ನನ್ನವ್ವ ಬದುಕಿದ್ದು ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ..


Team Udayavani, May 14, 2017, 3:45 AM IST

lead.jpg

ಹೆಣ್ಣು ಮತ್ತು ಮಾತೃತ್ವ ಒಂದೇ ನಾಣ್ಯದ ಎರಡು ಮುಖಗಳಂತೆ. ಪ್ರಕೃತಿಯು ಹೆಣ್ಣಿಗೆ ಕೊಟ್ಟಿರುವ ವರ ಮಾತೃತ್ವ. ಇಂದು ಅಮ್ಮಂದಿರ ದಿನ, ಹಾಗಾಗಿ ಈ ಲೇಖನ…

ಬನದ ಕರಡಿಯ ಹಾಗೆ
ಚಿಕ್ಕ ಮಕ್ಕಳ ಹೊತ್ತು
ಗಂಡನ್ನ ಸಾಕಿದಳು, ಕಾಸು ಗಂಟಿಕ್ಕಿದಳು
ನೊಂದ ನಾಯಿಯ ಹಾಗೆ ಬೈದು ಗೊಣಗಿ ಗುದ್ದಾಡಿದಳು;
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು ಅನ್ನ , ರೊಟ್ಟಿ , ಹಚಡಕ್ಕೆ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.

ಲಂಕೇಶರ ಅವ್ವ  ಕವಿತೆಯನ್ನು ಮೊತ್ತಮೊದಲ ಬಾರಿ ಓದಿದಾಗ ನನಗಾದ ತಲ್ಲಣವು ಅಷ್ಟಿಷ್ಟಲ್ಲ. ಅವುಗಳು ನನ್ನ ಬಾಲ್ಯದ ದಿನಗಳಾಗಿರಬಹುದೇನೋ. ಆಗ ಲಂಕೇಶ್‌ ಆಗಲೀ, ಲಂಕೇಶ್‌ ಪತ್ರಿಕೆಯಾಗಲೀ, ಕನ್ನಡದ ಸಾಹಿತ್ಯಲೋಕದಲ್ಲಿ, ಪತ್ರಿಕೋದ್ಯಮದಲ್ಲಿ ಅವರು ಎಬ್ಬಿಸಿದ್ದ ಹೊಸಗಾಳಿಯ ಬಗ್ಗೆಯಾಗಲೀ ನನಗೆ ತಿಳಿದಿರಲಿಲ್ಲ. ಆದರೆ ಈ ಒಂದು ಕವಿತೆಯು ಲಂಕೇಶರೆಂಬ ದೈತ್ಯಪ್ರತಿಭೆಯನ್ನು, ನಾನಿನ್ನೂ ಕಂಡಿರದಿದ್ದ ಜ್ಞಾನಸಾಗರವನ್ನು ಬೆರಳೆಣಿಕೆಯ ಸಾಲುಗಳಲ್ಲಿ ಪರಿಚಯಿಸಿದ್ದಂತೂ ಸತ್ಯ. ಮುಂದೆ ಲಂಕೇಶರ “ನೀಲು’ ಕಾವ್ಯಗಳ ಆಳದಲ್ಲಿ ಮಿಂದೆದ್ದಾಗಲೂ ಇಂಥದ್ದೇ ಅನುಭವವಾಗಿದ್ದು ಹೌದು. ಅಂತೂ ನನ್ನ ಪುಣ್ಯ! ತಡವಾಗಿಯಾದರೂ ಕವಿತೆಯ ನೆಪದಲ್ಲಿ ಆ ಹೊಸ ಗಾಳಿಯು ಲಂಕೇಶರ ಅಸಂಖ್ಯಾತ ಓದುಗರಂತೆ, ಅಭಿಮಾನಿಗಳಂತೆ ನನ್ನಲ್ಲೂ ಜೋರಾಗಿಯೇ ಬೀಸಿತ್ತು. 

ಇವೆಲ್ಲದಕ್ಕೂ ಮಿಗಿಲಾಗಿ ಲಂಕೇಶರ ಈ ಕವಿತೆಯಿಂದಾಗಿ ಅಮ್ಮ ಎಂಬ ಅದ್ಭುತವು ಹೊಸದೊಂದು ಆಯಾಮದಲ್ಲಿ ನನ್ನೆದುರಿಗೆ ಬಂದು ನಿಂತಿತ್ತು. ನಾನು ತೀರಾ ಗ್ರಾಮೀಣ ಪ್ರದೇಶದಲ್ಲಿ ಬೆಳೆದವನೇನೂ ಅಲ್ಲವಾದ್ದರಿಂದ ಲಂಕೇಶರ ಅವ್ವ ಕವಿತೆಯಲ್ಲಿ ಬರುವ ಹೊಲ, ಪಲ್ಲ ಜೋಳ, ಕೆಟ್ಟ ಪೈರು, ಸತ್ತ ಕರು, ಮುದಿ ಎಮ್ಮೆ, ಕಾಳುಕಡ್ಡಿ- ಇತ್ಯಾದಿಗಳಾವುವೂ ನನಗೆ ಅಷ್ಟಾಗಿ ದಕ್ಕಿರಲಿಲ್ಲವಾದರೂ ಆ ಕವಿತೆಯಲ್ಲಿ ಗುಪ್ತಗಾಮಿನಿಯಂತೆ ಪ್ರವಹಿಸುತ್ತಿದ್ದ ಅಮ್ಮನನ್ನು, ಅಮ್ಮನ ತಲ್ಲಣಗಳನ್ನು, ಅಮ್ಮನ ಕ್ಷಣಕ್ಷಣದ ಹೋರಾಟದ ಜೀವನವನ್ನು ನಾನು ಅಪ್ಪಿಕೊಂಡಿದ್ದೆ. ಅವ್ವ ಕವಿತೆಯು ಎಲ್ಲರಲ್ಲೂ ಇಳಿದುಹೋದ ಮತ್ತು ಉಳಿದುಹೋದ ಕಾರಣವೇ ಇದಾಗಿರಬಹುದೇನೋ. ಜಗತ್ತಿನ ಎಲ್ಲಾ ಅಮ್ಮಂದಿರ ನಾಡಿಮಿಡಿತಗಳನ್ನು, ನಿಟ್ಟುಸಿರನ್ನು, ಜೀವನವೆಂಬ ನಿತ್ಯದ ಹೋರಾಟವನ್ನು, ಪ್ರೀತಿಯ ಸಾಗರವನ್ನು ಲಂಕೇಶರು ಕವಿತೆಯಲ್ಲಿ ಕಟ್ಟಿಕೊಟ್ಟಿದ್ದರು. ಬಹುಶಃ ಬರವಣಿಗೆಯ ಶಕ್ತಿ ಎಂದರೆ ಇದೇ ಇರಬೇಕು. 

ಒಂದು ಕಿರುಚಿತ್ರದ ಕುರಿತು…
ಕೆಲವೇ ತಿಂಗಳುಗಳ ಹಿಂದೆ ವಿಶಿಷ್ಟವಾದ ಕಿರುಚಿತ್ರವೊಂದು ನನಗೆ ನೋಡಲು ಸಿಕ್ಕಿತ್ತು. ಅಲ್ಲೊಂದು ದೊಡ್ಡ ಮನೆ. ಮನೆಯ ಯಜಮಾನ ಆ ದಿನದ ನೌಕರಿಯನ್ನು ಮುಗಿಸಿ ಆಫೀಸಿನಿಂದ ಸುಸ್ತಾಗಿ ಬಂದಿದ್ದಾನೆ. ಅಂಗಳದಲ್ಲಿ ತನ್ನಿಬ್ಬರು ಮಕ್ಕಳು ತನ್ನಷ್ಟಕ್ಕೇ ಆಡಿಕೊಳ್ಳುತ್ತಿವೆ. ಇಂದು ಮನೆಬಾಗಿಲಿನಲ್ಲಿ ಎಂದಿನಂತೆ ಎದುರುಗೊಳ್ಳುವ ಗೃಹಿಣಿಯ ಸುಳಿವಿಲ್ಲ. ಇವತ್ತೇನಪ್ಪಾ$ಇಂಥಾ ಬದಲಾವಣೆ ಎಂದು ಆತ ಮನೆಯೊಳಕ್ಕೆ ಬಂದರೆ ಮನೆಯ ಡ್ರಾಯಿಂಗ್‌ ರೂಮು ವಿಚಿತ್ರವಾಗಿ ಕಾಣುತ್ತಿದೆ. ಮನೆಯ ವಸ್ತುಗಳು ಎಲ್ಲೆಂದರಲ್ಲಿ ಬಿದ್ದುಕೊಂಡಿವೆ. ಮಕ್ಕಳು ತಿಂದೆಸೆದ ಕುರುಕಲು ತಿಂಡಿಗಳ ತುಣುಕುಗಳು, ಅವುಗಳ ಖಾಲಿ ಪ್ಯಾಕೆಟ್ಟುಗಳು ಅಲ್ಲಲ್ಲಿ ಚೆಲ್ಲಾಡಿವೆ. ದಿನಪತ್ರಿಕೆಗಳು, ಪುಸ್ತಕಗಳು ಹರಡಿಕೊಂಡಿವೆ.

ಅಡುಗೆಕೋಣೆಗೆ ಬಂದರೆ ತೊಳೆಯದೇ ಇಟ್ಟ ಪಾತ್ರೆಗಳ ಪರ್ವತವೇ ಇದೆ. “ಮನೆಯೆಂದರೆ ಹೀಗಿಡುವುದೇ? ಎಲ್ಲಿದ್ದಾಳೆ ಇವಳು’ ಎಂದು ಯೋಚಿಸುತ್ತಾ ಮುನಿಸಿನಿಂದಲೇ ಒಳಹೋಗುವ ಆತನಿಗೆ ಉಳಿದ ಕೋಣೆಗಳೂ ಅಂಥಾ ಸ್ಥಿತಿಯಲ್ಲೇ ಕಾಣುತ್ತದೆಯೇ ಹೊರತು ಗೃಹಿಣಿಯಾಗಿರುವ ಪತ್ನಿ ಮಾತ್ರ ಕಾಣುವುದಿಲ್ಲ. 

ಅಸ್ತವ್ಯಸ್ತವಾಗಿರುವ ಮನೆಯನ್ನು ಕಂಡು ತನ್ನಷ್ಟಕ್ಕೇ ಬುಸುಗುಡುತ್ತಿದ್ದವನ ಗೊಣಗಾಟವು ನಿಮಿಷಗಳು ಉರುಳಿದಂತೆ ಭಯವಾಗಿ ಬದಲಾಗಿರುತ್ತದೆ. ತನ್ನ ಪತ್ನಿಗೇನಾದರೂ ಆಗಿರಬಹುದೇ? ಹಾಗೇನಾದರೂ ಆಗಿದ್ದರೆ ತನ್ನ ಮತ್ತು ಮಕ್ಕಳ ಗತಿಯೇನು? ಈ ಮನೆಯನ್ನು ಸಂಭಾಳಿಸುವವರು ಯಾರು? ಹೀಗೆ ಅಸಂಖ್ಯಾತ ಪ್ರಶ್ನೆಗಳು ಅವನೊಳಗೆ ಮೂಡುತ್ತಾ ಚಿಂತೆಯ ಗೆರೆಗಳಾಗಿ ಅವನ ಹಣೆಯಲ್ಲಿ ಮೂಡತೊಡಗುತ್ತವೆ. ಇನ್ನು ಚಿತ್ರದ ಹಿನ್ನೆಲೆ ಸಂಗೀತವೂ ಅವನ ಎದೆಬಡಿತದೊಂದಿಗೇ ಮೇಳೈಸಿ ಪ್ರೇಕ್ಷಕನ ಮನದಲ್ಲೂ ಆತಂಕದ ತರಂಗವನ್ನು ಮೆಲ್ಲನೆ ಎಬ್ಬಿಸುತ್ತದೆ. ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಲಗುಬಗೆಯಿಂದ ದಾಪುಗಾಲಿಕ್ಕುತ್ತಾ ತನ್ನ ಪತ್ನಿಯನ್ನು ಹುಡುಕುವ ಆತನಿಗೆ ಕೊನೆಗೆ ಕೊಂಚವಷ್ಟೇ ತೆರೆದಿದ್ದ ಬೆಡ್‌ರೂಮಿನ ಬಾಗಿಲಸಂದಿಯಿಂದ ಹಾಸಿಗೆಯ ಮೇಲೆ ಮಲಗಿರುವಂತೆ ಕಾಣುವ ಅವಳ ಕಾಲುಗಳಷ್ಟೇ ಕಾಣುತ್ತಿವೆ. ಏನಾಗಿದೆಯೋ ಎಂಬ ಆತಂಕದಿಂದಲೇ ತಕ್ಷಣ ಕೋಣೆಯೊಳಗೆ ನುಗ್ಗುತ್ತಾನೆ ನಮ್ಮ ಕಥಾನಾಯಕ. 

ಅದೃಷ್ಟವಶಾತ್‌ ಅವನು ಯೋಚಿಸಿದಂಥದ್ದೇನೂ ಆಗಿಲ್ಲ. ಅವಳು ಆರಾಮಾಗಿ ಹಾಸಿಗೆಯಲ್ಲಿ ಪವಡಿಸಿ ಏನನ್ನೋ ಮಾಡುತ್ತಿದ್ದಾಳೆ. ತನ್ನದೇ ಲೋಕದಲ್ಲಿ ಸುಖವಾಗಿದ್ದಾಳೆ. ಅವಳನ್ನು ಸುರಕ್ಷಿತವಾಗಿ ನೋಡಿದ ತಕ್ಷಣವೇ ಹಿಂದೆ ಹೆಡೆಯೆತ್ತಿದ್ದ ಭಯಗಳೆಲ್ಲ ಮಾಯವಾಗಿ ಎಂದಿನ ದಾರ್ಷ್ಟ್ಯವು ಅವನಲ್ಲಿ ಮರಳುತ್ತದೆ. “”ಇದೇನೇ ನಿನ್ನ ಅವತಾರ? ಮನೆ ಹೇಗಿದೆ ಗೊತ್ತಾ? ನೀನಿಲ್ಲಿ ಆರಾಮಾಗಿ ಕೂತಿದ್ದೀಯಲ್ಲಾ, ಮನೆ ನೋಡು ಸಿಟಿಮಾರ್ಕೆಟ್ಟಿನಂತೆ ಗಬ್ಬೆದ್ದಿದೆ”, ಎಂಬರ್ಥದಲ್ಲಿ ಅವನೇನೋ ಗದರುತ್ತಾನೆ. “”ನಾನು ದಿನವಿಡೀ ಮನೆಯಲ್ಲಿ ಕುಳಿತು ಏನು ಮಾಡುತ್ತೇನೆ ಎಂದು ನೀನು ಯಾವಾಗಲೂ ಕೇಳುತ್ತಿರುತ್ತೀಯಲ್ಲಾ? ಅದಕ್ಕೇ ಇವತ್ತೇನೂ ಮಾಡಲಿಲ್ಲ ನೋಡು”, ಎಂದು ಅವಳು ನಗುಮುಖದಿಂದಲೇ ಉತ್ತರಿಸುತ್ತಾಳೆ. ಗೃಹಿಣಿಯೊಬ್ಬಳು ದಿನವಿಡೀ ಮನೆಯಲ್ಲಿ ಕುಳಿತು ಏನು ಮಾಡುತ್ತಿರುತ್ತಾಳೆ ಎಂಬ ಮೂರ್ಖಪ್ರಶ್ನೆಗೆ ಅವನಿಗೆ ಉತ್ತರವು ಸಿಕ್ಕಿರುತ್ತದೆ. ಮನೆಯು ಅಕ್ಷರಶಃ ದನದ ಕೊಟ್ಟಿಗೆಯಂತಾಗಿರುತ್ತದೆ. 

ಈ ಕಿರುಚಿತ್ರವನ್ನು ನೋಡಿದ ನಂತರ ಗೃಹಿಣಿಯಾಗಿರುವ ಪತ್ನಿಯರ ಅಥವಾ ತಾಯಂದಿರ ಹೇಳದೇ ಇರುವ ಮಾತುಗಳನ್ನು ಈ ದೃಶ್ಯಮಾಧ್ಯಮವು ಅದೆಷ್ಟು ಚೆನ್ನಾಗಿ ಪ್ರಸ್ತುತಪಡಿಸಿದೆ ಎಂದು ನನಗನಿಸಿತ್ತು. ತಾಯಿಯು ಗೃಹಿಣಿಯಾಗಲಿ ಅಥವಾ ಉದ್ಯೋಗಿಯಾಗಿರಲಿ ಅವಳ ತಾಯ್ತನದ ಜವಾಬ್ದಾರಿಯಲ್ಲೇನಾದರೂ ವ್ಯತ್ಯಾಸವಿದೆಯೇ? ನಿತ್ಯದ ಅಡುಗೆ, ಗಂಡನ ಟಿಫಿನ್‌ ಬಾಕ್ಸ್‌ , ಮಗುವಿನ ಹೋಮ್‌ವರ್ಕ್‌, ಒಗೆಯಬೇಕಾಗಿರುವ ಬಟ್ಟೆಗಳ ರಾಶಿ, ಗುಡಿಸಿ ಸಾರಿಸಬೇಕಾದ ಅಂಗಳ, ಮುಂಜಾನೆ ಹಾಲು ಹಾಕುವವನಿಗೆ ಕೊಡಬೇಕಾಗಿರುವ ಕಾಸು, ತೋಟಕ್ಕೆ ನೀರು, ಸಾಕಿರುವ ನಾಯಿಯೊಂದಿಗೆ ಹೋಗಲೇಬೇಕಾಗಿರುವ ಸಂಜೆಯ ಒಂದು ವಾಕ್‌, ಫ್ರೆಶ್‌ ಆಗಲೊಂದು ಕಾಫಿ, ನಾಳೆಯ ಅಡುಗೆ ಏನಾಗಬೇಕೆಂಬ ಎಂದಿನ ಯಕ್ಷಪ್ರಶ್ನೆ, ರಂಗೋಲಿ, ದಿನಸಿ, ಹಬ್ಬ-ಹರಿದಿನ… ಹೀಗೆ ಮನೆಯೆಂದರೆ ಎಲ್ಲೆಲ್ಲೂ ಎಲ್ಲವೂ ಅಮ್ಮನೇ. ಅದ್ಯಾವ ಮದರ್ಸ್‌ ಡೇ, ಬರ್ತ್‌ ಡೇ ಇತ್ಯಾದಿ “ಡೇ’ ಗಳು ಬಂದರೂ ಅಮ್ಮಂದಿರಿಗಂತೂ ಬಿಡುವು ಎಂಬುದಿಲ್ಲ. ಅಮ್ಮ ಜನ್ಮವೆತ್ತಿ ಬಂದಿದ್ದೇ ತನ್ನ ಕುಟುಂಬಕ್ಕಾಗಿ ಯಂತ್ರಮಾನವನಂತೆ ದುಡಿಯಲು ಎಂಬಂತೆ. 

“ಹೌಸ್‌’ ಎಂಬ ಕಟ್ಟಡ “ಹೋಮ್‌’ ಆಗುವ ಬೆರಗು
ಅಸಲಿಗೆ ಪ್ರಕೃತಿಯು ಹೆಣ್ಣಿಗೆ ಕೊಟ್ಟಿರುವ ವರವೇ ಅಂಥದ್ದು. ಹೆಣ್ಣು ಮತ್ತು ಮಾತೃತ್ವಗಳು ಒಂದೇ ನಾಣ್ಯದ ಎರಡು ಮುಖಗಳಂತೆ. ಸಂಸಾರ, ಹೆರಿಗೆ ಇತ್ಯಾದಿಗಳೆಲ್ಲಾ ನಂತರದ ವಿಷಯಗಳಾದರೂ ಹೆಣ್ಣು ಮಾನಸಿಕವಾಗಿ ಎಂದೋ ತಾಯಿಯಾಗಿರುತ್ತಾಳೆ. ಮಾತೃತ್ವ ಎನ್ನುವುದು ಅವಳ ವ್ಯಕ್ತಿತ್ವದಲ್ಲಿ, ನಡೆನುಡಿಗಳಲ್ಲಿ ಬಹುಬೇಗನೇ ಗೋಚರಿಸಿರುತ್ತದೆ. ಗಂಡು ಮಗುವು ಪಿಸ್ತೂಲಿನ ಆಟಿಕೆಯೊಂದಿಗೋ, ವೇಗದ ಕಾರಿನ ಆಟಿಕೆಯೊಂದಿಗೋ ವ್ಯಸ್ತವಾಗಿದ್ದರೆ ಅದೇ ವಯಸ್ಸಿನ ಹೆಣ್ಣುಮಗು ಮಾತ್ರ ಮನೆ-ಮನೆ ಆಟವಾಡುತ್ತಾ ಅಮ್ಮನ ಚಟುವಟಿಕೆಗಳನ್ನೇ ಆಟದಲ್ಲೂ ಅನುಸರಿಸುತ್ತಿರುತ್ತದೆ. ಅವಳ ಆಟಗಳಲ್ಲಿ ಅಮ್ಮನಂತೆಯೇ ಪ್ರೀತಿ, ಆರೈಕೆಗಳದ್ದೇ ಗಾಢ ನೆರಳು. ಇನ್ನು ಆಟದ ಹೊರಗೂ ಮನೆಯಲ್ಲಿ ತಾಯಿಯಷ್ಟೇ ಪ್ರಮುಖವಾದ ಪಾತ್ರವನ್ನು ಮನೆಯ ಮಗಳೂ ಬೇಗನೇ ಅರಿತು, ನಿರ್ವಹಿಸುತ್ತಾಳೆ. ಮನೆಯಲ್ಲಿ ತಮ್ಮನೋ, ತಂಗಿಯೋ ಇದ್ದರೆ ಅಮ್ಮ ಮನೆಯಲ್ಲಿಲ್ಲದಿದ್ದಾಗ ಇವಳೇ ಈ ಬಾಲಂಗೋಚಿಗಳ ಪುಟ್ಟ ಬದಲಿ ಅಮ್ಮ. 

ಹೀಗಾಗಿಯೇ ಅಮ್ಮನ ಅನುಪಸ್ಥಿತಿಯಲ್ಲಿ ಅಚಾನಕ್ಕಾಗಿ ಮನೆಯು ತುರ್ತುಪರಿಸ್ಥಿತಿಗೊಳಗಾಗಿ ಗಕ್ಕನೆ ನಿಂತು ಕಂಗಾಲಾದ ದೇಶದಂತಾಗುತ್ತದೆ. ಅವಳಿಲ್ಲದಿದ್ದರೆ ಚಹಾದ ಪುಡಿಯ ಡಬ್ಬಿಯಿಂದ ಹಿಡಿದು, ಕನ್ನಡಕದ ಡಬ್ಬಿಯೂ ಮನೆಯಿಡೀ ಜಾಲಾಡಿದರೂ ಗಂಡನಿಗೆ ಸಿಕ್ಕುವುದಿಲ್ಲ. ನಿತ್ಯದ ಅಡುಗೆಯಲ್ಲಿ ಕೂದಲಿನ ಎಳೆಯೊಂದು ಸಿಕ್ಕರೆ ಮುಖ ಕಿವುಚುತ್ತಿದ್ದ ಮಕ್ಕಳು ಅಪ್ಪನ ಉಪ್ಪು-ಖಾರವಿಲ್ಲದ ಅಡುಗೆಗೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಆತ ಎಷ್ಟಾದರೂ ಸದಾ ಸಿಡುಕುವ ಅಪ್ಪ. ಗೊಣಗಿದರೆ ಸುಮ್ಮನೆ ಕೇಳಲು ಅಮ್ಮನಲ್ಲವಲ್ಲಾ? ಬೆತ್ತದೇಟಿಗಿಂತ ತೆಪ್ಪಗೆ ತಿನ್ನುವುದೇ ವಾಸಿ. ಅಂತೂ ಅಮ್ಮನ ಪುನರಾಗಮನದವರೆಗೂ ಮನೆಯೆಂಬ ರಥವು ಹೇಗೋ ಕುಂಟುತ್ತ ಸಾಗುತ್ತಿರುತ್ತದೆ. ಅವಳ ಆಗಮನದ ನಂತರವೇ ಈ ಗೊಂದಲಗಳಿಗೊಂದು ಮುಕ್ತಿ. ಅದಕ್ಕೇ ಹೇಳ್ಳೋದು, “ಹೌಸ್‌’ ಎಂಬ ಕಟ್ಟಡವನ್ನು “ಹೋಮ್‌’ ಎಂಬ ಮನೆಯನ್ನಾಗಿಸಲು ಅಮ್ಮನಿಗಷ್ಟೇ ಸಾಧ್ಯ. 

ಇಷ್ಟೆಲ್ಲಾ ಇದ್ದರೂ ಅಮ್ಮನೆಂಬ ಜೀವವು ನಮ್ಮೆಲ್ಲರಿಂದಲೂ ಒಂದಲ್ಲಾ ಒಂದು ರೀತಿಯಾಗಿ ಹಿಂದೆ ಉಳಿದುಹೋಗುತ್ತಾಳೆ. ಅಪ್ಪನ ಬಿಡುವಿಲ್ಲದ ದಿನಚರಿಯಲ್ಲೋ, ಮಕ್ಕಳ ಲಾಲನೆಪಾಲನೆಯಲ್ಲೋ, ಯಶಸ್ಸಿನಲ್ಲೋ, ಶರವೇಗದ ಆಧುನಿಕ ಜೀವನಶೈಲಿಯಲ್ಲೋ ಉಳಿದುಹೋಗುವ ಏಕೈಕ ಜೀವವೆಂದರೆ ಅಮ್ಮ. ಕಾಲದೊಂದಿಗೇ ಎಲ್ಲಾ ಬದಲಾದರೂ ಮೇಲ್ನೋಟಕ್ಕೆ ಏನೂ ಆಗಿಯೇ ಇಲ್ಲವೆಂಬಂತೆ ಕಾಣುವ ಜೀವನ ಮಾತ್ರ ಅಮ್ಮಂದಿರದ್ದು. ಅಮ್ಮಂದಿರ ವೈಯಕ್ತಿಕ ಲೋಕದಲ್ಲಿ ಅವಳಿಗೆ ನಿವೃತ್ತಿಯೂ ಇಲ್ಲ, ಪಿಂಚಣಿಯೂ ಇಲ್ಲ. ಬಿಡುವಂತೂ ಮೊದಲೇ ಇಲ್ಲ. ಈ ಹಿಂದೆ ಬುತ್ತಿ ಕಟ್ಟಿಕೊಡುತ್ತಿದ್ದ ಗಂಡನಿಗೆ ಈಗ ನಿಯಮಿತವಾಗಿ ಮಧುಮೇಹದ ಮಾತ್ರೆ ತಿನ್ನಿಸಬೇಕು. ಮಕ್ಕಳನ್ನು ಪೋಷಿಸಿದ್ದು ಕಮ್ಮಿಯಾಯಿತೆಂಬಂತೆ ಈಗ ಮಗಳಧ್ದೋ, ಸೊಸೆಯಧ್ದೋ ಬಾಣಂತನದ ಭಾರ ಅವಳಿಗೆ. ಮಕ್ಕಳು ದೂರದಲ್ಲಿದ್ದರೆ ಸುಮ್ಮನೆ ಆಕಾಶ ನೋಡುತ್ತಲೋ, ಜಪತಪ ಮಾಡುತ್ತಲೋ ಕಾಲ ತಳ್ಳಬೇಕು. ಆದರೂ ತನಗೆ ಇದುವೇ ಬೇಕು ಎಂಬ ನಿರ್ದಿಷ್ಟವಾದ ಆಗ್ರಹವನ್ನು ಅಮ್ಮಂದಿರು ಹೇಳಿಕೊಳ್ಳುವುದು ಕಮ್ಮಿ. 

ಮಾತೃತ್ವವೆಂಬ ಮಾನಸ ಸರೋವರ
ಇಂಗ್ಲಿಷ್‌-ವಿಂಗ್ಲಿಷ್‌  ಚಿತ್ರದಲ್ಲಿ ಚಿಂತನೆಗೆ ಹಚ್ಚುವ ದೃಶ್ಯವೊಂದು ಬರುತ್ತದೆ. ಶಶಿ ಗೋಡೊºಲೆ ಪಾತ್ರವನ್ನು ನಿಭಾಯಿಸಿರುವ ಶ್ರೀದೇವಿ ಓರ್ವ ಉತ್ತಮ ಸಾಂಪ್ರದಾಯಿಕ ಗೃಹಿಣಿ. ಒಳ್ಳೆಯ ಪತ್ನಿ, ಸೊಸೆ, ತಾಯಿ ಎಲ್ಲವೂ. ಅವಳು ರುಚಿರುಚಿಯಾಗಿ ಅಡುಗೆಯನ್ನು ಮಾಡಿಹಾಕಬಲ್ಲವಳು. ಅದರಲ್ಲೂ ಶಶಿಯು ಮಾಡಿದ ಲಡ್ಡೆಂದರೆ ಎಲ್ಲರಿಗೂ ಪ್ರೀತಿ. ಹೀಗೆ ಮದುವೆಯ ಸಮಾರಂಭವೊಂದರಲ್ಲಿ ನೆಂಟರಿಷ್ಟರೆಲ್ಲಾ ಸೇರಿದ್ದಾಗ ಲಡ್ಡಿನ ಬಗ್ಗೆ ಮಾತನಾಡುತ್ತ ಶಶಿಯ ಪತಿಯು “”ಶಶಿ ಅದೆಷ್ಟು ಚೆನ್ನಾಗಿ ಲಡ್ಡು ಮಾಡುತ್ತಾಳೆ ಗೊತ್ತಾ? ಇವಳು ಹುಟ್ಟಿದ್ದೇ ಲಡ್ಡು ಮಾಡುವುದಕ್ಕಾಗಿ” ಎನ್ನುತ್ತಾನೆ. ಮದುವೆಮನೆಯಲ್ಲಿ ಅಷ್ಟು ಲವಲವಿಕೆಯಿಂದ ಓಡಾಡಿಕೊಂಡಿದ್ದ ಶಶಿ ತನ್ನ ಗಂಡನ ಆ ಒಂದು ಕೊಂಕುಮಾತಿನಿಂದಾಗಿ ಒಮ್ಮೆಲೇ ಬಾಡಿಹೋದ ಹೂವಿನಂತಾಗುತ್ತಾಳೆ. ಹಾಗೆ ನೋಡಿದರೆ ಅವಳನ್ನು ಮೂದಲಿಸಲೆಂದೇ ಗಂಡ ಆಡಿದ ಮಾತೇನೂ ಅದಲ್ಲ. ಆದರೆ ಸಂಗಾತಿಯ ಪ್ರೀತಿ-ವಿಶ್ವಾಸಗಳು ತಾತ್ಸಾರಗಳಾಗಿ ಬದಲಾದಾಗ, “ಅದು ಅವಳ ಕರ್ಮ’ ಎಂಬಂತೆ “ಟೇಕನ್‌ ಫಾರ್‌ ಗ್ರ್ಯಾಂಟೆಡ್‌’ ಆದಾಗ ಕ್ಷಮಯಾ ಧರಿತ್ರಿಯೆಂಬ ಹೆಣ್ಣಿಗೂ ಪತಿಯ ಒಣಅಹಂಕಾರದ ಮಾತುಗಳು ಅದೆಷ್ಟು ನೋವನ್ನು ತರಬಲ್ಲದು ಎಂಬುದರ ಉತ್ತಮ ಉದಾಹರಣೆಯಿದು. ಅಷ್ಟಕ್ಕೂ ಅವಳೂ ಭಾವನೆಗಳಿರುವ ಮನುಷ್ಯಳೇ ಅಲ್ಲವೇ? 

ಶಶಿ ಗೋಡೊºಲೆಯ ಕಥೆಯು ಬಹುತೇಕ ಎಲ್ಲಾ ಅಮ್ಮಂದಿರ ಕಥೆಯೂ ಹೌದು. ಅದರಲ್ಲೂ ಹೆಚ್ಚಿನ ಭಾರತೀಯ ಗೃಹಿಣಿಯರ ಸ್ಥಿತಿಯು ಥೇಟು ಶಶಿಯಂತೆಯೇ. ತನ್ನ ಹತಾಶೆಗಳನ್ನು ಅದೆಷ್ಟು ದಿನ ಎಂದು ಆಕೆ ಅದುಮಿಟ್ಟುಕೊಳ್ಳಬಲ್ಲಳು? ಪತಿಮಹಾಶಯ ಇದ್ದರೂ ಇಲ್ಲದಂತಿರುತ್ತಾನೆ. ತನ್ನ ಮಕ್ಕಳಿಗೆ ಅವಳು ಹಾರಲು ಕಲಿಸಿದ್ದೇನೋ ಹೌದು. ಆದರೆ ರೆಕ್ಕೆ ಬಲಿತು ಗೂಡು ಬಿಟ್ಟ ಮರಿಗಳು ಸೌಜನ್ಯಕ್ಕಾದರೂ ಆಗೊಮ್ಮೆ ಈಗೊಮ್ಮೆ ಕಷ್ಟಸುಖ ವಿಚಾರಿಸಬಾರದೇ? ಈ ಬಗ್ಗೆ ಅಮ್ಮ ಯಾವ ದೂರನ್ನೂ ಹೇಳಿಕೊಳ್ಳುವುದಿಲ್ಲವೆಂಬ ಜಾಣಕುರುಡೇ ಇದು? ಅಥವಾ ಮೇಲೆ ಹೇಳಿದ ಕಿರುಚಿತ್ರದಲ್ಲಿದ್ದಂತೆ ಮನೆಯಾಕೆ ಇರುವುದೇ ಮಾಡಿಹಾಕಲು ಎಂಬ ಗಂಡನ ತಾತ್ಸಾರವೇ? ಮರುಮಾತಿಲ್ಲದೆ ವರ್ಷಾನುಗಟ್ಟಲೆ ಕುಟುಂಬದ ಸದಸ್ಯರನ್ನು ಸಂಭಾಳಿಸುತ್ತಲೇ ಒಂದು ಕಾಲದ ಅವಳ ಹವ್ಯಾಸಗಳು, ಗುರಿಗಳು, ಕನಸುಗಳು, ಮಹಾತ್ವಾಕಾಂಕ್ಷೆಗಳು ಏನಾದವು? ಅಮ್ಮನ ಇಷ್ಟಕಷ್ಟಗಳೇನು? ಯಾರೂ ಕೇಳಿದವರಿಲ್ಲ. ಅವಳ ಒಬ್ಬಂಟಿತನ, ನಿಟ್ಟುಸಿರು, ಬಿಕ್ಕುಗಳು, ದನಿಯಾಗದ ಭಾವಗಳು ಕಾಲಚಕ್ರದೊಂದಿಗೆ ಉರುಳುತ್ತಾ ಬೇನಾಮಿಯಾಗಿಹೋದಂತೆ. “ಇದಿಷ್ಟೇ ನನ್ನ ಜೀವನವೇ?’ ಎಂದು ತನ್ನಷ್ಟಕ್ಕೆ ತಾನೇ ದುಃಖದಲ್ಲಿ ಮಾತಾಡಿಕೊಂಡಂತೆ!   

ಅಮ್ಮಂದಿರನ್ನು ಕೊಂಚವಾದರೂ ಅರ್ಥಮಾಡಿಕೊಳ್ಳಲು ಮಾನಸಿಕವಾಗಿ ಒಂದು ಕ್ಷಣವಾದರೂ ಅಮ್ಮನಾಗದೇ ವಿಧಿಯಿಲ್ಲ. ಒಂದು ಭೇಟಿ, ಟೆಲಿಫೋನ್‌ ಕರೆ, ಆಪ್ತ ಸಂಭಾಷಣೆ, ಬಿಸಿಯಪ್ಪುಗೆ, ಎಲ್ಲೋ ತಪ್ಪಾಗಿದ್ದರೆ ಒಂದು ಕ್ಷಮೆ, ಒಂದು ಪುಟ್ಟ ಸರ್‌ಪ್ರೈಸ್‌ ಎಂಬಂತಹ ಉಡುಗೊರೆ… ಹೀಗೆ ಅಮ್ಮಂದಿರ ದಿನವನ್ನು ಬೆಳಗಿಸಲು ಮಹಾಕಷ್ಟಗಳನ್ನೇನೂ ಪಡಬೇಕಿಲ್ಲ. ಜೊತೆಗೇ ಇವುಗಳು ನಿರ್ದಿಷ್ಟವಾಗಿ ಮದರ್ಸ್‌ ಡೇ ಯ “ನಾಮ್‌ ಕೇ ವಾಸ್ತೇ’ ಆಡಂಬರಗಳೂ ಆಗಬೇಕಿಲ್ಲ ಅನ್ನುವುದು ಬೇರೆ ವಿಷಯ. ಅಮ್ಮಂದಿರ ನಿತ್ಯದ ಕೆಲಸಗಳಿಗೇ ದಿನದ ಹಂಗಿಲ್ಲದಿರುವಾಗ ಅಮ್ಮನನ್ನು “ಸೆಲೆಬ್ರೇಟ್‌’ ಮಾಡಲು ದಿನದ ಹಂಗೇಕೆ? ಅಮ್ಮ ಯಾವತ್ತಿಗೂ ಅಮ್ಮನೇ. 

ಕಾಲದೊಂದಿಗೆ ಅಮ್ಮನೂ ಬದಲಾಗಿದ್ದಾಳೆ. ಅವಳ ಲೋಕವೂ ಬದಲಾಗಿದೆ. ನಮ್ಮೊಂದಿಗೆ ಅವಳೂ ಮಾಗಿದ್ದಾಳೆ. ಇಪ್ಪತ್ತೆ„ದು ವರ್ಷಗಳ ನಂತರ ಅಕ್ಷರರೂಪದಲ್ಲಿ ಮತ್ತೆ ಬಂದ ಲಂಕೇಶರ “ಅವ್ವ’ ಕೂಡ ಸಾಕಷ್ಟು ಮಾಗಿದ್ದಳು. “”ಈ ಜಗತ್ತಿನಲ್ಲಿ ನಿಜಕ್ಕೂ ಇರುವಂಥದ್ದು ಯಾವತ್ತಿಗೂ ಬದಲಾಗುತ್ತಲೇ ಇರುತ್ತದೆ”, ಎಂದು ಪ್ರೀತಿಯ ಬಗ್ಗೆ ಪ್ರಸ್ತಾಪಿಸುತ್ತಾ ಓಶೋ ರಜನೀಶ್‌ ಹೇಳಿದ್ದರು. ಇನ್ನು ಕಾಲದೊಂದಿಗೆ ಮಾತೃತ್ವದ ನಿಷ್ಕಲ್ಮಷ ಪ್ರೀತಿಯು ಮತ್ತಷ್ಟು ಆಳವಾಗುತ್ತಾ ಹೋಗುವುದು ಮಾತ್ರ ಬಹುಶಃ ಅಮ್ಮಂದಿರ ಹೆಗ್ಗಳಿಕೆ. 

ಅಮ್ಮನನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವುದಕ್ಕಿಂತಲೂ ಮನುಷ್ಯಳಂತೆ ಕಂಡು ಪ್ರೀತಿಸಿದರೆ ಅಮ್ಮಂದಿರ ದಿನವು ಮತ್ತಷ್ಟು ಅರ್ಥಪೂರ್ಣವಾಗಬಹುದೇನೋ!

– ಪ್ರಸಾದ್‌ ನಾಯಕ್‌

ಟಾಪ್ ನ್ಯೂಸ್

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Siddu–Muniyappa

Ration Card: ಬಡವರಿಗೆ ಬಿಪಿಎಲ್‌ ಕಾರ್ಡ್‌ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ

Session: ವಕ್ಫ್ ಜೊತೆ ಬಿಪಿಎಲ್‌ ಹೋರಾಟಕ್ಕೆ ಬಿಜೆಪಿ ಸಜ್ಜು

Session: ವಕ್ಫ್ ಜೊತೆ ಬಿಪಿಎಲ್‌ ಹೋರಾಟಕ್ಕೆ ಬಿಜೆಪಿ ಸಜ್ಜು

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Siddu–Muniyappa

Ration Card: ಬಡವರಿಗೆ ಬಿಪಿಎಲ್‌ ಕಾರ್ಡ್‌ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.