ಸಾಧಿಸಿ ತೋರಿಸಿದರೂ ಪಾಲಿಕೆಗೆ 210ನೇ ಸ್ಥಾನ!
Team Udayavani, May 9, 2017, 11:51 AM IST
ಬೆಂಗಳೂರು: ಪ್ರಥಮ ಬಾರಿಗೆ 50%ರಷ್ಟು ತ್ಯಾಜ್ಯ ವಿಂಗಡಣೆ ಸಾಧಿಸಿದ್ದರೂ ಬೆಂಗಳೂರಿಗೆ ದೇಶದ ಸ್ವತ್ಛ ನಗರಗಳ ಪೈಕಿ 210ನೇ ಸ್ಥಾನ ನೀಡಿರುವ ಕೇಂದ್ರ ಸರ್ಕಾರದ ಸಮೀಕ್ಷೆ ಕುರಿತು ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವೇ ನಡೆಸುವ ವೇಳೆ ಯಾವ ಮಾನದಂಡ ಅನುಸರಿಸಲಾಗಿದೆ ಎಂಬುದು ಈವ ರೆಗೆ ಸ್ಪಷ್ಟವಾಗಿಲ್ಲ. ದೇಶದಲ್ಲಿಯೇ ಶೇ.50 ತ್ಯಾಜ್ಯ ವಿಂಗಡಣೆ ಮಾಡಿ ಸಂಸ್ಕರಿಸುತ್ತಿರುವುದು ಬೆಂಗಳೂರು ಮಾತ್ರ. ಜತೆಗೆ ಪಾಲಿಕೆಯಿಂದ ಏಳು ಭಾಗಗಳಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲಾಗಿದ್ದು, ನಿತ್ಯ 2 ಸಾವಿರ ಟನ್ ಹಸಿ ಕಸ ಸಂಸ್ಕರಿಸಲಾಗುತ್ತಿದೆ. ಆದರೂ ಬೆಂಗಳೂರಿಗೆ ಅತ್ಯಂತ ಕೆಳಗಿನ ಸ್ಥಾನ ನೀಡಲಾಗಿದೆ ಎಂದು ಬೇಸರಿಸಿದರು.
ಕಳೆದ 6 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸ್ವತ್ಛತೆ ಕುರಿತು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಸರ್ವೇ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ಅದರಂತೆ ತ್ಯಾಜ್ಯ ವಿಂಗಡಣೆ ಮತ್ತು ಸಾಗಣೆಗೆ ಸಂಬಂಧಿಸಿದಂತೆ 1 ಸಾವಿರ ಅಂಕಗಳಿಗೆ 900 ಅಂಕ ನೀಡಲಾಗಿದೆ. ಜತೆಗೆ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ವಹಣೆ ಮತ್ತು ನಗರದಲ್ಲಿನ ಬ್ಲ್ಯಾಕ್‌ಸ್ಪಾಟ್‌ಗಳಿಗೆ ಸಂಬಂಧಿಸಿದಂತೆ 1 ಸಾವಿರ ಅಂಕಗಳಿಗೆ ಕೇವಲ 200 ಅಂಕ ನೀಡಲಾಗಿದೆ ಎಂಬ ಮಾಹಿತಿಯಿದೆ ಎಂದರು.
ಬಿಬಿಎಂಪಿ ಹಾಗೂ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಗಮನ ಹರಿಸದೆ ಕೇವಲ ಮೇಲ್ನೋಟಕ್ಕೆ ಕಾಣುವ ಅಂಶಗಳನ್ನಷ್ಟೇ ಪರಿಗಣಿಸಿ ಸ್ಥಾನ ನೀಡಿರುವುದು ಕೇಂದ್ರ ಸರ್ಕಾರದ ಸ್ವತ್ಛ ನಗರಗಳ ಪಟ್ಟಿ ನೋಡಿದಾಗ ತಿಳಿಯುತ್ತದೆ. ಕೇಂದ್ರ ನೀಡುವ ಸ್ಥಾನಕ್ಕಿಂತ ನಗರದಲ್ಲಿನ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡುವುದು ನಮ್ಮ ಗುರಿ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.