ಕಾಂಗ್ರೆಸ್‌ನತ್ತ ಬಿಜೆಪಿ, ಜೆಡಿಎಸ್ ನಾಯಕರ ದಂಡು
Team Udayavani, May 3, 2017, 3:31 PM IST
ಮಂಗಳೂರು: ಬಿಜೆಪಿ ಹಾಗೂ ಜೆಡಿಎಸ್‌ನಿಂದ ಹಾಲಿ ಶಾಸಕರು ಸೇರಿದಂತೆ ಹಲವು ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ಬಯಸಿದ್ದು ಸೂಕ್ತ ಕಾಲದಲ್ಲಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹಸಚಿವ ಡಾ| ಜಿ. ಪರಮೇಶ್ವರ್ ಹೇಳಿದರು.
ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಬರಲು ಇಚ್ಛಿಸಿರುವ ಬಿಜೆಪಿ, ಜೆಡಿಎಸ್ ಶಾಸಕರು ಈಗಲೇ ಸೇರ್ಪಡೆಯಾದರೆ ಅವರು ರಾಜೀನಾಮೆ ಕೊಡಬೇಕಾಗುತ್ತದೆ ಮತ್ತು ಮತ್ತೆ ಚುನಾವಣೆ ನಡೆಯಬೇಕಾಗುತ್ತದೆ. ಆದುದರಿಂದ ಅವರ ಪಟ್ಟಿಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದ್ದು ಈ ಬಾರಿಯ ವಿಧಾನಸಭೆಯ ಅವಧಿ ಕೊನೆಗೊಳ್ಳಲು 6 ತಿಂಗಳು ಬಾಕಿ ಇರುವಾಗ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗುವುದು. ಜೆಡಿಎಸ್‌ನಲ್ಲಿ ಅತೃಪ್ತಿಗೊಂಡಿರುವ ಕೆಲವು ಶಾಸಕರು ಈಗಾಗಲೇ ಕಾಂಗ್ರೆಸ್‌ನ ಜತೆಗಿದ್ದಾರೆ ಎಂದರು.
2018ರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಈಗಾಗಲೇ ಪ್ರಕ್ರಿಯೆಗಳು ಆರಂಭಗೊಂಡಿವೆ. ಪಕ್ಷದಲ್ಲಿ ಈಗಾಗಲೇ 125 ಮಂದಿ ಹಾಲಿ ಶಾಸಕರು ಇದ್ದಾರೆ. ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಿಸಲಾಗಿದ್ದು ಅವರು ಸಮೀಕ್ಷೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ಪರಮೇಶ್ವರ್ ವಿವರಿಸಿದರು.
ಕೆಪಿಸಿಸಿ ಅಧ್ಯಕ್ಷತೆ: ಹೈಕಮಾಂಡ್ ನಿರ್ಧಾರಕ್ಕೆ ಬದ್ಧ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಬದಲಾವಣೆ ಪಕ್ಷದ ವರಿಷ್ಠ ಮಂಡಳಿಗೆ ಬಿಟ್ಟದ್ದು. ಅವರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಡಾ| ಪರಮೇಶ್ವರ್ ತಿಳಿಸಿದರು.
ಸದಸ್ಯತ್ವ ನೋಂದಣಿ ಕಾರ್ಯ ಮೇ 15ಕ್ಕೆ ಕೊನೆಗೊಳ್ಳಲಿದ್ದು ಬಳಿಕ ಸಾಂಸ್ಥಿಕ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಪದಾಧಿಕಾರಿಗಳ ಆಯ್ಕೆಗೆ ಪಂಚಾಯತ್, ಬ್ಲಾಕ್, ಜಿಲ್ಲಾ ಹಾಗೂ ರಾಜ್ಯಮಟ್ಟದ ಚುನಾವಣೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷತೆ ಚುನಾವಣೆ ಮೂಲಕವೂ ನಡೆಯಬಹುದು ಇಲ್ಲವೆ ಹೈಕಮಾಂಡಿನಿಂದ ನೇಮಕ ಆದೇಶವೂ ಬರಬಹುದು ಎಂದರು.
ರಾಜ್ಯದಲ್ಲಿ ಪಕ್ಷದ ಕೆಪಿಸಿಸಿ ಉಸ್ತುವಾರಿ ಬದಲಾವಣೆ ಒಂದು ಸಾಮಾನ್ಯ ಪ್ರಕ್ರಿಯೆ. ಬಹಳಷ್ಟು ಲೆಕ್ಕಚಾರಗಳನ್ನು ನಡೆಸಿ ಪಕ್ಷದ ಪರಿಷ್ಠ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಹೊಸದಾಗಿ ನೇಮಕಗೊಂಡಿರುವ ವೇಣುಗೋಪಾಲ್ ಅವರು ಯುವಕರು. ನೆರಯ ರಾಜ್ಯದವರು. ಯುವಕಾಂಗ್ರೆಸ್ ಅಧ್ಯಕ್ಷನಾಗಿ, ಸಚಿವರಾಗಿ ಅನುಭವ ಹೊಂದಿದವರು ಎಂದವರು ತಿಳಿಸಿದರು.
ಎಸ್.ಎಂ. ಕೃಷ್ಣ ಅವರು ಬಿಜೆಪಿಗೆ ಸೇರ್ಪಡೆಗೊಂಡಿರುವುದರರಿಂದ ಕಾಂಗ್ರೆಸ್ ಮೇಲೆ ಯಾವ ಪರಿಣಾಮ ಬೀರಿದೆ ಎಂಬ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು ಇದಕ್ಕೆ ನಂಜನಗೂಡು, ಗುಂಡ್ಲುಪೇಟೆ ಚುನಾವಣಾ ಫಲಿತಾಂಶ ಉತ್ತರ ನೀಡಿದೆ. ಇದು ನಮಗೂ ಅನೇಕ ಪಾಠಗಳನ್ನು ಕಲಿಸಿದೆ. 2018ರ ಚುನಾವಣೆಗೆ ಇದರಿಂದ ಬಹಳಷ್ಟು ತಿಳಿದುಕೊಳ್ಳಲು ಇದೆ ಎಂದು ನುಡಿದರು.
ಜೆಡಿಎಸ್ ಸೇರುವಂತೆ ವಿಶ್ವನಾಥ್‌ಗೆ ಕುಮಾರ ಸ್ವಾಮಿ ನೀಡಿರುವ ಆಹ್ವಾನಕ್ಕೆ ಪ್ರತಿಕ್ರಿಯಿಸಿದ ಅವರು
ವಿಶ್ವನಾಥ್ ಹಿರಿಯ ಕಾಂಗ್ರೆಸಿಗರು. ಅವರು ನಮ್ಮ ಜತೆಯಲ್ಲೇ ಇರಬೇಕು. ಸಣ್ಣಪುಟ್ಟ ತಪ್ಪುಗಳಿದ್ದರೂ.ಅದನ್ನು ಸರಿಪಡಿಸಲು ಸಾಧ್ಯವಿದೆ ಎಂದರು.
ಡಾ| ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬುದಾಗಿ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರ ಹೇಳಿಕೆ ಬಗ್ಗೆ ಉತ್ತರಿಸಿದ ಸಚಿವರು ಅದು ಅವರ ಅಭಿಪ್ರಾಯ ಎಂದರು. ಬಿಜೆಪಿಯ ಭಿನ್ನಮತ ಅವರಿಗೆ ಸಂಬಂಧಪಟ್ಟದ್ದು. ಆ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ ಎಂದರು.
ಸಚಿವ ಬಿ. ರಮಾನಾಥ ರೈ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ಗೇರು ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಡಿಸಿಸಿ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕಣಚೂರು ಮೋನು ಉಪಸ್ಥಿತರಿದ್ದರು.
ಕೆಂಪು ದೀಪ: ಲಾಭವೂ ಇಲ್ಲ; ನಷ್ಟವೂ ಇಲ್ಲ
ವಿಐಪಿಗಳ ಕಾರಿನ ಮೇಲೆ ಇರುವ ಕೆಂಪು ದೀಪ ತೆರವು ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಾ| ಜಿ. ಪರಮೇಶ್ವರ್ ಅವರು ನಾನು ತೆಗೆಸಿದ್ದೇನೆ. ಸರಕಾರ ಹಾಕಬಹುದು ಎಂದರೆ ಹಾಕಿಸುತ್ತೇನೆ. ಇದಕ್ಕೆ ಅಷ್ಟೊಂದು ಮಹತ್ವ ನೀಡುವ ಅಗತ್ಯ ಇಲ್ಲ. ಇದರಿಂದ ಲಾಭವೂ ಇಲ್ಲ; ನಷ್ಟವೂ ಇಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.