ಮಹಾಜನಗಳೇ, ನಾನು ನಿಮ್ಮ ಪಟ್ ಪಟ್ ಪಟಾಕಿ ಶ್ರುತಿ ಮಾತಾಡ್ತಿದ್ದೀನಿ!
Team Udayavani, May 31, 2017, 12:01 PM IST
“ಮಾತಿನಲ್ಲಿ ಅರಳು ಹುರಿದಂತೆ’ ಎನ್ನುವ ನಾಣ್ಣುಡಿ ತುಂಬಾ ಹಳೆಯದಾಯಿತು. ಈಗೇನಿದ್ದರೂ ಪಟ್ ಫಟ್ ಪಟಾಕಿ ಹೊಡೆದಂತೆ ಮಾತಾಡಬೇಕು ಎನ್ನುವುದು ಹೆಚ್ಚು ಸೂಕ್ತ. ಇದಕ್ಕೆ ಕಾರಣಕರ್ತೆಯಾಗಿರುವವರು ಆರ್.ಜೆ ಶ್ರುತಿ. ಬೆಂಗಳೂರಿನಲ್ಲಿರುವ ಅಷ್ಟೂ ಕನ್ನಡಿಗರಿಗೆ ಅತ್ಯಂತ ಪರಿಚಿತವಾದ ದನಿ ಆಕೆಯದು. ಶ್ರೋತೃಗಳ ಬೆಳಗು, ಶ್ರುತಿಯ “ಮಹಾಜನಗಳೇ, ನಾನು ನಿಮ್ಮ ಪಟ್ ಪಟ್ ಪಟಾಕಿ ಶ್ರುತಿ’ ಎಂಬ ಸಿಗ್ನೇಚರ್ ವಾಕ್ಯದಿಂದಲೇ ಪ್ರಾರಂಭ. “92.7 ಬಿಗ್ ಎಫ್. ಎಂ ಬೆಂಗಳೂರು’ ರೇಡಿಯೋ ಚಾನೆಲ್‌ನಲ್ಲಿ ಪ್ರತಿ ದಿನ ಮುಂಜಾನೆ 7ರಿಂದ 11ರವರೆಗೆ “ಬಿಗ್ ಕಾಫಿ’ ಕಾರ್ಯಕ್ರಮ ನಡೆಸಿಕೊಡುತ್ತಿರುವ ಶ್ರುತಿ ದನಿ ಮಾತ್ರದಿಂದಲೇ ಎಲ್ಲರ ಹೃದಯಗಳನ್ನು ತಲುಪಿದವರು.
– ಓದು, ಬರಹ?
ಅಪ್ಪ ಬೆಂಗ್ಳೂರಲ್ಲಿ ಮ್ಯಾಕ್ಸಿಲೋಫೇಷಿಯಲ್ ಸರ್ಜನ್ ಆಗಿದ್ರು. ಸೌದಿಯಲ್ಲೂ ಇದ್ವಿ ನಾವು. ಐಸಿಎಸ್‌ಇ, ಸಿಬಿಎಸ್‌ಇ ಮತ್ತು ಸ್ಟೇಟ್ ಮೂರೂ ಸಿಲೆಬಸ್‌ಗಳನ್ನು ಓದಿದ್ದೇನೆ. ಸೌದಿಯಲ್ಲಿದ್ದಾಗ ಇಂಡಿಯನ್ ಎಂಬಸಿ ಶಾಲೇಲಿ ಖುರಾನ್ ಓದಿಸುತ್ತಿದ್ದರು, ಬೆಂಗ್ಳೂರು ಕ್ಲೂನಿ ಕಾನ್ವೆಂಟ್‌ನಲ್ಲಿ ಬೈಬಲ್, ಆಮೇಲೆ ಎಂ.ಇ.ಎಸ್ ಕಿಶೋರ ಕೇಂದ್ರದಲ್ಲಿ ಭಗವದ್ಗೀತೆ. ಅದಕ್ಕೇ ನಾನು ಲಿಬರಲ್ ಅಂತ ಅನ್ಸುತ್ತೆ.
– ಮುಂಚಿನಿಂದಲೂ ನೀವು ಮಾತಿನ ಮಲ್ಲಿ ಆಗಿದ್ರಿ ಅಂತ ಗೊತ್ತಾಯ್ತು. ಆರ್‌ಜೆ ಆಗುವುದು ನಿಮ್ಮ ರಕ್ತದಲ್ಲೇ ಇತ್ತಾ?
ಖಂಡಿತ ಇಲ್ಲ. ಆರ್‌ಜೆ ಕೆಲಸ ನನ್ನ ಕಟ್ಟ ಕಡೆಯ ಆಯ್ಕೆ. ನನಗೆ ಜ್ಯೋತಿಷಿಯಾಗಬೇಕೆಂಬ ಆಸೆಯಿತ್ತು. ಯಾಕಂದ್ರೆ ನಾನು ಕೈ ನೋಡಿ ಭವಿಷ್ಯ ಹೇಳಬಲ್ಲೆ. ಟಾರೋ ಕಾರ್ಡುಗಳನ್ನು ನೋಡಿ ಭವಿಷ್ಯ ಹೇಳ್ಳೋಕೂ ಬರುತ್ತೆ. ವ್ಯಕ್ತಿಯ ಮುಖ ಜಾತಕ ಹೇಳಬಲ್ಲೆ. ಜೋತಿಷ್ಯಶಾಸ್ತ್ರದಲ್ಲಿ ಮುಂಚಿನಿಂದಲೂ ಆಸಕ್ತಿ ನಂಗೆ.
– ನೀವು ಆರ್‌ಜೆ ಆಗಿದ್ದು ಹೇಗೆ ಅಂತ ಹೇಳ್ತಾ ಇದ್ರಿ…
ಹಾಂ. ಚಿತ್ರಕಲಾ ಪರಿಷತ್‌ನಲ್ಲಿ ಓದ್ತಾ ಇದ್ದಾಗ ಒಂದಿನ ಹತ್ತಿರದಲ್ಲಿ ಆರ್ ಜೆ ಆಡಿಷನ್ ನಡೀತಿದೆ ಅಂತ ಗೊತ್ತಾಯ್ತು. ಒಂದ್ ಕೈ ನೋಡೇ ಬಿಡೋಣ ಅಂತ ಹೋದರೆ, ಸರದಿಯಲ್ಲಿ ನಂದು 700ನೇ ನಂಬರ್. ಮೇರಾ ನಂಬರ್ ಕಬ್ ಆಯೇಗಾ ಅಂತ ಕಾಯುತ್ತಾ ಕೂರೋಕೆ ನನ್ನಿಂದಾಗಲಿಲ್ಲ. ಮುಂದೆ ಹೋಗಿ- ನಮ್ಮಜ್ಜಿಗೆ ತುಂಬಾ ಸೀರಿಯಸ್ ಆಗಿ ಆಸ್ಪತ್ರೇಲಿ ಅಡ್ಮಿಟ್ ಆಗಿದ್ದಾರೆ, ಬೇಗ ಹೋಗಬೇಕು ಅಂತ ಸುಳ್ಳು ಹೇಳೆª.
ನಂಬಿದ್ರಾ ಅವ್ರು?
ಹೂಂ. ಕೂಡಲೆ ಒಳಗ್ ಬಿಟ್ರಾ. ಅಲ್ಲಿ ಇಂಟರ್‌ವ್ಯೂ ಅಟೆಂಡ್ ಮಾಡೆª. ನಾಲ್ಕೈದು ದಿವಸಗಳ ಕಾಲ ಹಲವು ಸುತ್ತುಗಳ ಸಂದರ್ಶನ ಮಾಡಿದ್ರು. ಕಡೇಲಿ ನಾನು ಆಯ್ಕೆ ಆಗಿದ್ದೀನಿ ಅಂತ ಹೇಳಿದ್ರು.
– ಪ್ರತಿ ದಿನ ಶೋಗೆ ತಯಾರಿ ಹೇಗಿರುತ್ತೆ?
ಆ ದಿನದ ವಿಷಯಾನ ಹಿಂದಿನ ದಿನವೇ ಸೆಲೆಕ್ಟ್ ಮಾಡಿಕೊಂಡಿರುತ್ತೇನೆ. ಅದನ್ನು ಸೀನಿಯರ್ ಜೊತೆ ಮಾತಾಡಿ ಆಮೇಲೆ ಡಿಸೈಡ್ ಮಾಡ್ತೀನಿ. ಟಾಪಿಕ್ ಫಿಕ್ಸ್ ಆದಮೇಲೆ ರಿಸರ್ಚ್ ಶುರು. ಆ ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಯಾವ ವಿಷಯವನ್ನು ಟಚ್ ಮಾಡಬಹುದು. ಯಾವ ಅಧಿಕಾರಿಗಳನ್ನು ಮಾತಾಡಿಸಬಹುದು. ಯಾವ ವ್ಯಕ್ತಿಗಳ ಅಭಿಪ್ರಾಯ ಪಡೆಯಬಹುದು ಎಲ್ಲವನ್ನೂ ನಿರ್ಧರಿಸುತ್ತೇನೆ. ಎಲ್ಲವೂ ಮುಂಚೆಯೇ ಪ್ಲಾನ್ ಮಾಡಿಟ್ಟುಕೊಂಡೇ ಶೋ ಮಾಡೋದು. ಹಾಗಾಗಿ ಇಲ್ಲೂ ಹೋಂವರ್ಕ್ ಮಾಡಲೇಬೇಕು.
– ಇಲ್ಲೀವರೆಗೆ ನಿಮಗೆ ಮುಜುಗರ ತರೋವಂಥದ್ದೇನೂ ಆಗಿಲ್ವಾ ಶೋ ನಲ್ಲಿ?
ಆಗಿದೆ. ಆದರೆ ಈಗೀಗ ಅದನ್ನು ನಿರ್ವಹಿಸೋ ಕಲೆ ಕರಗತ ಆಗಿಬಿಟ್ಟಿದೆ. ಎಷ್ಟೋ ಜನರಿಗೆ ನನಗೆ ಮದುವೆಯಾಗಿರೋ ವಿಷಯಾನೇ ಗೊತ್ತಿಲ್ಲ. ಈಗಲೂ ಪ್ರಪೋಸ್ ಮಾಡುತ್ತಲೇ ಇರುತ್ತಾರೆ. ನಾನು ತುಂಬಾ ಸೋಷಿಯಲ್ ಪರ್ಸನ್. ಎಲ್ಲರೊಂದಿಗೂ, ಎಂಥವರೊಂದಿಗೂ ಹೊಂದಿಕೊಂಡು ಬಿಡುತ್ತೇನೆ. ಯಾರನ್ನೂ ನೋಯಿಸೊಲ್ಲ. ನಾನು ಶೋನಲ್ಲಿ ಯಾವ ವ್ಯಕ್ತಿತ್ವವನ್ನು ಹೊಂದಿದ್ದೇನೆಯೋ ನಿಜಜೀವನದಲ್ಲಿಯೂ ಅದೇ ವ್ಯಕ್ತಿತ್ವ. ಈ ಕಾರಣಕ್ಕಾಗಿಯೇ ನನಗೆ ಸ್ನೇಹಿತರು, ಅಭಿಮಾನಿಗಳು ಜಾಸ್ತಿ. ಮೊದಲು ವಿಜಿ ಇದನ್ನೆಲ್ಲಾ ನೋಡಿ ಸುಸ್ತಾಗುತ್ತಿದ್ದರು. ಈಗ ದಾರಿಯಲ್ಲಿ ಯಾರಾದರೂ ಪರಿಚಿತರು ಸಿಕ್ಕರೆ ನೀನು ಅವರನ್ನೆಲ್ಲಾ ಮಾತನಾಡಿಸಿ ಬಾ, ನಾನು ಕಾಯುತ್ತಿರುತ್ತೇನೆ ಅಂತ ಹೇಳಿಬಿಡುತ್ತಾರೆ. ಹಿ ಈಸ್ ಸೋ ಕೂಲ್.
– ನಿಮ್ಮೆಜಮಾನ್ರಿಗೆ ಕನ್ನಡ ಬರುತ್ತಾ?
ಇಲ್ಲಾ, ಅವರ ಮಾತೃಭಾಷೆ ಹಿಂದಿ. ಆದರೆ ಕನ್ನಡ ಕಲಿಯುತ್ತಿದ್ದಾರೆ.
– ಅವರ ಬಗ್ಗೇನೂ ಹೇಳಿ
ಪತಿ ವಿಜಿ, ಮಾರ್ಕೆಟಿಂಗ್‌ನಲ್ಲಿ ಎಂಥ ಪಂಟ ಎಂದರೆ, ಎಸ್ಕಿಮೋಗಳಿಗೇ ಐಸನ್ನು ಮಾರಬಲ್ಲರು! ಅವರು ಬಿಝಿನೆಸ್ ಮಾಡುತ್ತಿದ್ದಾರೆ. ಐ ಆ್ಯಮ್ ಸೋ ಲಕ್ಕಿ ಟು ಬಿ ವಿತ್ ಹಿಮ್. ವಿಜಿ ನನ್ನ ಪ್ರಪೋಸ್ ಮಾಡಿದಾಗ ಮನೆಯಲ್ಲಿ ಅಪ್ಪ ಅಮ್ಮ ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ ಅಂತ ಹೇಳಿದ್ದೆ. ಅಪ್ಪನಿಗೆ ವಿಜಿ ತುಂಬಾ ಇಷ್ಟವಾಗಿಬಿಟ್ಟರು. ಆಮೇಲೆ ಅಮ್ಮನನ್ನು ಹೇಗೆ ಫೇಸ್ ಮಾಡಬೇಕೆಂದು ವಿಜಿಗೆ ಅಪ್ಪನೇ ತರಬೇತಿ ನೀಡಿದರು. ಅಪ್ಪನ ಪ್ಲಾನು ವರ್ಕಾಯಿತು. ಅದೇ ವಿಜಿ ಮನೇನಲ್ಲಿ ಇಂಥ ಯಾವ ಡ್ರಾಮಾ ನಡೆಯಲೇ ಇಲ್ಲ. ನನ್ನನ್ನು ಖುಷಿಯಿಂದಲೇ ಒಪ್ಪಿದರು. ಅದಕ್ಕೇ, ಏನತ್ತೆ ನೀವು ಏನೂ ಡ್ರಾಮಾ ಮಾಡಲಿಲ್ಲ ಅಂತ ಆಗಾಗ್ಗೆ ಅವರಲ್ಲಿ ಹೇಳುತ್ತಿರುತ್ತೇನೆ.
– ಯಾರಿಗೆ ಥ್ಯಾಂಕ್ಸ್ ಹೇಳಲು ಬಯಸುತ್ತೀರಾ?
ನಿಮಗ್ಗೊತ್ತಾ, ನಾನು ಪ್ರತೀ ರಾತ್ರಿ ಥ್ಯಾಂಕ್ಸ್ ಡೈರಿ ಬರೆಯುತ್ತೇನೆ. ಆ ದಿನ ಸ್ಮರಿಸಿಕೊಳ್ಳಬೇಕಾದ ವ್ಯಕ್ತಿಗಳನ್ನು, ವಿಷಯವನ್ನು ಅದರಲ್ಲಿ ಬರೀತೀನಿ. ಅದರಿಂದಲೇ ನಾನು ಪಾಸಿಟಿವ್ ವ್ಯಕ್ತಿಯಾಗಿದ್ದೀನಿ ಅಂತ ಹೇಳಬಹುದು. ಹಾಗೂ ಹೇಳಬೇಕೆಂದರೆ, ನನ್ನ ಬದುಕಿನ ಭಾಗವಾದ ವಿಜಿ, ದಿವ್ಯಾ, ಗಿರೀಶ್, ಸುಹಾನಿ, 92.7 ಬಿಗ್ ಎಫ್.ಎಂ.
ಇಷ್ಟು ಹೇಳಿ ನನ್ನ ಮಾತನ್ನು ಮುಗಿಸುತ್ತಿದ್ದೇನೆ ಮಹಾಜನಗಳೇ…
ಆರ್.ಜೆ ಕೆಲ್ಸಕ್ಕೆ ಹೋಗಲ್ಲ ಅಂತ ಅತ್ತಿದ್ದೆ
ಮೊದಲ ದಿನ ಸ್ಕೂಲ್‌ಗೆ ಹೋಗೋವಾಗ ಮಗು ಅಳುತ್ತಲ್ಲಾ, ಆ ಥರ ಅತ್ತಿದ್ದೆ ಆರ್.ಜೆ ಕೆಲ್ಸಕ್ಕೆ ಹೋಗಲ್ಲ ಅಂತ. ಅಮ್ಮ ಕರೆದು ಬುದ್ಧಿ ಹೇಳಿ, ಮುದ್ದು ಮಾಡಿ ಕಳಿಸಿದ್ರು. ಆದದ್ದಾಗಲಿ ಅಂತ ಕೆಲ್ಸಕ್ಕೆ ಹೋದರೆ ಕನ್ನಡ ಆರ್ ಜೆ ನಾನು ಅಂತ ಹೇಳಿದ್ರು. ಅಲ್ಲಿಗೆ ನಾನು ಕುಸಿದು ಹೋದೆ. ಇಂಗ್ಲೀಷಿನಲ್ಲೇ ಸಂದರ್ಶನ ಮಾಡಿದ್ದರಿಂದ ಇಂಗ್ಲೀಷ್ ಆರ್‌ಜೆ ಅಂತ ಅಂದುಕೊಂಡಿದ್ದೆ. ಕನ್ನಡ ನಟ ನಟಿಯರು, ಸಾಹಿತಿಗಳು, ಯಾರ ಕುರಿತೂ ನನಗೆ ಹೆಚ್ಚಿನ ಮಾಹಿತಿಯಿರಲಿಲ್ಲ. ಆಗಿನ ನನ್ನ ಕನ್ನಡ ಜ್ಞಾನ ಬರೀ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿತ್ತು. ನನ್ನ ಇಂಗ್ಲೀಷ್ ಮಾತ್ರ ಸುಲಲಿತವಾಗಿತ್ತು. ಅದನ್ನು ನಾನು ಚಾಲೆಂಜ್ ಆಗಿ ತಗೊಂಡೆ. ಒಂದೇ ತಿಂಗಳಲ್ಲಿ ಆ ವರ್ಷ ಬಿಡುಗಡೆಯಾಗಿದ್ದ ಕನ್ನಡ ಸಿನಿಮಾಗಳಷ್ಟನ್ನೂ ನೋಡಿ ಮುಗಿಸಿದೆ. ಹೋಂವರ್ಕ್ ಮಾಡೆª. ಈಗ ಕನ್ನಡವೂ ಸುಲಲಿತ.
ಮೊಬೈಲ್ ಜೊತೆ, ಪತಿದೇವ ಫ್ರೀ!
ಶುಭ ಮಂಗಳ ಸಿನಿಮಾದಲ್ಲಿ ಆರತಿ ಈ ಶತಮಾನದ ಮಾದರಿ ಹೆಣ್ಣು, ಸ್ವಾಭಿಮಾನದ ಸಾಹಸಿ ಹೆಣ್ಣು ಅಂತ ಹಾಡ್ತಾ ಹೋಗ್ತಾರಲ್ವಾ. ನಾನು ಅ ಕೆಟಗರಿಗೆ ಸೇರಿದವಳು. ಚಿತ್ರಕಲಾ ಪರಿಷತ್‌ನಲ್ಲಿ ಓದ್ತಾ ಇದ್ದಾಗ ಎಲ್ಲರ ಕೈಲೂ ಮೊಬೈಲು ಇರ್ತಾ ಇತ್ತು. ನಂಗೂ ಆಸೆ ಆಯ್ತು. ಆದರೆ ಅಪ್ಪನನ್ನ ಕೊಡಿಸು ಅಂತ ಕೇಳಲಿಲ್ಲ. ಮೊದಲ ಮೊಬೈಲನ್ನು ನನ್ನ ದುಡ್ಡಲ್ಲೇ ತಗೋಬೇಕು ಅಂತ ಡಿಸೈಡ್ ಮಾಡೆª. ಅದಕ್ಕೇ ಕಾಲ್ ಸೆಂಟರ್‌ನಲ್ಲಿ ಪಾರ್ಟ್‌ಟೈಮ್ ಕೆಲಸಕ್ಕೆ ಸೇರೊRಂಡೆ. ಮೊಬೈಲೂ ಸಿಕು¤, ಜೊತೆಗೆ ಪತಿದೇವನೂ ಸಿಕ್ಕ! ಹೆಂಗೆ ಅಂತ ಹೇಳ್ತೀನಿ. ನಂಗೆ ಆ ಕಾಲ್‌ಸೆಂಟರ್ ಕೆಲಸ ಇಷ್ಟವಾಗಿರಲಿಲ್ಲ. ಹೀಗಾಗಿ ಒಂದು ತಿಂಗ್ಳು ಕೂಡಾ ಇರಲಿಲ್ಲ ಅಲ್ಲಿ. ಬಿಟ್‌ಬಿಟ್ಟೆ. ಅಲ್ಲಿ ನನ್ನ ಬಾಸ್ ಆಗಿದ್ದವರು ವಿಜಯ್. ಎರಡೇ ಸಾಲಿನಲ್ಲಿ ಹೇಳಬೇಕಂದ್ರೆ- ಕಾಲ್‌ಸೆಂಟರ್ ಕೆಲ್ಸ ಬಿಟ್ಟರೂ ಅವರೂ ನಾನೂ ಸಂಪರ್ಕದಲ್ಲಿದ್ದೆವು. ಮುಂದೊಂದು ದಿನ ಮದ್ವೆ ಆದ್ವಿ!
ಟ್ರಾಫಿಕ್ ಮಧ್ಯ ಕಾರು ನಿಲ್ಲಿಸಿ ಮೊಣಕಾಲೂರಿ ಪ್ರಪೋಸ್ ಮಾಡಿದ್ರು
ನಾನೂ ವಿಜಯ್ ಕಾಲ್‌ಸೆಂಟರ್‌ನಲ್ಲಿ ಮೀಟ್ ಆದ್ವಿ ಅಂದೆನಲ್ಲ. ಆಮೇಲೆ ನಾವಿಬ್ಬರೂ ಒಳ್ಳೆ ಸ್ನೇಹಿತರಾಗಿದ್ವಿ, ಒಟ್ಟಿಗೆ ಸುತ್ತಾಡ್ತಿದ್ವಿ. ಒಂದ್ಸಲ ಏಕಾಏಕಿ ಐ ಲವ್ ಯು ಅಂತ ಪ್ರಪೋಸ್ ಮಾಡಿಬಿಟ್ರಾ. ಅದೂ ಎಲ್ಲಿ ಗೊತ್ತಾ? ಟ್ರಾಫಿಕ್ ಮಧ್ಯದಲ್ಲಿ ರೋಡ್ ಬ್ಲಾಕ್ ಮಾಡಿ ಮೊಣಕಾಲೂರಿ! ಆವತ್ತು ದೊಡ್ಡ ಸೀನ್ ಕ್ರಿಯೇಟ್ ಮಾಡಿ ಹಾಕಿದ್ರು ವಿಜಿ. ಆದ್ರೆ ಅದೆಷ್ಟು ರೊಮ್ಯಾಂಟಿಕ್ ಆಗಿತ್ತು ಗೊತ್ತಾ? ಎಲ್ಲಾ ಹುಡುಗರು ಪ್ರಪೋಸ್ ಮಾಡಿದರೆ ಹಾಗೆ ಮಾಡಬೇಕು. ನಾನಂತೂ ಫುಲ್ ಫಿದಾ ಆಗಿಹೋಗಿದ್ದೆ!
ಆ ಹುಡುಗಿ ನನ್ನನ್ನು ನೋಡೋಕಂತಲೇ ಬದುಕಿದ್ದಳು!
ಸ್ಟುಡಿಯೋನಲ್ಲಿ ಒಂದೇ ಸಲಕ್ಕೆ ಹತ್ತು ಕರೆಗಳನ್ನು ಸ್ವೀಕರಿಸಿ ಹೋಲ್ಡ್‌ನಲ್ಲಿ ಇಡಲಾಗುತ್ತದೆ. ಅವುಗಳಲ್ಲೊಂದು ಲೈನು, ಲೈವ್ ಶೋನಲ್ಲಿ ಮಾತನಾಡಲು ಆಯ್ಕೆಯಾಗುತ್ತದೆ. ಆರಿಸುವ ಕೆಲಸವನ್ನು ಮಾಡೋದು ನಾವಲ್ಲ. ಮಶೀನ್. ಅದು ಯಾವ ಕರೆಯನ್ನು ಸೆಲೆಕ್ಟ್ ಮಾಡುತ್ತದೋ ಅವರೊಂದಿಗೆ ನಾವು ಜಾಕಿಗಳು ಮಾತಾಡುತ್ತೇವೆ. ಈ ವಿಷಯ ಗೊತ್ತಿರದೆ ಅಭಿಮಾನಿಗಳು ಸಿಟ್ಟಾದ ಅನೇಕ ಉದಾಹರಣೆಗಳಿವೆ. ಅದೇ ಥರ ಒಬ್ರು ಮಹಿಳೆ ನನ್ ಮೇಲೆ ಸಿಟ್ಟು ಮಾಡಿಕೊಂಡಿದ್ದರು. ಆರು ತಿಂಗಳಿಂದ ಟ್ರೈ ಮಾಡಿದ್ದೀನಿ ಲೈನ್ ಸಿಕ್ಕಿರಲಿಲ್ಲ ಅಂತ. ಅವರ ಪುಟ್ಟ ಮಗಳು ನನ್ನ ಫ್ಯಾನ್ ಅಂತ ಹೇಳಿ ಅವಳು ನನ್ನ ಜೊತೆ ಮಾತನಾಡಲು ಪಟ್ಟ ಪಡಿಪಾಟಲುಗಳನ್ನೆಲ್ಲಾ ಹೇಳಿಕೊಂಡರು ಆ ಮಹಿಳೆ. ನಾನು ಪ್ಲೀಸ್, ನಿಮ್ಮ ಮಗಳಿಗೆ ರಿಸೀವರ್ ಕೊಡಿ ಮಾತಾಡಬೇಕು ಅಂದೆ. ಆ ಮಹಿಳೆ ಅವಳೀಗ ಬದುಕಿಲ್ಲ ಅಂದುಬಿಟ್ರಾ. ನನಗೇ ಅಳೂನೇ ಬಂದುಬಿಡು¤. ಆ ಕ್ಯಾನ್ಸರ್ ಪೀಡಿತ ಪುಟ್ಟ ಹುಡುಗಿ ಪ್ರತಿದಿನವೂ ನನ್ನ ಶೋ ಕೇಳುತ್ತಾ, ನನ್ನೊಂದಿಗೆ ಮಾತಾಡಬೇಕು, ಮೀಟ್ ಮಾಡಬೇಕು, ದೊಡ್ಡವಳಾದ ಮೇಲೆ ಏನಾಗುತ್ತೀನಿ ಅನ್ನೋದನ್ನ ಹಂಚಿಕೊಳ್ಳಬೇಕು ಅಂತೆಲ್ಲಾ ಕನಸು ಕಾಣುತ್ತಿದ್ದಳಂತೆ. ಆ ಮಹಿಳೆ ತನ್ನ ಪುಟ್ಟ ಮಗಳಲ್ಲಿ ಬದುಕುವ ಆಸೆಯ ಮೊಳಕೆ ಬಿತ್ತಿದ್ದಕ್ಕೆ ನನಗೆ ಥ್ಯಾಂಕ್ಸ್ ಹೇಳಿದರು! ಏನು ಹೇಳಬೇಕಂತ ತಿಳೀಲಿಲ್ಲ.
ಅಂದು ಇಂದು
ಇಲ್ಲಿ ನಟ ಗಣೇಶ್ ಹತ್ತಿರ ಕೂತ್ಕೊಂಡಿರೋದು ನಾನೇ. ಹಳೇ ಪೋಟೋ ಇದು. ಪಕ್ಕದಲ್ಲಿರೋದೂ ನಂದೇ ಫೋಟೋ. ಹೇಗಿದೆ ಟ್ರಾನ್ಸ್‌ಫಾರ್ಮೇಷನ್?! ಈಗ ನಾನು ಮತ್ತು ನನ್ನ ಹಬ್ಬಿ ಇಬ್ರೂ ಫಿಟ್‌ನೆಸ್ ಫ್ರೀಕ್ ಆಗಿದ್ದೀವಿ. ವ್ಯಾಯಾಮ, ಆಹಾರ ಎಲ್ಲದರಲ್ಲೂ ಕಟ್ಟುನಿಟ್ಟು.
ಇದೀಗ ಬಂದ ಸುದ್ದಿ…
92.7 ಬಿಗ್ ಎಫ್ ಎಂ ಬೆಂಗಳೂರು ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪಟ್ ಪಟ್ ಪಟಾಕಿ ಶ್ರುತಿ ಅವರಿಗೆ ಇಂಡಿಯಾ ರೇಡಿಯೋ ಪೋರಂನವರು ನೀಡುವ “ವರ್ಷದ ರೇಡಿಯೋ ಜಾಕಿ- 2017(ಕನ್ನಡ)’ ಪ್ರಶಸ್ತಿ ಲಭಿಸಿದೆ. ತಮಗೆ ಸಂದ ಈ ಗೌರವವನ್ನು ಅವರು ಪ್ರಾರಂಭದಿಂದಲೂ ತಮಗೆ ಪ್ರೋತ್ಸಾಹ ನೀಡಿದ ಬಿಗ್ ಎಫ್ ಎಂ.ನ ಸಿ.ಇ.ಒ ತರುಣ್ ಕಟಿಯಾಲ್‌ರಿಗೆ ಅರ್ಪಿಸಿದ್ದಾರೆ.
– ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.