ಕುಂತ್ರೆ ನಿಂತ್ರೆ ನಿಂದೇ ಗ್ಯಾನ, ಜೀವಕ್ಕಿಲ್ಲ ಸಮಾಧಾನ
Team Udayavani, May 30, 2017, 2:45 PM IST
ನೀನು ಇಷ್ಟಪಡುತ್ತಿದ್ದ ಗುಲಾಬಿ ರಂಗಿನ ರವಿಕೆ, ಮೊಲದ ಬಿಳುಪಿನ ಲಂಗ ತೊಟ್ಟು ಮೊಲದಂತೆ ಕಿವಿ ನಿಮಿರಿಸಿಕೊಂಡು ಕಣ್ಣು ಪಿಳಿ ಪಿಳಿ ಬಿಡುತ್ತ ಮಾವಿನ ಮರದಡಿ ಅದೇ ಹೆಬ್ಬಂಡೆಯ ಮೇಲೆ ನಿನ್ನ ಸವಿನೆನಪುಗಳ ಮೂಟೆ ಹೊತ್ತು ಕೂತಿದ್ದೇನೆ. ನನ್ನ ಪಕ್ಕದ ಜಾಗ ಎಂದೆಂದಿಗೂ ನಿನ್ನದೇ….
ನಿನ್ನೊಂದಿಗಿದ್ದಾಗ ಉತ್ಸಾಹ, ಹುರುಪು ತುಂಬಿದ ಚೆಂಡಿನಂತೆ ಪುಟಿಯುತ್ತಿದ್ದೆ. ನೀ ನನ್ನಿಂದ ದೂರ ಸರಿದ ಮೇಲೆ ಕಣ್ಣೀರಿನಲ್ಲೇ ದಿನಗಳೆಯುತ್ತಿದ್ದೇನೆ. ಕಣ್ಣೀರಿನ ಹಿಂದಿನ ಕೈ ನಿನ್ನದೇ ಎಂದು ಬೇರೆ ಹೇಳಬೇಕಿಲ್ಲ. ನಿನ್ನೊಂದಿಗೆ ಕಳೆದ ಆ ದಿನಗಳ ಮಧುರ ಕ್ಷಣಗಳೇ ಈ ದಿನ ಕ್ಷಣ ಕ್ಷಣವೂ ಜೀವ ಹಿಂಡುತ್ತಿವೆ. ಮರಳಿ ಬಾರದೇ ಇರುವ ನಿನ್ನ ದಾರಿಯನ್ನು ಕಾಯುವುದೇ ನನ್ನ ಪಾಲಿನ ಕಾಯಕವಾಗಿದೆ. ನಾವಿಬ್ಬರೂ ಪ್ರೀತಿಸಲು, ಕಪಿಚೇಷ್ಟೆಗಳ ಕಚಗುಳಿಯನ್ನಿಡಲು ಬಳಸಿಕೊಂಡ ಆ ನಿರ್ಜೀವ ಹೆಬ್ಬಂಡೆಯೂ ನನ್ನ ನೋವಿಗೆ ಮರುಗಿದೆ. ಕಷ್ಟ ಕಂಡು ಕರಗಿದೆ. ಹೆಬ್ಬಂಡೆಯ ಮಗ್ಗುಲಲ್ಲಿ ಆಕಾಶದೆತ್ತರಕ್ಕೆ ಕೊಂಬೆ ಚಾಚಿದ್ದ ಮಾವಿನ ಮರವೂ ನನ್ನ ಗೋಳು ಕಂಡು ಸಂಕಟ ಪಡುತ್ತಿದೆ.
ಅಂದು ನನ್ನೊಂದಿಗಿದ್ದು ನನ್ನ ಸಡಗರ ಸಂಭ್ರಮ ಹಂಚಿಕೊಂಡಿದ್ದ ಚಂದ್ರ, ತಂಗಾಳಿ, ಕೆರೆ, ನದಿ ಇಂದು ನಿನ್ನಂತೆಯೇ ಕಾಡಿಸಿ ಪೀಡಿಸುತ್ತಿವೆ. ಇವೆಲ್ಲಾ ನಿನ್ನ ಪಕ್ಷ ವಹಿಸಿ ಅಣಕಿಸುತ್ತಿವೆಯೇನೋ ಎನಿಸುತ್ತಿದೆ. ಹೆಬ್ಬಂಡೆ, ಮಾವಿನ ಮರ ಮಾತ್ರ ಪ್ರಾಮಾಣಿಕವಾಗಿ ನನ್ನ ನೋವಿನಲ್ಲಿ ತಾವೂ ಭಾಗಿಯಾಗಿ, ನೆರಳಿನ ಆಸರೆ ನೀಡಿ, ಒಂದು ಸುಂದರ ದಿನ ನನ್ನನ್ನು ಹುಡುಕಿಕೊಂಡು ನೀನು ಬಂದೇ ಬರುತ್ತಿಯಾ ಎಂದು ಧೈರ್ಯ ತುಂಬಿ ಭರವಸೆಯ ಹೊಂಗಿರಣಗಳನ್ನು ಚೆಲ್ಲುತ್ತಿವೆ.
ಮುದ್ದು ರಾಮ, ನಿನಗೂ ಗೊತ್ತಿದೆ, ನನ್ನ ನೆನಪು ನಿನಗೂ ನಕ್ಷತ್ರಿಕನಂತೆ ಕಾಡುತ್ತಿದೆ ಎಂದು. “ತುಂಬಾ ಹಟದ ಹುಡುಗಿ ನೀನು’ ಎಂದು ಹೇಳಿ ಅಂದು ಎದ್ದು ಹೋದವನು ಇಂದಿನವರೆಗೂ ಸನಿಹ ಸುಳಿದಿಲ್ಲ. ಸದಾ ನೀನು ಇಷ್ಟಪಡುತ್ತಿದ್ದ ಗುಲಾಬಿ ರಂಗಿನ ರವಿಕೆ, ಮೊಲದ ಬಿಳುಪಿನ ಲಂಗ ತೊಟ್ಟು ಮೊಲದಂತೆ ಕಿವಿ ನಿಮಿರಿಸಿಕೊಂಡು ಕಣ್ಣು ಪಿಳಿ ಪಿಳಿ ಬಿಡುತ್ತ ಮಾವಿನ ಮರದಡಿ ಅದೇ ಹೆಬ್ಬಂಡೆಯ ಮೇಲೆ ನಿನ್ನ ಸವಿನೆನಪುಗಳ ಮೂಟೆ ಹೊತ್ತು ಕೂತಿದ್ದೇನೆ. ನನ್ನ ಪಕ್ಕದ ಜಾಗ ಎಂದೆಂದಿಗೂ ನಿನ್ನದೇ ಎಂಬುದು ನಿನಗೂ ಚೆನ್ನಾಗಿ ಗೊತ್ತು.
ಗೊತ್ತಿದ್ದೂ ಗೊತ್ತಿದ್ದೂ ಕಾಡಿಸಿ ಪೀಡಿಸಿ ವಿರಹದ ಸುತ್ತಿಗೆಯ ಏಟು ಕೊಟ್ಟು ಶಿಕ್ಷಿಸಿದ್ದು ಸಾಕು. ನೋವು ತಿಂದ ಹೃದಯಕೆ ಮೆತ್ತನೆಯ ಸವಿಮುತ್ತುಗಳ ಸುರಿಸಿ ಒಡಲಿನ ಕಣ ಕಣದಲ್ಲೂ ಆವರಿಸಿಕೊಂಡು ನೀ ಮುರಿದ ಕನಸುಗಳ ಕೆನ್ನೆ ಸವರಿ ಜೋಡಿಸಿ ಬಿಡು. ನಿನ್ನ ಪುಟ್ಟ ಗುಡಿಸಲಿನ ಸೋರುವ ಸೂರಿನಡಿಯಲ್ಲಿ ನಿನ್ನೊಲವಿನ ಅಮೃತ ಹನಿಗಳ ಧಾರೆಯನ್ನು ನನ್ನೆದೆಯ ಮೇಲೆ ಬೀಳಿಸಿಕೊಂಡು ಜೀವನ ಪೂರ್ತಿ ನಿನ್ನ ಮುದ್ದಿನ ರಾಣಿಯಾಗಿ ಇದ್ದು ಬಿಡುವೆ.
ನಿನ್ನ ಬರುವನ್ನೇ ಕಾಯುತ್ತಿರುವ
ನಿನ್ನ ಪ್ರೀತಿಯ ಸೀತೆ
-ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.