ನ್ಯಾಯಾಂಗ ತಲೆತಗ್ಗಿಸುವಂತೆ ಮಾಡಿದ ಕರ್ಣನ್
Team Udayavani, May 10, 2017, 9:42 AM IST
ಜ| ಕರ್ಣನ್ ಭಾರತೀಯ ನ್ಯಾಯಾಂಗಕ್ಕೆ ಮೆತ್ತಿದ ಮಸಿ ಎಷ್ಟು ತೊಳೆದರೂ ಮಾಸದ್ದು. ಈ ಪ್ರಕರಣ ದಾರಿ ತಪ್ಪುವ ನ್ಯಾಯಾಧೀಶರ ವಿರುದ್ಧ ವಾಗ್ಧಂಡನೆಗೂ ಮಿಗಿಲಾದ ಕಠಿನ ಕ್ರಮ ಕೈಗೊಳ್ಳುವ ವ್ಯವಸ್ಥೆಯೊಂದರ ಅಗತ್ಯವಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ.
ಜಸ್ಟಿಸ್ ಸಿ. ಎಸ್. ಕರ್ಣನ್ ದೇಶದ ನ್ಯಾಯಾಂಗದಲ್ಲಿ ಇತ್ತೀಚೆಗಿನ ಕೆಲ ಸಮಯದಿಂದ ಬಹು ಚರ್ಚಿತ ವ್ಯಕ್ತಿ. ನ್ಯಾಯಾಂಗ ವ್ಯವಸ್ಥೆಯ ಎಲ್ಲ ನೀತಿ ನಿಯಮಗಳಿಗೆ ಅತೀತ ತಾನೆಂದು ಭಾವಿಸಿರುವ ಜ| ಕರ್ಣನ್‌ಗೆ ಸುಪ್ರೀಂ ಕೋರ್ಟ್ ಈಗ ನ್ಯಾಯಾಂಗ ನಿಂದನೆ ಸಂಬಂಧ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದು, ತತ್‌ಕ್ಷಣ ಅವರ ಬಂಧನಕ್ಕೆ ಆದೇಶಿಸಿದೆ. ಸೇವೆಯಲ್ಲಿರುವ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಬಂಧನಕ್ಕೊಳಗಾಗಿ ಕಂಬಿ ಎಣಿಸುವ ಮೊದಲ ಪ್ರಕರಣ ಇದು. ಅಷ್ಟರಮಟ್ಟಿಗೆ ನ್ಯಾಯಾಂಗಕ್ಕೆ ಕಳಂಕ ಮೆತ್ತುವಲ್ಲಿ ಕರ್ಣನ್ ಸಫಲರಾಗಿದ್ದಾರೆ.
ಪ್ರಜಾಪ್ರಭುತ್ವದ ಮೂರು ಅಂಗಗಳ ಪೈಕಿ ನ್ಯಾಯಾಂಗಕ್ಕೆ ತನ್ನದೇ ಆದ ಪಾವಿತ್ರ್ಯವಿದೆ. ಜನರು ಉಳಿದೆರಡು ಅಂಗಗಳನ್ನು ಟೀಕಿಸಿದರೂ ನ್ಯಾಯಾಂಗದ ಬಗ್ಗೆ ವಿಶ್ವಾಸವನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಅಲ್ಲೊಂದು ಇಲ್ಲೊಂದು ಅಪವಾದಗಳಿದ್ದರೂ ನ್ಯಾಯಾಂಗ ಈ ವಿಶ್ವಾಸವನ್ನು ಉಳಿಸಿಕೊಂಡಿದೆ. ಅಂತಹ ಅಪವಾದ ಸ್ವರೂಪಿ ನ್ಯಾಯಾಧೀಶರುಗಳಲ್ಲಿ ಪ್ರಾಯಃ ಮೊದಲ ಹೆಸರು ಕರ್ಣನ್ ಅವರದು.
ಐದು ತಿಂಗಳ ಹಿಂದೆ ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನ ಕೆಲವು ನ್ಯಾಯಾಧೀಶರು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆಪಾದಿಸಿ, ಆ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿ ಪತ್ರ ಬರೆಯುವುದರೊಂದಿಗೆ ಜ| ಕರ್ಣನ್ ಪ್ರಹಸನ ಶುರುವಾಗಿತ್ತು. ಅನಂತರ ಜ| ಕರ್ಣನ್ ಮಾಡಿದ್ದೆಲ್ಲ ನ್ಯಾಯಾಂಗದ ಅಣಕ. ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನೇ ಅವರು ಆರೋಪಿ ಸ್ಥಾನದಲ್ಲಿ ಕಲ್ಪಿಸಿ ವಿಚಾರಣೆ ನಡೆಸಿದರು, ತನಗೆ ತಾನೇ ಭಡ್ತಿ ಕೊಟ್ಟುಕೊಂಡರು, ತನ್ನ ವರ್ಗಾವಣೆಗೆ ತಾನೇ ತಡೆಯಾಜ್ಞೆ ವಿಧಿಸಿಕೊಂಡರು. ಹಲವು ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದರು, ದಲಿತ ಎಂಬ ಕಾರಣಕ್ಕೆ ತನ್ನ ಬಗ್ಗೆ ಬೇಧ ಪ್ರದರ್ಶಿಸಲಾಗುತ್ತಿದೆ ಎಂದು ಜಾತಿಮೂಲವನ್ನು ಎಳೆತಂದರು. ಜ| ಕರ್ಣನ್ ತನ್ನ ಪ್ರತಿಯೊಂದು ವರ್ತನೆಯ ಮೂಲಕವೂ ಭಾರತೀಯ ನ್ಯಾಯಾಂಗ ಇದು ತನಕ ಕಂಡರಿಯದಷ್ಟು ಕೆಳಕ್ಕೆ ತಲೆತಗ್ಗಿಸುವಂತೆ ಮಾಡಿದ್ದಾರೆ, ಸರ್ವೋಚ್ಚ ನ್ಯಾಯಾಲಯದ ಸಾರ್ವಭೌಮತೆಗೆ ಕೂಡ ಸವಾಲು ಹಾಕಿದ್ದಾರೆ. ಅವರನ್ನು ನ್ಯಾಯಾಧೀಶರಾಗಿ ಮುಂದುವರಿಯಗೊಟ್ಟದ್ದೇ ಪ್ರಜಾಪ್ರಭುತ್ವ ಮತ್ತು ದೇಶದ ಕಾನೂನಿನ ಅಣಕದಂತಿತ್ತು.
ಏನೇ ಆದರೂ ಬುದ್ಧಿ ಕಲಿಯದ ಕರ್ಣನ್ ನಿನ್ನೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಜ| ಜೆ. ಎಸ್. ಖೇಹರ್ ಹಾಗೂ ಇತರ ಆರು ನ್ಯಾಯಾಧೀಶರಿಗೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯಿದೆಯಡಿಯಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡುವ ಮೂಲಕ ಆಟೋಪದ ಪರಮಾವಧಿಯನ್ನು ತೋರಿಸಿಕೊಟ್ಟಿದ್ದಾರೆ.
ಜಸ್ಟಿಸ್ ಕರ್ಣನ್ ಪ್ರಕರಣ ದಾರಿ ತಪ್ಪುವ ನ್ಯಾಯಾಧೀಶರ ವಿರುದ್ಧ ವಾಗ್ಧಂಡನೆಗೂ ಮಿಗಿಲಾದ ಕಠಿನ ಕ್ರಮ ಕೈಗೊಳ್ಳುವ ವ್ಯವಸ್ಥೆಯೊಂದರ ಅಗತ್ಯವಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ನ್ಯಾಯಾಧೀಶರ ದುರ್ವರ್ತನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಸ್ತಿನ ಪಾಠ ಕಲಿಸುವ ವ್ಯವಸ್ಥೆಯನ್ನು ಕ್ಷಿಪ್ರವಾಗಿ ಜಾರಿಗೆ ತರುವ ಹೊಣೆ ಸರಕಾರ ಮತ್ತು ಸುಪ್ರೀಂ ಕೋರ್ಟ್ ಮೇಲಿದೆ. ಪ್ರಸ್ತುತ ಕಳಂಕಿತ ನ್ಯಾಯಾಧೀಶರ ವಿರುದ್ಧ ತನಿಖೆಗೆ ನ್ಯಾಯಾಧೀಶರನ್ನೇ ಒಳಗೊಂಡ ಸಮಿತಿ ರಚಿಸಲಾಗುತ್ತದೆ. ಆದರೆ ನ್ಯಾಯಾಧೀಶರು ತಪ್ಪು ಎಸಗಿರುವುದು ಸಾಬೀತಾದರೂ ಅವರನ್ನು ಅಮಾನತು ಅಥವಾ ವಜಾಗೊಳಿಸುವ ಕಾನೂನು ಸಾಧ್ಯತೆ ಇಲ್ಲ. ತಪ್ಪಿತಸ್ಥ ನ್ಯಾಯಾಧೀಶರನ್ನು ವರ್ಗಾಯಿಸುವ ಪರಂಪರಾಗತ ಕ್ರಮ ಹೆಚ್ಚಿನ ಪರಿಣಾಮ ಬೀರದು ಎನ್ನುವುದು ಆಗಾಗ ಸಾಬೀತಾಗುತ್ತಿರುತ್ತದೆ.
ದಾರಿ ತಪ್ಪುವ ನ್ಯಾಯಾಧೀಶರನ್ನು ಹದ್ದುಬಸ್ತಿನಲ್ಲಿಡುವ ಸಲುವಾಗಿ 2006ರಲ್ಲಿ ನ್ಯಾಯಾಧೀಶರ ವಿಚಾರಣಾ ಮಸೂದೆಯನ್ನು ರಚಿಸಲಾಗಿತ್ತು. ಆದರೆ ನ್ಯಾಯಾಧೀಶರ ವಿರುದ್ಧ ಅನ್ಯರಿಂದ ತನಿಖೆ ನ್ಯಾಯಸಮ್ಮತವಲ್ಲ ಎಂಬ ಅಭಿಪ್ರಾಯ ಕೇಳಿ ಬಂದ ಬಳಿಕ ಈ ಮಸೂದೆಯನ್ನು ಕೈಬಿಡಲಾಯಿತು. ಕರ್ಣನ್ ಪ್ರಕರಣ ನ್ಯಾಯಾಧೀಶರನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯ ವೈಫಲ್ಯವನ್ನೂ ಎತ್ತಿ ತೋರಿಸಿದೆ. ನ್ಯಾಯಾಧೀಶರ ಆಯ್ಕೆಯಲ್ಲಿ ಇನ್ನೂ ಹೆಚ್ಚಿನ ಪಾರದರ್ಶಕತೆ, ದಕ್ಷತೆಯನ್ನು ತರುವ ಅಗತ್ಯವನ್ನು ಈ ಪ್ರಕರಣ ಒತ್ತಿ ಹೇಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.