ಕಾಂಗ್ರೆಸ್‌ಗೆ ಆಕಾಂಕ್ಷಿಗಳ ಸವಾಲು; ಬಿಜೆಪಿಗೆ ಆಂತರಿಕ ಸಮೀಕ್ಷೆ ಆತಂಕ
Team Udayavani, May 26, 2017, 12:39 PM IST
ಮಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನಿಧಾನಕ್ಕೆ ಚುನಾವಣಾ ಕಾವು ಆರಂಭವಾಗತೊಡಗಿದೆ. ಪ್ರಮುಖ ರಾಜಕೀಯ ಪಕ್ಷಗಳಲ್ಲಿಯೂ ಚುನಾವಣೆಗೆ ಆಂತರಿಕ ತಂತ್ರಗಾರಿಕೆ, ಪಕ್ಷ ಸಂಘಟನೆ ಕಸರತ್ತು ಜೋರಾಗುತ್ತಿದೆ.
ಜಿಲ್ಲೆಯಲ್ಲಿ ಪಕ್ಷ ಸಂಘಟನೆಯತ್ತ ಕಾರ್ಯಕರ್ತರನ್ನು ಚುರುಕುಗೊಳಿಸುವ ಕಾರ್ಯ ಒಂದೆಡೆಯಾದರೆ, ಇನ್ನೊಂದೆಡೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಪೂರಕವಾಗಿ ವ್ಯೂಹಾತ್ಮಕ ಕಾರ್ಯಯೋಜನೆ ರೂಪಿಸುವ ಪ್ರಕ್ರಿಯೆ ಪ್ರತಿಯೊಂದು ಪಕ್ಷದಲ್ಲಿ ಚುರುಕುಗೊಳ್ಳುತ್ತಿದೆ. ಇದಕ್ಕಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಜಿಲ್ಲೆಗೆ ಆಗಮಿಸಿ ಪಕ್ಷಗಳ ಪದಾಧಿಕಾರಿಗಳು ಹಾಗೂ ನಾಯಕರ ಜತೆ ನಿರಂತರ ಸಮಾಲೋಚನೆ ನಡೆಸುತ್ತಿದ್ದಾರೆ.
ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಮಸ್ಯೆ
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 8 ಸೀಟುಗಳ ಪೈಕಿ ಕಾಂಗ್ರೆಸ್ ಏಳು ಸ್ಥಾನಗಳನ್ನು ಗಳಿಸಿತ್ತು. ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮಂಗಳೂರು, ಮೂಲ್ಕಿ- ಮೂಡಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಸುಳ್ಯ ಕ್ಷೇತ್ರ ಮಾತ್ರ ಬಿಜೆಪಿ ಕೈಯಲ್ಲಿದೆ. ಮುಂದಿನ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರವನ್ನು ಕೂಡ ತನ್ನ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ತೊಡಗಿದೆ.
ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಈಗಾಗಲೇ ಜಿಲ್ಲೆಗೆ ಪಕ್ಷದ ಉಸ್ತುವಾರಿಗಳನ್ನಾಗಿ ಹಿರಿಯ ನಾಯಕ ವಿ.ಆರ್. ಸುದರ್ಶನ್ ಹಾಗೂ ಬಿ. ನಾರಾಯಣ ರಾವ್ ಅವರನ್ನು ನೇಮಕಗೊಳಿಸಿದ್ದು, ಈ ಇಬ್ಬರು ನಾಯಕರು ಕೂಡ ಜಿಲ್ಲೆಗೆ ಈಗಾಗಲೇ ಭೇಟಿ ಕೊಟ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.
ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಹಾಲಿ ಶಾಸಕರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿರುತ್ತಾರೆ ಎಂದು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್ ಹೇಳುವ ಮೂಲಕ ಆದ್ಯತೆಯ ಮುನ್ಸೂಚನೆಯನ್ನು ಈಗಾಗಲೇ ನೀಡಿದ್ದಾರೆ. ಆದರೆ ಪಕ್ಷದಲ್ಲಿ ಆಕಾಂಕ್ಷಿಗಳ ದೊಡ್ಡ ದಂಡೇ ಇದ್ದು, ಟಿಕೆಟ್ ಗಿಟ್ಟಿಧಿಸುವುದಕ್ಕೆ ತೆರೆಮರೆಯಲ್ಲಿ ಲಾಬಿ ಆರಂಭಿಸಿದ್ದಾರೆ. ಹೀಗಿರುವಾಗ ಆಯಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆಗೊಳಿಸುವುದು ಹಾಗೂ ಪಕ್ಷದಲ್ಲಿ ಸಿಡಿದೇಳುವ ಅತೃಪ್ತರನ್ನು ಸಮಾಧಾನಪಡಿಸುವುದು ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿದೆ.
ಬಿಜೆಪಿಯಲ್ಲಿ ಆಂತರಿಕ ಸಮೀಕ್ಷೆ ಆತಂಕ
ಸಾಮಾನ್ಯವಾಗಿ ದಕ್ಷಿಣ ಕನ್ನಡ ಬಿಜೆಪಿ ಪಾಲಿಗೆ ಪ್ರಮುಖ ಓಟುಬ್ಯಾಂಕ್ ಜಿಲ್ಲೆ. ಆದರೆ ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಈ ಲೆಕ್ಕಾಚಾರವೆಲ್ಲ ತಲೆಕೆಳಗಾಗಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಿತ್ತು. ಬಿಜೆಪಿ ತೆಕ್ಕೆಯಲ್ಲಿರುವ ಸುಳ್ಯ ಕ್ಷೇತ್ರದಲ್ಲಿ ಈ ಬಾರಿ ಎಸ್. ಅಂಗಾರ ಬದಲಿಗೆ ಹೊಸಬರಿಗೆ ಅವಕಾಶ ನೀಡುವ ವದಂತಿಗಳಿವೆ. ಉಳಿದ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರಿಗೆ ಈ ಬಾರಿ ಟಿಕೆಟ್ ಕೊಡಬೇಕೇ ಅಥವಾ ಹೊಸ ಮುಖಗಳನ್ನು ಪರಿಚಯಿಸಬೇಕೆ ಎಂಬ ಬಗ್ಗೆ ಜಿಜ್ಞಾಸೆ ನಡೆಯುತ್ತಿದೆ.
ಪಕ್ಷದ ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಆಂತರಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ ಅಮಿತ್ ಶಾ ಅವರ ಈ ಆಂತರಿಕ ಸಮೀಕ್ಷೆಯು ಜಿಲ್ಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ನಿದ್ದೆಗೆಡಿಸಿದೆ. ಏಕೆಂದರೆ, ದ.ಕ. ಜಿಲ್ಲೆಯಲ್ಲಿಯೂ ಒಂದು ಸುತ್ತಿನ ರಹಸ್ಯ ಸಮೀಕ್ಷೆ ನಡೆದಿದ್ದು, ಅದರ ವರದಿ ಕೂಡ ಅಮಿತಾ ಶಾ ಅವರ ಕೈಸೇರಿದೆ ಎನ್ನಲಾಗಿದೆ. ಇದೇರೀತಿ ಶೀಘ್ರದಲ್ಲೇ ಮತ್ತೂಂದು ಸುತ್ತಿನ ಸಮೀಕ್ಷೆ ನಡೆಯಲಿದೆ. ಅಭ್ಯರ್ಥಿಗಳ ಜನಪ್ರಿಯತೆ, ವರ್ಚಸ್ಸು, ಹಿನ್ನೆಲೆ, ಸಂವಹನ ಸಾಮರ್ಥ್ಯ ಮುಂತಾದ ಅಂಶಗಳು ಸಮೀಕ್ಷೆಯಲ್ಲಿ ಒಳಗೊಂಡಿವೆ ಎನ್ನಲಾಗಿದೆ.
ಜೆಡಿಎಸ್‌ನಲ್ಲಿ ಸಿದ್ಧತೆ
ಜೆಡಿಎಸ್ ಕರಾವಳಿಯಲ್ಲಿ ತಮ್ಮ ಅಸ್ತಿತ್ವವನ್ನು ಭದ್ರಪಡಿಸಿ ಮತ್ತೆ ಖಾತೆ ತೆರಯಬೇಕೆಂಬ ಛಲದೊಂದಿಗೆ ಒಂದು ವರ್ಷದ ಹಿಂದೆಯà ಸಿದ್ಧತೆಗಳನ್ನು ಆರಂಭಿಸಿತ್ತು. ಪಕ್ಷದ ವರಿಷ್ಠರು ಈಗಾಗಲೇ ಹಲವು ಬಾರಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಸಭೆಗಳನ್ನು ನಡೆಸಿದ್ದಾರೆ. ಪಕ್ಷವನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೋರ್ ಕಮಿಟಿ ಕೂಡ ಕಾರ್ಯೋನ್ಮುಖವಾಗಿದೆ. ಅಭ್ಯರ್ಥಿಗಳನ್ನು ಗುರುತಿಸುವ ಪ್ರಕ್ರಿಯೆಯೂ ಚಾಲನೆಯಲ್ಲಿದೆ.
ಸಿದ್ಧತೆ ಆರಂಭಗೊಂಡಿದೆ
“ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭವಾಗಿರುವುದು ನಿಜ. ಪಕ್ಷ ಬಲವರ್ಧನೆಗೆ ಬೂತ್ ಮಟ್ಟದಲ್ಲಿ ಸಭೆ ಜೂ. 1ರಿಂದ 15ರ ವರೆಗೆ ನಡೆಯಲಿದೆ. ಪಕ್ಷದ ವಿವಿಧ ಘಟಕಗಳ ಸಮಾವೇಶವೂ ನಡೆಯುತ್ತಿದೆ. ಜತೆಗೆ ಹಲವಾರು ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿ ವಿಧಾನಸಭಾ ಮಟ್ಟಧಿದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಯುವಜನರನ್ನು ಸಂಘಟಿಸುವ ಕಾರ್ಯ ಚಾಲನೆಯಲ್ಲಿದೆ.’
– ಸಂಜೀವ ಮಠಂದೂರು
ಬಿಜೆಪಿ ಜಿಲ್ಲಾಧ್ಯಕ್ಷ
ಸನ್ನದ್ಧರಾಗುತ್ತಿದ್ದೇವೆ
“ಮುಂಬರುವ ವಿಧಾನಸಭಾ ಚುನಾಧಿವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯೋನ್ಮುಖರಾಗಿದ್ದೇವೆ. ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಬ್ಲಾಕ್ ಮಟ್ಟದಲ್ಲಿ, ಬೂತ್ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಕೆಪಿಸಿಸಿಯಿಂದ ಜಿಲ್ಲೆಗೆ ಉಸ್ತುವಾರಿಗಳಾಗಿ ಇಬ್ಬರು ನಾಯಕರು ನಿಯುಕ್ತಿಗೊಂಡಿದ್ದು ಸಮಾಲೋಚನ ಸಭೆಗಳನ್ನು ನಡೆಸಿದ್ದಾರೆ.
– ಇಬ್ರಾಹಿಂ ಕೋಡಿಜಾಲ್
ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ
ಬೂತ್ ಮಟ್ಟದಲ್ಲಿ ಪ್ರಕ್ರಿಯೆ
“ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬೂತ್ ಮಟ್ಟದಲ್ಲಿ ಸಮಿತಿಗಳನ್ನು ಬಲಪಡಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಪಕ್ಷದ ವಿವಿಧ ಘಟಕಗಳನ್ನು ಪುನಾಧಿರಚಿಸಿ ಹೆಚ್ಚು ಸಕ್ರಿಯಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ರಾಜ್ಯದಿಂದ ಮಾಜಿ ಶಾಸಕ ಬಿ.ಬಿ. ನಿಂಗಯ್ಯ ಹಾಗೂ ಶಾಸಕ ಮಧು ಬಂಗಾರಪ್ಪ ಅವರು ವೀಕ್ಷಕರಾಗಿ ನಿಯುಕ್ತಿಗೊಂಡಿದ್ದಾರೆ.’
– ಮಹಮ್ಮದ್ ಕುಂಞಿ
ಜೆಡಿಎಸ್ ಜಿಲ್ಲಾಧ್ಯಕ್ಷ
– ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.