![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, May 1, 2017, 9:22 AM IST
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಮಲ್ಟಿಪ್ಲೆಕ್ಸ್‌ಗಳಿಗೆ 200 ರೂಪಾಯಿ ಏಕ ರೂಪದ ಟಿಕೆಟ್ ದರ ನಿಗದಿ ಪಡಿಸಿ ಕನ್ನಡ ಚಿತ್ರ ರಸಿಕರ ಮೆಚ್ಚುಗೆಗೆ ಪಾತ್ರವಾಗಿದ್ದೇನೋ ಸರಿ. ಆದರೆ, ಟಿಕೆಟ್ ದರ ನಿಯಂತ್ರಿಸುವ ಆದೇಶವನ್ನು ಯಾವ ಇಲಾಖೆ ಹೊರಡಿಸಬೇಕು ಎನ್ನುವುದರ ಬಗ್ಗೆ ಈಗ ಜಿಜ್ಞಾಸೆ ಮೂಡಿದ್ದು, ಆದೇಶ ಜಾರಿಯಾಗುವುದು ವಿಳಂಬವಾಗುತ್ತಿದೆ.
200 ರೂಪಾಯಿಗೆ ಟಿಕೆಟ್ ದರ ನಿಗದಿಗೊಳಿಸುವ ಆದೇಶದ ಕಡತ ಒಂದು ಇಲಾಖೆಯಿಂದ ಮತ್ತೂಂದು ಇಲಾಖೆಗೆ ಅಲೆದಾಡುತ್ತಿದ್ದು, ಇದರ ಪರಿಣಾಮ ಬಜೆಟ್ ಅನುಷ್ಠಾನಕ್ಕೆ ಬಂದು ಒಂದು ತಿಂಗಳು ಪೂರ್ಣಗೊಂಡರೂ ಟಿಕೆಟ್ ಇಳಿಕೆಯ ಲಾಭ ಮಾತ್ರ ಚಿತ್ರಪ್ರೇಮಿಗಳಿಗೆ ಸಿಕ್ಕಿಲ್ಲ.
ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದ ಈ ಆದೇಶವನ್ನು ಯಾವ ಇಲಾಖೆ ಜಾರಿಗೊಳಿಸಬೇಕು ಎನ್ನುವ ಕುರಿತಂತೆ ಸರಕಾರದ ಇಲಾಖೆಗಳ ನಡುವೆ ತೀವ್ರ ಗೊಂದಲ ಸೃಷ್ಟಿಯಾಗಿದೆ. ಮೇಲ್ನೋಟಕ್ಕೆ ಇದು. ವಾರ್ತಾ ಮತ್ತು ಪ್ರಚಾರ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಈ ಇಲಾಖೆಯು ಮಲ್ಟಿಫ್ಲೆಕ್ಸ್ ಟಿಕೆಟ್ ದರ ನಿಗದಿ ತಮಗೆ ಸಂಬಂಧಿಸಿಲ್ಲ ಎಂದು ಮುಖ್ಯಮಂತ್ರಿಗಳ ಸಹಿ ಇರುವ ಕಡತವನ್ನು ಹಣಕಾಸು ಇಲಾಖೆಗೆ ಕಳುಹಿಸಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಪರಿಶೀಲಿಸಿದ ಹಣಕಾಸು ಇಲಾಖೆ ಇದು ತಮಗೆ ಸಂಬಂಧಿಸಿದ್ದಲ್ಲ , ಕರ್ನಾಟಕ ಸಿನಿಮಾಟೋಗ್ರಾಫಿ ಕಾಯ್ದೆ ಪ್ರಕಾರ ಗೃಹ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ಅಭಿಪ್ರಾಯಿಸಿ, ಕಡತವನ್ನು ಪೊಲೀಸ್ ಇಲಾಖೆಗೆ ಕಳುಹಿಸಿದೆ ಎನ್ನಲಾಗುತ್ತಿದೆ. ಮೂರು ಇಲಾಖೆಗಳನ್ನು ಸುತ್ತಾಡಿ ತಮ್ಮ ಬಳಿ ಬಂದಿರುವ ಈ ಕಡತದ ಆದೇಶ ಜಾರಿಗೊಳಿಸಲು ಗೃಹ ಇಲಾಖೆ ಕೂಡ ಸಿದ್ಧವಿಲ್ಲ ಎನ್ನಲಾಗುತ್ತಿದೆ. ಮಲ್ಟಿಫ್ಲೆಕ್ಸ್‌ಗಳಿಗೆ ಅನ್ವಯವಾಗುವಂತೆ ಸರ್ಕಾರದ ವಿವಿಧ ಇಲಾಖೆಗಳು ಹೊರಡಿಸಿದ ಆದೇಶಗಳನ್ನು ಕಾನೂನು ಪ್ರಕಾರ ಪಾಲಿಸಲಾಗುತ್ತಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಗಮನಿಸುವುದು ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರಗಳನ್ನು ನೋಡಿಕೊಳ್ಳುವುದು ತಮ್ಮ ಇಲಾಖೆಯ ಜವಾಬ್ದಾರಿಯಾಗಿದೆ. ದರ ನಿಗದಿ ವಿಷಯವು ತಮ್ಮ ಇಲಾಖೆಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಭಿಪ್ರಾಯಿಸಿ ಕಡತವನ್ನು ಹಣಕಾಸು ಇಲಾಖೆಗೆ ವಾಪಸ್‌ಕಳುಹಿಸಿದೆ ಎನ್ನಲಾಗುತ್ತಿದೆ.
ಯಾಕೆ ಹೀಗೆ ?:
ಮಲ್ಟಿಪ್ಲೆಕ್ಸ್‌ಗಳು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳ ಹಿಡಿತದಲ್ಲಿರುವುದರಿಂದ ಸರ್ಕಾರ ಯಾವುದೇ ರೀತಿಯ ಆದೇಶ ಹೊರಡಿಸಿದರೂ, ಮಲ್ಟಿಫ್ಲೆಕ್ಸ್ ಮಾಲೀಕರು, ಹೈಕೋರ್ಟ್ ಮೆಟ್ಟಿಲೇರಿ, ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ತರುತ್ತಾರೆ. ಆ ನಂತರ, ಅದರ ವಿರುದ್ಧ ಕಾನೂನು ಹೋರಾಟ ಮಾಡುವ ಗೊಡವೆ ನಮಗೇಕೆ ಎಂಬ ಅಭಿಪ್ರಾಯ ಇಲಾಖೆಗಳ ಹಿಂಜರಿತಕ್ಕೆ ಕಾರಣ ಎನ್ನಲಾಗುತ್ತಿದೆ. ಅಲ್ಲದೇ, ಈ ರೀತಿಯ ಆದೇಶ ಹೊರಡಿಸುವ ಅಧಿಕಾರದ ಬಗ್ಗೆಯೇ ಇಲಾಖೆಗಳಲ್ಲಿ ಗೊಂದಲ ಇದ್ದು, ಮಲ್ಟಿಫ್ಲೆಕ್ಸ್ ಗಳಲ್ಲಿ ಟಿಕೆಟ್ ದರ ನಿಗದಿಯ ಕಡತ ಇಲಾಖೆಯಿಂದ ಇಲಾಖೆಗೆ ಓಡಾಡುತ್ತಿದೆ ಎನ್ನಲಾಗುತ್ತಿದೆ.
ಬಾಹುಬಲಿ ಎಫೆಕ್ಟ್ ?:
ರಾಜ್ಯ ಸರ್ಕಾರ ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಕಡಿಮೆ ಮಾಡಲು ತೀರ್ಮಾನ ಮಾಡುವ ಸಂದರ್ಭದಲ್ಲಿಯೇ ತೆಲುಗಿನ ಬಹುಕೋಟಿ ಬಜೆಟ್‌ನ ಬಾಹುಬಲಿ ಚಿತ್ರ ಬಿಡುಗಡೆಗೆ ಸಿದ್ದವಾಗಿತ್ತು. ಆ ಸಂದರ್ಭದಲ್ಲಿ ಮಲ್ಟಿಫ್ಲೆಕ್ಸ್‌ಗಳಲ್ಲಿ ದರ ಕಡಿಮೆ ಮಾಡಿದರೆ, ಬಾಹುಬಲಿ ಕಲೆಕ್ಷನ್‌ಗೆ ಸಾಕಷ್ಟು ಹೊಡೆತ ಬೀಳುತ್ತೆ ಎಂಬ ಕಾರಣಕ್ಕೆ ಮಲ್ಟಿಫ್ಲೆಕ್ಸ್‌ಗಳ ಲಾಬಿಯೂ ಈ ಆದೇಶ ವಿಳಂಬವಾಗಲು ಕಾರಣವಿರಬಹುದು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಒಟ್ಟು ನಾಲ್ಕು ಪ್ರಮುಖ ಇಲಾಖೆಗಳ ನಡುವೆ ಫುಟ್‌ಬಾಲ್‌ನಂತೆ ಮಲ್ಟಿಫ್ಲೆಕ್ಸ್ ಕಡತ ಅಲೆದಾಡುತ್ತಿದೆ. ಯಾವೊಂದು ಇಲಾಖೆಯೂ ಆದೇಶ ಜಾರಿ ಮಾಡಲು ಸಿದ್ದವಿಲ್ಲದ ಕಾರಣ ಕಡತ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಗಾಹನೆಗೆ ಹೋಗಲಿದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿಗಳು ಉನ್ನತ ಅಧಿಕಾರಿಗಳ ಅಭಿಪ್ರಾಯ ಮತ್ತು ಕಾನೂನು ತಜ್ಞರ ಸಲಹೆ ಪಡೆದು ಟಿಕೆಟ್ ದರ ನಿಗದಿಗೊಳಿಸುವ ಅಧಿಕೃತ ಆದೇಶವನ್ನು ಜಾರಿಗೊಳಿಸಲು ಕಡತ ಅಲೆದಾಡುತ್ತಿರುವ ಯಾವುದಾದರೊಂದು ಇಲಾಖೆಗೆ ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ 200 ರೂಪಾಯಿ ದರ ನಿಗದಿ ಮಾಡಲು ಈಗಾಗಲೇ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ನಾಲ್ಕೈದು ದಿನ ಸಾಲು ಸಾಲು ರಜೆ ಬಂದಿರುವುದರಿಂದ ಅಧಿಕೃತ ಆದೇಶ ಮಾಡುವುದು ವಿಳಂಬವಾಗಿದೆ. ಈಗಾಗಲೇ ಫೈಲ್ ಹಣಕಾಸು ಇಲಾಖೆಯಲ್ಲಿದೆ. ಅಧಿಕಾರಿಗಳು ಮುಖ್ಯಮಂತ್ರಿ ಅನುಮತಿ ಪಡೆದು ಮಂಗಳವಾರ ಆದೇಶ ಮಾಡುವ ಸಾಧ್ಯತೆ ಇದೆ.
– ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ
– ಶಂಕರ ಪಾಗೋಜಿ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.