ಚಂಚಲ ಮನಸ್ಸಿಗೆ ಮೂಗುದಾರ ಹಾಕಲೊಂದು ಉಪಾಯ: ಏನದು?
Team Udayavani, May 9, 2017, 3:45 AM IST
ಚಾಂಚಲ್ಯ ಬಹಳ ಕ್ಷಣಿಕ, ಕೆಲವು ಸಲ ಕ್ಷುಲ್ಲಕ ಕೂಡ. ಅದೊಂದು ಮಾಯೆ. ಬಹಳ ಅಲ್ಪ ಸಮಯದಲ್ಲಿ ಅದು ಹೇಗೆ ನಮ್ಮ ತಲೆ ಕೆಡಿಸುತ್ತದೆ ಅಂದರೆ ನಾವು ಎಡವುತ್ತಿದ್ದೇವೆ ಎಂಬುದರ ಸುಳಿವು ಕೂಡ ನಮಗೆ ಸಿಗುವುದಿಲ್ಲ. ಚಾಂಚಲ್ಯ ಎಲ್ಲರಲ್ಲೂ ಸಹಜವಾಗಿ ಇರುವ ಸ್ಥಿತಿ. ಅದನ್ನು ಆ ಕ್ಷಣದಲ್ಲಿ ಮೀರುವುದನ್ನು ಕಲಿತರೆ ಸಾಕು. ಮುಂದಿನ ಕ್ಷಣದಲ್ಲಿ ಸರಿಯಾದ ನಿರ್ಧಾರವನ್ನೇ ಕೈಗೊಳ್ಳಬಹುದು.
ಮನುಷ್ಯನ ಮನಸ್ಸು ಬಹಳ ಚಂಚಲ ಎಂಬುದು ಎಲ್ಲರಿಗೂ ಗೊತ್ತು. ಅದು ಅತಿಯಾಗಿ ಚಾಂಚಲ್ಯಕ್ಕೆ ಸಿಕ್ಕಿ ಹಾಕಿಕೊಳ್ಳುವುದು ನಾವು ಪ್ರೌಢಾವಸ್ಥೆಗೆ ಬಂದಾಗ. ಮಕ್ಕಳಾಗಿದ್ದಾಗಲೂ ನಮ್ಮಲ್ಲಿ ಚಿತ್ತ ಚಾಂಚಲ್ಯ ಇತ್ತು. ಆದರೆ ಅದನ್ನು ಗುರುತಿಸಿಕೊಳ್ಳುವಷ್ಟು ನಮ್ಮ ಬುದ್ಧಿ ಬೆಳೆದಿರಲಿಲ್ಲ ಅಷ್ಟೆ.
ಒಂದಕ್ಕಿಂತ ಹೆಚ್ಚು ಆಯ್ಕೆಗಳು ನಮ್ಮ ಕಣ್ಮುಂದೆ ಇದ್ದಾಗ ಬುದ್ಧಿ ಚಂಚಲವಾಗುತ್ತದೆ. ಯಾವುದು ಸರಿ, ಯಾವುದು ತಪ್ಪು; ಯಾವುದನ್ನು ಆಯ್ದುಕೊಳ್ಳಲಿ, ಯಾವುದು ಚೆನ್ನಾಗಿದೆ/ಇಲ್ಲ ಎಂಬ ಪ್ರಶ್ನೆ ನಮ್ಮನ್ನು ಅತ್ತಿತ್ತ ಹೊಯ್ದಾಡಿಸುತ್ತದೆ. ಕೆಲವು ಸಲ ನಮ್ಮ ಆಯ್ಕೆ ಸರಿಯಾಗಿರುತ್ತದೆ. ಇನ್ನು ಕೆಲವು ಸಲ ಆ ಆಯ್ಕೆಯ ಬಗ್ಗೆ ಮುಂದೆ ನಾವೇ ಪಶ್ಚಾತ್ತಾಪ ಪಡಬೇಕಾಗುತ್ತದೆ.
ಪ್ರೌಢಾವಸ್ಥೆಯಲ್ಲಿ ಎಲ್ಲರೂ ಚಾಂಚಲ್ಯದಲ್ಲೇ ಮುಳುಗಿರು ತ್ತಾರೆ. ಒಂದು ಕಡೆ ತಾನು ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೆದರೇನೇ ಭವಿಷ್ಯದಲ್ಲಿ ಗೆಲ್ಲಬಹುದು ಅಂತ ಗೊತ್ತಿರುತ್ತದೆ. ಆದರೆ ಮುಗ್ಧ ಮನಸ್ಸು ಸ್ವಲ್ಪ ಸುಂದರವಾಗಿ ಕಂಡ ಹುಡುಗಿಯರ ಹಿಂದೆ ಓಡುತ್ತದೆ. ತುಂಬಾ ಹುಡುಗಿಯರ ಗುಂಪನ್ನು ಕಂಡಾಗ ಇಲ್ಲಿರುವವರಲ್ಲಿ ತನಗೆ ಯಾರು ಮ್ಯಾಚ್ ಆಗುತ್ತಾರೆ, ಇವಳಾ -ಅವಳಾ ಎಂಬ ಹೊಯ್ದಾಟ. ಅದರ ನಡುವೆ ಗೆಳೆಯರು ಒಂದಷ್ಟು ಸಲಹೆಗಳನ್ನು ಕೊಟ್ಟು ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಇವನಿಗೆ ಇಷ್ಟ ಆದ ಅವಳ ಬಗ್ಗೆ ಇನ್ನೇನು ಬಾಯಿ ಬಿಟ್ಟು ಹೇಳಬೇಕು, ಅಷ್ಟರಲ್ಲಿ “ಆ ಕೆಂಪು ಚೂಡಿದಾರದವಳು ಎಷ್ಟು ಚೆನ್ನಾಗಿದ್ದಾಳೆ ಅಲ್ಲವಾ?’ ಎಂದು ಪಕ್ಕದ ಗೆಳೆಯ ರಾಗ ತೆಗೆಯುತ್ತಾನೆ. ಆಗ ಇವನ ಮನಸ್ಸು ಚಕ್ಕನೆ ಆಕೆಯ ಕಡೆಗೆ ಜಿಗಿಯುತ್ತದೆ. ಇದು ಹದಿಹರಯದಲ್ಲಿ ಕಾಡುವ ಚಿತ್ತಚಾಂಚಲ್ಯದ ಒಂದು ಸ್ಯಾಂಪಲ್ ಅಷ್ಟೇ.
ಚಾಂಚಲ್ಯಕ್ಕೆ ವಯಸ್ಸಿಲ್ಲ: ನಾವು ಇಷ್ಟಪಟ್ಟಿದ್ದನ್ನು ನಮ್ಮ ಅಪ್ಪ – ಅಮ್ಮ ಸೇರಿದಂತೆ ಇಡೀ ಜಗತ್ತು ಇಷ್ಟಪಡಬೇಕು ಎಂಬುದು ನಮ್ಮ ಆಸೆ. ಇದನ್ನೇ ಇನ್ನೊಂದು ವಿಧವಾಗಿ ಹೇಳುವುದಾದರೆ, ನಮಗಿಷ್ಟವಾದದ್ದು ಎಲ್ಲರಿಗೂ ಇಷ್ಟವಾಗುತ್ತದೆ, ಆಗಲೇ ಬೇಕು ಎಂಬ ಭ್ರಮೆಯೂ ಕೆಲವರಿಗಿರುತ್ತದೆ. ಆದರೆ ಹಾಗಾಗುವುದಕ್ಕೆ ಸಾಧ್ಯವೇ ಇಲ್ಲ. ನಮಗೆ ಜಾಮೂನ್ ತಿನ್ನಬೇಕು ಅಂತ ಆಸೆಯಾದರೆ ನಮ್ಮ ಅಪ್ಪ ಅಮ್ಮನಿಗೆ ಪಾಯಸ ಬೇಕು ಅನ್ನಿ°ಸಬಹುದು. ಅಣ್ಣನಿಗೆ ರಸಗುಲ್ಲಾ, ತಂಗಿಗೆ ಹಲ್ವಾ ಅಂದರೆ ಮೆಚ್ಚಿಕೆ ಇರಬಹುದು. ಇಂತಹ ವಿಷಯಗಳಲ್ಲಿ ನಾವು ಎಷ್ಟೋ ಸಲ ನಮ್ಮ ಇಷ್ಟವನ್ನು ಇನ್ನೊಬ್ಬರ ಮೇಲೆ ಹೇರಲು ಹೋಗುತ್ತೇವೆ, ಹಾಗೆಯೇ ನಮ್ಮ ಇಷ್ಟವನ್ನು ಕಡೆಗಣಿಸಿ ಬೇರೆಯವರ ದಾಕ್ಷಿಣ್ಯಕ್ಕೆ ಬಲಿಯಾಗುವ ಸಂದರ್ಭವೂ ಇದೆ.
ಯೌವನಾವಸ್ಥೆಗೆ ಬಂದಾಗ ಹೆಚ್ಚು ಚಾಂಚಲ್ಯ ಕಾಡುವುದು ಪ್ರೀತಿಯ ವಿಷಯದಲ್ಲಿ. ಚೆನ್ನಾಗಿರುವ ಯಾರೇ ಕಂಡರೂ ಅವರನ್ನು ಪ್ರೀತಿಸಬೇಕು ಅನ್ನಿಸುತ್ತದೆ. ಇನ್ನು ಕೆಲವರು ಮದುವೆ ಯಾಗುವ ತನಕ ಸರಿಯಾಗಿಯೇ ಇರುತ್ತಾರೆ. ಮದುವೆ ನಂತರ ಚಂಚಲರಾಗುತ್ತಾರೆ. ಬಹುಶಃ ಚಾಂಚಲ್ಯಕ್ಕೆ ವಯಸ್ಸಿನ ನಿರ್ಬಂಧ ಇಲ್ಲ. ಏಕೆಂದರೆ ನಮ್ಮನ್ನು ಸೃಷ್ಟಿಸಿದ ಪ್ರಕೃತಿಯೇ ಚಂಚಲ.
ಅದು ಮಾಯೆ, ಹುಷಾರು!: ಚಾಂಚಲ್ಯ ಬಹಳ ಕ್ಷಣಿಕ, ಕೆಲವು ಸಲ ಕ್ಷುಲ್ಲಕ ಕೂಡ. ಅಂದರೆ ಅದೊಂದು ಮಾಯೆ. ಬಹಳ ಅಲ್ಪ ಸಮಯದಲ್ಲಿ ಅದು ಹೇಗೆ ನಮ್ಮ ತಲೆ ಕೆಡಿಸುತ್ತದೆ ಅಂದರೆ ನಾವು ಎಡವುತ್ತಿದ್ದೇವೆ ಎಂಬುದರ ಸುಳಿವೂ ನಮಗೆ ಸಿಗುವುದಿಲ್ಲ. ಆದರೆ, ಕೆಲವು ವರ್ಷಗಳ ಅನಂತರ ನಮ್ಮ ಜೀವನಪಥವನ್ನು ನಾವೇ ಹಿಂದಿರುಗಿ ನೋಡಿದಾಗ ನಗು ಬರುತ್ತದೆ, ಕೆಲವೊಮ್ಮೆ ಪಶ್ಚಾತ್ತಾಪ, ಇನ್ನು ಕೆಲವೊಮ್ಮೆ ದುಃಖ. “ಅದು ನಾನಾ! ಎಷ್ಟು ಬಾಲಿಶವಾಗಿತ್ತು ನನ್ನ ಆ ನಡವಳಿಕೆ; ಪಾಪ ನಾನು ಅವಳಿಗೆ/ ಅವನಿಗೆ ಹಾಗೆ ಮಾಡಬಾರದಿತ್ತು’ ಅನ್ನಿಸುತ್ತದೆ. ಇನ್ನು ಕೆಲವರು, “ಥೂ… ನಾನು ಅವನನ್ನು/ಅವಳನ್ನು ಪ್ರೀತಿಸಿದ್ದೆನಲ್ಲ! ಯಾವುದೋ ಕೆಟ್ಟ ಕ್ಷಣದಲ್ಲಿ ಅವನ/ಳ ಕಡೆಗೆ ಮನಸ್ಸು ಹೊರಳಿತ್ತು. ಸದ್ಯ, ಅಪ್ಪ-ಅಮ್ಮ ಬೈದು ಬುದ್ಧಿ ಹೇಳಿದರು. ಇಲ್ಲವಾದರೆ ಜೀವನಪೂರ್ತಿ ಕಷ್ಟಪಡಬೇಕಿತ್ತು’ ಎಂದು ನಿಟ್ಟುಸಿರುಬಿಡುತ್ತಾರೆ. ಹದಿಹರಯದಲ್ಲಿ ಅತಿಯಾಗಿ ಕಾಡುವ ವಯೋಸಹಜ ಚಾಂಚಲ್ಯದ ಸ್ಥಿತಿಯ ಬಗ್ಗೆ ಮಾಗಿದ ದಿನಗಳಲ್ಲಿ ಮನಸ್ಸು ಅಂದುಕೊಳ್ಳುವುದಿದು. ಚಾಂಚಲ್ಯ ಎಲ್ಲ ವಯಸ್ಸಿನಲ್ಲೂ ಇರುತ್ತದೆಯಾದರೂ, ಯೌವನದಲ್ಲಿ ಕಾಡುವ ಚಾಂಚಲ್ಯ ಬಹಳ ಸೂಕ್ಷ್ಮವಾದದ್ದು. ಆ ಕಾಲಘಟ್ಟದಲ್ಲಿ ಎಚ್ಚರ ವಹಿಸದಿದ್ದರೆ ಬದುಕನ್ನೇ ಹಾಳು ಮಾಡಿಕೊಳ್ಳುತ್ತೇವೆ.
ಎಷ್ಟೋ ಹುಡುಗ ಹುಡುಗಿಯರು ಚಂಚಲ ಮನಸೆ ಕಾರಣವಾಗಿ, ದೃಢವಾದ ನಿರ್ಧಾರ ತೆಗೆದುಕೊಳ್ಳಲಾಗದೆ ಕ್ಷಣಿಕವಾಗಿ ಮನಸ್ಸು-ಬುದ್ಧಿ ಏನು ಹೇಳುತ್ತದೋ ಅದೇ ಸರಿ ಎಂದುಕೊಂಡು ಮನೆ ಬಿಟ್ಟು ಓಡಿಹೋಗುತ್ತಾರೆ, ದೇವ ಸ್ಥಾನಗಳಲ್ಲಿ ಮದುವೆಯಾಗುತ್ತಾರೆ. ಅನಂತರ ಕೇವಲ ಒಂದೇ ವಾರದಲ್ಲಿ ಅವನು ಸರಿಯಿಲ್ಲ ಅಂತ ಅವಳು, ಅವಳು ಸರಿಯಿಲ್ಲ ಅಂತ ಅವನು ಕಿತ್ತಾಡಿಕೊಂಡು ಬೇರೆಯಾಗುತ್ತಾರೆ. ಕೊನೆಗೆ ಯಾರನೊ°à ಮದುವೆಯಾಗಿ ಕಪಟ ಜೀವನ ನಡೆಸುತ್ತಾರೆ.
ನಾನು ಸನ್ಯಾಸಿ ಆಗಿಬಿಡ್ತೀನಿ: ಚಾಂಚಲ್ಯ ಪ್ರೀತಿಗೆ ಮಾತ್ರವಲ್ಲ, ನಾವು ಏನೇ ಕೆಲಸ ಮಾಡಬೇಕಾದರೂ ನಮ್ಮ ತಲೆಯಲ್ಲಿ ಒಂದು ಸಲ ಅದು ಹಾದು ಹೋಗುತ್ತದೆ. ಕೆಲವರು ಬಹಳ ಸಲೀಸಾಗಿ “ನಾನು ಸ್ವಾಮೀಜಿ ಆಗುತ್ತೇನಂತೆ, ನನ್ನ ಜಾತಕದಲ್ಲಿ ಸನ್ಯಾಸ ಯೋಗ ಇದೆಯಂತೆ, ನನಗೆ ಜೀವನ ಸಾಕಾಯ್ತು, ನಾನು ಸನ್ಯಾಸಿಯಾಗುವುದೇ ಲೇಸು’ ಎನ್ನುತ್ತಿರುತ್ತಾರೆ. ಸನ್ಯಾಸಿ ಆಗುವುದು ಅಂದರೆ ಅಷ್ಟು ಸುಲಭವೇ? ಅಥವಾ ಮನೆಯಲ್ಲಿ ನೆಮ್ಮದಿಯಿಲ್ಲ ಎಂದ ಮಾತ್ರಕ್ಕೆ ಸನ್ಯಾಸಿಯಾಗುವುದಕ್ಕೆ ಅರ್ಥವಿದೆಯೇ? ನಾವು ಹೇಗೆ ಒಂದು ಪದವಿ ಪಡೆಯಲು 15-20 ವರ್ಷ ಕಷ್ಟಪಡುತ್ತೇವೋ ಹಾಗೆಯೇ ಮನಸ್ಸನ್ನು ನಿಗ್ರಹಿಸಿ ಸನ್ಯಾಸಿಯಾಗುವುದಕ್ಕೂ ಅಷ್ಟೇ ಕಾಲ ಶ್ರಮ ಪಡಬೇಕಾಗುತ್ತದೆ. ಸನ್ಯಾಸಿಯಾಗುವುದಕ್ಕೆ ಯೋಗ್ಯತೆ ಬೇಕು. ಬೇರೇನೂ ಸರಿಹೊಂದುತ್ತಿಲ್ಲ, ಹಾಗಾಗಿ ಸನ್ಯಾಸಿಯಾಗುತ್ತೇನೆ ಎನ್ನುವುದು ತಮಾಷೆಯಷ್ಟೇ. ಮನೆಯಲ್ಲಿ ಸಣ್ಣದೊಂದು ಪೂಜೆ ಮಾಡುವಾಗಲೇ ನಮ್ಮ ಮನಸ್ಸು ಎಲ್ಲೆಲ್ಲೋ ಓಡುತ್ತಿರುತ್ತದೆ. ಇನ್ನು ಜೀವನಪೂರ್ತಿ ಸನ್ಯಾಸಿಯಾಗಿ ಭಗವಚ್ಚಿಂತನೆಯಲ್ಲೇ ಕಳೆಯಬೇಕು ಅಂದರೆ ಅದಕ್ಕೆ ಎಂಥ ಏಕಾಗ್ರತೆ ಬೇಕು ಊಹಿಸಿ. ಹಾಗಾಗಿ ಚಿತ್ತಚಾಂಚಲ್ಯದ ಕ್ಷಣದಲ್ಲಿ ಸಂಸಾರ ಬೇಡ, ಜೀವನ ಬೇಡ, ಸನ್ಯಾಸಿಯಾಗುತ್ತೇನೆ ಅನ್ನುವವರು ಚಂಚಲ ಮನಸ್ಸು ತಿಳಿಗೊಂಡ ಬಳಿಕ ಆಳವಾಗಿ ಯೋಚಿಸಿ.
ನಿರ್ಧಾರ ಮುಂದೂಡಿ ಬಚಾವಾಗಿ: ಚಾಂಚಲ್ಯದಿಂದ ಬಿಡುಗಡೆ ಹೊಂದಲು ಧ್ಯಾನ ಒಳ್ಳೆಯ ಮಾರ್ಗ. ಭಗವದ್ಗೀತೆಯಲ್ಲೂ ಅರ್ಜುನ ಮನೋಚಾಂಚಲ್ಯದ ಬಗ್ಗೆ ಕೇಳಿದಾಗ, ಭಗವಂತ ಅಭ್ಯಾಸ ಮಾರ್ಗವನ್ನೇ ಹೇಳಿದ್ದಾನೆ. ಚಾಂಚಲ್ಯ ಎಲ್ಲರಲ್ಲೂ ಸಹಜ ಸ್ಥಿತಿ. ಆದರೆ ಅದು ನಿತ್ಯವಲ್ಲ, ಕ್ಷಣಿಕ. ಅದನ್ನು ಆ ಕ್ಷಣದಲ್ಲಿ ಮೀರುವುದನ್ನು ಕಲಿತರೆ ಸಾಕು. ಮುಂದಿನ ಕ್ಷಣದಲ್ಲಿ ಸರಿಯಾದ ನಿರ್ಧಾರವನ್ನೇ ಕೈಗೊಳ್ಳಬಹುದು. ಚಾಂಚಲ್ಯದಿಂದ ನಷ್ಟವಾಗದೆ ಇರುವಂತೆ ನೋಡಿಕೊಳ್ಳಲು ಏನು ಮಾಡಬೇಕು ಗೊತ್ತಾ? ಮನಸ್ಸು ಅತ್ತಿತ್ತ ಹೊಯ್ದಾಡುತ್ತಿದೆ ಅನ್ನಿಸಿದ ಕ್ಷಣದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಹೋಗಬಾರದು. ಸಾಧ್ಯವಾದಷ್ಟು ಪ್ರಯತ್ನಿಸಿ ನಿರ್ಧಾರ ಮುಂದೂಡಬೇಕು. ಆ ವಿಷಯದಲ್ಲಿ ಒಂದು ಖಚಿತತೆ ಸಿಕ್ಕಾಗ ನಿರ್ಧಾರ ಕೈಗೊಳ್ಳಬೇಕು. ಅದು ಸಾಮಾನ್ಯವಾಗಿ ಸರಿಯಾದ ನಿರ್ಧಾರವೇ ಆಗಿರುತ್ತದೆ.
ರೂಪಾ ಅಯ್ಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.