ನಗರದಲ್ಲಿ ಕನ್ನಡ ವಾತಾವರಣ ನಿರ್ಮಿಸಲು ವಾಟಾಳ್ ಮನವಿ
Team Udayavani, May 30, 2017, 12:37 PM IST
ಬೆಂಗಳೂರು: ಬೆಂಗಳೂರಿನಲ್ಲಿ ಕನ್ನಡದ ವಾತಾವರಣ ನಿರ್ಮಿಸುವ ಸಲುವಾಗಿ ಬಿಬಿಎಂಪಿಯಿಂದ ಕಾರ್ಯಕ್ರಮಗಳನ್ನು ರೂಪಿಸುವಂತೆ ಕನ್ನಡ ಒಕ್ಕೂಟದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಮೇಯರ್ ಜಿ.ಪದ್ಮಾವತಿ ಅವರಿಗೆ ಮನವಿ ಮಾಡಿದರು.
ಬಿಬಿಎಂಪಿ ಕೇಂದ್ರ ಕಚೇರಿಗೆ ಸೋಮವಾರ ಭೇಟಿ ನೀಡಿದ ಅವರು, ದಿನೇ ದಿನೆ ನಗರದಲ್ಲಿ ಪರಭಾಷಿಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕನ್ನಡಿಗರಿಗೆ ಉದ್ಯೋಗ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಲ್‌ಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸುವ ಕಾರ್ಯ ನಡೆಯುತ್ತಿದ್ದು, ತಮಿಳು ಭಾಷೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ನಗರದಲ್ಲಿರುವ ಪರಭಾಷಿಕರಿಂದಾಗಿ ಕನ್ನಡ ಹಾಳಾಗುತ್ತಿದೆ. ಆ ಹಿನ್ನೆಲೆಯಲ್ಲಿ ಪಾಲಿಕೆಯಿಂದ ನಗರದಲ್ಲಿ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದು ಅನಿವಾರ್ಯವಾಗಿದೆ. ಕೆಂಪೇಗೌಡರು ನಿರ್ಮಿಸಿದ ಬೆಂಗಳುರಿನಲ್ಲಿ ಕನ್ನಡವೇ ಸಾರ್ವಭೌಮತ್ವ ಹೊಂದಿರಬೇಕು. ಈ ಹಿಂದೆಯೂ ಪಾಲಿಕೆಗೆ ತಮಿಳು ಭಾಷಿಕರು ಸದಸ್ಯರಾಗಿ ಆಯ್ಕೆಯಾಗುತ್ತಿದ್ದರು. ಆದರೆ, ಅವರಿಂದ ಕನ್ನಡಕ್ಕೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ ಮೇಯರ್ ಪದ್ಮಾವತಿ ಅವರು, ಯಾವ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಕನ್ನಡ ಹೋರಾಟಗಾರ ಎಚ್.ವಿ.ಗಿರೀಶ್ ಸೇರಿ ಹಲವರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.