ಒಡಲ ಬೆಂಕಿಯಲೇ ಬೆಳಕು ಹಚ್ಚಿದವರು


Team Udayavani, May 7, 2017, 3:45 AM IST

SAPT-8.jpg

ಆಗಸದ ಚಂದ್ರನೇ ತೊಟ್ಟು ಕಳಚಿ ನೆಲಕುರುಳಿ ಎದ್ದು ನಡೆದು ಬರುತ್ತಿರುವನೋ ಎಂಬಂತೆ, ಆ ವೈದ್ಯೆ ಎಂದಿನಂತೆ ಅಂದು ಕೂಡ ಸರಿ ಸುಮಾರು ಎಂಟು ಗಂಟೆಯ ರಾತ್ರಿ ಹೊತ್ತಲ್ಲಿ ಮೈಸೂರಿನ ಜನನಿಬಿಡ ಹಾದಿಯಲ್ಲಿ ಚಲಿಸತೊಡಗಿದ್ದಳು. ಆಕೆಯ ಮೊಗದಲ್ಲಿ ತುಳುಕುತ್ತಿದ್ದ ಸಂಸ್ಕಾರವಂತ ಸಾತ್ವಿಕ ಕಳೆಯೇ ಸುತ್ತ ದೇದಿಪ್ಯಮಾನವಾಗಿ ಬೆಳಗುತ್ತಿದೆಯೋ ಏನೋ ಎಂಬ ಹಾಗೆ ಬೀದಿದೀಪ, ಅಂಗಡಿದೀಪ, ಮನೆದೀಪಗಳ ವಿದ್ಯುತ್‌ ಬೆಳಕಲಿ ಪೇಟೆಹಾದಿ ತೊಯ್ದು ನಿಂತಿತ್ತು.  ದಿನದ ಸಂತೆವ್ಯಾಪಾರ ವ್ಯವಹಾರದ ಹಗಲುವೇಷಕ್ಕೆ ನಾಟಕಕ್ಕೆ ಅಂಕದ ಪರದೆಯೆಳೆದು ತಮ್ಮ ತಮ್ಮ ಗೂಡು ಸೇರುವ ತವಕದಲ್ಲಿ ನಡೆಯುತ್ತಿರುವ ಜನಜಾತ್ರೆಯ ನಡುವೆ ಹೆಜ್ಜೆ ಹಾಕುತ್ತಿದ್ದ ವೈದ್ಯೆಗೆ ಸುಮಾರು ಇಪ್ಪತ್ತು ಹೆಜ್ಜೆ ದೂರದಲ್ಲಿ ತನ್ನೆರಡೂ ಕೈಗಳನ್ನು ಬೆನ್ನ ಹಿಂಭಾಗದಲ್ಲಿ ಮುಚ್ಚಿಟ್ಟುಕೊಂಡು ರಾಹುವಿನಂತೆ ನಿಂತಿದ್ದ  ಆತ ಸ್ಪಷ್ಟವಾಗಿ ಕಾಣಿಸಿದ್ದ. ಒಮ್ಮೆ ಆಕೆಯ ಹೆಜ್ಜೆಗಳು ಮುನ್ನಡೆಯಲು ಒಪ್ಪದೆ ತಡವರಿಸಿದವಾದರೂ ಸುತ್ತ ಜತೆಜತೆಯೇ ಹೆಜ್ಜೆಹಾಕುತ್ತಿದ್ದ ಜನತೆ ಎದೆಯಲ್ಲಿ ಧೈರ್ಯ ತುಂಬಿತ್ತು. ಆತನನ್ನು ಇನ್ನೇನು ದಾಟಬೇಕು ಎಂಬಷ್ಟರಲ್ಲಿ ಯಾವುದೋ ದ್ರವವಸ್ತುವನ್ನು ಆತ ಎಡಬದಿಯಿಂದ ಆಕೆಯ ಚಂದ್ರಮೊಗಕ್ಕೆ ರಪ್ಪನೆ ಎರಚಿ ಓಡಿ ಹೋಗಿದ್ದ. ಅನಿರೀಕ್ಷಿತವಾಗಿ ಸಿಡಿಲಿನಂತೆ ಅಪ್ಪಳಿಸಿದ ಈ ಘಟನೆಯಿಂದಾಗಿ ಆಕೆ ಗ್ರಹಣ ಹಿಡಿದ ಚಂದ್ರನಂತೆ ಕೆಳಗೆ ಕುಸಿದು ಬಿದ್ದರು.

ವೃತ್ತಿಯಲ್ಲಿ ವೈದ್ಯೆಯಾಗಿದ್ದ ಆಕೆಗೆ ಆತ ತನ್ನ ಮೇಲೆ ಎರಚಿರುವುದು ಆ್ಯಸಿಡ್‌ ಎಂಬುದು ಚರ್ಮವನ್ನು ಸೋಂಕಿದ ಕ್ಷಣಮಾತ್ರದಲ್ಲೆ ಅರಿವಾಗಿತ್ತು. ಬೆಂದು ಕರಗತೊಡಗಿದ ಎಡ ಕಣ್ಣು , ಕಿವಿ ಮೂಗು ಚರ್ಮ, ಒಣಗತೊಡಗಿದ ನಾಲಗೆ… ಪಂಚೇಂದ್ರಿಯಗಳನ್ನು ಸುಡುತ್ತಿರುವ ಯಮಯಾತನೆಯೊಳಗಿಂದಲೇ ಎದ್ದು ನಿಂತ ಜೀವದಾಸೆ ಸಹಾಯಕ್ಕಾಗಿ ಜನರನ್ನು ಅಂಗಲಾಚಿ ಬೇಡತೊಡಗಿತ್ತು. ಆದರೆ ಕಟಕಟೆಯಲ್ಲಿ ಸಾಕ್ಷಿಯಾಗಬೇಕಾದ ಭಯದಲ್ಲಿ ಯಾರೂ ಸಹಾಯಕ್ಕೆ ಮುಂದಾಗಲೇ ಇಲ್ಲ. ಬರುವ ಹೋಗುವ ವಾಹನಗಳನ್ನು ನಿಲ್ಲಿಸಲು ನೋಡಿದರೂ ಪ್ರಯೋಜನವಾಗಲಿಲ್ಲ. ಆ್ಯಸಿಡ್‌ನ‌ ಪರಿಣಾಮ ಕಣ್ಣು , ಚರ್ಮದ ಮೇಲೆ ತೀವ್ರವಾಗದಂತೆ ತೊಳೆದುಕೊಳ್ಳಲು ಆ ಕ್ಷಣಕ್ಕೆ ನೀರು ಬೇಕಾಗಿತ್ತು. ನಿತ್ಯ ಒಡನಾಟ ಚೆನ್ನಾಗಿದ್ದ ಜನವಾಸವಿರುವ ಜಾಗವದು, ಮನೆಗಳ ಮುಂದೆ ಹೆಂಗಸರು ಕುಳಿತಿದ್ದರು. ಸಹಾಯ ಬೇಡ, ನೀರಾದರೂ ಕೊಡಿ ಎಂದು ಬೇಡುತ್ತ ತಮ್ಮತ್ತ ಬರುತ್ತಿರುವ  ಬಸವಳಿದ ಹೆಜ್ಜೆಗಳನ್ನು ಕಂಡದ್ದೇ ಹೊರಗಿದ್ದವರೆಲ್ಲ ಒಳಹೋಗಿ ಬಾಗಿಲೆಳೆದುಕೊಂಡರು. ಹೃದಯದ ಬಾಗಿಲನ್ನೆ ಮುಚ್ಚಿಕೊಂಡ ಸಮಾಜದ ವಾಸ್ತವ ಮುಖದ ದರ್ಶನವಾಗಿತ್ತು ವೈದ್ಯೆಗೆ. 

ಆಕೆಯ ಎದೆಯ ಆಸೆಯು ಧ್ವನಿ ಕಳಕೊಳ್ಳಲಿಲ್ಲ. ಮತ್ತೆ ಬೀದಿಗೆ ಓಡಿ ನಳ್ಳಿಗೆ ಕೈಯೊಡ್ಡಿದರೆ, “ಬಾಯಾರಿತು ಎಂದು ಬಾವಿ ನೀರಿಗೆ ಪೋದೆ, ಬಾವಿಯ ಜಲ ಬತ್ತಿ ಬರಿದಾಯ್ತು ಹರಿಯೇ’ ಎಂದು ದಾಸರ ಪದದ ಸತ್ಯದರ್ಶನ ಅಲ್ಲೂ ಆಗಿತ್ತು, ನಳ್ಳಿಯಲ್ಲಿ ನೀರಿರಲಿಲ್ಲ. ಈಗ ನಿಜವಾಗಿಯೂ ಆಘಾತಗೊಂಡ ವೈದ್ಯೆ ಹೃದಯವನ್ನೇ ಕಳಕೊಂಡ ಸಮಾಜದ ನಡುವೆ ಮಾನವೀಯತೆಯ ಪ್ರತಿಮೆಯೇ ಉರುಳಿದಂತೆ ಕುಸಿದುಬಿದ್ದಳು. ದೇವರೇ, ನನ್ನ ಕರ್ತವ್ಯ ಕಾಲದಲ್ಲಿ ಯಾರ¨ªಾದರೂ ಜೀವವನ್ನು ನಾನು ಉಳಿಸಿದ್ದು ನಿಜವೇ ಆಗಿದ್ದಲ್ಲಿ ಈಗ ನನ್ನನ್ನು ಉಳಿಸು, ಪುನರ್ಜನ್ಮ ಕೊಡು ಎಂದು  ಆಕೆಯ ಘಾಸಿಗೊಂಡ ಹೃದಯ ಒಂದೇ ಸವನೆ ಚೀರತೊಡಗಿತ್ತು. ಆಗಲೆ ದೇವರೇ ಪ್ರತ್ಯಕ್ಷವಾದಂತೆ  ಎಂಟು ಹತ್ತು ವರ್ಷದ ಹುಡುಗನೊಬ್ಬ ವೈದ್ಯೆಯನ್ನು ಕಂಡು “ಡಾಕುó ಮೇಡಂ’ ಎಂದು ಕೂಗುತ್ತ ಓಡಿ ಬಂದ. ವಿಸ್ಮಯವೆಂದರೆ ಆತ ಆಕೆಯೇ ಚಿಕಿತ್ಸೆ ನೀಡಿದ್ದ ರೋಗಿಯೊಬ್ಬನ ಮಗನಾಗಿದ್ದ, ಆಟೋರಿûಾ ತಂದ. ಮಾನವೀಯ ಹೃದಯದ ಚಾಲಕರಿಬ್ಬರೂ ಉರಿ ನೋವು ಸಂಕಟ ಭಯ ಖನ್ನತೆ ಆಘಾತಗಳಿಂದ ತತ್ತರಿಸಿದ್ದ ವೈದ್ಯೆಯನ್ನು ಎತ್ತಿ ಆಟೋದಲ್ಲಿ ಕೂರಿಸಿ ಆಕೆಯ ಮನೆಗೊಯ್ದರು, ಮಾನವೀಯತೆ ಇನ್ನೂ ಪೂರ್ತಿ ಸತ್ತಿಲ್ಲ ಎಂಬುದಕ್ಕೆ  ನಿದರ್ಶನವಾದರು.

ಈ ಘಟನೆ ನಡೆದದ್ದು ಜನವರಿ 11, 2001ರಲ್ಲಿ . ಮೈಸೂರಿನ ಬಿ.ಎಂ.ಶ್ರೀ ರಸ್ತೆಯಲ್ಲಿ ಕ್ಲಿನಿಕ್‌ ಇಟ್ಟಿದ್ದ ಯುವವೈದ್ಯೆ ಡಾ. ಮಹಾಲಕ್ಷ್ಮಿಯ ಮೇಲೆ ಕಾಕದೃಷ್ಟಿ ನೆಟ್ಟಿದ್ದ ಐವತ್ತರ ಆಸುಪಾಸಿನ ಕಾಮುಕ ಚಿಕ್ಕಬಸವಯ್ಯ, ತನ್ನ ವಿರುದ್ಧದ ಆಕೆಯ ನೈತಿಕ, ಅಹಿಂಸಾತ್ಮಕ ಕಾನೂನುಬದ್ಧ ಪ್ರತಿಭಟನೆಗೆ ನೀಡಿದ ಹಿಂಸೆಯ ಘೋರ ಪೈಶಾಚಿಕ ಉತ್ತರವಿದು. ಆದರೆ, ನೀನು ಹೆಣ್ಣಿನ ಮುಖ ಮೈಯನ್ನು ಸುಡಬಲ್ಲೆ, ಆತ್ಮವಿಶ್ವಾಸವನ್ನಲ್ಲ ಎಂಬುದನ್ನು  ಆತನಿಗೂ ಆತನಂಥ ಗೋಮುಖ ವ್ಯಾಘ್ರಗಳಿಗೂ ಸಾವನ್ನೇ ಗೆದ್ದು ಬಂದು ತನ್ನ ಸಮಾಜಮುಖೀ ದಿಟ್ಟ ಬಾಳಿನ ಮೂಲಕ ತೋರಿಸಿಕೊಟ್ಟ ಧೀಮಂತ ಮಹಿಳೆ ಡಾ. ಮಹಾಲಕ್ಷ್ಮಿ.

ಉತ್ಛನ್ಯಾಯಾಲಯದಲ್ಲಿ ವಕೀಲರಾಗಿದ್ದ ನಾರಾಯಣಸ್ವಾಮಿ ಯವರ ಮೂವರು ಹೆಣ್ಣುಮಕ್ಕಳಲ್ಲಿ ಮೊದಲನೆಯವರಾಗಿರುವ ಮಹಾಲಕ್ಷ್ಮಿ ಬಾಲ್ಯದಲ್ಲೇ ವೈದ್ಯೆಯಾಗುವ ಕನಸು ಕಂಡವರು, ಕಷ್ಟಪಟ್ಟು ಓದಿ ನನಸಾಗಿಸಿಕೊಂಡವರು. ಓದು ಮಾತ್ರವಲ್ಲ ಭರತನಾಟ್ಯ, ಕ್ರೀಡೆ ಎಲ್ಲದರಲ್ಲೂ ಮುಂದು. ತಾಯಿ ಬಾಲಸುಬ್ಬಮ್ಮ ಬಡವರಿಗೆ ಮಿಡಿಯುವ ಅಂತಃಕರಣದವರು, ಮಕ್ಕಳ ಹೃದಯಕ್ಕೂ ಅದನ್ನೇ ಹರಿಸಿದವರು. ಶಿಕ್ಷಣ, ಆರೋಗ್ಯ ಮತ್ತು ಹೆಣ್ಣುಮಕ್ಕಳಿಗೆ ಹೆಚ್ಚು ಆದ್ಯತೆ ಕೊಟ್ಟು ಅಕ್ಕರೆಯಿಂದ ಬೆಳೆಸಿದ ಕುಟುಂಬವಿದು ಎಂಬುದಕ್ಕೆ ಮೂರೂ ಹೆಣ್ಣು ಮಕ್ಕಳು ಈಗ ರಾಜ್ಯ ಸರಕಾರದ ಬೇರೆ ಬೇರೆ ಇಲಾಖೆಗಳಲ್ಲಿ ಅಧಿಕಾರಿಗಳಾಗಿರುವುದು ಸಾಕ್ಷಿ.

ಮೈಸೂರ್‌ ಮೆಡಿಕಲ್‌ ಕಾಲೇಜಿನಲ್ಲಿ ಮೆರಿಟ್‌ ಸೀಟ್‌ ಪಡೆದು, ಎಂ.ಬಿ.ಬಿ.ಎಸ್‌. ಮುಗಿಸಿ ಬೆಂಗಳೂರಿನ ಸೈಂಟ್‌ ಜಾನ್ಸ್‌ ಮತ್ತು ಮಾರ್ಥಾ ಆಸ್ಪತ್ರೆಗಳಲ್ಲಿ ವೈದ್ಯೆಯಾಗಿ ಕೆಲಕಾಲ ದುಡಿದು ಹುಟ್ಟೂರು ಮೈಸೂರಿಗೇ ಮರಳಿದ ಮಹಾಲಕ್ಷ್ಮಿಯವರು, ಜೆ.ಪಿ. ನಗರದಲ್ಲಿ ಕಟ್ಟಡವೊಂದರ ಭಾಗವನ್ನು ಬಾಡಿಗೆಗೆ ಪಡೆದು ಸ್ವಂತ ಕ್ಲಿನಿಕ್‌ ತೆರೆದರು. ಅಲ್ಲಿಂದ ಶುರುವಾಯಿತು ನೋಡಿ, ಅದರ ಮಾಲಿಕನ ಕಾಟ ! 

ಆತ ಸಂಸಾರಸ್ಥ. ಪೀಡೆಸಂಕ್ರಾತಿಯಂತೆ ಆಗಾಗ ಅನಾವಶ್ಯಕವಾಗಿ ವಕ್ಕರಿಸತೊಡಗಿದ್ದ ಆತ. ಮಗಳ ವಯಸ್ಸಿನವಳೆಂದೂ ನೋಡದೆ, ಸೌಜನ್ಯಯುತ ಮಾತಿಗೂ ಬಗ್ಗದೆ, ಅಸಭ್ಯ ಅಶ್ಲೀಲ ವರ್ತನೆಗಳಿಂದ ಕಾಡತೊಡಗಿದ. ಸಂಸ್ಕಾರವಂಥ ಕುಟುಂಬದ ಹೆಣ್ಣುಮಗಳು, ತಪ್ಪಿಸಿಕೊಳ್ಳಲು  ಜನಸಂದಣಿ ದಟ್ಟವಾಗಿರುವ ಬಿ.ಎಂ.ಶ್ರೀ ರಸ್ತೆಗೆ ಕ್ಲಿನಿಕ್ಕನ್ನು ವರ್ಗಾಯಿಸಿದರು. “ತಾನು ಗಂಡು! ಏನೂ ಮಾಡಬಲ್ಲೆ!’ ಎಂಬ ಉದ್ಧಟತನದಿಂದ ಆಕೆಗೆ ಎಡ್ವಾನ್ಸ್‌ನೂ° ಮರಳಿ ಕೊಡಲಿಲ್ಲ ಆತ. ಅದು ಹೇಗೋ ಆಕೆಯ ಹೊಸ ಕ್ಲಿನಿಕ್ಕಿನ ಜಾಗವನ್ನೂ ಪತ್ತೆ ಮಾಡಿದ. ಹಾದಿಬೀದಿಯಲ್ಲಿ ಕೈಹಿಡಿದೆಳೆವಷ್ಟು ಎಲ್ಲೆಮೀರಿದಾಗ ರಕ್ಷಣೆಗಾಗಿ ಪೊಲೀಸ್‌ ಕಂಪ್ಲೆ„ಂಟ್‌ ಕೊಟ್ಟರು ಮಹಾಲಕ್ಷ್ಮೀ.  ಕೇಸ್‌ ರಿಜಿಸ್ಟ್ರರ್‌ ಆದ ಎರಡು-ಮೂರು ತಿಂಗಳ ಬಳಿಕ ಅಂದರೆ ಜನವರಿ 9, 2001ರಂದು ಆತ ಸೀದಾ ಕ್ಲಿನಿಕ್ಕಿಗೆ ನುಗ್ಗಿ ರೋಗಿಗಳ ಮುಂದೆಯೇ, “ಕೇಸ್‌ ಹಿಂದೆ ತಕೋ’ ಎಂದು ಜೀವಬೆದರಿಕೆ ಹಾಕಿದ. ಪೊಲೀಸರು  ಅವ ಮತ್ತೆ ಬಂದರೆ ಹೇಳಿ, “ಅರೆಸ್ಟ್‌ ಮಾಡುತ್ತೇವೆ’ ಎಂದು ಧೈರ್ಯ ತುಂಬಿದರು. ಆದರೆ ಇದಾದ ಎರಡು ದಿನಗಳ ಬಳಿಕ ಈ ಘನಘೋರಪಾಪಿಯು ಅವರ ಮೇಲೆ ಆ್ಯಸಿಡ್‌ ಧಾಳಿ ನಡೆಸಿ ಓಡಿ ಹೋಗಿದ್ದ. ಚಿಕ್ಕಬಸಯ್ಯನ ಕೃತ್ಯವನ್ನು ಸ್ವತಃ ತಾನೇ ಕಣ್ಣಾರೆ ಕಂಡು, ನೋವಿನ ನರಕವನ್ನು  ಅನುಭವಿಸಿ ಸಾವನ್ನು ಗೆದ್ದು ಬಂದ ಮಹಾಲಕ್ಷ್ಮೀಯವರು ಕಾನೂನಿನ ಕಣ್ಣೆದುರಿನ ಜೀವಂತ ಸಾಕ್ಷಿಯಾಗಿದ್ದರು. ಆದರೆ ಬೆನೆಫಿಟ್‌ ಆಫ್ ಡೌಟ್‌ ಮೇಲೆ ಲೋವರ್‌ ಕೋರ್ಟ್‌ ಅವನನ್ನು ದೋಷಮುಕ್ತಗೊಳಿಸಿತ್ತು. ಈ ಕೃತ್ಯ ನಡೆಸಿದ ದಿನದಿಂದ ಹಿಡಿದು ಅಲ್ಲಿಯವರೆಗೂ ಆತ ಒಂದು ದಿನವೂ ಜೈಲು ಕಂಡವನಲ್ಲ, ಆತನಿಗೆ ಬೇಲ್‌ ಸಿಕ್ಕಿತ್ತು. ವೈದ್ಯೆಯ ತಂದೆ ವಕೀಲರಾಗಿದ್ದರಿಂದ ನ್ಯಾಯಾಂಗ ವ್ಯವಸ್ಥೆಯ ಕುರಿತು ಅರಿವು ಇತ್ತು. ಸರಕಾರದ ಸಹಾಯ ಪಡೆದು ಹೈಕೋರ್ಟಿನಲ್ಲಿ ದಾವೆ ಹೂಡಿ ಹೋರಾಟ ಮುಂದುವರಿಸಿದರು, ಗೆದ್ದರು. ಅಲ್ಲಿ ಆತನಿಗೆ ಆ ಕಾಲದ ಕಾನೂನು ನಿಯಮದಂತೆ  ಕೇವಲ ಮೂರು ವರ್ಷಗಳ ಶಿಕ್ಷೆ, 20,000 ರೂ. ದಂಡ ವಿಧಿಸಲಾಯಿತು.

ಆದರೆ ಯಾವ ತಪ್ಪೂ ಮಾಡದ ಈ ಹೆಣ್ಣುಮಗಳು ನಿತ್ಯ ಅನುಭವಿಸಿದ ನೋವು, ಅವಮಾನವನ್ನು ಅಳೆಯಲು ಯಾವ ಅಳತೆಗೋಲಿದೆ ಹೇಳಿ? ಆ್ಯಸಿಡ್‌ ಧಾಳಿ ನಡೆದ ಬಳಿಕ ಬಸಪ್ಪ ಸ್ಮಾರಕ ಆಸ್ಪತ್ರೆಗೆ ದಾಖಲಾದ ವೈದ್ಯೆ ಆರು ತಿಂಗಳು ಐಸಿಯುವಲ್ಲಿ ಜೀವನ್ಮರಣದ ನಡುವೆ ಹೋರಾಡಿದ್ದಾರೆ; ಒಂದೂವರೆ ವರ್ಷಗಳ ಕಾಲ ಆಸ್ಪತ್ರೆಯಲ್ಲಿದ್ದು ಇಪ್ಪತ್ತು ಸರ್ಜರಿಗೊಳಗಾಗಿದ್ದಾರೆ, ಸೌಂದರ್ಯಕ್ಕಾಗಿ ಅಲ್ಲ, ಉಸಿರಾಡಲಿಕ್ಕಾಗಿ. ನಿತ್ಯ ತನ್ನತ್ತ ನೋಡುವ ದೃಷ್ಟಿಗಳಲ್ಲಿನ ಭಾವಗಳನ್ನು ನಿರ್ಲಿಪ್ತವಾಗಿ ಸಹಿಸಿಕೊಳ್ಳಲು ಕ್ರಮೇಣ ಕಲಿತಿದ್ದಾರೆ. ಇವರ ಹೆತ್ತವರ, ತಂಗಿಯರ ಹೃದಯಕ್ಕಾದ ನೋವು, ಇವರೆಲ್ಲ ಸೇರಿ ನಡೆಸಿದ ಹತ್ತು ವರ್ಷಗಳ  ಕಾನೂನು ಸಮರ ಸಣ್ಣದೇ? ಕೆಲವು ಗಂಟೆಗಳ ಹಿಂದಷ್ಟೇ ತಿದ್ದಿತೀಡಿದ ಚೆಲುವಿನ ಕ್ಯಾಲೆಂಡರಿನ ಮಹಾಲಕ್ಷ್ಮೀಯಂತಿದ್ದ ಮಗಳು ಈ ಸ್ಥಿತಿಯಲ್ಲಿ ಬಂದಾಗ ವಿಲವಿಲ ಒದ್ದಾಡಿದ ಹೆತ್ತವರ ನೋವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವೆ? ಮಲಗಿದ್ದ  ಮಗಳ ಮುಂದೆ ಅವರು ಒಂದು ದಿನವೂ ಕಣ್ಣೀರು ಸುರಿಸಿದವರಲ್ಲ, ಹನಿಹನಿಯಾಗಿ ಆತ್ಮವಿಶ್ವಾಸ ತುಂಬಿ ಕಣ್ಣರೆಪ್ಪೆಯಂತೆ ನೋಡಿಕೊಂಡರು. ದಾಳಿ ನಡೆದ ಕ್ಷಣದಿಂದಲೂ ತಾನು ಬದುಕಲೇ ಬೇಕು ಎಂದು ಛಲಬಿಡದ ತ್ರಿವಿಕ್ರಮನಂತೆ ಹೋರಾಡಿದ ವೈದ್ಯೆ, ಬದುಕು ಹಾಗೂ ವೃತ್ತಿಗೆ ಅತ್ಯಗತ್ಯವಾದ ಎಡಕಣ್ಣು, ಎಡಕಿವಿಯ ದೃಷ್ಟಿ, ಶ್ರವಣಶಕ್ತಿಯನ್ನು ಸಂಪೂರ್ಣವಾಗಿ ಕಳಕೊಂಡರೂ ಧೃತಿಗೆಡಲಿಲ್ಲ. ಕರ್ನಾಟಕ ರಾಜ್ಯ ಸರಕಾರದ ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿ ನಿತ್ಯ 60-70 ಬಡರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ, ಅವರ ಸುಖದುಃಖಗಳಿಗೆ ಕಿವಿಯಾಗಿ ಮಾನಸಿಕ ಧೈರ್ಯ ತುಂಬುತ್ತಿದ್ದಾರೆ, ಉಪನ್ಯಾಸಗಳ ಮೂಲಕ ಕತ್ತಲಲ್ಲಿ ಹತಾಶವಾದ ಜೀವಗಳಿಗೆ ಸ್ಫೂರ್ತಿಯ ಬೆಳಕಾಗಿದ್ದಾರೆ. ಇವರ ಜೀವನಗಾಥೆ,  ಜೀವನಪ್ರೀತಿ, ಜೀವನ ತತ್ವಗಳಿಗೆ ಬೆರಗಾಗಿ ದೇಶ-ವಿದೇಶಗಳ ಜನರು ಇವರ ಅಭಿಮಾನಿಗಳಾಗುತ್ತಿರುವುದು ದೇಶ-ಕಾಲ- ಭಾಷೆ ಎಲ್ಲೆ ಮೀರಿದ  ಮಾನವೀಯತೆಗೆ ಹಿಡಿದ ಕನ್ನಡಿ. 

ಇತ್ತೀಚೆಗೆ ಡಾ. ಮಹಾಲಕ್ಷ್ಮಿಯವರನ್ನು ಅವಿನಾಶ್‌ ಕಾಮತ್‌ ಅವರು ಉಡುಪಿಯಲ್ಲಿ ಬೀಯಿಂಗ್‌ ಸೋಶಿಯಲ್‌ ಸಂಸ್ಥೆಯ ಮೂಲಕ ಹೆಜ್ಜೆ ಗುರುತು-ಸಾಧಕರ ಯಶೋಗಾಥೆ ಸರಣಿಯ ಉಪನ್ಯಾಸಕ್ಕಾಗಿ ಕರೆಸಿದ್ದರು. ತಮ್ಮ ಬದುಕನ್ನು ಕಾಡಿದ ಗತಭೂತದ ತುಣುಕುಗಳನ್ನು ಹಂಚಿಕೊಂಡ ವೈದ್ಯೆ, “”ಭಾರತದಲ್ಲಿ 2011ರಲ್ಲಿ ನಡೆದ ಆ್ಯಸಿಡ್‌ ದಾಳಿ ಪ್ರಕರಣಗಳು 83, 2014ರಲ್ಲಿ 309. ಕೇಂದ್ರ ಸರಕಾರ ಎಚ್ಚೆತ್ತು  ಆ್ಯಸಿಡ್‌ ದಾಳಿ ತಡೆಗಟ್ಟಲು ಕಾನೂನಿನಲ್ಲಿ ಹಲವು ಕಠಿಣ ಬದಲಾವಣೆಗಳನ್ನು ತಂದಿದೆ. ಆ್ಯಸಿಡ್‌ ಸಂತ್ರಸ್ತರಿಗೆ 3 ಲಕ್ಷ ರೂಪಾಯಿ ಪರಿಹಾರ, ಉಚಿತ ಕಾನೂನು ಸಲಹೆ, ಯಾವ ಆಸ್ಪತ್ರೆಗೆ ಹೋದರೂ ಉಚಿತ ಚಿಕಿತ್ಸೆ , ಸರಕಾರಿ ನೌಕರಿ, ತಿಂಗಳಿಗೆ ಮೂರು ಸಾವಿರ ರೂಪಾಯಿ ಪಿಂಚಣಿ… ಹೀಗೆ ಸರಕಾರ ಸ್ವಾವಲಂಬಿ ಬದುಕಿಗೆ ಬೇಕಾದ ಹಲವು ಸವಲತ್ತು ನೀಡುತ್ತದೆ. ಆದರೆ ಜನರಿಗೆ ಇದರ ಅರಿವಿಲ್ಲ.ಸರಕಾರ ಏನು ಕೊಟ್ಟಿಲ್ಲ  ಎಂಬುದರ ಬಗ್ಗೆ ಮಾತಾಡುವ ಬದಲು ಇದುವರೆಗೆ ಇಂತಹ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಏನೆಲ್ಲ ಸವಲತ್ತು ಕೊಟ್ಟಿದೆ, ಕೊಡುತ್ತದೆ ಎಂಬುದರ ಬಗ್ಗೆ ಮೊದಲು ಅರಿವು ಮೂಡಿಸುವ ಕೆಲಸವಾಗಬೇಕಿದೆ. ನಮ್ಮಂತಹ ಸರಕಾರಿ ನೌಕರರ ಜತೆ ಸಮಾಜಮುಖೀ ವ್ಯಕ್ತಿಗಳು, ಎನ್‌ಜಿಓಗಳು ಕೈಜೋಡಿಸಿದರೆ ಈ ಯೋಜನೆಗಳಿಗೆ ಫ‌ಲ ಸಿಗುತ್ತದೆ. ಯಾವ ಹೊತ್ತಿಗೆ ಕರೆ ಮಾಡಿದರೂ ನನ್ನಿಂದಾದ ಸಹಾಯ ಮಾಡುತ್ತೇನೆ. ನನ್ನ ನೋವನ್ನು ಮರೆತು ಇನ್ನೊಬ್ಬರ ಮೊಗದಲ್ಲಿ ನಗು ತರಿಸುವುದಕ್ಕಿಂತ ದೊಡ್ಡ ಸಾಧನೆ ಬೇರೇನಿದೆ?” ಎಂದ ನುಡಿಗಳಲ್ಲಿ ಅವರ ಬದುಕಿನ ತತ್ವಗಳು ಮನ ತಟ್ಟುತ್ತವೆ. ಅನ್ಯಾಯ ಮಾಡಿದ ಗಂಡಸರು ರಾಜಾರೋಷವಾಗಿ ಬಾಳುವಾಗ ಅನ್ಯಾಯಕ್ಕೊಳಗಾದ ಹೆಣ್ಣುಮಕ್ಕಳು ತಮ್ಮದಲ್ಲದ ತಪ್ಪಿಗೆ ನಾಲ್ಕು ಗೋಡೆಯ ನಡುವೆ ಕೈದಿಯಂತೆ ಯಾಕೆ ಬಾಳಬೇಕು? ಹೆತ್ತವರು ಹೆಣ್ಣುಮಕ್ಕಳಿಗೆ ಏನು ಕೊಡದಿದ್ದರೂ ಚಿಂತೆಯಿಲ್ಲ , ಶಿಕ್ಷಣ ಕೊಡಿ ಸಾಕು ಎಂಬ ಅವರ ಕರೆಯಲ್ಲಿ ಕಳಕಳಿ ಇದೆ. 

ಕಾಲು ಕಳಕೊಂಡ ಬಳಿಕ ಗೌರೀಶಂಕರವನ್ನು ಏರಿದ ಅರುಣಿಮಾ ಸಿನ್ಹಾರಂತಹ ಸಾಧಕರ ಆತ್ಮಧೈರ್ಯದ ಬೆಳಕು ಎಷ್ಟು ಪ್ರಖರವಾಗಿರಬಹುದು! ನನ್ನ ಗೆಳತಿಯೊಬ್ಬಳಿದ್ದಳು, ಒಂದನೇ ತರಗತಿಯಿಂದ ಹತ್ತು ವರ್ಷ ನನ್ನ ಜತೆಯೇ ಓದಿದವಳು.ಕುಳ್ಳಗಿದ್ದು ಅಟ್ಟೆ ಕಾಲಲ್ಲಿ ನಡೆಯುತ್ತಿದ್ದ ಆಕೆಯನ್ನು ಬಹುಕಾಲ ಪ್ರೀತಿಯೇ ಮೂರ್ತಿವೆತ್ತಂತೆ ಆಕೆಯ ಅಮ್ಮ ಸೊಂಟದಲ್ಲಿ ಹೊತ್ತು ತಂದು ಬಿಟ್ಟು ಹೋಗುತ್ತಿದ್ದರು. ಎರಡೂ ಕೈಗಳಲ್ಲಿ ಬಹಳ ಅಂತರದಲ್ಲಿ ಪುಟ್ಟ ಪುಟ್ಟ ಮೂರೇ ಬೆರಳುಗಳನ್ನು ಹೊಂದಿದ್ದ ಈಕೆ ಅತೀ ಚೆಲುವಾದ ದುಂಡಗಿನ ಬರಹಕ್ಕೆ ಪ್ರತಿವರ್ಷ ಬಹುಮಾನ ಪಡೆಯುತ್ತಿದ್ದಳು. ಕಲಿಕೆಯಲ್ಲಿ ಕೂಡ, ಅಂಗಗಳೆಲ್ಲವೂ ಸರಿಯಾಗಿದ್ದ ನಮಗೆಲ್ಲರಿಗಿಂತ ಮುಂದಿದ್ದು ನಮ್ಮ ಪಾಲಿಗೆ ಪುಟ್ಟ ದೇವತೆಯೇ ಆಗಿದ್ದಳು. ನಾ ಮುಂದು ನೀ ಮುಂದು ಎಂದು ಆಕೆಯ ಅಗತ್ಯಗಳಿಗೆ ಸ್ಪಂದಿಸಲು ಎಲ್ಲರೂ ಹಾತೊರೆಯುತ್ತಿದ್ದುದು ಅನುಕಂಪದಿಂದಲ್ಲ, ಆಕೆಯ ಮೃದುಮಧುರ ವ್ಯಕ್ತಿತ್ವದ ಅಯಸ್ಕಾಂತೀಯ ಸೆಳೆತದಿಂದ.

ಹಾಗಾದರೆ ಸೌಂದರ್ಯದ ಮಾಪನ ಗುಣವೇ ತಾನೇ? ಬಾಹ್ಯ ಸೌಂದರ್ಯವನ್ನೇ ನಿಜವಾದ ಸೌಂದರ್ಯ ಎಂದು ತಿಳಿದು ಜೀವನಕ್ಕೆ ಬೆನ್ನು ಹಾಕುವ ಪೀಳಿಗೆಯು ಯೋಚಿಸಲೇಬೇಕಾದ ಸಂಗತಿಯಿದು. ಇನ್ನೊಬ್ಬನ  ಬೆಂಕಿಯಲ್ಲಿ ತಮ್ಮ ಒಲೆ ಹಚ್ಚಿಕೊಳ್ಳುವ ದುರ್ಜನರ ನಡುವೆ ಸಂತೆಯೊಳಗಿನ ಸಂತಳಂತೆ ತಮ್ಮ ಒಡಲ ಬೆಂಕಿಯಿಂದಲೇ ಕತ್ತಲ ಹಾದಿಗೆ ಬೆಳಕು ಹಚ್ಚುತ್ತಿರುವ ಡಾ. ಮಹಾಲಕ್ಷ್ಮಿಯಂಥ ಪ್ರೇಮಜೀವಗಳು ಎಷ್ಟೋ ಇವೆ. ಅವರ ಆತ್ಮಬೆಳಕೇ ಅವರ ಹೆಜ್ಜೆಗಳಲ್ಲೂ ಪ್ರತಿಫ‌ಲಿಸುತ್ತ ಕತ್ತಲ ಹಾದಿಗೆ ಲಾಟೀನು ದೀಪಗಳಾಗುತ್ತಿವೆ. ನಾವು ಈ ಬೆಳಕಿನ ಹೆಜ್ಜೆಗಳನ್ನು ಹಿಂಬಾಲಿಸಬೇಕಿದೆ, ಮಾನವೀಯ ಗುರುತುಗಳನ್ನು ಮುಂದಿನ ಪೀಳಿಗೆಗೂ ದಾಟಿಸಬೇಕಿದೆ.

ಆ್ಯಸಿಡ್‌ ಎರಚಿ ಬಾಹ್ಯ ದೇಹವನ್ನು ಸುಡಬಹುದು, ಆದರೆ ಆತ್ಮವಿಶ್ವಾಸವನ್ನಲ್ಲ !
ಡಾ. ಮಹಾಲಕ್ಷ್ಮೀ

ಕಾತ್ಯಾಯಿನಿ ಕುಂಜಿಬೆಟ್ಟು

ಟಾಪ್ ನ್ಯೂಸ್

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.