ಕುಡಿದ ಅಮಲಲ್ಲಿ ಪತಿಗೇ ಗುಂಡು ಹಾರಿಸಿದ ಪತ್ನಿ
Team Udayavani, May 6, 2017, 11:29 AM IST
ಆನೇಕಲ್: ಮದ್ಯದ ಅಮಲಿನಲ್ಲಿದ್ದ ದಂಪತಿ ನಡುವೆ ಜಗಳ ನಡೆದು ಪತ್ನಿಯೇ ಪತಿ ಮೇಲೆ ಮೂರು ಸುತ್ತು ಗುಂಡು ಹಾರಿಸಿದ ಘಟನೆ ಶುಕ್ರವಾರ ಸಂಜೆ ಆನೇಕಲ್‌ನ ಸೂರ್ಯನಗರದಲ್ಲಿ ನಡೆದಿದೆ.
ಘಟನೆಯಲ್ಲಿ “ಯೆಸ್ ಫೆಸಿಲಿಟಿ’ ಮತ್ತು ಮ್ಯಾನೆಜ್‌ಮೆಂಟ್ ಸಂಸ್ಥೆಯ ಸಿಇಒ ಆಗಿರುವ ಎಚ್‌ಎಸ್‌ಆರ್ ಲೇಔಟ್‌ನ ಹರಳೂರು ನಿವಾಸಿ ಸಾಯಿರಾಮ್ ಗಾಯಗೊಂಡಿದ್ದು, ಅವರನ್ನು ನಗರದ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಪತ್ನಿ ಹಂಸವೇಣಿಯನ್ನು ಸೂರ್ಯನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ದಂಪತಿ ಹೋಟೆಲ್‌ವೊಂದರಲ್ಲಿ ಕಂಠಪೂರ್ತಿ ಮದ್ಯ ಸೇವಿಸಿ ಬಳಿಕ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಪತ್ನಿ ಹಂಸವೇಣಿ ಮೇಲೆ ಸಾಯಿರಾಮ್ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಪ್ರತಿಯಾಗಿ ಹಂಸವೇಣಿ ಮೂರು ಸುತ್ತು ಗುಂಡು ಹಾರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?: ವಿಕೆಂಡ್ ಹಿನ್ನೆಲೆಯಲ್ಲಿ ದಂಪತಿ ಯಡವನಹಳ್ಳಿ ಸಮೀಪದ ಮ್ಯಾಕ್ಸ್ ಹೋಟೇಲ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಊಟಕ್ಕೆಂದು ತೆರಳಿದ್ದಾರೆ. ಊಟದ ಜತೆಗೆ ಸಾಯಿರಾಮ್ ಮತ್ತು ಹಂಸವೇಣಿ ಮದ್ಯವನ್ನು ಕಂಠಪೂರ್ತಿ ಕುಡಿದ್ದಿದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳವಾಗಿದೆ. ನಂತರ ಹೋಟೆಲ್‌ನ ಸಿಬ್ಬಂದಿ ಇಬ್ಬರನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ.
ಹೀಗೆ ತಮ್ಮ ಫಾರ್ಚೂನರ್ ಕಾರಿನಲ್ಲಿ ಯಡವನಹಳ್ಳಿಯಿಂದ ಬೆಂಗಳೂರು ಮಾರ್ಗವಾಗಿ ಬರುವಾಗ, ಕಾರು ಚಾಲನೆ ಮಾಡುತ್ತಿದ್ದ ಹಂಸವೇಣಿ ಮುಖಕ್ಕೆ ಸಾಯಿರಾಮ್ ಹಲ್ಲೆ ನಡೆಸಿದ್ದು. ರಕ್ತ ಬಂದಿದೆ. ಇದರಿಂದ ಕೋಪಗೊಂಡ ಆಕೆ, ನಡು ರಸ್ತೆಯಲ್ಲೇ ಕಾರು ನಿಲ್ಲಿಸಿ ಜಗಳ ತೆಗೆದಿದ್ದಾರೆ. ಇದರಿಂದ ಬೇಸತ್ತ ಸಾಯಿರಾಮ್ ಸುಮಾರು ಒಂದು ಕಿ.ಮೀಟರ್‌ವರೆಗೆ ಓಡಿದ್ದಾನೆ. ಬಳಿಕ ಚಂದಾಪುರ ಮಾರ್ಗದ ಬಸ್ ಹತ್ತಿದ್ದಾನೆ.
ಇಷ್ಟಕ್ಕೆ ಸುಮ್ಮನಾಗದ ಪತ್ನಿ ಹಂಸವೇಣಿ ಪತಿ ಹತ್ತಿದ್ದ ಬಸ್‌ನ್ನು ಕಾರಿನಲ್ಲಿ ಹಿಂಬಾಲಿಸಿ ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಗೇಟ್ ಬಳಿ ಸಿನಿಮಾ ಮಾದರಿಯಲ್ಲಿ ಬಸ್‌ನ ಮಂದೆ ಕಾರನ್ನು ನಿಲ್ಲಿಸಿ, ಬಲವಂತದಿಂದ ಸಾಯಿರಾಮ್‌ನನ್ನು ಕೆಳಗೆ ಇಳಿಸಿದ್ದಾಳೆ. ಅಲ್ಲದೇ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿದ್ದ ಗನ್ ತೆಗೆದು ಸಾಯಿರಾಮ್ ಮೇಲೆ ಮೂರು ಸುತ್ತಿನ ಗುಂಡು ಹಾರಿಸಿದ್ದಾಳೆ. ಗುಂಡುಗಳು ಸಾಯಿರಾಮ್‌ನ ಹೊಟ್ಟೆಗೆ ತಗುಲಿದ್ದು, ತೀವ್ರ ರಕ್ತಸ್ರಾವವಾಗಿದೆ. ಆಗ ಸ್ಥಳೀಯರು ನೆರವಿಗೆ ಧಾವಿಸಿ, 108 ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಂಬ್ಯುಲೆನ್ಸ್ ಹತ್ತಿಸದಂತೆ ಗಲಾಟೆ: 108 ಸಿಬ್ಬಂದಿ ಗಾಯಾಳು ಪತಿ ಸಾಯಿರಾಮ್ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ರವಾನಿಸಲು ಮುಂದಾದ ವೇಳೆಯಲ್ಲಿ ಸಾರ್ವಜನಿಕರ ಜತೆಯಲ್ಲಿಯೇ ಹಂಸವೇಣಿ ಜಗಳ ಮಾಡಿದ್ದಾರೆ. ಅಲ್ಲದೇ ಆತನನ್ನು ಆಸ್ಪತ್ರೆಗೆ ಸೇರಿದಂತೆ ಮದ್ಯದ ಅಮಲಿನಲ್ಲಿಯೇ ಕೂಗಾಡಿದ್ದಾಳೆ. ನಿಂತು ಕೊಳ್ಳಲು ಸಾಧ್ಯವಾಗದೆ ರಸ್ತೆಯಲ್ಲಿ ಕುಳಿತು ಚೀರಾಡಿದ್ದಾಳೆ. ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಸ್ಥಳೀಯರು ಆಕೆಯನ್ನು ಹಿಡಿದುಕೊಂಡು ಸಾಯಿರಾಮ್‌ನನ್ನು ಆ್ಯಂಬುಲೆನ್ಸ್‌ನಲ್ಲಿ ರವಾನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಯಿರಾಮ್ ಮತ್ತು ಹಂಸವೇಣಿ ಇಬ್ಬರ ಬಳಿಯೂ ಪರವಾನಗಿ ಹೊಂದಿರುವ ಗನ್ ಇದೆ ಎಂದು ತಿಳಿದು ಬಂದಿದೆ. ಕುಡಿದ ಅಮಲಿನಲ್ಲೆ ಇರುವ ಹಂಸವೇಣಿ ಪೋಲಿಸರಿಗೆ ಮಾಹಿತಿ ನೀಡಲು ನಿರಾಕರಿಸಿ ಅವರೊಂದಿಗೂ ಅಸಭ್ಯವಾಗಿ ವರ್ತಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೂರ್ಯನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.