ಪರೀಕ್ಷಾ ಅಕ್ರಮಕ್ಕೆ ಫುಲ್ ಬ್ರೇಕ್: ಸಚಿವ ತನ್ವೀರ್ ಸೇಠ್
Team Udayavani, May 12, 2017, 11:09 AM IST
ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಶೇ.52.38ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಮಲ್ಲೇಶ್ವರದ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಗುರುವಾರ ಫಲಿತಾಂಶ ಘೋಷಿಸಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಪರೀಕ್ಷಾ ಅಕ್ರಮ ಅನೇಕ ವರ್ಷದಿಂದ ನಡೆಯುತ್ತಿದ್ದು, ಈ ವರ್ಷ ಎಲ್ಲದಕ್ಕೂ ಬ್ರೇಕ್ ಹಾಕಿದ್ದೇವೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳ ಶ್ರಮದ ಫಲಿತಾಂಶ ಬಂದಿದೆ.
ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ಮಾಹಿತಿ ಪಡೆದು, ಅಂಥ ಕಾಲೇಜಿನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಹಾಗೂ ಅಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದರು.
ಎನ್‌ಸಿಆರ್‌ಟಿ ಪಠ್ಯಕ್ರಮದಿಂದ ಏನೂ ಸಮಸ್ಯೆಯಾಗಿಲ್ಲ. ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಮ್ ಜಾರಿ ಮಾಡಿದ ನಂತರ ಪರೀಕ್ಷಾ ಅಕ್ರಮ ಕಡಿಮೆಯಾಗಿದೆ. ಜಿಲ್ಲಾ ಖಜಾನೆ ಮೂಲಕವೇ ಪ್ರಶ್ನೆಪತ್ರಿಕೆ ನೀಡಲಾಗಿದೆ. ವಿದ್ಯಾರ್ಥಿಗಳು ಓದಿದ ಕಾಲೇಜಿನಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಹಾಗೂ ಎಲ್ಲೆಡೆ ಸಿಸಿ ಕ್ಯಾಮರಾ ಅಳವಡಿಸಿ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಭದ್ರತೆ ನೀಡಿರುವುದರಿಂದ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ನಿಜವಾದ ಶ್ರಮದ ಫಲಿತಾಂಶ ಬಂದಿದೆ ಎಂದು ಕಡಿಮೆ ಫಲಿತಾಂಶವನ್ನು ಸಮರ್ಥಿಸಿಕೊಂಡರು.
ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ. ಬದಲಾಗಿ ಚೇಷ್ಠೆ ಮಾಡಿದವರನ್ನು ಬಂಧಿಸಿದ್ದೇವೆ. ಬೀದರ್ ಕೇಂದ್ರದಲ್ಲಿ ಓರ್ವ ವಿದ್ಯಾರ್ಥಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಆ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಬೋರ್ಡ್ ಮೇಲೆ ಬರೆದು ನಕಲಿಗೆ ಅವಕಾಶ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿದೆ. ಈ ವರ್ಷದ ಫಲಿತಾಂಶದ ಆಧಾರದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಹಾಗೂ ಬೋಧನ ವಿಧಾನದ ಬದಲಾವಣೆಗೆ ಕಾರ್ಯತಂತ್ರ ಸಿದ್ಧಪಡಿಸಲಿದ್ದೇವೆ ಎಂದು ಹೇಳಿದರು. ಪಿಯು ಇಲಾಖೆ ನಿರ್ದೇಶಕಿ ಸಿ.ಶಿಖಾ ಸುದ್ದಿಗೋಷ್ಠಿಯಲ್ಲಿದ್ದರು.
ಮರು ಪರೀಕ್ಷೆ
ದ್ವಿತೀಯ ಪಿಯುದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನು ಜೂನ್ 28ರಿಂದ ಜುಲೈ 8ರತನಕ ನಡೆಸಲಾಗುತ್ತದೆ. ಪರೀಕ್ಷಾ ಶುಲ್ಕ ಪಾವತಿಸಲು ಮೇ 23 ಕೊನೆಯ ದಿನವಾಗಿರುತ್ತದೆ. ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮೇ 24ರ ತನಕ ಕಾಲಾವಕಾಶವಿದ್ದು, ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಇದರ ಫಲಿತಾಂಶವನ್ನು ಆಯಾ ದಿನವೇ ಪಿಯು ಇಲಾಖೆ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಉತ್ತರ ಪತ್ರಿಕೆ ಮರು
ಮೌಲ್ಯಮಾಪನ
ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 24 ಕೊನೆಯ ದಿನವಾಗಿದ್ದು, ಪ್ರತಿ ವಿಷಯಕ್ಕೆ 1,260ರೂ. ನಿಗದಿ ಮಾಡಲಾಗಿದೆ. ಮರು ಮೌಲ್ಯಮಾಪನದ ಆಧಾರದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಸ್ಕ್ಯಾನಿಂಗ್ ಪ್ರತಿಗೆ ಮೇ 19ರೊಳಗೆ ಅರ್ಜಿ ಸಲ್ಲಿಸಬೇಕು ಮತ್ತು ಪ್ರತಿ ವಿಷಯಕ್ಕೆ 400 ರೂ. ಶುಲ್ಕ ವಿಧಿಸಲಾಗುತ್ತದೆ.
ಕನ್ನಡ ಮಾಧ್ಯಮ ಎತ್ತ ಸಾಗುತ್ತಿದೆ?
ಈ ವರ್ಷದ ದ್ವಿತೀಯ ಪಿಯು ಫಲಿತಾಂಶದಲ್ಲಿ ಗಮನಿಸಲೇ ಬೇಕಾದ ಎರಡು ಅಂಶವೆಂದರೆ ಕನ್ನಡ ಮಾಧ್ಯಮ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳ ಪಾಸಿಂಗ್ ಫಲಿತಾಂಶ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ಸೇರಿ ಮಾಧ್ಯಮವಾರು ಫಲಿತಾಂಶದಲ್ಲಿ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳು ಶೇ.61.41ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ. ರಾಜ್ಯದ ಆಡಳಿತ ಭಾಷೆಯಾಗಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಶೇ.40.68ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ.
ಅಂದರೆ, ಕನ್ನಡ ಮತ್ತು ಆಂಗ್ಲ ಮಾಧ್ಯಮದ ನಡುವಿನ ಫಲಿತಾಂಶದ ಅಂತರ ಶೇ.20.73ರಷ್ಟಿದೆ. ಹಾಗೆಯೇ ಕಲಾ ವಿಭಾಗದಡಿ ಪರೀಕ್ಷೆ ಬರೆದ 2,14,469 ವಿದ್ಯಾರ್ಥಿಗಳ ಪೈಕಿ 1,39,303 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದರು ಕೇವಲ ಶೇ.35ರಷ್ಟು ಮಂದಿ ಮಾತ್ರ. ವಿಜ್ಞಾನ ವಿಭಾಗದ ಶೇ.60.71ರಷ್ಟು ಹಾಗೂ ವಾಣಿಜ್ಯ ವಿಭಾಗದ ಶೇ.60.09ರಷ್ಟು ತೇರ್ಗಡೆ ಪ್ರಮಾಣ ಇದೆ.
ಕಡಿಮೆ ಫಲಿತಾಂಶಕ್ಕೆ ಕಾರಣವೇನು?
ಕಲಾ ವಿಭಾಗದಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಬಂದಿರುವುದೇ ಪಿಯು ಫಲಿತಾಂಶ ಶೇಕಡವಾರು ಕಡಿಮೆ ಬರಲು ಮೂಲ ಕಾರಣವಾಗಿದೆ. ಗ್ರಾಮೀಣ ಭಾಗದ ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರ ಜತೆಗೆ ಜಿಲ್ಲಾ ಖಜಾನೆಯಿಂದಲೇ ಪ್ರಶ್ನೆಪತ್ರಿಕೆಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಲಾಗಿತ್ತು. ಹೀಗಾಗಿ ನಕಲು ಮತ್ತು ಪ್ರಶ್ನೆ ಪತ್ರಿಕೆ ಬಹಿರಂಗಕ್ಕೆ ಅವಕಾಶವಿರಲಿಲ್ಲ. ಹಾಗೆಯೇ ವಿಜ್ಞಾನದಲ್ಲಿ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಅಳವಡಿಸಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ. ಅಲ್ಲದೇ ವಾಣಿಜ್ಯ ವಿಭಾಗದಲ್ಲೂ ನಿರೀಕ್ಷೆಯಷ್ಟು ಫಲಿತಾಂಶ ಬಂದಿಲ್ಲ. ನಕಲು ಮತ್ತು ಪರೀಕ್ಷಾ ಕೇಂದ್ರದ ಭದ್ರತಾ ವ್ಯವಸ್ಥೆಯನ್ನು ಸುಧಾರಿಸಿರುವುದೇ ಕಲಾ ವಿಭಾಗದಲ್ಲಿ ಕಡಿಮೆ ಫಲಿತಾಂಶ ಬರಲು ಕಾರಣ ಎಂದು ಶಿಕ್ಷಣ
ಇಲಾಖೆ ಅಧಿಕಾರಿಗಳೇ ಹೇಳುತ್ತಾರೆ.
ವಿಜ್ಞಾನದಲ್ಲಿ ಟೈಲರ್
ಪುತ್ರಿಗೆ ಶೇ.97 ಅಂಕ
ತುಮಕೂರು ನಗರದ ಸರ್ವೋದಯ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದರ್ಜಿಯೊಬ್ಬರ ಪುತ್ರಿ ದೀಕ್ಷಿತಾ ಶೇ.97 (584 ಅಂಕ) ಪಡೆದುಕೊಂಡಿದ್ದಾರೆ. ಈಕೆಗೆ ತಂದೆ ಇಲ್ಲ. ತಾಯಿ ಅನ್ನಪೂರ್ಣ ಟೈಲರಿಂಗ್ ಕೆಲಸ ಮಾಡಿ ಮಗಳನ್ನು ಓದಿಸಿದ್ದು, ಕನ್ನಡ-98, ಇಂಗ್ಲಿಷ್-91, ಭೌತಶಾಸ್ತ್ರ100, ರಸಾಯನ ಶಾಸ್ತ್ರ-99, ಗಣಿತ-100, ಜೀವಶಾಸ್ತ್ರದಲ್ಲಿ 96 ಅಂಕ ಗಳಿಸಿದ್ದಾರೆ.
ಡಿಬಾರ್ ಆದವರು
ಪಿಯು ಪರೀಕ್ಷೆಯಲ್ಲಿ ನಕಲು ಮಾಡಿದ್ದ ಅಥವಾ ಪರೀಕ್ಷಾ ಅವ್ಯವಹಾರ ನಡೆಸಿದ 48 ವಿದ್ಯಾರ್ಥಿ ಗಳನ್ನು ಡಿಬಾರ್ ಮಾಡಲಾಗಿತ್ತು. ಇದರಲ್ಲಿ 8 ವಿದ್ಯಾರ್ಥಿಗಳು.
ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳು
ಪ್ರತಿವರ್ಷ ದ್ವಿತೀಯ ಪಿಯು ಫಲಿತಾಂಶದಲ್ಲಿ ಶೂನ್ಯ ಫಲಿತಾಂಶದ ಕಾಲೇಜುಗಳು ಇದ್ದೇ ಇರುತ್ತದೆ. ಆದರೆ, ಈ ವರ್ಷ ಶೂನ್ಯ ಫಲಿತಾಂಶ ಪಡೆದ ಕಾಲೇಜಿನ ಸಂಖ್ಯೆ 100ಕ್ಕೂ ಅಧಿಕ ಇದೆ. 2016ರಲ್ಲಿ ಒಂದು ಸರ್ಕಾರಿ ಪಿಯು ಕಾಲೇಜಿಗೆ ಶೂನ್ಯ ಫಲಿತಾಂಶ ಬಂದಿದ್ದರೆ, ಈ ವರ್ಷ 3 ಕಾಲೇಜಿಗೆ ಶೂನ್ಯ ಫಲಿತಾಂಶ ಬಂದಿದೆ. ಹಾಗೆಯೇ ಅನುದಾನಿತ ಪಿಯು ಕಾಲೇಜು ಹಾಗೂ ಅವಿಭಜಿತ ಪಿಯು ಕಾಲೇಜಿ ನಲ್ಲೂ ತಲಾ ಒಂದೊಂದು ಶೂನ್ಯ ಫಲಿತಾಂಶ ಪಡೆದಿದೆ. 127 ಖಾಸಗಿ ಪಿಯು ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿದ್ದು , ರಾಜ್ಯಕ್ಕೆ ಮುಜುಗರ ಉಂಟುಮಾಡಿದೆ.
ಕರಾವಳಿಯ 2 ಜಿಲ್ಲೆಗಳಿಗೆ ಅಗ್ರಸ್ಥಾನ
ಪ್ರತಿ ವರ್ಷದಂತೆ ಈ ವರ್ಷವೂ ಕರಾವಳಿಯ 2 ಜಿಲ್ಲೆಗಳು ಅಗ್ರಸ್ಥಾನದಲ್ಲಿವೆ. ಕೊಡಗು 3ನೇ ಸ್ಥಾನದಲ್ಲಿದೆ. 2016ರ
ಪಿಯು ಫಲಿತಾಂಶದಲ್ಲಿ ಎರಡನೇ ಸ್ಥಾನದಲ್ಲಿದ್ದ ಉಡುಪಿ ಈ ವರ್ಷ ಮೊದಲ ಸ್ಥಾನಕ್ಕೇರಿದೆ. ಹಾಗೆಯೇ ಮೊದಲ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಎರಡನೇ ಸ್ಥಾನಕ್ಕೆ ಇಳಿದಿದೆ. ಉತ್ತರ ಕನ್ನಡ 4ನೇ ಸ್ಥಾನದಲ್ಲೇ ಇದೆ. ಚಿಕ್ಕಮಗಳೂರು 8ರಿಂದ ಐದಕ್ಕೇರಿದೆ. ಬೀದರ್ 27ರಿಂದ 31ನೇ ಸ್ಥಾನಕ್ಕೆ ಇಳಿದಿದೆ.
ನಾನು ಅಪ್ಪ-ಅಮ್ಮಂದಿರಿಗೆ ಮನೆಯ ಕೆಲಸ ಕಾರ್ಯಗಳಲ್ಲಿ ನೆರವಾಗುತ್ತಾ ಓದಿದೆ. ನಮ್ಮೂರಿನಿಂದ 11 ಕಿಮೀ ದೂರದಲ್ಲಿರುವ ಕೊಟ್ಟೂರಿಗೆ ಪ್ರತಿ ನಿತ್ಯ ಬಸ್‌ನಲ್ಲಿ ಓಡಾಡುತ್ತಾ, ಓದುತ್ತಾ ಪರೀಕ್ಷೆ ಬರೆದೆ. ಪ್ರಥಮ ಮೂರು ರ್‍ಯಾಂಕ್‌ಗಳಲ್ಲಿ ಒಂದನ್ನು ಗಳಿಸುವ ವಿಶ್ವಾಸ ನನ್ನಲ್ಲಿತ್ತು. ಪ್ರತಿ ದಿನ 8 ರಿಂದ 10 ತಾಸುಗಳ ಕಾಲ ಓದುತ್ತಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರು ಅಂದು ಮಾಡಿದ ಪಾಠವನ್ನು ಅಂದೇ ಓದಿ ಅರ್ಥ ಮಾಡಿಕೊಳ್ಳುತ್ತಿದ್ದೆ.
– ಬಿ.ಚೆ„ತ್ರಾ, ಫಸ್ಟ್ ರ್‍ಯಾಂಕ್, ಕಲಾ ವಿಭಾಗ
ರಾತ್ರಿ ಪೂರ್ತಿ ನಿದ್ದೆ ಬಿಟ್ಟು ಓದಿದವಳು ನಾನಲ್ಲ. ದಿನಕ್ಕೆ ಸುಮಾರು ಎರಡು ಗಂಟೆಗಳ ಕಾಲ ಮಾತ್ರ ಓದುತ್ತಾ ಇದ್ದೆ. ಶಾಲೆ ಬಿಟ್ಟು ಬಂದಾಗ ಸಂಜೆ 5ರಿಂದ 7ರ ತನಕ ಮಾತ್ರ ತಾನು ಓದುವುದಕ್ಕಾಗಿ ಸಮಯವನ್ನು ಮೀಸಲಾಗಿಡುತ್ತಿದ್ದೆ. ಯಾವುದೇ ಟ್ಯೂಷನ್‌ಗೆ ಹೋಗಿಲ್ಲ. ಮಾಹಿತಿ ವಿಜ್ಞಾನದಲ್ಲಿ ಎಂಜಿನಿಯರ್ ಆಗುವ ಆಸೆಯಿದೆ.
– ರಾಧಿಕಾ ಪೈ, ಫಸ್ಟ್ ರ್‍ಯಾಂಕ್, ವಿಜ್ಞಾನ ವಿಭಾಗ
ಅಳಿಕೆಯಲ್ಲಿ ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣವಿದ್ದು, ಉಪನ್ಯಾಸಕರು ವಿಶೇಷ ಜ್ಞಾನ ಹೊಂದಿದ್ದಾರೆ. ಪರಿಣಿತ ಉಪನ್ಯಾಸಕರು ಉತ್ತಮ ತರಬೇತಿ ನೀಡುತ್ತಾರೆ. ಕಾಲೇಜು ಅವಧಿ ಮುಗಿದ ಬಳಿಕವೂ ಯಾವುದೇ ಹೊತ್ತಲ್ಲಿ ಬೇಕಿದ್ದರೂ ಕಲಿಸುತ್ತಾರೆ. ಸಿಎ ಮಾಡುವ ಉದ್ದೇಶದಿಂದ ಉಡುಪಿ ತೃಷಾ ಕೋಚಿಂಗ್ ಸೆಂಟರ್‌ನಲ್ಲಿ ಕಾಮನ್ ಪ್ರೊಪೀಶಿಯನ್ಸಿ ಟೆಸ್ಟ್ (ಸಿಪಿಟಿ)ಗೆ ಕೋಚಿಂಗ್ ಪಡೆಯುತ್ತಿದ್ದೇನೆ. ಸಿಎ ಬಳಿಕ ಎಂಬಿಎ ಮಾಡಬೇಕೆಂದಿದ್ದೇನೆ.
– ಸಾಯಿ ಸಮರ್ಥ್, ಫಸ್ಟ್ ರ್‍ಯಾಂಕ್, ವಾಣಿಜ್ಯ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.