿಗಿ… ಎನ್ನುತ್ತ ಸಲೀಸಾಗಿ ಉಸಿರಾಡುವುದಕ್ಕೆ ಕಷ್ಟವಾದರೂ ಸರಿ, ಬಾಣಂತನದ ಮೂರ್‍ನಾಲ್ಕು ತಿಂಗಳ ಅಗ್ನಿದಿವ್ಯವನ್ನು ಸ್ವಂತ ಖುಷಿಯಿಂದ ಅನುಭವಿಸುತ್ತಿದ್ದರು.
ವಾರಪತ್ರಿಕೆಯಲ್ಲಿ ಓದಿದ ಒಂದು ಕತೆ ನೆನಪಾಗುತ್ತಿದೆ. ಬರೆದವರ ಹೆಸರು ಮರೆತಿದೆ. ಒಂದು ಮನೆಯ ಪಕ್ಕದಲ್ಲಿ ಹೊಸ ಕಟ್ಟಡವೊಂದು ಮೇಲೇಳುತ್ತಿದೆ. ಗಂಡಸರ ಜೊತೆ ಹೆಮ್ಮಕ್ಕಳೂ ಗಾರೆ ತುಂಬಿದ ಬಾಂಡ್ಲಿ ಹೊತ್ತು ದುಡಿಯುತ್ತಿ¨ªಾರೆ. ಒಂದು ದಿನ ನಡುವಯಸ್ಸಿನ ಕೆಲಸದಾಕೆಯೊಬ್ಬಳು ಈ ಮನೆಯ ಗೃಹಿಣಿಯನ್ನು ಹುಡುಕಿಕೊಂಡು ಬಂದು ಒಂದು ಹತ್ತಿಸೀರೆಯನ್ನು ಬೇಡುತ್ತಾಳೆ. ಅವಳು ಕೊಟ್ಟ ಕಾರಣ ಕೇಳಿ ಮನೆಯೊಡತಿ ಉಸಿರು ಒಡೆಯದೆ ತನ್ನ ಬಳಿ ಇದ್ದ ಹತ್ತಿ ಸೀರೆಯೊಂದನ್ನು ಕೊಟ್ಟು ಕಳಿಸುತ್ತಾಳೆ. ಇಷ್ಟಕ್ಕೂ ಅವಳು ಹೇಳಿದ ಕಾರಣ ಏನು? ದೊಡ್ಡವಳಾಗಿ¨ªಾಳೆ ಮಗಳು!
ಸಂವೇದನಾಶೀಲ ಹೆಣ್ಣುಮಕ್ಕಳನ್ನು ಆ ಕ್ಷಣಕ್ಕೆ ಕರಗಿಸುವಂಥ ಕತೆ ಇದು ಎಂದು ನನ್ನ ಅನಿಸಿಕೆ. ಇದೀಗ ಎಲ್ಲಿ ನೋಡಿದರೂ ಸಿಂಥೆಟಿಕ್ ಸೀರೆಗಳ ಸಾಮ್ರಾಜ್ಯ. ಮುರೀ ಹಿಂಡಿ ಒಣಗಿಸಲು ಬರುತ್ತಿದ್ದ ಹತ್ತಿ ಸೀರೆಗಳ ಜಾಗದಲ್ಲಿ ನೀರಿಳಿದು ಒಣಗುವ ನೈಲಾನ್ ಸೀರೆಗಳು. ಅಗ್ಗದ ಬೆಲೆಗೆ ಕೈಗೆಟುಕುವ ಸರಕುಗಳು. ಒಂದು ಸೀರೆ ಕೊಡುತ್ತೀನಿ ಅಂದರೆ ಮಹದೈಶ್ವರ್ಯ ಎನ್ನುವಂತೆ ಒಂದು ದೊಡ್ಡ ಡಬ್ಬ ಸೀಗೇಪುಡಿ ಕುಟ್ಟಿ ಕೊಡುತ್ತಿದ್ದ ಕಾಲ ಇತ್ತು. ಈಗ ಸೀರೆ ಅಂದರೆ ಕಾಸಿಗೊಂದು, ಕೊಸರಿಗೊಂದು ಅನ್ನುವಷ್ಟು ಸಸಾರ. ಕಲಿಪುರುಷನ ವಕ್ರದೃಷ್ಟಿಯಿಂದ ಕಾಡುಪಾಲಾದ ನಳ ಮಹಾರಾಜ ಉಟ್ಟ ಬಟ್ಟೆಯನ್ನೂ ಕಳೆದುಕೊಂಡು ಹೆಂಡತಿಯ ಅರ್ಧ ಸೀರೆಯಿಂದ ಮಾನ ಮುಚ್ಚಿಕೊಂಡಿದ್ದು, ಅವಳು ತನ್ನ ತಂದೆಯ ಮನೆಗೆ ಮರಳಿ ಹೋಗಲೆಂಬ ಸದಾಶಯದಿಂದ ನಡುರಾತ್ರಿ ನಿ¨ªೆಯಲ್ಲಿದ್ದವಳನ್ನು ಕಾಡಿನಲ್ಲಿ ತ್ಯಜಿಸಿ ಹೋಗಿದ್ದು ಎಲ್ಲರೂ ಬಲ್ಲ ಕತೆ. ಅದು ಹತ್ತಿ ಸೀರೆ ಆಗಿರದಿದ್ದರೆ ಪರ್ರನೆ ಹರಿದು ಎರಡು ಭಾಗ ಮಾಡಲು ಬರುತ್ತಿರಲಿಲ್ಲವೆನ್ನುವುದು ಈ ಸಂದರ್ಭದಲ್ಲಿ ಬಾಲಿಶ ಹೇಳಿಕೆಯೆನಿಸಬಹುದಾದರೂ ಹಾಗೆನ್ನಿಸುತ್ತಿರುವುದು ಸತ್ಯ. ಹೊಟ್ಟೆಪಾಡಿಗಾಗಿ ಉಟ್ಟ ವಸ್ತ್ರವನ್ನು ಬಿಚ್ಚಿ ಬೀಸಿ ಹಕ್ಕಿಗಳನ್ನು ಹಿಡಿಯಲು ಹೋಗಿ ನಳಮಹಾರಾಜ ತನ್ನ ವಸ್ತ್ರವನ್ನು ಕಳೆದುಕೊಂಡಿದ್ದರ ಕುರಿತು ಮಿಡ್ಲ್ ಸ್ಕೂಲಿನಲ್ಲಿ ಓದಿದ ಪದ್ಯವೊಂದು ಅಷ್ಟಿಷ್ಟು ನೆನಪಿಗೆ ಬರುತ್ತಿದೆ,
.. ಜಗನ್ಮೋಹನದ ಪಕ್ಷಿಗಳು,
ಪೊಡವಿಗಿಳಿಯಲು ಕಂಡಪೇಕ್ಷಿಸಿ
ಪಿಡಿವೆಂನೆಂದುರವಣಿಸಿ ನೃಪ
ಹಚ್ಚಡವ ಬೀಸಿದೊಡದನೆ
ಕೊಂಡೊಯ್ದುವು ನಭಸ್ಥಳಕೆ… ಎಂದು ಮುಂದುವರಿಯುವ ಪದ್ಯ. ಸೀರೆಯ ವಿಷಯಕ್ಕೆ ಮರಳಿದರೆ ಕಾಟನ್ ಸೀರೆಗಳೆಂದರೆ ಪ್ರಾಣ ಬಿಡುವ ಹೆಣ್ಮಕ್ಕಳು ನಮ್ಮ ನಡುವೆ ಬಹಳ ಜನ ಇ¨ªಾರೆ. ಮುದುಡಿ ಮು¨ªೆಯಾಗದಂತೆ ಅವನ್ನು ಕಾಪಾಡಿಕೊಳ್ಳುವುದು ಕಷ್ಟ ಎಂದು ಇಷ್ಟಪಟ್ಟರೂ ದೂರ ಇಡುವವರು ಒಂದಷ್ಟು ಜನ. ಹೇಳುವುದಕ್ಕೆ ಸಸಾರ, ಕಾಟನ್ ಸೀರೆ. ಒಗೆದೊಡನೆ ಅದಕ್ಕೆ ಸ್ಟಾರ್ಚಿನ ಉಪಚಾರ ಮಾಡದಿದ್ದರೆ ಗರಿಮುರಿ ಕಳೆದುಕೊಂಡು ಸಪ್ಪೆ. ಸ್ಟಾರ್ಚ್ ಹಾಕಿ ಒಣಗಿಸಿ ಇಸಿŒ ಮಾಡಿದರೆ ಹಳೇ ಸೀರೆಗೂ ಹೊಸದರ ಚಂದ.
ಸೀರೆಗೆ ಇಸಿŒ ಎನ್ನುವುದು ಕೆಲವೇ ದಶಕಗಳ ಹಿಂದೆ ಊಹಾತೀತ ಸಂಗತಿ. ಹೆಣ್ಣುಮಕ್ಕಳ ಸೀರೆ ಹಾಗಿರಲಿ, ಗಂಡುಮಕ್ಕಳ ಬಟ್ಟೆಗೂ ಐರನ್ ಮಾಡುವ ಕ್ರಮ ಇರಲಿಲ್ಲ. ಶೋಕೀಲಾಲರು ತಂಬಿಗೆಗೆ ಕೆಂಡ ತುಂಬಿ ಅದರ ತಳದಿಂದ ಬಟ್ಟೆಯ ಮುದುರನ್ನು ತೀಡಿ ತೀಡಿ ಸರಿಪಡಿಸಿಕೊಳ್ಳುತ್ತಿದ್ದಿದ್ದು ಹೌದೋ, ಅಲ್ಲವೋ ಅನ್ನುವ ಹಾಗೆ ನೆನಪಲ್ಲಿದೆ.
ಅವೆÇÉಾ ಗಂಡಸರ ಜಗತ್ತಿನ ಕಾರುಬಾರು. ಹೆಂಗಸರಿಗೆ ಈ ಕುರಿತಾದ ಕನವರಿಕೆ ಇರಲಿಲ್ಲ. ತೀರಾ ಬೇಕೆಂದರೆ ಕೈಯಿಂದ ತಿಕ್ಕಿ, ತೀಡಿ ಮಡಿಸಿದ ದಿರಿಸುಗಳನ್ನು ತಲೆದಿಂಬಿನ ಅಡಿಯಲ್ಲಿಟ್ಟು ಮಲಗಿದರೆ ಅದೇ ಇಸಿŒ . ಎಲೆಕ್ಟ್ರಿಕ್ ಐರನ್ ಬಾಕ್ಸುಗಳ ಬಳಕೆ ವ್ಯಾಪಕವಾದ ಮೇಲೆ ಫ್ಯಾಷನ್ ಲೋಕದಲ್ಲಿ ಬದಲಾವಣೆಯ ಗಾಳಿ ಬೀಸಿ ಹೆಂಗಸರ ಬಟ್ಟೆಗಳೂ ಇಸಿŒಯಿಂದ ಖಡಕ್ಕಾಗತೊಡಗಿದುವು. ಬೀದಿಗೊಬ್ಬರಂತೆ ರಸ್ತೆ ಬದಿಯ ಮರಗಳ ತಂಪಿನಲ್ಲಿ ಬಟ್ಟೆ ಐರನ್ ಮಾಡಿಕೊಡುವವರು ಟೆಂಟು ಹೂಡಿದ ಮೇಲೆ, ಕೆಂಡ ತುಂಬಿದ ಐರನ್ ಬಾಕ್ಸÇÉೇ ಇರಲಿ, ಎಷ್ಟೋ ಜನಕ್ಕೆ ಮನೆಯಲ್ಲಿ ಬಟ್ಟೆ ಇಸಿŒ ಮಾಡಿಕೊಳ್ಳಲು ಸೋಮಾರಿತನ ಅಮರಿಕೊಂಡುಬಿಟ್ಟಿತು. ಕುದುರೆ ಕಂಡರೆ ಕಾಲುನೋವು ಶುರುವಾಯ್ತು. ಮನೆಯಿಂದ ಬಟ್ಟೆಬರೆ ತೆಗೆದುಕೊಂಡು ಹೋಗಿ ಕೊಡಬೇಕಾದ ಪ್ರಮೇಯವೂ ಇಲ್ಲದೆ ಮನೆ ಬಾಗಿಲಿಗೇ ಬಂದು ಬಟ್ಟೆ ಸಂಗ್ರಹಿಸಿಕೊಂಡು, ಐರನ್ ಮಾಡಿ ತಂದುಕೊಡುವ ಪದ್ಧತಿಗೆ ಜನ ಒಗ್ಗಿಬಿಟ್ಟಿ¨ªಾರೆ. ಹಳಿ ತಪ್ಪಿದ್ದಕ್ಕೆ ಕ್ಷಮಿಸಿ. ಕೈತುಂಬಾ ಖಣಖಣಿಸುವ ಗಾಜಿನ ಬಳೆ, ತುರುಬಿಗೊಂದು ಹೂಮಾಲೆಯ ತುಂಡು, ಮನೆ ಬಳಕೆಯ ಅಂಚು, ಸೆರಗಿರುವ ಹತ್ತಿಸೀರೆಯುಟ್ಟು ಓಡಾಡುತ್ತಿದ್ದ ನಿಮ್ಮ ಅಮ್ಮನನ್ನೋ, ಅಜ್ಜಿಯನ್ನೋ ಒಮ್ಮೆ ನೆನಪಿಸಿಕೊಳ್ಳಿ. ಮನಸ್ಸು ಆದ್ರìವಾಗದಿದ್ದರೆ ಆಗ ಕೇಳಿ.
ನಮ್ಮ ಮಲೆನಾಡಿನಲ್ಲಿ ಮಳೆಗಾಲದ ಮೂರ್‍ನಾಲ್ಕು ತಿಂಗಳು ಅದಿನ್ನೆಂಥ ಜಡಿಮಳೆ ಹೊಯ್ಯುತ್ತಿತ್ತೆಂದರೆ ಕೆಂಪು ಗಾರೆಯ ನೆಲದಲ್ಲಿ ಅಲ್ಲಲ್ಲಿ ನೀರೆದ್ದು ಪಸೆಪಸೆ. ಒಗೆದು ಮನೆಯೊಳಗಿನ ತಂತಿಯ ಮೇಲೆ ಒಣಗಿಸಿದ ಬಟ್ಟೆಗಳು ಪೂರಾ ಒಣಗುವ ಪಂಚಾತಿಕೆ ಇರಲಿಲ್ಲ. ಅರೆಬರೆ ಒಣಗಿದ ಬಟ್ಟೆಯಿಂದ ಅದೊಂಥರ ಮಣಕು ವಾಸನೆ. ಮಳೆಗಾಲದ ಬಾಣಂತನ ಅಂದರಂತೂ ಗೃಹಿಣಿಗೆ ಕಡು ಕಷ್ಟ. ಮಕ್ಕಳ ಉಚ್ಚೆ, ಕಕ್ಕದ ಬಟ್ಟೆಗಳು ಒಣಗುವಂತೆಯೇ ಇಲ್ಲ. ಅದಿನ್ನೆಷ್ಟು ಬಟ್ಟೆ ಇದ್ದರೂ ಸಾಲದೇ ಸಾಲದು. ಎಳೆಮಕ್ಕಳ ಉಚ್ಚೆಬಟ್ಟೆಯನ್ನು ಒಗೆಯದೆ ಹಾಗೆ ಹಾಗೇ ಒಣಗಿಸುವ ಕುರಿತು ಒಂದು ಹೇಳಿಕೆ ಮಾತು ಬಳಕೆಯಲ್ಲಿತ್ತು. ಮಕ್ಕಳ ಬಟ್ಟೆಯನ್ನು ಒಗೆಯದೆ ಒಣಗಿಸಿದರೆ ಮಕ್ಕಳೂ ಹಾಗೇ ಒಣಗುತ್ತ¤ ಬರುತ್ತಾರೆ ಅನ್ನುವ ಹೇಳಿಕೆ. ಸೋಮಾರಿ ಹೆಮ್ಮಕ್ಕಳ ಕಿವಿ ತಿರುಪಲು ಬಹುಶಃ ಚಾಲ್ತಿಯಲ್ಲಿದ್ದ ನಂಬಿಕೆ. ಎಳೆಶಿಶುಗಳು ಅಂದಕೂಡಲೆ ಇನ್ನೊಂದೇನೋ ನೆನಪಾಗುತ್ತಿದೆ. ಮಕ್ಕಳ ತಲೆಯಲ್ಲಿ ಅಲ್ಲಲ್ಲಿ ಉರುಟುರುಟಾಗಿ ಕೂದಲು ಉದುರಿ ಬೋಳಾಗಿದ್ದರೆ ಅಕ್ಕಳೆ ತಿಂದಿರಬೇಕು ಎನ್ನುವ ಗುಮಾನಿ. ಅಕ್ಕಳೆ ಅಂದರೆ ಪೇಟೆ ಮಂದಿಯ ಜಿರಳೆ. ಎಳೆ ಶಿಶುವಿನ ತೊಟ್ಟಿಲು ಅಂದರೆ ಪದರಪದರವಾಗಿ ಹಳೆ ಕಂಬಳಿ ಚೂರು, ರಗ್ಗಿನ ಚೂರು, ರಬ್ಬರು ಶೀಟು, ಎಲ್ಲದರ ಮೇಲೆ ಮಗುವಿನ ಮೈಗೆ ಚುಚ್ಚದ ಹಾಗೆ ಹಳೇ ಹತ್ತಿಸೀರೆ ಹಾಸಿದ ವ್ಯವಸ್ಥೆ. ಗಾಳಿ, ಬೆಳಕಿಗೆ ಪ್ರವೇಶವಿಲ್ಲದಂತೆ ಮುಚ್ಚಿದ ಕತ್ತಲೆ ಕೋಣೆಯೊಳಗಿರುತ್ತಿದ್ದ, ಜಂತಿಗೆ ಕಟ್ಟಿದ ಹಗ್ಗದಿಂದ ನೇತು ಬಿಟ್ಟ ತೊಟ್ಟಿಲೊಳಗೆ ಜಿರಳೆ ಸೇರಿಕೊಂಡರೆ ಆಶ್ಚರ್ಯವೇನಿಲ್ಲ. ಶಿಶುವಿನ ಮೈಗೆ ಅಂಗಾಲು ಬುಡದಿಂದ ನೆತ್ತಿ ಕಣ್ಣಿನವರೆಗೆ ಕೀಸಿ ತೆಗೆದರೆ ಕೈ ತುಂಬುವಷ್ಟು ಎಣ್ಣೆ ಬಳಿದು, ತೊಟ್ಟಿಲಲ್ಲಿ ಮಲಗಿಸಿ, ನಂತರ ಅದಕ್ಕೆ ಸ್ನಾನ ಮಾಡಿಸುವ ಪದ್ಧತಿ ಕೆಲವು ಕಡೆ ರೂಢಿಯಲ್ಲಿತ್ತು. ಮಕ್ಕಳು ಬೆಳೆಯುವುದೇ ಎಣ್ಣೆಯಲ್ಲಿ, ನೀರಿನಲ್ಲಿ, ನಿ¨ªೆಯಲ್ಲಿ ಅನ್ನುವ ಮಾತಿತ್ತು. ಇಂಥ ತೊಟ್ಟಿಲುಗಳಿಗಿಂತ ಪ್ರಶಸ್ತ ಸ್ಥಳ ಅಕ್ಕಳೆಗಳಿಗೆ ಇನ್ನಾ$Âವುದಿರಲು ಸಾಧ್ಯ? ಊಹೆಯಾಗಿರುತ್ತಿದ್ದುದು ಕೆಲವೊಮ್ಮೆ ತೊಟ್ಟಿಲು ಝಾಡಿಸಿದಾಗ ಸತ್ಯವೂ ಆಗಿರುತ್ತಿತ್ತೆಂಬುದು ಕೇಳಿಕೆ ಮಾತು. ಹತ್ತಿ ಸೀರೆಗಳಿಗೂ, ತೊಟ್ಟಿಲ ಶಿಶುಗಳಿಗೂ ಅವಿನಾಭಾವ ಸಂಬಂಧ ಇರುವುದರಿಂದ ಈ ಪ್ರಸ್ತಾಪ.
ಅಮ್ಮ ಉಟ್ಟ ಹತ್ತಿಸೀರೆಯ ಬಹೂಪಯೋಗ ಇನ್ನೂ ಇದೆ. ಕೈಕಾಲು ತೊಳೆಸಿದ ಮಕ್ಕಳನ್ನು ಸೊಂಟಕ್ಕೇರಿಸಿಕೊಂಡು ಕೈಕಾಲು ವರೆಸಲು, ಮೂಗು ಸೋರುವ ಮಕ್ಕಳನ್ನು ಹಿಡಿದು ಮೂಗೊರೆಸಲು, ಹಾಲುಕ್ಕುವಾಗ ತಟ್ಟನೆ ಕೈಬಟ್ಟೆ ಸಿಗದಿ¨ªಾಗ ಒಲೆಯ ಮೇಲಿನ ಪಾತ್ರೆ ಕೆಳಗಿಳಿಸಲು, ಸ್ನಾನಕ್ಕೆ ಕರೆದೊಯ್ದ ಮಕ್ಕಳ ತಲೆ ವರೆಸಲು- ಟವೆಲನ್ನು ಮರೆತು ಹೋಗಿ¨ªಾಗ, ಹಾಸಲಷ್ಟೇ ಅಲ್ಲ, ಕಂಬಳಿಯ ಒಳಗೆ ಜೋಡಿಸಿಕೊಂಡು ಹೊದೆಯಲು, ಚೊಕ್ಕ ಮಾಡಿದ ಕಾಳುಕಡಿಗಳನ್ನು ಒಣಗಿಸಲು, ಹೀಗೆ ಅವರವರ ಅಗತ್ಯಕ್ಕೆ ತಕ್ಕಂತೆ ಒದಗಿ ಬರುತ್ತಿತ್ತು ಹತ್ತಿಸೀರೆ. ಬೆಳೆದ ಗಂಡುಮಕ್ಕಳು ಉಂಡು ಕೈ ತೊಳೆದ ನಂತರ ಅಮ್ಮನ ಸೀರೆ ಸೆರಗಿಗೆ ಕೈ ವರೆಸಿ ಕೃತಾರ್ಥರಾಗುತ್ತಿದ್ದುದು ತಮ್ಮ ಎದೆಯಾಳದ ಪ್ರೀತಿ ತೋರಿಸುತ್ತಿದ್ದ ಒಂದು ಪರಿಯೇ? ಅನುಮಾನ ಯಾಕೆ?
– ವಸುಮತಿ ಉಡುಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.