ಕುಂಬ್ಳೆ-ಬಿಸಿಸಿಐ ನಡುವೆ ಭಿನ್ನಮತ ಸ್ಫೋಟ
Team Udayavani, May 26, 2017, 11:00 AM IST
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ವಿರುದ್ಧ ಬಿಸಿಸಿಐ ಸಿಟ್ಟಾಗಿದೆಯೇ? ಹೌದು ಎನ್ನುವಂತಹ ಬೆಳವಣಿಗೆಗಳು ಬಿಸಿಸಿಐನೊಳಗೆ ನಡೆದಿವೆ. ಅತ್ಯಂತ ಯಶಸ್ವಿ ಹಾಲಿ ಕೋಚ್ ಕುಂಬ್ಳೆ ಇರುವಂತೆಯೇ ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿ ಕರೆದಿದೆ.
ಅರ್ಜಿ ಸಲ್ಲಿಸಲು ಮೇ 31 ಕಡೆಯ ದಿನಾಂಕವಾಗಿದೆ. ಭಾರತ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಇಂಗ್ಲೆಂಡ್‌ಗೆ ತೆರಳಿರುವ ನಡುವೆಯೇ ಈ ಬೆಳವಣಿಗೆಯಾಗಿರುವುದು ಕುಂಬ್ಳೆಗೆ ಮುಜುಗರ ತರಿಸುವ ಘಟನೆಯಾಗಿದೆ. ಜತೆಗೆ ಕುಂಬ್ಳೆ ವಿರುದ್ಧ ಬಿಸಿಸಿಐ ಗರಂ ಆಗಿದೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಇತ್ತೀಚೆಗೆ ಕುಂಬ್ಳೆ ಅವರು ಪ್ರತಿಯೊಂದಕ್ಕೂ ಸರ್ವೋಚ್ಚ ನ್ಯಾಯಾಲಯದಿಂದ ನಿಯೋಜಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಬಳಿ ತೆರಳುತ್ತಿದ್ದಾರೆ, ಇದು ಪದಾಧಿಕಾರಿಗಳಿಗೆ ಸಿಟ್ಟು ತರಿಸಿದೆ ಎಂದು ಈ ಹಿಂದೆ ವರದಿಯಾಗಿತ್ತು. ಐಸಿಸಿಯೊಂದಿಗಿನ ಭಿನ್ನಮತದ ಕಾರಣ ಬಿಸಿಸಿಐ ಪದಾಧಿಕಾರಿಗಳು ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಬಹಿಷ್ಕರಿಸಬೇಕು ಎಂದು ಬಯಸಿದ್ದರು. ಆದರೆ ಕುಂಬ್ಳೆ ಅವರು ಆಡಳಿತಾಧಿಕಾರಿಗಳ ಬಳಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಅದೇ ಕಾರಣದಿಂದ ಭಾರತ ಚಾಂಪಿಯನ್ಸ್ ಟ್ರೋಫಿಗೆ ತೆರಳಬೇಕಾಯಿತು ಎನ್ನುವಲ್ಲಿಂದ ಈ ಮುಸುಕಿನ ಗುದ್ದಾಟ ಶುರುವಾಗಿದೆ.
ಬಿಸಿಸಿಐ ನೀಡಿರುವ ಜಾಹೀರಾತಿನ ಪ್ರಕಾರ ಕುಂಬ್ಳೆ ಕೂಡ ಮತ್ತೆ ಕೋಚ್ ಆಗಲು ಅರ್ಜಿ ಸಲ್ಲಿಸಲೇಬೇಕಾಗಿದೆ. ಜತೆಗೆ ಇತರೆ ಸ್ಪರ್ಧಿಗಳಂತೆ ತನ್ನ ಯೋಜನೆಯನ್ನು ವಿವರಿಸಬೇಕಾಗುತ್ತದೆ. ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಇರುವ ಉನ್ನತ ತ್ರಿಸದಸ್ಯ ಸಮಿತಿ ಅಭ್ಯರ್ಥಿಗಳ ಸಂದರ್ಶನವನ್ನು ನಡೆಸಿ ಆಯ್ಕೆ ಮಾಡುತ್ತದೆ. ಈ ರೀತಿಯ ಇಕ್ಕಟ್ಟಿನ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.
ಯಶಸ್ವಿ ಕೋಚ್ ಕುಂಬ್ಳೆ: ಕೋಚ್ ಆಗಿ ಅನಿಲ್ ಕುಂಬ್ಳೆ ಯಶಸ್ವಿಯಾಗಿದ್ದಾರೆ. ಅವರ ಅವಧಿಯಲ್ಲಿ ಭಾರತ ಸ್ವದೇಶದಲ್ಲಿ ಒಟ್ಟು 13 ಟೆಸ್ಟ್ ಆಡಿದ್ದು, ಅದರಲ್ಲಿ 10 ಟೆಸ್ಟ್ ಗೆದ್ದಿದೆ. 3ನ್ನು ಡ್ರಾ ಮಾಡಿಕೊಂಡಿದೆ. ವಿದೇಶದಲ್ಲಿ ವೆಸ್ಟ್ ಇಂಡೀಸ್‌ನಲ್ಲಿ 2-0ಯಿಂದ ಸರಣಿ ಗೆದ್ದಿದೆ. ಕುಂಬ್ಳೆ ಅವಧಿಯಲ್ಲಿ ಭಾರತ ವಿದೇಶದಲ್ಲಿ ಆಡಿದ್ದು ಬಹಳ ಕಡಿಮೆಯಾಗಿರುವುದರಿಂದ ಅವರ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಸಾಧ್ಯವಾಗಿಲ್ಲ.
ಕುಂಬ್ಳೆ ಬೇಡಿಕೆಗಳು
ಬಿಸಿಸಿಐಗೆ ಒಪ್ಪಿಗೆಯಿಲ್ಲ
ಸದ್ಯ ಬಿಸಿಸಿಐ ಶೇ.26ರಷ್ಟು ಆದಾಯವನ್ನು ಕ್ರಿಕೆಟಿಗರಿಗೆಂದು ಮೀಸಲಿರಿಸಿದೆ. ಇದನ್ನು ಹೆಚ್ಚಿಸಲು ಅದು ಸಿದ್ಧವಿಲ್ಲ. ಆದರೆ ಕುಂಬ್ಳೆಯ ವೇತನ ಏರಿಕೆಯನ್ನು ಪರಿಗಣಿಸಿದರೆ ಶೇ.26 ಮಿತಿಯನ್ನು ಹೆಚ್ಚಿಸಬೇಕಾಗುತ್ತದೆ. ಕೋಚ್‌ಗೆ ಆಯ್ಕೆ ಸಮಿತಿಯಲ್ಲಿ ಸ್ಥಾನ ನೀಡಬೇಕೆಂದು ಕುಂಬ್ಳೆ ಬಯಸುತ್ತಾರೆ. ಸದ್ಯದ ಬಿಸಿಸಿಐ ನೀತಿಯ ಪ್ರಕಾರ ಆಯ್ಕೆ ಸಮಿತಿ ಸಭೆಯಲ್ಲಿ ಕೋಚ್ ಮತ್ತು ನಾಯಕ ಹಾಜರಿರಬಹುದು. ಆದರೆ ಅವರು ಮತದಾನ ಮಾಡುವ ಅಧಿಕಾರ ಹೊಂದಿಲ್ಲ. ಅಲ್ಲದೇ ಲೋಧಾ ಸಮಿತಿ ನೀತಿ ಪ್ರಕಾರ, ಆಯ್ಕೆ ಸಮಿತಿಯಲ್ಲಿ ಮೂವರಿಗಿಂತ ಹೆಚ್ಚು ಸದಸ್ಯರಿರುವಂತಿಲ್ಲ. ಕೋಚ್‌ಗೆ ಸ್ಥಾನ ನೀಡಿದರೆ ಲೋಧಾ ಶಿಫಾರಸನ್ನು ಮೀರಬೇಕಾಗುತ್ತದೆ. ಇದು ಕೂಡ ಬಿಸಿಸಿಐ ಸಿಟ್ಟು ತರಿಸಿದೆ.
ಕುಂಬ್ಳೆ ಮೇಲೆ ಬಿಸಿಸಿಐ ಸಿಟ್ಟಿಗೇನು ಕಾರಣ?
ಕುಂಬ್ಳೆ ಸದ್ಯದ ಮಟ್ಟಿಗೆ ಅತ್ಯಂತ ಯಶಸ್ವಿ ಕೋಚ್ ಆಗಿದ್ದಾರೆ. ಆಟಗಾರರನ್ನು ಅಷ್ಟೇ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ನಾಯಕ ಕೊಹ್ಲಿಯೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಆದರೆ ಬಿಸಿಸಿಐ ಪದಾಧಿಕಾರಿಗಳೊಂದಿಗೆ ಮಾತ್ರ ಸಂಬಂಧ ಕೆಡಿಸಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ಕುಂಬ್ಳೆ ಹಲವು ಬೇಡಿಕೆಗಳನ್ನಿಟ್ಟಿದ್ದರೂ ಅದನ್ನು ಈಡೇರಿಸುವ ಆಸಕ್ತಿ ಬಿಸಿಸಿಐಗಿಲ್ಲ ಎನ್ನಲಾಗಿದೆ. ಕುಂಬ್ಳೆ ಮೇಲೆ ಬಿಸಿಸಿಐ ಸಿಟ್ಟಾಗಲು ಈ ಕೆಳಗಿನ ಅಂಶಗಳನ್ನು ಮೂಲಗಳು ಪ್ರಸ್ತಾಪಿಸಿವೆ.
1. ಎಲ್ಲದ್ದಕ್ಕೂ ಕುಂಬ್ಳೆ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳ ಬಳಿ ತೆರಳುತ್ತಿರುವುದು
2. ಕ್ರಿಕೆಟಿಗರ ವೇತನವನ್ನು ಶೇ.150ರಷ್ಟು ಏರಿಸುವಂತೆ ಕುಂಬ್ಳೆ ಒತ್ತಾಯಿಸಿರುವುದು
3. ತಮ್ಮ ಸಂಭಾವನೆಯನ್ನು 8 ಕೋಟಿ ರೂ.ಗೇರಿಸುವಂತೆ ಕೇಳಿರುವುದು.
4. ನಾಯಕ ಕೊಹ್ಲಿಯ ವೇತನವನ್ನು ನಾಯಕತ್ವದ ಹೊರೆಯ ಕಾರಣಕ್ಕೆ ಶೇ.25ರಷ್ಟು ಹೆಚ್ಚಿಸುವಂತೆ ಕೇಳಿಕೊಂಡಿರುವುದು
5. ಮುಖ್ಯ ಕೋಚ್ ಆಗಿರುವುದರಿಂದ ತಮ್ಮನ್ನು ಆಯ್ಕೆ ಸಮಿತಿಯ ಸದಸ್ಯರನ್ನಾಗಿ ತೆಗೆದುಕೊಳ್ಳುವಂತೆ ಕೋರಿರುವುದು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.