ಸುಸ್ಥಿತಿಯಲ್ಲಿರಲಿ ವಿದ್ಯುತ್ ತಂತಿ: ದೂರವಾಗಲಿ ಭೀತಿ
Team Udayavani, May 24, 2017, 11:25 PM IST
ಮಡಂತ್ಯಾರು: ಬೇಸಗೆ ಬೇಗೆಗೆ ಬೆಂದು ಮಳೆಗಾಲಕ್ಕಾಗಿ ಹಾತೊರೆಯುವ ಜನರಿಗೆ ಮಳೆಯ ಸಿಂಚನವಾಗುತ್ತಿದ್ದಂತೆ ಅದೇನೋ ಹರ್ಷಮೂಡುತ್ತದೆ. ಆದರೆ ಮಳೆಗಾಲ ಸಾಕಷ್ಟು ಭೀತಿಯನ್ನು ಕೂಡ ಹೊತ್ತು ತರುತ್ತದೆ. ಹಾಗಾಗಿ ಮಳೆ ಬರುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ವಿವಿಧ ಇಲಾಖೆಗಳು ಮತ್ತು ಸಾರ್ವಜನಿಕರ ಜವಾಬ್ದಾರಿಯಾಗಿದೆ. ಇಂತಹ ಸಮಸ್ಯೆಗಳಲ್ಲಿ ಮುಖ್ಯವಾದುದು ವಿದ್ಯುತ್ ಅವಘಡದ ಅಪಾಯ.
ತಂತಿ ಮೇಲೆ ರೆಂಬೆ
ಮಳೆ ಬಂತೆಂದರೆ ಮುಖ್ಯವಾಗಿ ಕಂಡುಬರುವ ಸಮಸ್ಯೆ ಗಾಳಿ ಮಳೆಗೆ ಬೀಳುವ ಮರ – ಗಿಡ, ರೆಂಬೆ-ಕೊಂಬೆ. ಎಲ್ಲ ಕಡೆ ವಿದ್ಯುತ್ ಸಂಪರ್ಕ ಇರುವ ಕಾರಣ ರಸ್ತೆ ಉದ್ದಕ್ಕೂ ವಿದ್ಯುತ್ ಕಂಬ ಇದೆ. ಗಾಳಿ ಮಳೆಗೆ ಬೀಳುವ ಮರ ವಿದ್ಯುತ್ ಕಂಬದ ಮೇಲೆಯೆ ಬೀಳುವ ಕಾರಣ ಅನೇಕ ಅವಘಡಗಳು ಸಂಭವಿಸುತ್ತವೆ. ಹಲವು ಕಡೆಗಳಲ್ಲಿ ವಿದ್ಯುತ್ ತಂತಿಗೆ ಮರಗಳು ತಾಗಿಕೊಂಡಿವೆ. ಇದರಿಂದ ಮರಕ್ಕೆ ವಿದ್ಯುತ್ ಸ್ಪರ್ಶವಾಗುತ್ತಿರುತ್ತದೆ. ದನಕರು, ಮಕ್ಕಳು ಓಡಾಡುವ ಸ್ಥಳಗಳಲ್ಲಿ ಇದು ಭಾರೀ ಅಪಾಯಕಾರಿಯಾಗುತ್ತದೆ. ಇಂತಹ ಅಪಾಯಕಾರಿ ಸ್ಥಳಗಳನ್ನು ಲೈನ್‌ಮೆನ್‌ಗಳು ಮೊದಲೇ ಗುರುತಿಸಿಟ್ಟುಕೊಂಡು ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಲೈನ್‌ಮೆನ್‌ಗಳು ಎಲ್ಲ ಕಡೆಗಳಲ್ಲಿ ಗಮನಿಸಲು ಸಾಧ್ಯವಾಗದೇ ಹೋಗಬಹುದು. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ಇವರ ಗಮನಕ್ಕೆ ಅಥವಾ ಮೆಸ್ಕಾಂಗೆ ತಿಳಿಸುವ ಕೆಲಸ ಮಾಡಿದರೆ ಅನಾಹುತ ತಪ್ಪಿಸಬಹುದು.
ಬಳ್ಳಿ ಸುತ್ತಿರುವುದೂ ಅಪಾಯ
ಮಳೆಹನಿ ಬಿದ್ದೊಡನೆ ಬಳ್ಳಿ ಚಿಗುರಿ ವಿದ್ಯುತ್ ಕಂಬ, ತಂತಿಗಳನ್ನು ವೇಗವಾಗಿ ಸುತ್ತಿಕೊಳ್ಳಲಾರಂಭಿಸುತ್ತದೆ. ಇದು ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ. ಈಗಾಗಲೆ ಪಾರೆಂಕಿ ಗ್ರಾಮದ ಮಾರಿಗುಡಿ ಎಂಬಲ್ಲಿ ವಿದ್ಯುತ್ ಕಂಬದ ಸ್ಟೇ ವಯರ್‌ಗೆ ಬಳ್ಳಿ ಸುತ್ತಿಕೊಂಡಿದ್ದು ಕಂಬ ಮತ್ತು ಮುಖ್ಯ ತಂತಿಯನ್ನು ಆವರಿಸಿಕೊಂಡಿದೆ. ಮೊದಲ ಮಳೆಗೆ ಚಿಗುರೊಡೆದು ಬೇಗನೆ ಬೆಳೆಯುವ ಬಳ್ಳಿಗಳು ಹೆಚ್ಚಿನ ಕಡೆ ವಿದ್ಯುತ್ ತಂತಿಯನ್ನು ಸುತ್ತುವರಿದುಕೊಂಡಿರುತ್ತವೆ. ಮೆಸ್ಕಾಂ ಇಲಾಖೆ ಇತ್ತ ಗಮನ ಹರಿಸಿ ಶೀಘ್ರ ಸಮಸ್ಯೆ ಬಗೆಹರಿಸಬೇಕಾಗಿದೆ.
ಸಹಕಾರ ಕೋರಿಕೆ
ಮೊದಲು ಮೆಸ್ಕಾಂ ಇಲಾಖೆಯಲ್ಲಿ ಸಿಬಂದಿ ಕೊರತೆ ಕಂಡುಬಂದಿತ್ತು. ಇದೀಗ ಆ ಕೊರತೆ ನೀಗಿದೆ. ಮಡಂತ್ಯಾರು ಮೆಸ್ಕಾಂ ಇಲಾಖೆಯಲ್ಲಿ 9 ಮಂದಿ ಜೂ| ಲೈನ್‌ಮೆನ್, 4 ಮಂದಿ ಲೈನ್‌ಮೆನ್ ಮತ್ತು ಇಬ್ಬರು ಮೆಕ್ಯಾನಿಕ್ ಸೇರಿದಂತೆ 15 ಮಂದಿ ಇದ್ದಾರೆ. ಮಡಂತ್ಯಾರು ವ್ಯಾಪ್ತಿಯಲ್ಲಿ ಮಳೆಗಾಲದ ಹೆಚ್ಚಿನ ತಯಾರಿ ನಡೆದಿದೆ. ಕೆಲವೆಡೆ ಬಾಕಿ ಇದೆ. ಯಾವುದೇ ಸಮಸ್ಯೆ ಇದ್ದರೂ ಮೆಸ್ಕಾಂ ಇಲಾಖೆಗೆ ತಿಳಿಸಿದರೆ ತತ್‌ಕ್ಷಣ ಸಹಕರಿಸುತ್ತೇವೆ ಎನ್ನುತ್ತಾರೆ ಮಡಂತ್ಯಾರು ಜೆ.ಇ. ಅವರು.
ಗ್ರಾ.ಪಂ. ಸದಸ್ಯರದ್ದೂ ಜವಾಬ್ದಾರಿ
ಪ್ರತಿಯೊಂದು ಊರಿಗೂ ಗ್ರಾಮ ಪಂಚಾಯತ್‌ಗಳಿವೆ. ಆಯಾ ಸದಸ್ಯರು ತಮ್ಮ ವ್ಯಾಪ್ತಿಯ ಸಮಸ್ಯೆಯನ್ನು ಆಲಿಸುವ ಜವಾಬ್ದಾರಿ ಹೊಂದಿರುತ್ತಾರೆ. ಅದೇ ರೀತಿ ವಿದ್ಯುತ್‌ಗೆ ಸಂಬಂಧಪಟ್ಟಂತೆ ಪ್ರತೀ ಸದಸ್ಯನ ವ್ಯಾಪ್ತಿಗೆ ಬರುವ ವಿದ್ಯುತ್ ಸಮಸ್ಯೆ, ಕಂಬಕ್ಕೆ ತಾಗಿಕೊಂಡ ಮತ್ತು ಬೀಳುವ ಸ್ಥಿತಿಯಲ್ಲಿರುವ ಮರಗಳು ಮುಂತಾದ ಸಮಸ್ಯೆಯನ್ನು ಗ್ರಾಮ ಪಂಚಾಯತ್‌ನ ಮೂಲಕ ಮೆಸ್ಕಾಂ ಇಲಾಖೆಗೆ ತಿಳಿಸಿ ಸೂಕ್ತ ಕ್ರಮ ಕೈಗೊಂಡರೆ ಪ್ರತೀ ವಾರ್ಡಿನ ಸಮಸ್ಯೆ ಬಗೆಹರಿಯುತ್ತದೆ. ಎಲ್ಲ ವಾರ್ಡಿನ ಸಮಸ್ಯೆ ಬಗೆಹರಿದರೆ ಗ್ರಾಮದ ಸಮಸ್ಯೆ ಸುಲಭದಲ್ಲಿ ಬಗೆಹರಿಸಬಹುದು ಇದರಿಂದ ಮುಂದೆ ಆಗುವ ನಷ್ಟವನ್ನು ತಡೆಯಬಹುದು.
ಅರಣ್ಯ ಇಲಾಖೆಯ ಸಹಕಾರ ಮುಖ್ಯ
ವಿದ್ಯುತ್ ತಂತಿಗಳು ಮುಖ್ಯ ರಸ್ತೆಯ ಬದಿಗಳಲ್ಲಿ ಹಾದುಹೋಗುವ ಕಾರಣ ಮರಗಳು ಹೆಚ್ಚು ಇರುವ ಜಾಗದಲ್ಲಿ ಹೆಚ್ಚು ಸಮಸ್ಯೆಗಳು ಕಂಡುಬರುತ್ತದೆ. ಅಪಾಯದ ಅಂಚಿನಲ್ಲಿರುವ ಮರಗಳನ್ನು ಕಡಿಯುವ ಅನಿವಾರ್ಯತೆ ಇರುತ್ತದೆ. ಗಾಳಿ ಮಳೆಗೆ ಬೀಳುವ ಸ್ಥಿತಿಯಲ್ಲಿದ್ದರು ಅರಣ್ಯ ಇಲಾಖೆ ಮಾತ್ರ ಅನುಮತಿ ನೀಡುವುದಿಲ್ಲ. ಇಂತಹ ಪ್ರದೇಶವನ್ನು ಅರಣ್ಯ ಇಲಾಖೆ ಕೂಡ ಗಮನಿಸಿ ಮೆಸ್ಕಾಂ ಇಲಾಖೆಯೊಂದಿಗೆ ಕೈ ಜೋಡಿಸಿದರೆ ಮುಂದೆ ಆಗುವು ಕಷ್ಟ ನಷ್ಟಗಳನ್ನು ಬಗೆಹರಿಸಬಹುದು.
ಸಮಸ್ಯೆ ಇದ್ದರೆ ತಿಳಿಸಿ
ಮಡಂತ್ಯಾರು ವ್ಯಾಪ್ತಿಯಲ್ಲಿ ಮಳೆಬರುವ ಮುನ್ನಾ ಹೆಚ್ಚಿನ ಕಡೆ ರೆಂಬೆ ಕೊಂಬೆಗಳನ್ನು ಕಡಿಯುವ ಕೆಲಸ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಬಾಕಿ ಉಳಿದಿದೆ. ತಂತಿಗೆ ತಾಗಿಕೊಂಡ ಮರಗಳಿದ್ದರೆ ಇಲಾಖೆಗೆ ತಿಳಿಸಿದರೆ ತತ್‌ಕ್ಷಣ ಸಮಸ್ಯೆ ಬಗೆಹರಿಸುತ್ತೇವೆ.
– ಸಂತೋಷ್ ನಾಯಕ್, ಮಡಂತ್ಯಾರು, ಮೆಸ್ಕಾಂ, ಜೆ.ಇ.
— ಪ್ರಮೋದ್ ಬಳ್ಳಮಂಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.