ಇಲ್ಲೇ ಇದ್ದೂ ಇಲ್ಲಿರದ ತಂತ್ರಜ್ಞಾನ ಮೋಹಿತರು!
Team Udayavani, May 23, 2017, 3:45 AM IST
ನಮ್ಮ ಜೀವನದಲ್ಲಿ ಅವಲಂಬನೆಗಳು ಎಷ್ಟು ಕಡಿಮೆಯಾಗುತ್ತವೋ ಅಷ್ಟು ಒಳ್ಳೆಯದು. ಆಗ ಜೀವನದ ಸ್ವಾರಸ್ಯ ಅನುಭವಿಸುವ ಭಾಗ್ಯ ನಮ್ಮದಾಗುತ್ತದೆ. ಪರಾವಲಂಬನೆ ಅನ್ನುವುದು ಅನ್ಯ ಮನುಷ್ಯರ ವಿಚಾರದಲ್ಲಿ ಹೇಗೋ ಯಂತ್ರಗಳ ವಿಚಾರದಲ್ಲಿಯೂ ಹಾಗೆಯೇ – ಅತಿಯಾದರೆ ವಿಷವಾಗುತ್ತದೆ.
ಇವತ್ತು ಜನಸಾಮಾನ್ಯರು ಮೈಬಗ್ಗಿಸಿ ದುಡಿಯವ ಅಗತ್ಯ ವಿಲ್ಲ; ಬರೇ ಬುದ್ಧಿಯನ್ನು ಉಪಯೋಗಿಸಿ ಕುಳಿತಲ್ಲಿಂದಲೇ ಉಪಕರಣಗಳ ಮೂಲಕ ಜಗತ್ತನ್ನು ನಡೆಸುವ ತಾಂತ್ರಿಕತೆ ನಮ್ಮ ಮುಂದಿದೆ. ತಂತ್ರಜ್ಞಾನದ ಬಗ್ಗೆ ಸಾಕ್ಷರರಾಗಿರುವವರಿಗೆ, ಆ ಬಗ್ಗೆ ವಿದ್ಯಾಭ್ಯಾಸ ಮಾಡಿರುವವರಿಗೆ ಇದೆಲ್ಲ ಸುಲಭ. ಆದರೆ, ಈಗ ಜನಸಾಮಾನ್ಯರೂ ಅಂತಹ ತಾಂತ್ರಿಕ ಸಾಧನಗಳನ್ನು ಬಳಸುವುದನ್ನು ಕಲಿತುಕೊಳ್ಳುತ್ತಿದ್ದಾರೆ. ಇಂದು ಯಕಶ್ಚಿತ್ ವಿದ್ಯುತ್ ಬಿಲ್ ಕಟ್ಟಬೇಕಾದರೂ ತಂತ್ರಜ್ಞಾನದಿಂದ ಸೃಷ್ಟಿ ಯಾದ ಯಂತ್ರವನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದು ಕೊಂಡಿರಬೇಕಾಗಿದೆ. ಇತ್ತೀಚೆಗೆ ಕೂಲಿನಾಲಿ ಮಾಡುವವರ ಕೈಯಲ್ಲೂ ಮೊಬೈಲ್ ಫೋನ್ ನೋಡುತ್ತೇವೆ. ಪಾಪ, ಕೆಲವರಿಗೆ ವಾಪಸ್ ಕರೆ ಮಾಡುವ ವಿಧಾನವೂ ತಿಳಿದಿರುವುದಿಲ್ಲ, ಒಂದು ಬಟನ್ ಒತ್ತಿ ಅಥವಾ ಪರದೆಯ ಮೇಲೆ ಒಂದು ಕಡೆಗೆ ಬೆರಳು ಉಜ್ಜಿ ಫೋನ್ ಕಾಲ್ ರಿಸೀವ್ ಮಾಡುವುದು ಹೇಗೆ ಎಂಬುದನ್ನು ಮಾತ್ರ ಕಲಿತಿರುತ್ತಾರೆ. ಹೆಚ್ಚು ವಿದ್ಯಾಭ್ಯಾಸ ಇಲ್ಲದಿದ್ದರೂ ದಿನನಿತ್ಯ ಬಳಸಲೇಬೇಕಾದ ತಾಂತ್ರಿಕ ಸಾಧನಗಳನ್ನು ಇಷ್ಟಪಟ್ಟು ಅವುಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ ಅಥವಾ ಅಂತಹ ಅವಲಂಬನೆ ಅನಿವಾರ್ಯವಾಗಿ ಬಿಟ್ಟಿದೆ. ಕೆಲವು ಸಲ ಎಟಿಎಂನಲ್ಲಿ ಕ್ಯೂ ನಿಂತಿರುವಾಗ ನಮ್ಮ ಮುಂದೆಯೇ ಒಳಗೆ ಹೋದ ಕೆಲವರು ಯಾವ ಬಟನ್ ಒತ್ತಬೇಕು ಎಂದು ಗೊತ್ತಾಗದೆ ಚಡಪಡಿಸುತ್ತಿರುವುದನ್ನು ಕಾಣುತ್ತೇವೆ. ಕೆಲವರಿಗೆ ಇಂಗ್ಲಿಷ್‌ನಲ್ಲಿ ಬರೆದಿರುವ ಪದಗಳು ಅರ್ಥವಾಗದೆ ಹಣ ತೆಗೆಯುವುದು ಹೇಗೆ ಎಂಬ ಆತಂಕ ಒಂದೆಡೆಯಾದರೆ, ಎಲ್ಲಿ ಕಾರ್ಡು ಯಂತ್ರದೊಳಗೆ ಸಿಕ್ಕಿ ಹಾಕಿಕೊಂಡು ಬಿಡುತ್ತದೋ ಎಂಬ ಆತಂಕ ಮತ್ತೂಂದೆಡೆ. ಇದೆಲ್ಲವೂ ಒಂದು ಬಾರಿ ಉಪಯೋಗಿಸುವ ತನಕ ಮಾತ್ರ; ಒಮ್ಮೆ ಅದು ಹೊಕ್ಕುಬಳಕೆಯಾಯಿತೋ; ಆಮೇಲೆ ಎಲ್ಲವೂ ಸುಲಭ. ಎಲ್ಲ ಕಷ್ಟವೂ ಅದನ್ನು ಕಲಿಯುವ ತನಕ ಮಾತ್ರ, ಕಲಿತ ಮೇಲೆ ನಾವೇ ಬುದ್ಧಿವಂತರು!
ತಾಂತ್ರಿಕತೆ ಹೆಚ್ಚಾದಂತೆ ತಾಳ್ಮೆ ಕಡಿಮೆ!: ಬಿಲ್ ಪಾವತಿಸುವುದು, ಆಧಾರ್ ಕಾರ್ಡ್ ನೋಂದಣಿ, ಕೆಲವು ಬ್ಯಾಂಕ್‌ಗಳಲ್ಲಿ ಚೆಕ್ ಹಾಕಲು ಕೂಡ ಯಂತ್ರವನ್ನೇ ಉಪಯೋಗಿಸಬೇಕು. ಹಳೆಯ ಕಾಲದಲ್ಲಿ ಮಾತಿನಲ್ಲೇ ವ್ಯವಹಾರ ನಡೆಯುತ್ತಿತ್ತು. ಅನಂತರ ಕೈಬರಹ, ಟೈಪಿಂಗ್ ಯಂತ್ರ ಬಂತು. ಈಗ ವ್ಯಾವಹಾರಿಕ ಪತ್ರಗಳು ಬರವಣಿಗೆಯಲ್ಲಿದ್ದರೂ ನೋಡುವುದಕ್ಕೆ ಕೂಡ ಚೆನ್ನಾಗಿರಬೇಕು ಎಂಬ ಕಾರಣದಿಂದ ಸಾಮಾನ್ಯರೂ ಗಣಕ ಯಂತ್ರಗಳಲ್ಲೇ ಟೈಪಿಸಿ ಮುದ್ರಿಸುತ್ತಾರೆ. ಮನೆಯಲ್ಲಿರುವ ಕಂಪ್ಯೂಟರ್ ಅಥವಾ ಕೆಲಸ ಮಾಡುವ ಯಂತ್ರಗಳು ಕೆಟ್ಟು ಕೂತರೆ, ಅವು ಸರಿಹೋಗುವ ತನಕ ಎಲ್ಲ ಕೆಲಸಗಳೂ ನಿಂತು ಹೋಗುತ್ತವೆ. ಕೆಲವರಿಗಂತೂ ಇಂಟರ್‌ನೆಟ್ ಇಲ್ಲದೆ ಕೆಲವು ಕ್ಷಣಗಳನ್ನೂ ಜೀವಿಸಲಾಗುವುದಿಲ್ಲ. ಮೊಬೈಲ್ ನೆಟ್‌ವರ್ಕ್ ಸಿಗದ ಜಾಗಗಳಲ್ಲಿ ಅದಕ್ಕಾಗಿ ಹುಡುಕಾಡಿ “ಅಯ್ಯೋ ನೆಟ್‌ವರ್ಕ್ ಇಲ್ಲವಲ್ಲ’ ಎಂದು ಉಸಿರೇ ನಿಂತುಹೋದಂತೆ ಪರಿತಪಿಸುತ್ತಾರೆ. ಇನ್ನು ಕೆಲವರಿಗೆ ದಿನಪೂರ್ತಿ ಫೋನ್‌ನಲ್ಲಿ ಮಾತಾಡಿ, ಸಂಜೆ ಗೆಳತಿಯ ಜತೆಗೆ ಮಾತನಾಡುವ ಸಮಯಕ್ಕೆ ಸರಿಯಾಗಿ ಮೊಬೈಲ್ ಬ್ಯಾಟರಿ ಖಾಲಿಯಾಗಿರುತ್ತದೆ. ಇದೇ ವಿಚಾರದಲ್ಲಿ ಎರಡು ದಿನ ಜಗಳ ನಡೆಯುತ್ತದೆ. ಹಿಂದಿನ ಕಾಲದಲ್ಲಿ ತಾಂತ್ರಿಕ ಸಲಕರಣೆಗಳು ಕಡಿಮೆಯಿದ್ದಾಗ ಮನಸ್ತಾಪಗಳು ಕಡಿಮೆಯಿದ್ದವು. ಈ ಕಾಲದಲ್ಲಿ ಫೋನ್ ಕರೆ ಸ್ವೀಕರಿಸದಿದ್ದರೂ ಜನ ತಪ್ಪು ತಿಳಿದುಕೊಳ್ಳುತ್ತಾರೆ, ಕನಿಷ್ಠ ಮೆಸೇಜ್ ಆದರೂ ಕಳುಹಿಸಬಹುದಿತ್ತಲ್ಲ ಎಂಬ ಮಾತು. ಯಾವುದೋ ಒಂದು ಮನೆ ವಿಳಾಸ ಹುಡುಕುವ ವೇಳೆಗೆ, ಅಲ್ಲಿದ್ದೇನೆ- ಇಲ್ಲಿದ್ದೇನೆ, ಆ ತಿರುವು, ಈ ರಸ್ತೆ ಎಂದು ಹತ್ತು ಸಲ ಕರೆ ಮಾಡಿರುತ್ತೇವೆ. ನಾವು ಮಾಡದಿದ್ದರೂ ಅವರೇ ನಮ್ಮ ಗೊತ್ತು ಗುರಿ ವಿಚಾರಿಸಿ ನಾಲ್ಕಾರು ಬಾರಿ ಕರೆ ಮಾಡಿರುತ್ತಾರೆ.
ರುಚಿ ಕಳೆದುಕೊಳ್ಳುವ ಅವಲಂಬನೆಯ ಜೀವನ: ಹಿಂದೆ ಫೋನ್ ಇದ್ದರೂ ಇಲ್ಲದಿದ್ದರೂ ವಿಳಾಸ ಸರಿಯಾಗಿಸಿಗುತ್ತಿತ್ತು. ಇ-ಮೇಲ್ ಕಳಿಸದ ಕಾರಣ, ಫೋನ್ ಮಾಡದ ಕಾರಣ ಹೆಚ್ಚು ಜಗಳ ಆಗುತ್ತಿರಲಿಲ್ಲ. ಟಿವಿ ರಿಮೋಟ್ ಕೆಟ್ಟುಹೋದರೆ, “ಛೇ!’ ಅಂತ ನಾಲ್ಕು ಸಲ ಕುಟ್ಟುತ್ತಿರಲಿಲ್ಲ. ಈಗ ಕೆಲವರ ಮನೆಯಲ್ಲಂತೂ ಎಲ್ಲೆಲ್ಲೂ ತಾಂತ್ರಿಕತೆ. ಮನೆ ಬಾಗಿಲು ತೆಗೆಯಲು ಒಂದು ಬಟನ್, ಯಾರು ಬಂದಿದ್ದಾರೆ ಅಂತ ನೋಡುವುದು ಸಿಸಿಟಿವಿಯಲ್ಲಿ. ಅಡುಗೆ ಮನೆಯಲ್ಲಿ ಒಲೆಯಿಂದ ಹಿಡಿದು ಮಿಕ್ಸಿಯವರೆಗೆ ಎಲ್ಲದಕ್ಕೂ ಒಂದೊಂದು ಒತ್ತುಗುಂಡಿ. ಸ್ನಾನಕ್ಕೂ ಒಂದು ಬಟನ್. ಮೈ ಕೈ ನೋವಾದರೆ ಒತ್ತಲು ಒಂದು ಯಂತ್ರ, ಬಟನ್ ಒತ್ತಿದರೆ ಕುಳಿತಲ್ಲಿಗೇ ಕಾಫಿ ಟೇಬಲ್ ಬರುತ್ತದೆ. ಅಂತಹ ಮನೆಗಳಿಗೆ ಹೋದ ತತ್‌ಕ್ಷಣ ಅವರು ಬೇರೆ ಗ್ರಹದಲ್ಲಿ ವಾಸಿಸುತ್ತಿದ್ದಾರೇನೋ ಅನಿಸುವುದಿದೆ. ಎಲ್ಲ ಕೆಲಸಗಳನ್ನೂ ಯಂತ್ರಗಳೇ ಮಾಡುತ್ತಿದ್ದರೆ, ಮನುಷ್ಯ ಏನು ಮಾಡುತ್ತಾನೆ? ನಮ್ಮ ಜೀವನದಲ್ಲಿ ಅವಲಂಬನೆಗಳು ಎಷ್ಟು ಕಡಿಮೆಯಾಗುತ್ತವೋ ಅಷ್ಟು ಒಳ್ಳೆಯದು. ಆಗ ಒಳ್ಳೆಯ, ಸಾಹಸಮಯ ಜೀವನದ ಸ್ವಾರಸ್ಯ ಅನುಭವಿಸುವ ಭಾಗ್ಯ ನಮ್ಮದಾಗುತ್ತದೆ. ಪರಾವಲಂಬನೆ ಅನ್ನುವುದು ಅನ್ಯ ಮನುಷ್ಯರ ವಿಚಾರದಲ್ಲಿ ಹೇಗೋ ಯಂತ್ರಗಳ ವಿಚಾರದಲ್ಲಿಯೂ ಹಾಗೆಯೇ – ಅತಿಯಾದರೆ ವಿಷವಾಗುತ್ತದೆ. ದುಡ್ಡಿದೆ ಎಂದು ಸರ್ವ ತಾಂತ್ರಿಕತೆಗಳನ್ನೂ ಜೀವನದೊಳಕ್ಕೆ ತಂದುಕೊಂಡರೆ, ಪ್ರಕೃತಿದತ್ತ ಭಾವನೆಗಳು ಹಾಗೇ ನಶಿಸಿ ಹೋಗುತ್ತವೆ.
ಇಡೀ ವಿಶ್ವವೇ ನಮ್ಮ ಕೈಯಲ್ಲಿ: ಈಗಿನ ಕಾಲದಲ್ಲಿ ತಾಂತ್ರಿಕತೆಗಳ ಅವಲಂಬನೆಯಿಂದ ದೂರಾಗಲು ಯಾರಿಗೂ ಸಾಧ್ಯವಿಲ್ಲ. ಇಡೀ ಜಗತ್ತೇ ಅಂತರ್ಜಾಲದ ಮೂಲಕ ಏಕೀಕರಣ ವಾಗತೊಡಗಿದೆ. ಕೌಡ್ ಕಂಪ್ಯೂಟಿಂಗ್‌ನಿಂದ ಹಿಡಿದು ಅಧಿಕ ಸಾಮರ್ಥ್ಯದ ನೆಟ್‌ವರ್ಕ್‌ಗಳು, ಕಂಪ್ಯೂಟರ್‌ಗಳು ಎಲ್ಲರಿಗೂ ದೊರಕುತ್ತಿವೆ. ಕ್ಷಣಕ್ಕೊಂದರಂತೆ ವಿವಿಧ ಸಂಶೋಧನೆಗಳು ಮೈದಳೆಯುತ್ತಿವೆ. ಕೌಡ್ ಕಂಪ್ಯೂಟಿಂಗ್‌ನಂತಹ ತಾಂತ್ರಿಕ
ವ್ಯವಸ್ಥೆ ಎಲ್ಲವನ್ನೂ ಸುಲಭವಾಗಿಸಿದೆ. ಮೊದಲು ಭಾವಚಿತ್ರ ಗಳು, ಹಾಡು ಇತ್ಯಾದಿಗಳನ್ನು ಸೀಡಿಯಲ್ಲಿರಿಸಿಕೊಳ್ಳುತ್ತಿದ್ದೆವು. ಕ್ರಮೇಣ ಹಾರ್ಡ್‌ಡಿಸ್ಕ್, ಪೆನ್ ಡ್ರೈವ್ ಸರದಿ. ಈಗಂತೂ ಅವೆಲ್ಲವನ್ನೂ ಅಂತರ್ಜಾಲದಲ್ಲೇ ಇರಿಸಿಕೊಂಡು ಕೆಲಸ ಮಾಡಬಲ್ಲೆವು. ಕೆಲವು ಬಾರಿ ತಂತ್ರಜ್ಞಾನ ನಮ್ಮ ದೈಹಿಕ ಕೆಲಸವನ್ನು ಕಡಿಮೆ ಮಾಡುತ್ತಿದೆ, ಎಷ್ಟು ಒಳ್ಳೆಯದು ಎಂದುಕೊಂಡರೂ ಇನ್ನು ಕೆಲವೊಮ್ಮೆ ಹಠಾತ್ತನೆ ಎದುರಾಗುವ ಅವುಗಳ ವೈಫಲ್ಯ ನಮ್ಮನ್ನು ತೀರ ಹತಾಶರನ್ನಾಗಿ ಮಾಡುತ್ತದೆ.
ಧರ್ಮಶಾಸ್ತ್ರ, ನೀತಿ ಶಾಸ್ತ್ರ, ಅರ್ಥಶಾಸ್ತ್ರದಂತೆಯೇ ಮನುಷ್ಯನ ತಂತ್ರಜ್ಞಾನವೂ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮ ಪೂರ್ವಜರು, ಮಂತ್ರ-ತಂತ್ರಗಳ ಮೂಲಕ ಗ್ರಹ, ದೇವತೆಗಳ ನಡುವೆ ಸಂಪರ್ಕ ಸಾಧಿಸುತ್ತಿದ್ದರು ಎಂಬುದನ್ನು ಕೇಳಿದ್ದೇವೆ. ಆ ಸಂಪರ್ಕ ಎಷ್ಟು ಪ್ರಭಾವಶಾಲಿ ಎಂದರೆ ಕರೆದಾಗ ಮಳೆ, ಧ್ಯಾನದ ಮೂಲಕ ಇಚ್ಛಾಮರಣ ಇವೆಲ್ಲ ಸಾಧ್ಯವಾಗಿತ್ತು ಎಂಬುದು ಬೆರಗು, ಅಚ್ಚರಿ ಹುಟ್ಟಿಸುತ್ತದೆ. ಜತೆಗೆ, ಅವೆಲ್ಲ ಕೇವಲ ಪುರಾಣ ಎಂಬುದನ್ನು ಮೀರಿ ಏಕೆ ನಿಜವಾಗಿಯೂ ಇದ್ದಿರಬಾರದು ಎಂಬ ಪ್ರಶ್ನೆ – ತರ್ಕವನ್ನೂ ಹುಟ್ಟು ಹಾಕುತ್ತದೆ.
ತಂತ್ರಜ್ಞಾನ ಬೇಕು. ಆದರೆ ಅದೇ ನಮ್ಮ ಬದುಕನ್ನು ಆವರಿಸಿ ಕೊಳ್ಳಬಾರದು. ನಾವು ರೋಬೋಟ್‌ಗಳಲ್ಲ; ಮನುಷ್ಯರು. ನಮಗೆ ಭಾವನೆಗಳಿವೆ. ನಮ್ಮ ಮೈಯಲ್ಲಿ ರಕ್ತ ಹರಿಯುತ್ತಿದೆ. ನಾವು ಒಂದು ದಿನ ಸಾಯುತ್ತೇವೆ. ಯಂತ್ರಗಳಿಗೆ ಇವ್ಯಾವುವೂ ತಿಳಿಯುವುದಿಲ್ಲ. ಅವು ಬಹಳ ನಿರ್ದಯಿ ಎಂಬುದನ್ನು ಅರ್ಥ ಮಾಡಿಕೊಂಡರೆ ನಮ್ಮ ಬದುಕಿನಲ್ಲಿ ಯಂತ್ರ-ತಂತ್ರಜ್ಞಾನಕ್ಕೆ ಯಾವ ಸ್ಥಾನ ನೀಡಬೇಕು ಎಂಬುದೂ ತಿಳಿಯುತ್ತದೆ. ಇಲ್ಲವಾದರೆ, ನಮ್ಮ ಸೌಕರ್ಯಕ್ಕೆಂದು ಇರುವ ಯಂತ್ರಗಳ ಬಾಯಿಗೆ ನಾವೇ ಆಹಾರವಾಗುವ ಅಪಾಯವಿದೆ.
ರೂಪಾ ಅಯ್ಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.